ಬಿಜೆಪಿ ಜನರ ಮೊದಲ ಆಯ್ಕೆ, ಕಾಂಗ್ರೆಸ್ ದೇಶದ ವಿಶ್ವಾಸ ಕಳೆದುಕೊಂಡಿದೆ: ಪ್ರಧಾನಿ ಮೋದಿ ವಾಗ್ದಾಳಿ
ಅಸ್ಸಾಂ: ಬಿಜೆಪಿ ಜನರ ಮೊದಲ ಆಯ್ಕೆಯಾಗಿದೆ. ಕಾಂಗ್ರೆಸ್ ಪಕ್ಷವು ದೇಶದ ಜನರ ವಿಶ್ವಾಸವನ್ನು ಸಂಪೂರ್ಣವಾಗಿ ಕಳೆದುಕೊಂಡಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಭಾನುವಾರ ಅಸ್ಸಾಂನ ಕಲಿಯಾಬೋರ್ನಲ್ಲಿ 6,957 ಕೋಟಿ ರೂ. ವೆಚ್ಚದ ಕಾಜಿರಂಗ ಎಲಿವೇಟೆಡ್ ಕಾರಿಡಾರ್ಗೆ ಪ್ರಧಾನಿ ಮೋದಿ ಶಂಕುಸ್ಥಾಪನೆ ನೆರವೇರಿಸಿದರು. ಇದೇ ವೇಳೆ ಎರಡು ಅಮೃತ್ ಭಾರತ್ ರೈಲುಗಳಿಗೆ ಹಸಿರು ನಿಶಾನೆ ತೋರಿದರು.
ದೇಶವು ಕಾಂಗ್ರೆಸ್ ಪಕ್ಷದ ನಕಾರಾತ್ಮಕ ರಾಜಕೀಯವನ್ನು ತಿರಸ್ಕರಿಸುತ್ತಿದೆ ಎಂದು ಪ್ರಧಾನಿ ಹೇಳಿದರು. ಮುಂಬೈನಲ್ಲಿ ಕಾಂಗ್ರೆಸ್ ಈಗ ನಾಲ್ಕನೇ ಅಥವಾ ಐದನೇ ಸ್ಥಾನದಲ್ಲಿರುವ ಪಕ್ಷವಾಗಿದೆ. ವರ್ಷಗಳ ಕಾಲ ಆಡಳಿತ ನಡೆಸಿದ ಮಹಾರಾಷ್ಟ್ರವನ್ನು ಕಾಂಗ್ರೆಸ್ ಸಂಪೂರ್ಣವಾಗಿ ಹಾಳು ಮಾಡಿದೆ. ಅಭಿವೃದ್ಧಿಗೆ ಯಾವುದೇ ಸ್ಪಷ್ಟ ಕಾರ್ಯಸೂಚಿಯೇ ಕಾಂಗ್ರೆಸ್ಗೆ ಇಲ್ಲ. ಅಂತಹ ಪಕ್ಷ ಅಸ್ಸಾಂಗೆ ಅಥವಾ ಕಾಜಿರಂಗಕ್ಕೆ ಒಳ್ಳೆಯದನ್ನು ಮಾಡಲಾರದು ಎಂದು ಮೋದಿ ಟೀಕಿಸಿದರು.
ಕಳೆದ ಒಂದೂವರೆ ವರ್ಷಗಳಲ್ಲಿ ಬಿಜೆಪಿಯ ಮೇಲಿನ ಜನರ ನಂಬಿಕೆ ನಿರಂತರವಾಗಿ ಹೆಚ್ಚಾಗಿದೆ. ಇತ್ತೀಚೆಗೆ ಬಿಹಾರದಲ್ಲಿ ನಡೆದ ಚುನಾವಣೆಯಲ್ಲಿ, 20 ವರ್ಷಗಳ ನಂತರವೂ ಜನರು ಬಿಜೆಪಿಗೆ ದಾಖಲೆಯ ಸಂಖ್ಯೆಯ ಮತಗಳನ್ನು ನೀಡಿದ್ದಾರೆ. ಅದರಿಂದ ಪಕ್ಷ ದಾಖಲೆಯ ಸಂಖ್ಯೆಯ ಸ್ಥಾನಗಳನ್ನು ಗೆದ್ದಿದೆ ಎಂದು ಹೇಳಿದರು.






