ಮಕ್ಕಳು ಹತ್ತನೇ ತರಗತಿಯೋ, ಪಿಯುಸಿನೋ ಮುಗಿಸಿದ ನಂತರ ಓದಲು ಹೊರಬೀಳೋದು ಜಾಸ್ತಿ. ಹಾಗೆಯೇ ಈ ವಯಸ್ಸಿನ ಮಕ್ಕಳ ಮೂಗು ತುದಿಯ ಮೇಲಿನ ಕೋಪದ ಪ್ರಮಾಣವೂ ಜಾಸ್ತಿ ಆಗುವುದನ್ನು ಕಾಣುತ್ತೇವೆ. ಹೀಗೆ ಹೊರಹೊರಟ ಮಕ್ಕಳಲ್ಲಿ ಸಾಮಾನ್ಯವಾಗಿ ಈ ಸಿಟ್ಟು ಇನ್ನೂ ಜಾಸ್ತಿ. ಇದಕ್ಕೆ ವೈಜ್ಞಾನಿಕವಾಗಿ ನಮ್ಮ ವಿಜ್ಞಾನಿಗಳು ಹಲವಾರು ಕಾರಣಗಳನ್ನು ನೀಡುತ್ತಾರೆ. ಅಡ್ರೆನಾಲಿನ್ ರಸ ಸ್ರವಿಕೆ ಜಾಸ್ತಿ ಆದೊಡೆ ಕೋಪವೂ ಜಾಸ್ತಿ ಆಗುತ್ತದೆ. ಹೆಚ್ಚಿನ ಉಪ್ಪಿನಾಂಶದಿಂದ ರಕ್ತದೊತ್ತಡ ಜಾಸ್ತಿಯಾಗಿ ಕೋಪಿಸಿಕೊಳ್ಳುವುದು, ಇವು ಹಲವು.
ಆದರೆ ಹೊರಗೆ ಓದಲೆಂದು ಬಂದ ಮಕ್ಕಳಿಗೆ ತುಸು ಕೋಪ ಜಾಸ್ತಿ. ಅದೂ ಅಪ್ಪ-ಅಮ್ಮನೋ, ಮನೆಯಲ್ಲಿನ ಅಕ್ಕ-ಅಣ್ಣನೋ ಅಥವಾ ಅಜ್ಜ-ಅಜ್ಜಿ ಏನಾದರೂ ಕಿವಿಮಾತು ಹೇಳಲು ಬಂದರೆ ಸಾಕು. ಸಿಟ್ಟಿನ ಪ್ರವಾಹ ಎಲ್ಲೆ ಮೀರಿ ಹರಿಯುತ್ತದೆ. ಏಕೆ ಈ ಪರಿಯ ಕೋಪ? ಕುಟುಂಬದ ಮೇಲೇಕೆ ಇಷ್ಟೊಂದು ಕೋಪ? ಅವರೆಲ್ಲ ನಮ್ಮ ಶತ್ರುಗಳೋ? ನಮ್ಮನ್ನು ಕಂಡರಾಗದಿರುವವರೋ? ಅಲ್ಲ… ಅವರೆಲ್ಲ ನಮ್ಮನ್ನು ಅತಿ ಹೆಚ್ಚು ಪ್ರೀತಿಸುವವರು. ನಮ್ಮದೇ ರಕ್ತ ಹಂಚಿಕೊಂಡವರು. ಸ್ವಂತ ಅಪ್ಪ-ಅಮ್ಮನ ಮೇಲೆ ಏನು ರೀ ನಿಮ್ಮ ಕೋಪ? ನಾವೆಲ್ಲ ಅವರದೇ ದೇಹದ, ಅವರದೇ ಮನಸಿನ ವಿಸ್ತರಿತ ಜೀವಿಗಳಲ್ಲವೇ? ನಮ್ಮದೇ ದೇಹದ, ನಮ್ಮದೇ ಮನಸಿನ ಒಂದು ಭಾಗದ ಮೇಲೆ ಬರುವಂತಹ ಸಿಟ್ಟು ನಿಜವಾದುದೇ???
