ಬಿಜೆಪಿ ರಾಷ್ಟ್ರ ಮುನ್ನಡೆಸಲು ಅಸಮರ್ಥ; ಮನರೇಗಾ ನಾಶಕ್ಕೆ ಹೊರಟಿದ್ದಾರೆ: ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಕಿಡಿ
ಬೆಂಗಳೂರು: ಬಿಜೆಪಿಯವರಿಗೆ ಈ ರಾಷ್ಟ್ರವನ್ನು ಮುನ್ನಡೆಸುವ ಶಕ್ತಿಯೂ ಇಲ್ಲ, ಆಸಕ್ತಿಯೂ ಇಲ್ಲ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸ್ವಾತಂತ್ರ್ಯೋತ್ತರ ಅವಧಿಯಲ್ಲಿ ಕಾಂಗ್ರೆಸ್ ಮಾಡಿದ ಅಭಿವೃದ್ಧಿಯನ್ನು ಹಾಳುಮಾಡಿ, ದೇಶವನ್ನು ಹಿಂದಕ್ಕೆ ಒಯ್ಯುವ ಕೆಲಸವನ್ನು ಬಿಜೆಪಿ ಮಾಡುತ್ತಿದೆ ಎಂದು ಅವರು ಆರೋಪಿಸಿದ್ದಾರೆ.
ಸೋಮವಾರ ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿರುವ ಸಚಿವೆ, ಗ್ರಾಮ ಪಂಚಾಯಿತಿ ವ್ಯವಸ್ಥೆಯನ್ನು ಬಲಪಡಿಸಲು ಕಾಂಗ್ರೆಸ್ ಸರ್ಕಾರ ಜಾರಿಗೆ ತಂದ ವಿಕೇಂದ್ರೀಕರಣ ವ್ಯವಸ್ಥೆಯನ್ನು ಬಿಜೆಪಿ ಕೇಂದ್ರೀಕರಣದತ್ತ ತಿರುಗಿಸುತ್ತಿದೆ ಎಂದು ಟೀಕಿಸಿದ್ದಾರೆ. ನರೇಗಾ ಯೋಜನೆಯನ್ನು ಕುಲಗೆಡಿಸಿ,
ಕೇವಲ ಯೋಜನೆಯ ಹೆಸರಿನಲ್ಲಿ ರಾಮನ ಹೆಸರನ್ನು ಸೇರಿಸುವ ಮೂಲಕ ಜನರ ಭಾವನೆಗಳೊಂದಿಗೆ ಆಟವಾಡುತ್ತಿದ್ದಾರೆ. ಇದರಿಂದ ಸಮಾಜದಲ್ಲಿ ಮೌಢ್ಯ ಬಿತ್ತುವ ಕೆಲಸ ನಡೆಯುತ್ತಿದೆ ಎಂದು ಆರೋಪಿಸಿದ್ದಾರೆ. ಕಾಂಗ್ರೆಸ್ ಜನರನ್ನು ಮೌಢ್ಯದಿಂದ ಹೊರತಂದು ಅಭಿವೃದ್ಧಿಯತ್ತ ಕೊಂಡೊಯ್ಯುತ್ತಿದ್ದರೆ, ಬಿಜೆಪಿ ಕೇವಲ ಮತಗಳ ರಾಜಕಾರಣಕ್ಕಾಗಿ ರಾಷ್ಟ್ರವನ್ನು ಹಿಂದಕ್ಕೆ ಒಯ್ಯುತ್ತಿದೆ ಎಂದು ಹೆಬ್ಬಾಳಕರ್ ಕಿಡಿಕಾರಿದ್ದಾರೆ.






