ಆತಂಕದ ರಾತ್ರಿ…

Date:

ಅದೇ ಪಿಯುಸಿ ಬೋರ್ಡ್ ಎಕ್ಸಾಮ್ ಬರೆದು ಒಂದು ವಾರ ಆಗಿರಬಹುದು.ಮಾವ ಬಂದಿದ್ರು ಮನೆಗೆ, ಅವರನ್ನ ಮಾತಾಡಿಸಿ ಚಹಾ ಮಾಡೋಕೆ ಒಳಗಡೆ ಹೋದೆ,ರಜೆ ಇದೆ ಊರಿಗೆ ಕರೆಯೋಕ ಬಂದಿರಬಹುದು ಅನ್ಕೊಂಡು ಮನಸ್ಸಲ್ಲೇ ಖುಷಿ ಆಗಿತ್ತು..ಮಾವಂಗೆ ಚಹಾ ಕೊಟ್ಟೆ ಜೊತೆಗೆ ಅಪ್ಪಮ್ಮಂಗೂ ಕೊಟ್ಟು ನಾನು ಒಳಗಡೆ ಬಾಗಿಲು ಬದಿಯಲ್ಲಿ ನಿತ್ಕೊಂಡೆ.. ಅಪ್ಪ ಮಾವನಿಗೆ “ಸರಿ ನಾಳೆ ಎಷ್ಟೊತ್ತಿಗೆ ಬರ್ತಾರೆ ಅಂತ ಫೋನ್ ಮಾಡು ಸಂಜೆ ತಿಳಸು ಸಾಕು” ಅಂದ್ರು. ಮಾವ ಅಪ್ಪಮ್ಮ ಚಹಾ ಗ್ಲಾಸ್ಗಳನ್ನಿಟ್ಟು ಹೊರಗಡೆ ಮಾವನ್ನ ಕಳಸಕೊಟ್ರು…ಊಹು ಯಾಕೋ ಮಾವ ಊರಿಗೆ ಕರೀಲಿಲ್ವಲ್ಲ,ಏನೋ ಕೆಲಸ ಇರಬೇಕು ಬಿಡು ಅಂತ ಸುಮ್ಮನಾದೆ..
ಸಾಯಂಕಾಲ ಟಿವಿ ಚಾನಲ್ ನಲ್ಲಿ ಹಾಕಿ ಮೊಗ್ಗಿನ ಮನಸ್ಸು ಮೂವಿ ನೋಡ್ತಾ ಕೂತಿದ್ದೆ, ಅಮ್ಮ ಒಳಗಡೆ ಏನೋ ಕೆಲ್ಸ ಮಾಡ್ತಿದ್ರು..ಅಷ್ಟ್ರಲ್ಲೇ ಅಪ್ಪಂಗೆ ಫೋನ್ ಬಂತು ಹೊರಗಡೆಯಿಂದ ಮನೆ ಒಳಗಡೆ ಮಾತಡ್ತ ಬಂದ್ರು..ನಾನು ಮೂವಿಲಿ ಬರ್ತಿದ್ದ ಟೈಟಲ್ ಸಾಂಗ್ ಎಂಜಾಯ್ ಮಾಡ್ತಿದ್ದೆ, ಅಪ್ಪ ಸೈಲೆಂಟ್ ಮಾಡು ಅಂತ ಸನ್ನೆ ಮಾಡಿದ್ರು ಫೋನಲ್ಲಿ ಮಾತಡ್ತ, ಟಿವಿನಾ ಮ್ಯೂಟ್ ಮಾಡಿ ಒಳಗಡೆ ಎದ್ದೋದೆ. ಅಮ್ಮ ದೇವರಿಗೆ ದೀಪ ಹಚ್ಚು ಕೈಕಾಲು ಮುಖ ತೊಳದು ಅಂತ..ದೀಪ ಹಚ್ಚಿ ಬರೋಷ್ಟ್ರಲ್ಲಿ ಮನೆಯವ್ರೆಲ್ಲ ಹಾಲ್ ನಲ್ಲಿ ಕುತ್ಕೊಂಡು ಏನೋ ಡಿಸ್ಕಶನ್ ಮಾಡ್ತಿದ್ರು..ದೊಡ್ಡಮ್ಮ ನನ್ನ ನೋಡಿ ಬಾ ಬಾ ನಾಳೆ ಮದುವೆ ಆದಮೇಲೆ ಇದೆಲ್ಲಾ ಕೆಲಸ ಮಾಡಲೇಬೇಕು.ಸದ್ಯಕ್ಕ ಕುತ್ಕೊಬಾ..ನಾಳೆ ನಿನ್ನ ನೋಡಕೆ ಹುಡುಗನ ಕಡೆಯವ್ರು ಬರ್ತಾರಂತೆ..! ಚೆನ್ನಾಗಿ ರೆಡಿಯಾಗಿ ಕುತ್ಕೊ ಅಂತ,ಮಾತು ಮುಂದವರಸಿದ್ರು. ಆದರೆ, ನನಗೇನೂ ಕೇಳಿಸಲಿಲ್ಲ ದೊಡ್ಡಮ್ಮ ಮಾತಡಿದ್ದು,ಯಾಕೋ ಸಿಡಿಲು ಬಡದಂಗಾಯ್ತು..!


