ರಷ್ಯಾದ ಅತಿ ಎತ್ತರದ ಮೌಂಟ್ ಎಲ್ಬ್ರಸ್ ಪರ್ವತದ ಮೇಲೆ ಭಾರತದ ರಾಷ್ಟ್ರಧ್ವಜ ಹಾರಿಸುವ ಕರ್ನಾಟಕದ ಯುವತಿ ಸಾಧನೆಯ ಶಿಖರವನ್ನೇರಿದ್ದಾರೆ.
ಕೊಡಗಿನ ನಾಪೋಕ್ಲು ಸಮೀಪದ ಪೆರೂರು ಗ್ರಾಮದ ವಾಸಿಯಾಗಿರುವ ನಂಜುಂಡ-ಪಾರ್ವತಿ ದಂಪತಿಯ ಸುಪುತ್ರಿ ಭವಾನಿ ಎಂಬಾಕೆಯೇ ಈ ಸಾಧನೆ ಮಾಡಿರುವವರು. ರಷ್ಯಾದ 5,642 ಮೀಟರ್ ಎತ್ತರವಿರುವ ಮೌಂಟ್ ಎಲ್ಬ್ರಸ್ ಪರ್ವತವನ್ನೇರಿ ಎಲ್ಲಾರ ಗಮನ ಸೆಳೆದಿದ್ದಾರೆ. ಮೆಕ್ಸಿಕೋ, ಫ್ರೆಂಚ್, ರೋಮಿನಿಯಾ ಪರ್ವತಾರೋಹಿಗಳ ನಡುವೆ ಭಾರತವನ್ನು ಭವಾನಿ ಪ್ರತಿನಿಧಿಸಿದ್ದರು. ನಾಲ್ವರು ಪರ್ವತಾರೋಹಿಗಳಿಗೆ ರಷ್ಯಾದಲ್ಲಿ ಮೂರು ದಿನಗಳ ಕಾಲ ತರಬೇತಿಯನ್ನು ಸಹ ನೀಡಲಾಗಿತ್ತು.
ರಷ್ಯಾದ ಎಲ್ಬ್ರಸ್ ಪರ್ವತವು ರಷ್ಯಾದ ಅತಿ ಎತ್ತರದ ಪರ್ವತ. ಯೂರೋಪ್ ದೇಶಗಳ ಪೈಕಿ ಇದು ಅತಿ ಎತ್ತರದ 10ನೇ ಪರ್ವತವಾಗಿದೆ. ಆದರೆ ಹಿಮಚ್ಚಾದಿತ ಈ ಪರ್ವತವನ್ನು ನಿರಂತರವಾಗಿ ಏರಿ ಸುಮಾರು 8 ಗಂಟೆಗಳಲ್ಲಿ ತುತ್ತ ತುದಿಯಲ್ಲಿ ಭಾರತದ ಬಾವುಟವನ್ನು ಹಾರಿಸುವಲ್ಲಿ ಭವಾನಿ ಯಶಸ್ವಿಯಾಗಿದ್ದಾರೆ. ಅಷ್ಟೇ ಅಲ್ಲಾ ಪರ್ವತವೇರಿದ ಭಾರತದ ವೇಗದ ಹುಡುಗಿ ಎಂಬ ಪ್ರಶಂಸೆಗೂ ಪಾತ್ರರಾಗಿದ್ದಾರೆ.
ನಾಲ್ಕು ದೇಶಗಳ ನಾಲ್ವರು ಪರ್ವತಾರೋಹಿಗಳ ಪೈಕಿ ಪರ್ವತದ ತುತ್ತ ತುದಿ ತಲುಪಿದ ಮೊದಲಾಕೆ ಭವಾನಿಯಾಗಿದ್ದಾರೆ. ಅಕ್ಟೋಬರ್ 18ರಂದು ನಡುರಾತ್ರಿ ಪರ್ವತಾರೋಹಣ ಆರಂಭಿಸಿದ್ರು. ಕೊರೆಯುವ ಚಳಿ, ಹಿಮದ ಮೇಲೆಯೇ ನಿರಂತರವಾಗಿ ಹೆಜ್ಜೆ ಹಾಕುತ್ತಾ ಮುಂದೆ ಸಾಗಿದ ನಾಲ್ವರ ತಂಡ ಮೌಂಟ್ ಎಲ್ಬ್ರಸ್ಟಿ ತುತ್ತ ತುದಿ ತಲುಪುವ ಮೂಲಕ ಸಾಧನೆಯ ಶಿಖರವೇರಿದ ಸಂಭ್ರಮದಲ್ಲಿ ತೇಲಿದ್ದರು.ಭವಾನಿಗೆ ಚಿಕ್ಕಂದಿನಿಂದಲೂ ಪರ್ವತಾರೋಹಣದಲ್ಲಿ ಹೆಚ್ಚಿನ ಆಸಕ್ತಿಯಿತ್ತು. ಅದರಲ್ಲೇ ಏನಾದರೊಂದು ಸಾಧಿಸಬೇಕು ಎಂಬ ಛಲವೂ ಇತ್ತು. ಮುಂದಿನ ದಿನಗಳಲ್ಲಿ ವಿಶ್ವದ ಅತಿ ಎತ್ತರವಾದ ಮೌಂಟ್ ಎವರೆಸ್ಟ್ ಏರುವ ಹಂಬಲನ್ನು ಸಹ ಇಟ್ಟುಕೊಂಡಿದ್ದಾರೆ.