ಹಾಡಿನ ಜಾಡು ಹಿಡಿದು….
||ಸಂಗೀತಕ್ಕೆ ಮನಸೋಲದೇ ಇರೋರು ಇದ್ದಾರ? ಖಂಡಿತಾ ಇಲ್ಲ…! ಕೆಲವು ಸಿನಿಮಾ ಹಾಡುಗಳನ್ನಂತು ಪದೇ ಪದೇ ಗುನುಗುತ್ತಿರುತ್ತೇವೆ. ಕೆಲವೊಂದು ಹಾಡುಗಳಿಗೆ ಕೇಳುಗರಾದ ನಾವು-ನೀವು ನಮ್ಮದೇ ಆದ ಅರ್ಥ ಕಂಡುಕೊಂಡಿರುತ್ತೇವೆ. ಆದರೆ, ಎಷ್ಟೋ ಹಾಡುಗಳ ಬಗ್ಗೆ ನಾವು ಅಂದುಕೊಂಡಿರೋದೇ ಬೇರೆ, ರಚನೆಕಾರರು ಬರೆಯುವಾಗ ಕಲ್ಪಿಸಿಕೊಂಡಿರೋದೇ ಬೇರೆ ಆಗಿರುತ್ತೆ..!
ನಾವಿಲ್ಲಿ ಕೆಲವೊಂದು ಕನ್ನಡ ಹಾಡುಗಳ ಹುಟ್ಟಿನ ಮೂಲ ಮತ್ತು ರಚನೆಗಾರರು ಯಾವ ಅರ್ಥದಲ್ಲಿ ಬರೆದಿದ್ದಾರೆ ಎಂಬುದನ್ನು ಹೇಳುವ ಪ್ರಯತ್ನ ಮಾಡುತ್ತಿದ್ದೇವೆ…||
ಭಾಗ-18
ಭಕ್ತ ಕುಂಬಾರ
ಮಾನವ ದೇಹವು ಮೂಳೆ ಮಾಂಸದ ತಡಿಕೆ. ಭಕ್ತ ಕುಂಬಾರ ಚಿತ್ರದ ತತ್ವಪದ, ಜೊತೆಗೆ ಸಾಮಾನ್ಯ ವ್ಯಕ್ತಿಯ ಅಸಾಮಾನ್ಯ ಸಂದೇಶ. ವಿದ್ವಾಂಸರ ಮುಂದೆ ಏನು ಹಾಡಬೇಕು ಅನ್ನೋದು ಗೊತ್ತಿಲ್ಲದ ಒಬ್ಬ ಕುಂಬಾರ, ನಮಗೆ ಏನು ಗೊತ್ತಿಲ್ಲ, ನಾವು ಇಲ್ಲಿ ಶಾಶ್ವತವಲ್ಲ, ಬಂದು ಹೋಗೋದರ ನಡುವೆ ನಮ್ಮ ಜೀವನ ಅಲಂಕಾರಗಳ ಸರಮಾಲೆ ಅನ್ನೋದನ್ನ ಹಾಡಿನ ಮೂಲಕ ನೊಡುಗರಿಗೆ ಮೆಸೇಜ್‍ನ್ನು ಕೊಟ್ಟ ಸಾಹಿತಿ ಕಮ್ ನಿರ್ದೇಶಕ ಹುಣಸೂರು ಕೃಷ್ಣಮೂರ್ತಿ. ಅವರಿಗಿದ್ದ ಅತಿಯಾದ ಸಿಗರೇಟಿನ ಹುಚ್ಚೇ ಈ ಹಾಡಿಗೆ ಕಾರಣ ಅಂದ್ರೆ ತಪ್ಪಾಗಲಾರದು. ಹಾಡಿನ ಮೊದಲೆರೆಡು ಸಾಲುಗಳು ಅಂದ್ರೆ ಪಲ್ಲವಿಯೇನೋ ಸರಾಗವಾಗಿ ಬರೆದ್ರು.