ಏ ಅಚ್ಚು, ಅಚ್ಚುss ಹೋಗು,ಹೋಗಿ ನಾಳೆ ಉಟ್ಕೋಳಕೆ ಆ ಗುಲಾಬಿ ಬಣ್ಣದ್ದು, ಜರಿ ಬಾರ್ಡರ್ ಸೀರೆ ಹೊರಗಡೆ ತೆಗೆದಿಟ್ಕೊ ನಾಳೆ ಆರತಿ ಅಕ್ಕ ಬಂದು ಉಡಸ್ತಾಳೆ ಅಂತ ಅಮ್ಮ ಕೈ ತಿವಿದಾಗಲೇ ಎಚ್ಚರ ಆಯ್ತು..ಊಹು ಇಲ್ಲ ನಾನಿಷ್ಟ ಬೇಗ ಮದುವೆ ಆಗಲ್ಲ ನಂಗಿಷ್ಟ ಇಲ್ಲ. ನಾ ಇನ್ನು ಓದಬೇಕು ಅಂತ ರಂಪ ಶುರು ಮಾಡ್ದೆ..ಅಮ್ಮ,ಅಪ್ಪ ,ದೊಡ್ಡಮ್ಮ ಅಕ್ಕ ನಿನ್ನ ನೋಡಕ ಬರ್ತಿರೋದು,ಮದುವೆ ಆಗಕಲ್ಲ.ನೋಡಿದ ತಕ್ಷಣನೇ ಎಲ್ಲ ಆಗೋಗುತ್ತ ಅಂತ..ಮಾರನೇ ದಿನ ಗುಲಾಬಿ ಸೀರೆ ಉಡ್ಸಿ,ತಲೆಗೆ ನಾಲ್ಕು ಮೊಳ ಮಲ್ಲಿಗೆ ಹೂವು ಹಾಕಿ ಆರತಿ ಅಕ್ಕ ವಧು ಪರೀಕ್ಷೆಗೆ ನನ್ನ ರೆಡಿ ಮಾಡಿದ್ರು,. ಜೊತೆಗೆ ನಮಸ್ಕಾರ ಮಾಡು,ತಲೆ ಬಗ್ಗಸಿ ಕೂತ್ಕೊ ಅಂತಲ್ಲಾ..ಹಿರಿಯರು ಉಪದೇಶನೂ ಪಾಲಿಸಿದೆ.ಹುಡಗನ ಮನೆ ಕಡೆಯವ್ರು ಹಸ್ತ ರೇಖೆ ನೋಡಿದ್ದಾಯ್ತು,ನನ್ನ ಹೆಸರು ಹೇಳು ಏನ್ ಓದಿದ್ದೀ ಅಂತ ಕೇಳಿದ್ದು ಆಯ್ತು. ನಾನು ಹೆದರಿಕೆಯಿಂದಲೇ ಉತ್ತರ ಕೊಟ್ಟಿದ್ದು ಆಯಿತು,ಪೇಪರ್ ಓದ್ಸಿ ಓದೋಕ ಬರುತ್ತೋ ಇಲ್ವ ಅಂತ ಪರೀಕ್ಷೆ ಮಾಡಿದ್ದು ಮುಗೀತು..ಒಟ್ಟಿನಲ್ಲಿ ಎರಡು ಗಂಟೆಗಳ ಕಾಲ ಉಸಿರು ಗಟ್ಟಿದ ಅನುಭವ ನನಗೆ,ಮತ್ತೆ ಅದರಲ್ಲಿ ತಂಗಿ ಕೀಟ್ಲೆ ಶುರು ಹಚ್ಕೊಂಡ್ಲು ಅಕ್ಕ ಭಾವನ ನೋಡ್ದೆನೇ,ಗುಂಡ್ ಗುಂಡುಕ್ಕೆ ಹೈಟಾಗಿ ಸೂಪರ್,ನನಗೆ ರೇಗೋಯ್ತು ಮೊದಲೇ ಮದುವೆ ಆಗಬಾರದು ಅಂತ ಒಂದು ಮನಸ್ಸಿನ ಮೂಲೆಯಲ್ಲಿ ಇದ್ದರೆ ಇನ್ನೊಂದ ಕಡೆಗೆ ಹುಡಗನ ಮನೆಯವ್ರನ್ನಾಗಲಿ,ಹುಡಗನ್ನಾಗಲಿ ಆತಂಕದಲ್ಲೇ ನೋಡ್ಲೇ ಇಲ್ಲ.
ಸರಿ ನಿನೇ ಮದುವೆ ಆಗು, ಬಾವ ಅಂತೆ ಬಾವ..ಯಾವ ಸೀಮೆ ಬಾವನೋ ಇವಳಗೆ ಅಂತ..ನನ್ನ ಫೇವರೆಟ್ ಶರ್ಟ,ಪ್ಯಾಂಟ್ ಹಾಕೊಂಡು,ಕೀರ್ತಿ ಮನೆಗ ಹೋದ್ರಾಯ್ತು ಅಂತ ಅಮ್ಮಂಗ ಹೇಳಿ ಬಂದೆ..ಕೀರ್ತಿ ಬೆಸ್ಟ್ ಫ್ರೆಂಡ್,ಅವಳಿಗೆ ಈ ವಧು ಪರೀಕ್ಷೆ ಬಗ್ಗೆ ಮುಂಚೆ ಹೇಳಿದ್ದೆ. ಹಂಗಾಗಿ “ಏನಮ್ಮ ಹೆಂಗಿದ್ದ ಬಕರ! ನೋಡ್ದ,ಹೆಂಗಿದ್ದ,ಚನ್ನಾಗಿದಾನ” ಅಂತೆಲ್ಲ ಒಂದೇ ಸಮ ಪ್ರಶ್ನೆಗಳ ಸರಮಾಲೆನೇ ಕೇಳೋಕ ಪ್ರಾರಂಭ ಮಾಡಿದ್ಲು..ನಾನು ಹುಡುಗನ್ನ ನೋಡ್ಲಿಲ್ಲ,ಭಯ ಆಗಿತ್ತು ಅದಕ್ಕ ವಳು “ಲೇ ಅವ್ರು ನಿನ್ನ ಒಪ್ಕೊಂಡು ಮದುವೆಗೆ ಹು ಅಂದ್ರೆ ಏನ್ನಾಡ್ತಿಯಾ?ನಮ್ಮಕ್ಕಂದು ಹಿಂಗೇ ಆಗಿತ್ತು.ಅವಳಿಗೆ ಗಂಡನ ಕಡೆಯವರು ಓದಸ್ತೀನಿ ಅಂತ ಓದಸ್ಲೇ ಇಲ್ಲ,ದೊಡ್ಡ ಮನೆತನ ಮನೇಲಿ ಆರಾಮ ಇರಲಿ ಅಂತ ಮಾತು ಬರೀ ಮಾತಲ್ಲೇ ಮುಗಿಸಿದ್ರು. ಯಾವದಕ್ಕೂ ಹುಷಾರು ಅಂತ ತಲೇಲಿ ಹುಳು ಬಿಟ್ಳು.
