BBMP ಕಸದ ಲಾರಿ ಡಿಕ್ಕಿಯಾಗಿ ಬಾಲಕ ಸಾವು ಪ್ರಕರಣ: ಹಲ್ಲೆಗೆ ಒಳಗಾಗಿದ್ದ ಚಾಲಕ ಸಾವು!
ಬೆಂಗಳೂರು: BBMP ಕಸದ ಲಾರಿ ಡಿಕ್ಕಿಯಾಗಿ ಬಾಲಕ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಮಾರಣಾಂತಿಕ ಹಲ್ಲೆಗೆ ಒಳಗಾಗಿದ್ದ ಬಿಬಿಎಂಪಿ ಲಾರಿ ಚಾಲಕ ಚಿಕಿತ್ಸೆ ಫಲಕಾರಿ ಆಗದೇ ಸಾವನ್ನಪ್ಪಿದ್ದಾರೆ. ಲಾರಿ ಚಾಲಕ ಕೊಂಡಯ್ಯ ಮೃತ ದುರ್ಧೈವಿಯಾಗಿದ್ದು,
ನಗರದ ಥಣಿಸಂಧ್ರದ ಹೆಗಡೆ ನಗರದ ಬಳಿ ಬಿಬಿಎಂಪಿ ಲಾರಿಯಿಂದ ಅಪಘಾತವಾಗಿತ್ತು. ಲಾರಿ ಗುದ್ದಿದ ಪರಿಣಾಮ ಬೈಕ್‌ನಲ್ಲಿದ್ದ 10 ವರ್ಷದ ಬಾಲಕ ಮೃತಪಟ್ಟಿದ್ದ. ಬಾಲಕನ ತಂದೆ ಸಣ್ಣಪುಟ್ಟ ಗಾಯಗಳಿಂದ ಪಾರಾಗಿದ್ದರು.
ಅಪಘಾತ ಆದ ಪರಿಣಾಮ ಬಿಬಿಎಂಪಿ ಲಾರಿಗೆ ಉದ್ರಿಕ್ತರ ಗುಂಪು ಬೆಂಕಿ ಹಚ್ಚಿತ್ತು. ಅಲ್ಲದೇ, ಲಾರಿ ಚಾಲಕನಿಗೆ ಮನಸೋ ಇಚ್ಛೆ ಥಳಿಸಿತ್ತು. ಹಲ್ಲೆ ಆದ ಪರಿಣಾಮ ಮಿದುಳಿನಲ್ಲಿ ರಕ್ತ ಹೆಪ್ಪುಗಟ್ಟಿ ಚಾಲಕ ಗಂಭೀರ ಸ್ಥಿತಿ ತಲುಪಿ ಖಾಸಗಿ ಆಸ್ಫತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ, ಚಿಕಿತ್ಸೆ ಫಲಿಸದೇ ಕೊನೆಯುಸಿರೆಳೆದಿದ್ದಾರೆ.