ಗುಡ್ ನ್ಯೂಸ್ ಹಂಚಿಕೊಂಡ ಡಾಲಿ ಧನಂಜಯ್..! ಮೊದಲ ಮಗುವಿನ ನಿರೀಕ್ಷೆಯಲ್ಲಿ ದಂಪತಿ
ಮೈಸೂರಿನ ವಸ್ತುಪ್ರದರ್ಶನ ಮೈದಾನದಲ್ಲಿ ಇತ್ತೀಚೆಗೆ ನಡೆದ ಧನಂಜಯ್ ಹಾಗೂ ಧನ್ಯತಾ ಅವರ ವಿವಾಹ ಮಹೋತ್ಸವ ಸಂಭ್ರಮಕ್ಕೆ ಸ್ಯಾಂಡಲ್‌ವುಡ್‌ನ ನಟ–ನಟಿಯರು, ರಾಜಕಾರಣಿಗಳು ಮತ್ತು ಅಪಾರ ಸಂಖ್ಯೆಯ ಅಭಿಮಾನಿಗಳು ಸಾಕ್ಷಿಯಾಗಿದ್ದರು.
ಇದೇ ವೇಳೆ ‘ಉದಯ ಕನ್ನಡಿಗ 2025’ ಕಾರ್ಯಕ್ರಮಕ್ಕೆ ಆಗಮಿಸಿದ್ದ ಡಾಲಿ ಧನಂಜಯ್, ತಾವು ತಂದೆಯಾಗುತ್ತಿರುವ ಸಿಹಿಸುದ್ದಿಯನ್ನು ಸಾರ್ವಜನಿಕವಾಗಿ ಹಂಚಿಕೊಂಡಿದ್ದಾರೆ. ವೇದಿಕೆ ಮೇಲೆ ಮಾತನಾಡಿದ ಅವರು, ಒಂದು ಗುಲಾಬಿಯನ್ನು ಪತ್ನಿ ಧನ್ಯತಾಗೆ ನೀಡುತ್ತಾ, ಮತ್ತೊಂದು ಗುಲಾಬಿ ‘ನನ್ನನ್ನು ಅಪ್ಪ ಎಂದು ಕರೆಯಲಿರುವ ಮಗುಗೆ’ ಎಂದು ಹೇಳುವ ಮೂಲಕ ದಂಪತಿ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ ಎಂಬ ವಿಚಾರವನ್ನು ಬಹಿರಂಗಪಡಿಸಿದರು.
ಈ ಮೂಲಕ ಸ್ಯಾಂಡಲ್‌ವುಡ್‌ನ ಡಾಲಿ ಧನಂಜಯ್ ಹಾಗೂ ಧನ್ಯತಾ ದಂಪತಿ ಶೀಘ್ರದಲ್ಲೇ ಪೋಷಕರಾಗಲಿದ್ದಾರೆ ಎಂಬುದು ಖಚಿತವಾಗಿದೆ. ಈ ಖುಷಿಯ ವಿಷಯವನ್ನು ಸ್ವತಃ ಧನಂಜಯ್ ಅವರೇ ಹಂಚಿಕೊಂಡಿದ್ದು, ಅಭಿಮಾನಿಗಳಿಂದ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.
ಇದಾದ ಬಳಿಕ ನಡೆದ ಚಾಲುಕ್ಯ ಉತ್ಸವ ಸಮಾರಂಭದಲ್ಲಿ ‘ಇಮ್ಮಡಿ ಪುಲಿಕೇಶಿ’ ಸಿನಿಮಾ ಅಧಿಕೃತವಾಗಿ ಘೋಷಣೆಗೊಂಡಿದೆ. ಈ ಐತಿಹಾಸಿಕ ಸಿನಿಮಾದಲ್ಲಿ ಇಮ್ಮಡಿ ಪುಲಿಕೇಶಿ ಪಾತ್ರದಲ್ಲಿ ಡಾಲಿ ಧನಂಜಯ್ ಅಭಿನಯಿಸಲಿದ್ದಾರೆ. ಈ ಚಿತ್ರಕ್ಕೆ ಶಾಸಕರಾದ ವಿಜಯಾನಂದ ಕಾಶಪ್ಪನವರ್ ಅವರು ಬಂಡವಾಳ ಹೂಡಲಿದ್ದಾರೆ ಎಂದು ತಿಳಿದುಬಂದಿದೆ.
ತಂದೆಯಾಗುತ್ತಿರುವ ಸಂಭ್ರಮದ ನಡುವೆ ಡಾಲಿ ಧನಂಜಯ್ ಅವರಿಗೆ ಹಲವು ದೊಡ್ಡ ಸಿನಿಮಾಗಳ ಆಫರ್‌ಗಳು ಕೂಡ ಲಭ್ಯವಾಗಿದ್ದು, ವೃತ್ತಿಜೀವನದಲ್ಲೂ ಅವರು ಉತ್ತಮ ಹಂತದಲ್ಲಿದ್ದಾರೆ.