ಯಾಕೋ ಮನಸ್ಸು ಮಂಕಾಗಿತ್ತು,ಮನೆಗ ಬಂದೆ ಆರತಿ ಅಕ್ಕ ದೊಡ್ಡಮ್ಮ,ನನ್ನ ಸಾಂತ್ವನ ಮಾಡಿದ್ರು ನಿನ್ನ ನೋಡ್ಕೊಂಡ ಹೋಗಿರೋದು,ಮದುವೆ ಆಗ್ತೀನಿ ಅಂತೇನಿಲ್ವಲ್ಲ. ಅಷ್ಟಕ್ಕೂ ಮದುವೆ ಒಪ್ಪಿಗೆ ಆದ್ರೂ ಅವರಿಗೆ ತಿಳಿಸಿದ್ರಾಯ್ತು ಹೇಗ ಆದ್ರೂ ಮಾಡಿ ನೀನು ಓದಬೇಕು ಅಂತಿರೋದನ್ನ,ಕೆಲವೊಂದು ಸಾರಿ ಹೆಣ್ಮಕ್ಕಳು ಹೆಂಗ್ ಬರುತ್ತೋ ಹಂಗ್ ಹೋಗಬೇಕು ಹೊಂದಕೊಂಡು,ಎಷ್ಟೇ ಓದಿದ್ರೂ ಅಡುಗೆಮನೆ ಕೆಲ್ಸ ತಪ್ಪಿದ್ದಲ್ಲ ಅಚ್ಚು ಅಂತ ಆರತಿ ಅಕ್ಕ ಹೇಳಿದ್ದನ್ನ ಕೇಳಿ..ಕಣ್ಣಂಚಲ್ಲಿ ನೀರು ಬಂದ್ರು ಸುಮ್ನೆ ತೋರಸ್ದೆ ದೊಡ್ಡಮ್ಮನ ಮನೆಯಿಂದ ಎದ್ದಬಂದೆ..ಮನಸ್ಸು ಮಾತ್ರ ಆತಂಕದಲ್ಲೇ ಇತ್ತು..ಅಪ್ಪ ಮಾವನಿಗೆ ಫೋನ ಮಾಡಿದ್ರು ಎರಡು ದಿನ ಆಯ್ತು ನೋಡ್ಕೊಂಡ ಹೋಗಿ,ಏನಾದ್ರೂ ಫೋನ್ ಬಂತ ಅಂತ..ಇಲ್ಲ ಅಂದಾಗ..ನನಗೆ ಸಿಕ್ಕಾಪಟ್ಟೆ ಖುಷಿ ಆಯ್ತು..ಸರಿ ಪದವಿಗೆ ಅಡ್ಮಿಶನ್ ಮಾಡಿಸೋಣ ಅಂತ ಊರಲ್ಲಿರೋ ಎಲ್ಲ ಕಾಲೇಜ್ನಲ್ಲಿ ವಿಚಾರಿಸಿ ಬಂದು,ಯಾವ ಕಾಲೇಜನಲ್ಲಿ ಯಾವ ವಿಷಯಗಳು ಇವೆ. ನನಗೆ ಯಾವದು ಸೂಕ್ತ ಅಂತ ಒಂದು ಪ್ರತಿಷ್ಠಿತ ಕಾಲೇಜ್ನ ಅಡ್ಮಿಷನ್ ಫಾರ್ಮ್ ತಗೊಂಡು ಬಂದು ಲೆಕ್ಕಾಚಾರ ಹಾಕ್ತೀರಬೇಕಾದ್ರೆ ರಿಸಲ್ಟ್ ಬಂತು ಅನ್ಕೊಂಡಂಗೆ 80% ಪರ್ಸೆಂಟ್ ಬಂತು ಖುಷಿ ಆಗಿ,ಮನೆಯವ್ರಿಗೆ ತಿಳಿಸಬೇಕು ಅಂತ ಮನೆಗೆ ಬಂದೆ,ಅಮ್ಮಂಗೆ ವಿಷಯ ತಿಳಿಸದೆ ಖುಷಿ ಆದ್ರೂ ಅಮ್ಮನೂ ನಿನಗೂ ಒಂದು ಸರ್ಪ್ರೈಸ್ ನಿನ್ನ ನೋಡ್ಕೊಂಡ ಹೋಗಿದ್ದ ಹುಡಗನ ಮನೆಯವ್ರು ಒಪ್ಕೊಂಡ್ರಂತೆ ನಿನ್ನ..ನಾಳೆಗೆ ಅವ್ರ ಮನೆಯವ್ರೆಲ್ಲ ಉಡಿ ತುಂಬೋಕ ಬರ್ತಾರೆ ನಿನಗೆ,ಒಳ್ಳೆ ಮನೆತನ,ಹುಡ್ಗ ಚಂದಾ ಇದಾನೆ,ಓದ್ಕೊಂಡಿದಾನೆ,ಒಳ್ಳೆ ಬಿಜೆನೆಸ್ ಇದೆ ಒಬ್ಬನೇ ಮಗ,ಇಂತಹ ಸಂಬಂಧ ಎಲ್ಲೂ ಸಿಗಲ್ಲ ಅರ್ಥ ಮಾಡ್ಕೋ ಅಂತ. ಅದ್ರಲ್ಲೂ ಮೊದಲೇ ಸಂಬಂಧನೇ ಇಷ್ಟ ಚೆನ್ನಾಗಿ ಬಂದಿರಬೇಕಾದ್ರೆ ಬೇಡ ಅನ್ನಬೇಡ ,ನಿಮ್ಮಪ್ಪಂಗೆ ನಮಗೆ ಇಷ್ಟ ಆಗಿದೆ ಅವರ ಮನೆತನ ಮತ್ತು ಹುಡುಗ ಅಚ್ಚು.. ಅಂತ ಏನೆನೋ ಹೇಳಿದ್ರು, ನನಗ ಕೇಳಿಸಿದ್ದು ಕೊನೆ ಎರಡು ಸಾಲು ಮಾತ್ರ ಅಂದ್ರೆ ನನ್ನ ಭಾವನೆಗಳು,ಆಸೆಗಳು ಎಲ್ಲವೂ ತುರೋಗಿದ್ದ ಅನುಭವ ಆದಂಗಾಯ್ತು.ಮಾರನೇ ದಿನ ಅವರ ಮನೆಯವರು ಬಂದು ಉಡಿ ತುಂಬೋ ಕಾರ್ಯ ಮಾಡ್ಕೊಂಡು ಇನ್ನೊಂದು ಒಂದುವರೆ ತಿಂಗಳಲ್ಲಿ ಮದುವೆ ಇಟ್ಕೋಳೋಣ ಅಂತ..ಹೇಳಿದ್ರು
