ಪರಪ್ಪನ ಅಗ್ರಹಾರ ಜೈಲಿನಲ್ಲಿ ಅಕ್ರಮ ತಡೆಗೆ ಕಠಿಣ ಕ್ರಮ: ಅಲೋಕ್ ಕುಮಾರ್ ನೇತೃತ್ವದಲ್ಲಿ ಸುಧಾರಣೆ
ಬೆಂಗಳೂರು: ಪರಪ್ಪನ ಅಗ್ರಹಾರ ಜೈಲಿನಲ್ಲಿ ನಡೆಯುತ್ತಿರುವ ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಜೈಲು ಡಿಜಿ ಅಲೋಕ್ ಕುಮಾರ್ ಅವರು ಹಲವು ಕಠಿಣ ಬದಲಾವಣೆಗಳನ್ನು ಜಾರಿಗೊಳಿಸಲು ಮುಂದಾಗಿದ್ದಾರೆ.
ಜೈಲಿನ ಒಳಗಡೆ ವಿಚಾರಣಾ ಕೈದಿಗಳು ಹಾಗೂ ಸಜಾ ಕೈದಿಗಳಿಗೆ ಅಕ್ರಮವಾಗಿ ಮೊಬೈಲ್ ಫೋನ್‌ಗಳು ಮತ್ತು ಮಾದಕ ವಸ್ತುಗಳು ತಲುಪುತ್ತಿರುವ ಪ್ರಕರಣಗಳು ಪದೇಪದೇ ಬಹಿರಂಗವಾಗುತ್ತಿವೆ. ಈ ಹಿನ್ನೆಲೆಯಲ್ಲಿ ಅಲೋಕ್ ಕುಮಾರ್ ಅವರು ಜೈಲು ಡಿಜಿಯಾಗಿ ನೇಮಕವಾದ ಬಳಿಕ ಜೈಲಿನ ಎಲ್ಲಾ ಬ್ಯಾರಕ್‌ಗಳಲ್ಲಿ ಅಚಾನಕ್ ದಾಳಿಗಳನ್ನು ನಡೆಸಿ ಹಲವು ಮೊಬೈಲ್ ಫೋನ್‌ಗಳನ್ನು ವಶಪಡಿಸಿಕೊಂಡಿದ್ದಾರೆ.
ಮೊಬೈಲ್‌ಗಳನ್ನು ಸೀಜ್ ಮಾಡಿದರೂ ಮತ್ತೆ ಹೊರಗಡೆಯಿಂದ ಒಳಗೆ ಸಾಗಣೆ ನಡೆಯದಂತೆ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಲಾಗಿದೆ. ಜೈಲಿನ ಸುತ್ತಮುತ್ತ ದೊಡ್ಡ ಮಟ್ಟದಲ್ಲಿ ಬೆಳೆದಿರುವ ಮರಗಿಡಗಳ ಮೂಲಕ ಹೊರಗಡೆಯಿಂದ ಮೊಬೈಲ್ ಮತ್ತು ಮಾದಕ ವಸ್ತುಗಳನ್ನು ಒಳಗೆ ಎಸೆಯಲಾಗುತ್ತಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಈ ಅಕ್ರಮವನ್ನು ತಡೆಯುವ ಸಲುವಾಗಿ ಜೈಲಿನ ಸುತ್ತಮುತ್ತಲಿರುವ ಮರಗಿಡಗಳನ್ನು ತೆರವುಗೊಳಿಸಲಾಗುತ್ತಿದ್ದು, ಜೈಲಿನ ಹೊರಭಾಗದಲ್ಲೂ ಉನ್ನತ ಗುಣಮಟ್ಟದ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸುವ ವ್ಯವಸ್ಥೆಗೆ ಮುಂದಾಗಿದೆ ಜೈಲು ಆಡಳಿತ. ಈ ಕ್ರಮಗಳಿಂದ ಜೈಲಿನ ಭದ್ರತೆ ಮತ್ತಷ್ಟು ಬಲಪಡಿಸುವ ನಿರೀಕ್ಷೆ ವ್ಯಕ್ತವಾಗಿದೆ.






