ರೌಡಿಗಳಂದ್ರೆ ಸಾಕು ಜನ ಭಯ ಬೀಳ್ತಾರೆ. ಇವರ ಸಹವಾಸ ಸಾಕಪ್ಪ ಸಾಕು ಅಂತ ದೂರ ಇದ್ದು ಬಿಡ್ತಾರೆ. ಆದರೆ, ಜನ ಒಗ್ಗಟ್ಟಾದರೆ ರೌಡಿಗಳ ಸದೆ ಬಡಿಯವುದು ಹೆಚ್ಚು ಹೊತ್ತಿನ ಕೆಲಸವಲ್ಲ ಎಂಬುದನ್ನು ಬಿಹಾರದ ಬೇಗುಸಾರೈ ಮಂದಿ ತೋರಿಸಿಕೊಟ್ಟಿದ್ದಾರೆ.
ಜಿಲ್ಲೆಯ ಶಾಲೆಯೊಂದಕ್ಕೆ ಬೆಳಗ್ಗೆ 10.30 ಕ್ಕೆ 11 ವರ್ಷದ ಬಾಲಕಿಯನ್ನು ಅಪಹರಿಸಲು ನಾಲ್ವರು ರೌಡಿಗಳು ಎರಡು ಬೈಕುಗಳಲ್ಲಿ ಬಂದಿದ್ದರು.
ಶಾಲೆಯಲ್ಲಿ ಬಾಲಕಿಯನ್ನು ಹುಡುಕಾಡಿದರು. ಏನು ಮಾಡುವುದು ಎಂದು ತೋಚದೆ ಶಿಕ್ಷಕಿ ನೀಮಾ ಕುಮಾರಿ ಬಾಲಕಿ ಗೈರುಆಗಿದ್ದಾಳೆ ಎಂದರು.
ಸುಮ್ಮನಾಗದ ದುಷ್ಕರ್ಮಿಗಳು ಪಿಸ್ತೂಲು ಹಿಡಿದು ಶಿಕ್ಷಕಿಯನ್ನು ಬೆದರಿಸಿದ್ದಾರೆ. ಭಯಗೊಂಡ ಆಕೆ ಕುಸಿದು ಬಿದ್ದಿದ್ದಾರೆ. ಮಕ್ಕಳು ಕಿರುಚಾಡುತ್ತಾ ದಿಕ್ಕಾಪಾಲಾಗಿ ಓಡಿದ್ದಾರೆ.
ಮಕ್ಕಳ ಕೂಗಾಟ ಕೇಳಿ ಪಕ್ಕದ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆಯರ ಗುಂಪು ಹಾಗೂ ಸ್ಥಳೀಯ ಪುರುಷರು ಶಾಲೆಗೆ ನುಗ್ಗಿದ್ದಾರೆ. ಗನ್ ಹಿಡಿದಿದ್ದ ರೌಡಿ ಯುವಕರನ್ನು ಕಂಡು ಹೆದರದ ಗ್ರಾಮಸ್ಥರು ಅವರ ಮೇಲೆ ಮುಗಿಬಿದ್ದಿದ್ದಾರೆ.
ಓರ್ವ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಇಬ್ಬರು ಅರೆಜೀವ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಾಗಿ ಪ್ರಾಣಬಿಟ್ಟಿದ್ದಾರೆ. ಓರ್ವ ಪ್ರಾಣಾಪಾಯದಿಂದ ಬಚಾವ್ ಆಗಿದ್ದಾನೆ. ಅವನು ಮುಂಜಾಗೃತೆಯಿಂದ ಕಾಲ್ಕಿತ್ತು ಬದುಕಿದ್ದಾನೆ.
ರೋಸೆರ್ ನಿವಾಸಿಗಳಾದ ಮುಕೇಶ್ ಮಹ್ತೋ, ಶ್ಯಾಮ್ ಸಿಂಗ್ ಅಲಿಯಾಸ್ ಬೌನಸಿಂಗ್ ಹಾಗೂ ಹೀರಾ ಸಿಂಗ್ ಮೃತ ದುಷ್ಕರ್ಮಿಗಳು. ಮುಕೇಶ್ ಹಲವು ಪ್ರಕರಣಗಳಲ್ಲಿ ಪೊಲೀಸರಿಗೆ ಬೇಕಾದ ನಟೋರಿಯಸ್ ಕ್ರಿಮಿನಲ್ ನಾಗಮನಿ ಸಹೋದರ ಎನ್ನಲಾಗಿದೆ.
ರೌಡಿಗಳು ಬಾಲಕಿಯನ್ನು ಅಪಹರಿಸಲು ಬಂದ ಕಾರಣ ತಿಳಿದು ಬಂದಿಲ್ಲ. ಗ್ರಾಮಸ್ಥರ ಮೇಲೆ ಮಾಬ್ ಲಿಂಚಿಂಗ್ ಪ್ರಕರಣ ದಾಖಲಾಗಿದೆ