ಅಪ್ಪಮ್ಮನ ಆಸೆ ಮತ್ತು ಸಂದರ್ಭದ ಕೈಗೊಂಬೆಯಾಗಿ ಓದೋ ಕನಸನ್ನ ಮನಸ್ಸಿನ ಮೂಲೆಲಿ ಶಾಶ್ವತವಾಗಿ ಮಲಗಿಸಿ, ಮದುವೆ ತಯಾರಿಗೆ ಅಣಿಯಾದೆ, ಈ ಮಧ್ಯೆ ದಿನೇಶ್ ಮನೆಗ ಬಂದಿದ್ರು, ಮನೆಯವ್ರಿಗೆ ಅರ್ಚನಾ ನಾ ಹೊರಗಡೆ ಕರೆದುಕೊಂಡ ಹೋಗಬೇಕು ನೀವು ಪರ್ಮಿಶನ್ ಕೊಟ್ಟರೆ ಹಂಗೆ ಒಂದು ಫೋನ್ ಕೊಡಸೋಣ ಅಂತ ಅದಕ್ಕೆ ಅಂದ್ರು. ತಾತಾ ಅದನ್ನ ವಿನಮ್ರವಾಗೇ ಮದುವೆಗೆ ಮುಂಚೆ ನಾವು ನಮ್ಮ ಹುಡಗೀನ ಕಳಿಸಲ್ಲ ಕ್ಷಮೆ ಇರಲಿ ಅಂತ ತಿಳಸಿದ್ರು..ಅಂದೇ ಸಾಯಂಕಾಲ ಅಪ್ಪನ ಮೊಬೈಲ್ ಗೆ ದಿನೇಶ್ ಊರಿಗೆ ಹೋಗಿ ಕಾಲ್ ಮಾಡಿದ್ರು, ಅರ್ಚನಾ ಜೊತೆ ಕೊನೆ ಪಕ್ಷ ಮಾತಾಡೋ ಅವಕಾಶ ಮಾಡಿಕೊಡಿ ಅಂತ.ಅಪ್ಪ ಫೋನ ತಂದುಕೊಟ್ರು “ಏನ್ರಿ ನಿಮ್ಮ ತಾತಾ ಹಿಂಗಂದ್ ಬಿಟ್ರು,ಬೇಜಾರಾಯ್ತು ಆದರೆ ಪರವಾಗಿಲ್ಲ ಹಿರಿಯರ ಅಲ್ವ ಸಂಪ್ರದಾಯಗಳು ಪಾಲಿಸೋಣ” ಹೆಂಗಿದ್ರೂ ಇನ್ನೊಂದೇ ತಿಂಗಳು ಅಷ್ಟ್ರಲ್ಲಿ ನಿನೇ ನಮ್ಮನೆಗೆ ಬರ್ತಿಯಾ ಅಲ್ವ ಅಚ್ಚು” ಅಂದಾಗ ಯಾಕೋ ಒಲ್ಲದ ಮನಸ್ಸು ಸುಮ್ನೆ “ಹು”ಕರಿಸೀದೆ..ಮಾತಡಲ್ವ,ಸುತ್ತಮುತ್ತ ಅಪ್ಪಮ್ಮ ಇದಾರಾ ಅಂದ್ರೆ” ಹು” ಮತ್ತೆ ಸರಿ ಅಯ್ತು ಬಿಡು,ನೀನು ಫ್ರೀ ಇದ್ದಾಗ ಮಿಸ್ ಕಾಲ್ ಮಾಡು ನಾನೇ ಕಾಲ್ ಮಾಡ್ತೀನಿ ಅಂತ ಕಾಲ್ ಕಟ್ ಮಾಡಿದ್ರು…ಅದಾಗಿ ಮದುವೆಗೆ ಇನ್ನೆರಡುವಾರ ಲಗ್ನಪತ್ರಿಕೆ ಹಂಚೋಕೆ ದಿನೇಶ್ ಮನೆಗ ಬಂದಿದ್ರು,ತಾತಾ ಇರಲಿಲ್ಲ ಅಮ್ಮನಿಗೆ ಕೇಳಿ ಮಾತಡಕೆ ಮಹಡಿ ಮೇಲೆ ಕರದ್ರು..ಅಮ್ಮ ಬೇಗ ಬಾ..ತುಂಬಾ ಹೊತ್ತ ನಿತ್ಕೊಬೇಡ ಹುಷಾರು ಅಂತ ಕಳಸಿದ್ರು..ಲಗ್ನ ಪತ್ರಿಕೆ ಇಷ್ಟ ಆಯ್ತ.ನಿಮ್ಮ ಫೇವರೆಟ್ ಕಲರ್ ಅಂತೆ ನಿಮ್ಮ ತಂಗಿ ಹೇಳಿದ್ಲು ಅಂತ ದಿನೇಶ್ ಹೇಳಿದ್ರು, ತಲೆ ತಗ್ಗಿಸ್ಕೊಂಡೆ ಹು ಅಂದೆ..ನಿನಗೆ ನಾನಿಷ್ಟ ಆಗಿಲ್ವ,ಒತ್ತಾಯ ಮಾಡಿದ್ರ ಮನೇಲಿ..ಹೇಳು ಯಾಕೋ ಮಾತಡ್ತಿಲ್ಲ,ಫೋನ್ ಕೂಡ ಮಾಡ್ಲಿಲ್ಲ ಅವತ್ತು ನಾನ ಮಾಡಿದ್ದ ಕಾಲ್ ಟೈಮಲ್ಲೂ ಅಂದಾಗ”ಒಂದ ಕ್ಷಣ ಅಪ್ಪಮ್ಮ ನೆನಪಿಗ ಬಂದ್ರು,ಅವರ ಈ ಹುಡಗನ ಮನೆತನ ಮತ್ತು ಅವನನ್ನ ಇಷ್ಟಪಟ್ಟಿರೋ ಮಾತು ನೆನಪಾಯ್ತು..ಇಲ್ಲ ಹಂಗೇನಿಲ್ಲ ಸ್ವಲ್ಪ ಹುಷಾರಿಲ್ಲಂದೆ.ಸರಿ ಚೆನ್ನಾಗಿ ರೆಸ್ಟ್ ಮಾಡು ಆರಾಮಾಗಿ, ಇವತ್ತು ಸಂಜೆನಾದ್ರೂ ಕಾಲ್ ಮಾಡು ಅಂತ ಮುಂದೆ ಇನ್ನೇನೋ ಹೇಳೋ ಅಷ್ಟರಲ್ಲೇ ಅಚ್ಚು ಅಕ್ಕ ಅಂತ ಜಾನವಿ ಕರಿಯೋಕ ಬಂದ್ಲು..ಸರಿ ಅಮ್ಮ ಕರೀತಿರಬೇಕು ಅಂತ ಬಂದೆ…