ಆದ್ರೆ ಮುಂದಿನ ಸಾಲುಗಳು ಎಷ್ಟೇ ಜಪ್ಪಯ್ಯ ಅಂದ್ರು ಹುಣಸೂರರ ತಲೆಗೆ ಹೊಳೀಲೇ ಇಲ್ಲ. ಒಂದು ದಮ್ಮು ಹೊಡೆದ್ರೇ ಎಲ್ಲಾ ಸರಿ ಹೋಗುತ್ತೆ ಅಂತ ಸಿಗರೇಟು ಸೇದೋಕೆ ನಿಂತ್ರು. ಆಗಲೂ ಅದೇ ನೆನಪು ಏನು ಬರೆಯೋದಪ್ಪ ಅಂತ. ಐದು ನಿಮಿಷ ನಿಂತೇ ಇದ್ರು. ಸಿಗರೇಟು ತಾನು ಸುಡೋದ್ರ ಜೊತೆ ಹುಣಸೂರರ ಕೈಯನ್ನು ಸುಟ್ಟಿತು. ಚುರ್ ಎಂದು ಸುಟ್ಟ ಜಾಗವನ್ನ ಉಜ್ಜಿಕೊಂಡಾಗ ಅಲ್ಲಿದ್ದ ನರ ಮೂಳೆಗಳ ಸ್ಪರ್ಶವೂ ಆದಂಗಾಯಿತು. ಇಷ್ಟಾದ ತಕ್ಷಣವೇ,,, ಹಾ…. ಹೊಳೆಯಿತು ಎಂದು ಮುಂದಿನ ಸಾಲುಗಳನ್ನ ಗೀಚಿದ್ರು. ಈ ಹಾಡನ್ನ ಸುಮ್ಮನೆ ಒಮ್ಮೆ ಗಮನಿಸಿ ನೋಡಿ, ಭಕ್ತಿಯ ಜೊತೆ ಜೊತೆಗೆ ಪ್ರೀತಿಯಿದೆ, ಶರಣಾಗತಿಯಿದೆ, ಜೀವನದ ಆದರ್ಶವಿದೆ. ಬದುಕೆಂದರೆ ಏನು ಅನ್ನೋ ಬುದ್ದಿಮಾತೂ ಕೂಡ ಇದೆ. ಇದೆಲ್ಲವನ್ನೂ ಕೃಷ್ಣಮೂರ್ತಿಯವರು ಒಂದೇ ಹಾಡಿನಲ್ಲಿ ಕಟ್ಟಿಕೊಟ್ಟಿದ್ರು. ಎಲ್ಲರನ್ನೂ ಕಾಡುವಂತೆ ಬರೆಯುವ ಇವ್ರು ಬಬ್ರುವಾಹನಕ್ಕೆ ಆರಾಧಿಸುವೆ ಮದನಾರಿ ಅನ್ನೋ ಸರಸದ ಸಾಲುಗಳನ್ನು ಬರೆದವ್ರು. ರತ್ನಮಂಜರಿ ಚಿತ್ರಕ್ಕಾಗಿ ಗಿಲ್ ಗಿಲ್ ಗಿಲ್ ಗಿಲ್ಲಕ್, ಕಾಲ ಗೆಜ್ಜೆ ಝಣಕ್ ಅನ್ನೋ ತಮಾಷೆಯಾಗಿರೋ ಪದಗಳನ್ನು ಜೋಡಿಸಿದ್ರು. ಇಂಥ ಎಲ್ಲಾ ರೀತಿಯ ಸಾಹಿತ್ಯವನ್ನು ಬರೆವಾಗ ಹುಣಸೂರರಿಗೆ ಸಾಥ್ ಕೊಟ್ಟಿದ್ದು ಅವ್ರ ಸಿಗರೇಟ್ ಮಾತ್ರ.