ಇದ್ದಷ್ಟು ದಿನ ದೋಚಿಕೊಂಡು ಹೋಗಬೇಕು ಎನ್ನುವ ಮನಸ್ಥಿತಿಯಲ್ಲಿ ರಾಜ್ಯ ಸರ್ಕಾರವಿದೆ: ಬಿ.ಸಿ.ಪಾಟೀಲ್
ಹಾವೇರಿ: ಇದ್ದಷ್ಟು ದಿನ ದೋಚಿಕೊಂಡು ಹೋಗಬೇಕು ಎನ್ನುವ ಮನಸ್ಥಿತಿಯಲ್ಲಿ ರಾಜ್ಯ ಸರ್ಕಾರವಿದೆ ಎಂದು ಮಾಜಿ ಸಚಿವ ಬಿ.ಸಿ.ಪಾಟೀಲ್ ವಾಗ್ದಾಳಿ ನಡೆಸಿದ್ದಾರೆ. ಹಾವೇರಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಅತ್ಯಾಚಾರ, ದರೋಡೆ, ಕಳ್ಳತನ ಮಾಮೂಲಾಗಿವೆ. ಅತ್ಯಾಚಾರಗಳು ಇಂತಹ ದೊಡ್ಡ ಪಟ್ಟಣದಲ್ಲಿ ನಡೆಯುವುದು ಸಹಜ ಎಂದು ಗೃಹಮಂತ್ರಿಗಳು ಹೇಳಿದ್ದಾರೆ.
ಯಾವ ಗೃಹಮಂತ್ರಿ ಇವೆಲ್ಲವನ್ನೂ ನಿಯಂತ್ರಣ ಮಾಡಬೇಕೋ, ಅವರೇ ಹೀಗೆ ಹೇಳಿದರೇ ರಕ್ಷಣೆ ಮಾಡುವವರು ಯಾರು? ಇದ್ದಷ್ಟು ದಿನ ದೋಚಿಕೊಂಡು ಹೋಗಬೇಕು ಎನ್ನುವ ಮನಸ್ಥಿತಿಯಲ್ಲಿ ರಾಜ್ಯ ಸರ್ಕಾರವಿದೆ ಎಂದು ಕಿಡಿಕಾರಿದರು.
ರಾಜ್ಯ ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿದ್ದು, ರಾಜ್ಯ, ಜಿಲ್ಲೆಯಲ್ಲಿ ಸಂಪೂರ್ಣ ಆಡಳಿತ ಭ್ರಷ್ಟವಾಗಿದೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿ, ಜಿಲ್ಲಾಧಿಕಾರಿಗಳ ಕಚೇರಿಗಳು ಕಾಂಗ್ರೆಸ್ ಕಚೇರಿಗಳಾಗಿವೆ.
ಒಬ್ಬ ರೈತ ತನ್ನ ಜಮೀನಿಗೆ ಮಣ್ಣು ಹಾಕಿಸಿಕೊಂಡರೆ ಜಿಲ್ಲಾಧಿಕಾರಿಗಳು ಆತನಿಗೆ 30 ಸಾವಿರ ದಂಡ ಹಾಕಿಸಿದ್ದಾರೆ. ಮರಳು ಕಳ್ಳ ಸಾಗಾಣಿಕೆ ನಡೀತಿದೆ. ಪೊಲೀಸ್ ಠಾಣೆಗಳು ಅಕ್ರಮ ದಂಧೆಗಳಿಗೆ ಆಶ್ರಯ ನೀಡುವ ತಾಣಗಳಾಗಿವೆ ಎಂದು ಗುಡುಗಿದರು.