ದಿನೇಶ್ ಊರಿಗ ಹೊರಟನಿಂತ್ರು,ಇತ್ತ ಅಪ್ಪಮ್ಮ ಲಗ್ನಪತ್ರಿಕೆ ಹಂಚೋಕೆ ಹೋದ್ರು..ತಂಗಿ ಮದುವೆಗೆ ಹೊಸ ಬಟ್ಟೆ ತರೋಕೆ ಫ್ರೆಂಡ್ಸ್ ಜೊತೆ ಹೋದ್ಲು..ದೇವರಿಗೆ ದೀಪ ಹಚ್ಚಿ ಹಾಡು ಕೇಳೋಣ ಯಾಕೋ ಮನಸ್ಸು ಶಾಂತವಾಗಬಹುದು ಅಂತ “ಮೊಗ್ಗಿನ ಮನಸ್ಸು” ಹಾಡು ಬರ್ತಿತ್ತು ಯಾಕೋ ಅವತ್ತು ಇದೇ ಹಾಡು ಕೇಳ್ತಿದ್ದೆ,ಅಲ್ವ ಅಂತ ಟಿವಿ ಆಫ್ ಮಾಡಿ ರೂಮ್ ಸೇರದೆ..ಟೇಬಲ್ ಮೇಲೆ ಇಟ್ಟಿದ್ದ ಲಗ್ನಪತ್ರಿಕೆನಲ್ಲಿ ದಿನೇಶ್ ಜೊತೆ ಅರ್ಚನಾ ಅಂತ ಅಕ್ಷರ ,ಇನ್ನೊಂದು ಕಡೆಗೆ ನನ್ನ ಪದವಿ ಪ್ರವೇಶಾತಿ ಅರ್ಜಿ ಒಟ್ಟಿಗೆ ಕಣ್ಣಿಗೆ ಬಿದ್ವು, ದುಃಖ ಉಮ್ಮಳಿಸಿ ಬಂತು..ಅವರಿಗೆ ಹೇಳಬಿಡ್ಲಾ ನಾನು ಓದಬೇಕು ಅನ್ಕೊಂಡಿದೀನಿ, ಮದುವೆ ಬೇಡ ಅನ್ನಿ ಪ್ಲೀಸ್ ಅಂತ, ಊಹು ಮತ್ತೆ ಮನೆಯವ್ರಿಗೆ ವಿಷಯ ಗೊತ್ತಾದ್ರೆ ಅವ್ರು ನನ್ನ ಬಗ್ಗೆ ಕೆಟ್ಟದಾಗಿ ತಿಳ್ಕೊಂಡ್ರೆ..ಅಂತ ಮನದಲ್ಲಿ ಯೋಚಸ್ತಿರಬಾಕಾದ್ರೆ ಬಾಗಿಲು ಸದ್ದಾಯ್ತು ಜಾನವಿ ಬಟ್ಟೆ ಖರೀದಿ ಮಾಡಿ ಮನೆಗ ಬಂದು”ಅಕ್ಕ ನೋಡೆ ಇದು ಹೊಸ ಫ್ಯಾಶನ್ ನಿನ್ನ ಮದುವೆಗೆ ಹಾಕೋತೀನಿ ಚಂದಾ ಇದೀಯಲ್ವ” ಅಂದ್ಲು ಹು ಅಂದೆ..ನನ್ನ ಮುಖ ನೋಡ್ತ ಅಕ್ಕ ಯಾಕಕ್ಕ ಬೇಜಾರಾಗಿದೀಯ,ಯಾರಾದ್ರೂ ಏನಾದ್ರೂ ಅಂದ್ರ, ಬಾವ ಬಂದಿದ್ರಲ್ಲ ಏನಾದ್ರೂ ಅಂದ್ರ ಏನಾಯ್ತು..ಹೇಳಕ್ಕ ಜಾನವಿ ಒಂದೇ ಸಮ ಹಠ ಮಾಡಿ ಕೇಳಿದ್ಲು. ಅದಕ್ಕಂದೆ ಚೆನ್ನಾಗಿ ಓದು..ಮುಂದಿನ ಸಾರಿ ಎಸ್.ಎಸ್.ಎಲ್.ಸಿ ನೀನು.ಚನ್ನಾಗಿ ಓದಿ ಕಾಲೇಜ್ ಸೇರು ಅಂದೆ..ಅಷ್ಟೆನಾ ಸರಿ ಓದ್ತೀನಿ ,ಹೊಟ್ಟೆ ಹಸಿವಾಗ್ತೀದೆ ಊಟ ಮಾಡಣ ಬಾ ಅಪ್ಪಮ್ಮ ಲೇಟಾಗಬಹುದು ಬರೋಕೆ ಅಂತ. ಇಬ್ಬರೂ ಊಟ ಮಾಡಿದ್ವಿ…ವಾರಗಳು ಕಳಿತು ಮನೇಲಿ ಹಸಿರು ಬಳೆ ಶಾಸ್ತ್ರ, ಮೆಹೆಂದಿ ಎಲ್ಲವೂ ಆಯ್ತು, ಮದುವೆ ದಿನಾನೂ ಬಂದಾಯ್ತು, ಹಿಂದಿನ ದಿನ ಎಂಗೇಜಮೆಂಟ್ ನಗುವಿನ ಮುಖವಾಡ ತೊಟ್ಟು ನಿಂತ್ಕೊಂಡೆ,ದಿನೇಶ್ಗೆ ಉಂಗುರ ತೊಡಸದೆ ಅವರು ಉಂಗುರು ತೋಡಿಸಿದ್ರು,ಎಲ್ಲ ಶಾಸ್ತ್ರಗಳೂ ಮುಗದ್ವು,ಬೆಳಗ್ಗೆ ಮೂಹುರ್ತ ಬೇಗ ಇದೆ ಬೇಗ ರೆಡಿಯಾಗ ಬೇಕಂತೆ..