ಖಂಡಿತ ಅಲ್ಲ. ಎಲ್ಲೋ ಮನಸಿನ ಮೂಲೆಯಲ್ಲಿ ನಾನು ದೊಡ್ಡವನಾದೆನಲ್ಲಾ, ನಾನು ಅಪ್ಪ-ಅಮ್ಮನ ಪ್ರೀತಿಯ ಕೋಟೆಯಿಂದ ಓದಲೋ, ಮತ್ತೇನೋ ಕಾರಣಕ್ಕೆ ಹೊರಬರಬೇಕಾಯಿತಲ್ಲ ಎಂಬ ಜಂಜಾಟಗಳು ಸಿಟ್ಟಿನ ರೂಪದಲ್ಲಿ ಹೊರಬರುತ್ತದೆ ಅಷ್ಟೇ. ಎಲ್ಲೋ ಒಂದೆಡೆ ಕುಟುಂಬದ ಪ್ರೀತಿ ನೂರಕ್ಕೆ ನೂರರಷ್ಟು ನನಗೆ ಸಿಗುತ್ತಿಲ್ಲವೇನೋ ಎಂಬ ಅನುಮಾನ ಸಿಟ್ಟು, ಅಸಮಾಧಾನದ ರೂಪದಲ್ಲಿ ಹೊರಬರುತ್ತದೆ ಅಷ್ಟೇ. ಅಮ್ಮನ ಕೈತುತ್ತು ಸಿಗುತ್ತಿಲ್ಲ, ಅಪ್ಪ ಪ್ರೀತಿಯಿಂದ ಕಿವಿ ಹಿಂಡುತಿದ್ದ ಸಿಹಿ ಕ್ಷಣಗಳಿಲ್ಲ, ಅಜ್ಜಿಗೆ ನೀಡಿದ ತೊಂದರೆಗಳೆಲ್ಲ ನೆನಪಾಗಿಯಷ್ಟೇ ಉಳಿದಿದೆ, ತಮ್ಮ-ತಂಗಿ, ಅಕ್ಕ-ಅಣ್ಣಂದಿರೊಡನೆ ಕಾದಾಡುವ ಭಾಗ್ಯವಿಲ್ಲ. ಇಷ್ಟು ಸಾಕಲ್ಲವೇ ನಮ್ಮ ಪಿತ್ತ ನೆತ್ತಿಗೇರಲು?
ಪದೇ ಪದೇ ಟಿವಿಯಲ್ಲಿ ನೋಡುತ್ತಾ ಇದ್ದೇನೆ. ಅಪ್ಪ-ಅಮ್ಮ ಬೈದರೆಂದು ಆತ್ಮಹತ್ಯೆ. ಕೇಳಿದ್ದೇನನೋ ಕೊಡಿಸಲಿಲ್ಲ ಎಂಬ ಕಾರಣಕ್ಕೆ ಆತ್ಮಹತ್ಯೆ. ಹೌದು! ಅದೇನು ಸ್ವಾಮಿ ಆತ್ಮಹತ್ಯೆ ಎಂದರೆ? ಐದನೇ ತರಗತಿಯ ಮಗು ನೇಣು ಬಿಗಿದುಕೊಳ್ಳುತ್ತದೆ. ಎಲ್ಲಿಂದ ಕಲಿತ್ತಿದ್ದಿರಬಹುದು? ಅಪ್ಪನೋ ಅಮ್ಮನೋ ಯಾಕಾಗು ಬೈದಿರಬಹುದೆಂದು ಒಮ್ಮೆ ಯೋಚಿಸಲೂ ಆಗದಷ್ಟು ಹೀನರೇ ನಾವು? ಅವರೇನು ಹಾದಿ ಬೀದಿಯಲ್ಲಿ ಹೋಗುವವರಿಗೆಲ್ಲಾ ಬುಧ್ದಿ ಮಾತು ಹೇಳುವರೇ? ನಮ್ಮ ಮೇಲಿರುವ ಪ್ರೀತಿ, ಕಾಳಜಿ ಅವರು ಕೋಪಗೊಳ್ಳುವಂತೆ ಮಾಡುತ್ತದೆ. ನಾವೇನೋ ಕೇಳಿದಾಕ್ಷಣ ಕೊಡಿಸಲಿಲ್ಲ ಎಂದಾಕ್ಷಣ ಅವರಿಗೆ ನಮ್ಮ ಮೇಲೆ ಪ್ರೀತಿ ಇಲ್ಲವೇ ಇಲ್ಲ ಎಂದಲ್ಲ. ಆ ವಸ್ತುವಿನಿಂದ ನಮಗಾಗುವ ಲಾಭಕ್ಕಿಂತ ಹಾನಿಯೇ ಜಾಸ್ತಿಯಿರಬಹುದೆಂಬ ಕಾಳಜಿಯದು. ತಂದೆ-ತಾಯಿ ಒಂದೊಮ್ಮೆ ತಾವು ಉಪವಾಸ ಇದ್ದರೂ ಮಕ್ಕಳಿಗೆ ಯಾವ ಕೊರತೆಯೂ ಬಾರದಂತೆ ನೋಡಿಕೊಳ್ಳುವರು. ಅವರ ಪ್ರೀತಿ, ಕಾಳಜಿಯನ್ನು ನಾವು ಅರ್ಥಮಾಡಿಕೊಳ್ಳಬೇಕಷ್ಟೇ. ಅದನ್ನು ತಿಳಿಯಲು ಯತ್ನಿಸದೆ ಅವರ ಮೇಲೆ ಸಿಟ್ಟಾಗುವುದೋ, ಜೀವನವನ್ನೇ ಮೊಟಕುಗೊಳಿಸುವುದೋ ಮಾಡುವೆವು ಎಂದರೆ ನಾವು ಮುಟ್ಟಾಳರು. ತಂದೆ-ತಾಯಿಯ ಎದುರಾದರೂ ನಮ್ಮ ಕೋಪ-ಕ್ರೋಧ ಬಿಟ್ಟು ಹಾಕೋಣ. ಅವರು ಹೇಳುವ ಬುದ್ಧಿ ಮಾತ ಕೇಳೋಣ, ಜಾಣರಾಗಿ ಬಾಳೋಣ…
- ಕೌಶಿಕ್.ಪಿ.