ಬೇಗ ಏಳಬೇಕು ಅಂತ ಗಂಡಿನ ಕಡೆಯವರ ಆದೇಶ ನಮ್ಮ ಮನೆಯವ್ರೆಲ್ಲಾ ಚಾಚು ತಪ್ಪದೇ ಪಾಲಿಸಿದ್ದಾಯ್ತು ಬೆಳಗ್ಗೆ ಅರಿಶಿಣ ಶಾಸ್ತ್ರ ಮುಗಸಿ,ಮೂಹುರ್ತ ಟೈಮ್ಗೆ ಭಟ್ರು ಮುಂದೆ ದಿನೇಶ್ ಮತ್ತೆ ನಾನು ಕುಂತಾಗಿತ್ತು. ಭಟ್ಟರು ಗಂಡ ಹೆಂಡತಿ ಸಂಬಂಧದ ಬಗ್ಗೆ ತಿಳಿಸ್ತಾ ಒಂದೊಂದೇ ಶಾಸ್ತ್ರ ಮುಗಿಸಿ,ಅಪ್ಪಅಮ್ಮನ್ನ ಕನ್ಯಾಧಾನಕ್ಕ ಕರೆದ್ರೂ..ಅವತ್ತೇ ಗೊತ್ತಾಗಿದ್ದು ಅವ್ರ ಕಣ್ಣಲ್ಲಿ ಅವರ ಮಗಳ ಮೇಲಿರೋ ಪ್ರೀತಿ ಅಷ್ಟಿಷ್ಟಲ್ಲಾ ಅಂತ..ಆ ಪ್ರೀತಿ ಕಾಣ್ತ ಸುಮ್ನೆ ಕತ್ತು ಬಗ್ಗಿಸಿ ತಾಳಿ ಕಟ್ಟಿಸ್ಕೊಂಡೆ..ದಿನೇಶ್ ಅಳಬೇಡ ಅನ್ನೋ ರಿತೀಲಿ ಸನ್ನೆ ಮಾಡಿದ್ರು,ಸುಮ್ನೆ ನಸುನಕ್ಕೆ..ನನಗೆ ಗಂಡನ ಮನೇಲಿ ಹಂಗಿರು,ಹೇಳೋದನ್ನ ಕೇಳು, ಬರದಿದ್ದನ್ನ ಕೇಳಿ ಕಲಿ ಅಂತ ಉಪದೇಶ ಮಾಡ್ತ ಬಂದವ್ರು ಊರ ಸೇರ್ತಿದ್ರು..ನನ್ನ ಅತ್ತೆ ಮತ್ತು ನಾದಿನಿ ಬಂದು ಇವತ್ತು ಶುಕ್ರವಾರ ನಮ್ಮನೆ ಸೊಸೆ ನಾವು ಇವತ್ತೇ ಮನೆಗೆ ಕರೆದುಕೊಂಡು ಹೋಗ್ತೀವಿ ಅಂತ ಅಮ್ಮನ್ನ ದೊಡ್ಡಮ್ಮನ್ನ ಕೇಳಿದ್ರು.ಸರಿ ಆಯ್ತು ಅಂತ ದೊಡ್ಡಮ್ಮ,ಅಮ್ಮ “ಉಡಕ್ಕಿ ಸಂಪ್ರದಾಯ” ಕ್ಕೆ ಅಣಿ ಮಾಡಿ, ಉಡಿ ತುಂಬಿ,ಕಣ್ಣಾಲಿಗಳನ್ನ ತುಂಬ್ಕೊಂಡೆ ಕಾರ್ ಹತ್ತಿಸಿದ್ರು…ಬೇಗ ನನ್ನ ಮನೆಗ ಕರೆದುಕೊಂಡು ಹೋಗ್ತಿದಾರಲ್ಲ ಅಂತ ಇನ್ನಷ್ಟು ಮನಸ್ಸು ಭಾರದ ನಡುವನೇ ಆಗಲೇ ಗಂಡನ ಮನೆ ಸೇರಿ “ಬೆಲ್ಲದಚ್ಚು ಜೋಳ ತುಂಬಿರೋ ಸೇರು” ಬಲಗಾಲಲ್ಲಿ ಒದ್ದು, ಹೊಸ್ತಿಲಿಗೆ ಮಳೆ ಬಡಿದು ದೇವರ ಮನೆಗೆ ಕರೆದುಕೊಂಡು ಹೋಗಿ ದೀಪ ಹಚ್ಚಿಸಿದ್ರು..ಆಗಲೇ ರಾತ್ರಿ ಗಂಟೆ ಒಂಭತ್ತಾಗಿತ್ತು, ಒಂದ ರೂಮಲ್ಲಿ ಸೋದರತ್ತೆ,ಚಿಕ್ಕಮ್ಮ ಮತ್ತು ನಾನು ಕೂತಿದ್ವೆ. ನಾದಿನಿ ಬಂದು ಊಟಕ್ಕ ಬರಬೇಕಂತೆ ಅತ್ತಿಗೆ ಅಂತ ಕರದೋದ್ಲು.ಸರಿ ಅಂತ ಊಟಕ್ಕೆ ಹೊರಗಡೆ ಪಂಕ್ತಿಲೀ ಬಂದು ಕೂತ್ವಿ ದಿನೇಶ್ ನನ್ನ ಮುಂದೆನೇ ಊಟಕ್ಕೆ ಕೂತ್ರು ಬಂದು..ಯಾಕೋ ನಸು ನಗ್ತಿದ್ರು..ನಾನು ಆಗ್ಲೇ ಅವರನ್ನ ಅಷ್ಟು ಗಮನಿಸಿದ್ದು,ಎತ್ತರ ನಿಲುವ,ಬಿಳಿ ಶರ್ಟು ಪಂಚೆಲೀ ಎಷ್ಟು ಚಂದ ಕಾಣ್ಸಿತಿದ್ರು,ಸುಮ್ನೆ ಮತ್ತೆ ತಲೆ ಕೆಳಗಾಕಿ ಮತ್ತೆ ಊಟ ಮುಂದವರಸದೆ..ಊಟ ಮುಗಿಸಿ ಕೈ ತೊಳೆದು ಬಂದು ರೂಮಲ್ಲಿ ಕೂತ್ಕೊಂಡ್ವಿ ಅತ್ತೆ,ಚಿಕ್ಕಮ್ಮ ಮಾತಡ್ತ ನಮ್ಮತ್ತೆ ಬಂದು ಸೋದರತ್ತೆಗೆ ಏನೋ ಹೇಳಿ ಹೋದ್ರು,. ಅತ್ತೆ ಬಂದು ಸರಿ ನಿಮ್ಮ ಚಿಕ್ಕಮ್ಮ ಕರಕೊಂಡ ಹೋಗ್ತಾರೆ ಅಲ್ಲಿಗ ಹೋಗು, ನಿಮ್ಮನೆಯವ್ರು ಏನ್ ಹೇಳಿದ್ರು ಕೇಳು,ಅಳೋದ ಗಿಳೋದ ಎಲ್ಲ ಮಾಡಬಾರದ ಅಚ್ಚು ಅಂತ..ಕಳಸಿದ್ರು ಯಾಕೋ ನಮ್ಮತ್ತೆ ಆಗಲೇ ಏನಾರೆ ಹೇಳಿದ್ರ ಏನೋ ಅನ್ಕೊಂಡು ಮುಖ ಸಣ್ಣಗೆ ಮಾಡಿ ಹೋದೆ..ಸರಿ ಅಚ್ಚು ಈ ರೂಮಲ್ಲಿ ಹೋಗ ಕುತ್ಕೊ ಆಯ್ತ.ಅಂದ್ರು,ಸರಿ ಅಂತ ರೂಮ್ ಒಳಗಡೆ ಹೋದೆ, ಯಸ್ ಅದೇ ನನ್ನ ಕೆಲ ಮದುವೆ ಆದ ಫ್ರೆಂಡ್ಸು ಹೇಳಿದ್ದು,ಸಿನಿಮಾದಲ್ಲಿ ತೋರಸೋ ಹಾಗೆ ಕೋಣೆ ಶೃಂಗಾರವಾಗಿತ್ತು, ನನಗೆ ಆತಂಕ ಹೆಚ್ಚಾಗಿತ್ತು, ಒಂದ ಕ್ಷಣ ಕಣ್ಣಿಗೆ ಕತ್ತಲೆ ಕವದಂಗಾಯ್ತು, ಬಾಗಿಲು ಸದ್ದಾಯ್ತು,ಅವರೇ ಬಂದ್ರು..ಒಂದ ಮೂಲೇಲಿ ಸರದು ನಿಂತೆ,ಭಯದಲ್ಲಿ ಯಾಕೋ ಕಣ್ಣು ತುಂಬಿ ಬಂದ್ವು ಸುಮ್ನೆ ತಲೆಬಾಗಿ ನಿಂತೆ, ದಿನೇಶ್ ಕರದು ಅಚ್ಚು ಇಲ್ಲಿ ಬಾ ಕುತ್ಕೊ..ಹೂ ಬಾ ಕುತ್ಕೊ ಅಂತ ಕರದಾಗ ಸುಮ್ನೆ ಹೋಗಿ ಕೂತೆ..ಭಯ ಆಗ್ತೀದಿಯಾ, ತಲೆ ಎತ್ತಿ ನೋಡಿಲ್ಲಿ ಒಂದ್ಸಾರಿ,ಅಳಬೇಡ ಕಣ್ಣೊರಸ್ಕೋ ಅಂತ..ವೇಟ್ ಮಾಡು ಎರಡು ನಿಮಿಷ ಬಂದೆ ಅಂತ ಬೀರುವಿನಿಂದ ಏನೋ ತಂದ್ರು, ಅರೇ! ನನ್ನ ಫೋಟೋ ಅಲ್ಬಂ, ನನ್ನ ಬಾಲ್ಯದ ದಿನಗಳಿಂದ ಹಿಡಿದು ಕಾಲೇಜಿನಲ್ಲಿ ತೆಗೆಸಿದ ಪ್ರತಿ ಸಂದರ್ಭದ ಫೋಟೋಗಳು ಅಬ್ಬ ಒಂದ್ಸಾರಿ ಖುಷಿ ಆಗಿ ಅವರ ಮುಖ ನೋಡ್ದೆ,ಹು ನಿಂದೆ, ಕದ್ದಕೊಂಡ ಬಂದಿದೀನಿ ನಿಮ್ಮ ಮನೆಯಿಂದ ಅಂದ್ರು..! ನನ್ನ ಫೋಟೋಸ್ ಜೊತೆಗಿನ ನೆನಪುಗಳನ್ನ ಕೇಳ್ತಾ, ತಮ್ಮ ಫೋಟೋಳನ್ನು ತೋರಿಸಿ ಸ್ನೇಹದ ವಾತಾವರಣ ನಿರ್ಮಿಸಿದ್ರು, ಅವರ ಫ್ರೆಂಡ್ಸೊಟ್ಟಿಗೆ ಆಡ್ತಿದ್ದ ಆಟವೊಂದನ್ನ ಹೇಳಿ,ಸೋಲು ಗೆಲವುಗಳ ಮಾತು,ನಗುವಿನ ನಡುವೆ ಬೆಳಗಿನ ಜಾವ ಐದಾಗಿತ್ತು ಅನ್ಸುತ್ತೆ, ಬಾಗಿಲು ಬಡಿದ್ರು..ದಿನೇಶ್ ನೋಡೋಗು ಯಾರು ಅಂದಾಗ ನಾದಿನಿ ಮುಖ ಉಜ್ಜತಾ ಅತ್ತಿಗೆ ಅಮ್ಮ ಕರಿತೀದಾರೆ ಅಂದ್ಲು…! ಸರಿ ಅಂತ ಹೋಗಬೇಕು ಅಷ್ಟ್ರಲ್ಲೇ ದಿನೇಶ್ ಕೈ ಹಿಡಿದು ಅಚ್ಚು ಇಲ್ಲ ಬಾ ಒಂದ ನಿಮಿಷ ಅಂದು, ಕಣ್ಣು ಮುಚ್ಚು ಅಂದ್ರು,ಯಾಕೆ ಅಂತ ಪ್ರಶ್ನೆ ಮಾಡ್ದೆ?


ನೀನು ಕಣ್ಣು ಮುಚ್ಕೊ ಮೊದ್ಲು ಅಂದ್ರು..ಎರಡು ಕೈ ಮುಂದೆ ಚಾಚೂ ಅಂದ್ರು ಚಾಚದೇ ಏನೋ ಕೈಲಿಟ್ಟರೂ..ಈಗ ನೋಡು ಅಂದ್ರು..ಏನೋ ಬಿಳಿ ಪೇಪರ್ ಗಿಫ್ಟ್ ರ್ಯಾಪ್ ಮಾಡಿದ್ದಿತ್ತು, ಏನಿದು ಅಂದೆ? ನೋಡ ಅಚ್ಚು ಅಂದ್ರು.. ತೆಗೆದು ನೋಡ್ದೆ, ನನ್ನ ಪದವಿ ಪ್ರವೇಶ ದಾಖಲಾತಿ ಅರ್ಜಿ!! ಅಯ್ಯೋ ತಿರಗಾ ಮತ್ತೆ ಮತ್ತೆ ನೋಡಿ ಖುಷಿಯಿಂದ ದಿನೇಶ್ನಾ ಮುದ್ದಾಡಿ.ಮತ್ತೆ ನಾಚಿ ನೀರಾಗಿದ್ದೆ…ಒಲ್ಲದ ಮನಸ್ಸಿಂದ ಒಪ್ಕೊಂಡಿದ್ದ ದಿನೇಶ್ ಇವತ್ತು ಮನಸ್ಸಲ್ಲಿ ಸ್ನೇಹದ ಸದನ ಕಟ್ಟಿದ್ದನ್ನ ಮನಸ್ಸಲ್ಲಿ ಎಣಿಕೆ ಹಾಕ್ತ ಅವರನ್ನ ಕಣ್ಣಿ ಮಿಟುಕಿಸದೇ ನೋಡ್ತ ನಿಂತೆ..ಅವ್ರು ಕೆನ್ನೆ ಚೂಟಿ
ಯಸ್!! ನಿನ್ನ ಕನಸು.ಒಂದ ವಾರದಲ್ಲಿ ಕಾಲೇಜು ಶುರುವಾಗುತ್ತೆ, ರೆಡಿಯಾಗು ನಾನೇ ಡೈಲಿ ಡ್ರಾಪು ಪಿಕ್ಕಪ್ ಮಾಡ್ತೀನಿ ಅಂತ…ಹಣೆಗೆ ಹೂಮುತ್ತಿಟ್ಟು ಅಮ್ಮ ಕರೀತಾ ಇದಾರೆನೋ ಹೋಗು..ಅಂದ್ರು ಏನೋ ನನ್ನಲ್ಲಿ ಹೊಸ ಚೈತನ್ಯ ಬಂದಾಂಗಾಗಿತ್ತು..ಸ್ನಾನದ ಕೋಣೆಯಿಂದ ಒದ್ದೆ ಕೂದಲು ಒರಸ್ತಾ ಬಂದೆ, ಅತ್ತೆ ಪಾಯಸ ಮಾಡು ಅಂತ ಅಡುಗೆ ಮನೆಗ ಕರದೆಕೊಂಡ ಹೋಗಿ ಎಲ್ಲಾ ಸಾಮಾನ ಕೊಟ್ಟು ನಾನ ಮಾಡೋದನ್ನ ನೋಡ್ತ ನಿಂತಿದ್ರು…ನನ್ನ ನಾದಿನಿ ಬಂದು ಅಮ್ಮ ಕಾಫಿ ಅಂದ್ಲು..ಅಚ್ಚು ಅದನ್ನ ಸ್ವಲ್ಪ ಹೊತ್ತ ಬಿಟ್ಟು ಕಾಫಿ ಮಾಡಿ ಎಲ್ರೂಗೂ ಹಾಕೊಡ್ತೀಯಾ ಅಂದ್ರು, ಕಾಫಿ ಮಾಡಿ ಹಾಲ್ನಲ್ಲಿ ಕೂತಿದ್ದ ಎಲ್ರೂಗೂ ಕಾಫಿ ಕೊಟ್ಟು ಗೋಡೆಗೆ ಒರಗಿ ನಿತ್ಕೊಂಡಿದ್ದೆ, ಅತ್ತಿಗೆ ಕಾಫಿ ಸೂಪರ್ ಆದ್ರೆ ಏನಿವತ್ತು ಅಷ್ಟೊಂದು ಖುಷಿ ಖುಷಿ ಕಾಣಸ್ತಿದೀರಾ ಅನ್ನೋದಕ್ಕೆ.. ಅತ್ತೆ ನೀ ಸುಮ್ಮನಿರೇ ಕತ್ತೆ..ನಿನಗೂ ಮದುವೆ ಆಗ್ಲಿ ಗೊತ್ತಾಗುತ್ತೆ..ಅಂತ ಹೇಳೋದಕ್ಕೂ ಇತ್ತ ದಿನೇಶ್ ಸ್ನಾನ ಮುಗಸಿ ನನ್ನ ಹಿಂದೆ ಬಂದು ನಿಂತ್ರು ಮನೆಯವ್ರಲ್ಲಾ ನಮ್ಮನ್ನ ನೋಡಿ ಸಣ್ಣಗ್ ನಗ್ತಿದ್ರು,ನಾನು ದಿನೇಶನಾ ನೋಡಿ ಸುಮ್ನೆ ಕಣ್ಣಲ್ಲೇ ಥ್ಯಾಂಕ್ ಯೂ ಹೇಳ್ದೆ..

  • ಸುರೇಖಾ ಪಾಟೀಲ, ಹುಬ್ಬಳ್ಳಿ

Share post:

Subscribe

spot_imgspot_img

Popular

More like this
Related

ಆರೋಗ್ಯಕರ ಅಡುಗೆಗೆ ಹಿತ್ತಾಳೆ ಪಾತ್ರೆಗಳು ಸೂಕ್ತವೇ? ತಿಳಿದುಕೊಳ್ಳಿ  ಪ್ರಯೋಜನಗಳು

ಆರೋಗ್ಯಕರ ಅಡುಗೆಗೆ ಹಿತ್ತಾಳೆ ಪಾತ್ರೆಗಳು ಸೂಕ್ತವೇ? ತಿಳಿದುಕೊಳ್ಳಿ  ಪ್ರಯೋಜನಗಳು ಉತ್ತಮ ಆರೋಗ್ಯಕ್ಕಾಗಿ ಪೌಷ್ಟಿಕ...

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು ಕಳ್ಳತನ

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು...

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ – ಆರ್. ಅಶೋಕ್ ಆಗ್ರಹ

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ –...

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು!

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು! ಬೆಂಗಳೂರು: ಆಟೋ ಮತ್ತು...