ಬಹಾಮಾ ದ್ವೀಪಗಳು. ಫ್ಲೋರಿಡಾ ಕರಾವಳಿಯಿಂದ 60 ಮೈಲಿ ದೂರದಲ್ಲಿ ಸ್ವರ್ಗವೇ ಧರೆಗಿಳಿದಂತೆ ಗೋಚರಿಸುವ ಸುಂದರ ತಾಣ. ಭಗವಂತನ ಭವ್ಯ ಸೃಷ್ಠಿಯಿದೇನಾ ಎಂಬಂತೆ ಕಂಗೊಳಿಸುವಾ, ಎತ್ತ ನೋಡಿದರೂ ನೀಲಾಕಾಶವನ್ನ ಅಪ್ಪಿಕೊಂಡಿರುವಂಥಾ ಸಾಗರವೇ ಕಾಣುವ ಈ ದ್ವೀಪಗಳ ಅಲ್ಲಲ್ಲಿ ಬ್ಲೂ ಹೋಲ್ಸ್ ಎಂಬ ಮೃತ್ಯುಕೂಪಗಳು ಕಾಣಸಿಗುತ್ತವೆ. ಇವು ನೋಡಲು ನಿಸರ್ಗ ಸೌಂದರ್ಯದ ನಿಧಿಯಂತಿದ್ರೂ… ಅಗೋಚರ ಸತ್ಯಗಳನ್ನು ತನ್ನಲ್ಲಿ ಹುದುಗಿಟ್ಟುಕೊಂಡು ಜಗತ್ತಿನ ಸರ್ವಶ್ರೇಷ್ಠ ಅನ್ವೇಷಕರನ್ನ ಆಹುತಿ ಪಡೆದಿರುವ ನಿಗೂಢ ಸ್ಥಳವಾಗಿ ಇತಿಹಾಸದಲ್ಲಿ ತನ್ನ ಕರಾಳತೆಯನ್ನ ದಾಖಲು ಮಾಡಿದೆ. ಬ್ಲೂ ಹೋಲ್ಸ್ ಅಂದ್ರೆ ಬಹಾಮ ದ್ವೀಪಗಳಲ್ಲಿ ಅಲ್ಲಲ್ಲಿ ಕಾಣಸಿಗುವ ಪುಟ್ಟ ಹೊಂಡಗಳಂತಿರುವ ನೈಸರ್ಗಿಕ ಬಾವಿಗಳು. ನೋಡಲೇನೋ ಚಿಕ್ಕ ಹೊಂಡಗಳಂತಿದ್ದರೂ ಸಾವಿರಾರು ಅಡಿಗಳಷ್ಟು ಆಳವಿರುವ ಮೈಲುಗಟ್ಟಲೆ ವಿಸ್ತೀರ್ಣಗೊಂಡಿರುವ ಇವು ಜಲಂತರ್ಗಾಮಿ ಸುರಂಗಕ್ಕೆ ದಾರಿ ತೋರುತ್ತವೆ. ಈ ಕೌತುಕಮಯ ಗುಹೆಗಳನ್ನ ಅನ್ವೇಷಿಸಲು ಹೋದ ಈಜುಗಾರರಲ್ಲಿ ಅನೇಕರು ಬರಿಯ ನೆನಪಾಗಿ ಉಳಿದಿದ್ದಾರೆ. ವರ್ಷಕ್ಕೆ ಸರಾಸರಿ 20 ಕ್ಕೂ ಅಧಿಕ ಡೈವರ್ ಗಳು. ಆ ಯಮಪುರಿಯ ರಹಸ್ಯ ಭೇದಿಸಲು ಹೋಗಿ ಬಾರದ ಲೋಕಕ್ಕೆ ಪಯಣ ಬೆಳೆಸಿದ್ದಾರೆ ಅಂದ್ರೆ, ಆ ಜಾಗದ ಭಯಾನಕತೆ ಸ್ವಯಂವೇದ್ಯವಾಗುತ್ತೆ..!
ಈ ಸುರಂಗವು ಜಗತ್ತನ್ನೇ ಸೂಜಿಗಲ್ಲಿನಂತೆ ಸೆಳೆದಿಟ್ಟಿದೆ. ಇತಿಹಾಸದ ಪುಟಗಳನ್ನು ತಿರುವಿದಾಗ ಗೋಚರಿಸುವ ಸತ್ಯವೆಂದರೆ ಆ ಗುಹೆಗಳ ರಹಸ್ಯ ಭೇದಿಸೋದು ಸಾವಿನ ಜೊತೆಗೆ ಸರಸವಲ್ಲದೆ ಮತ್ತೇನು ಅಲ್ಲ. ಆ ಕರಾಳ ನಿಜವನ್ನ ಇಲ್ಲಿ ವಿಧಿಯೇ ಪದೇ ಪದೇ ನಿರೂಪಿಸಿದೆ. ಇದಕ್ಕೆ ಪೂರಕವೆಂಬಂತೆ ಹಲವಾರು ಜೀವಿಗಳ ಅಸ್ತಿಪಂಜರ ಬ್ಲೂ ಹೋಲ್ಸ್ ನ ತಳಭಾಗದಲ್ಲಿ ದೊರೆಕಿದೆ. ಸಾವಿಗೆ ರಹದಾರಿ ಬಹಾಮಾದ ಈ ಬ್ಲೂ ಹೋಲ್ಸ್ ಎಂಬಂತೆ ಗೋಚರಿಸುತ್ತವೆ. ಸುಮಾರು 200 ರಿಂದ 350 ಅಡಿಗಳಷ್ಟು ಆಳವಿರುವ ಬ್ಲೂ ಹೋಲ್ಸ್ ಹಲವಾರು ಮೈಲಿಯಷ್ಟು ವಿಸ್ತೀರ್ಣ ಹೊಂದಿದೆ. ಅತಿಯಾದ ಒತ್ತಡದಿಂದ ಕೂಡಿರುವ ಆ ಪ್ರದೇಶದಲ್ಲಿ ಬೆಳಕಿಲ್ಲ. ಎತ್ತ ನೋಡಿದರು ಮೃತ್ಯುದೇವತೆ ಬಲಿಗಾಗಿ ಕಾಯುತ್ತಿದ್ದಾಳೇನೋ ಎಂಬಂತೆ ಭಾಸವಾಗುವ ಅಲ್ಲಿ ಅನ್ವೇಷಣೆ ಅನ್ನೋ ಪದಕ್ಕೆ ಆತ್ಮಹತ್ಯೆಯೇ ಅನ್ವರ್ಥನಾಮ. ಇಷ್ಟಿದ್ರೂ ಸಹ ಸಾವಿಗೆ ಸವಾಲೆಸೆಯುವ ಸಾಹಸಕ್ಕೆ ಕೈ ಹಾಕಿ ಸಫಲವಾಗಿಯೇ ತೀರುವ ಉದ್ದೇಶದಿಂದ ಸರ್ವಶ್ರೇಷ್ಠ ಸಾಧಕರು ಈ ಆಳದಲ್ಲಿ ಅಸುನೀಗಿದ್ದಾರೆ..,.
ಬ್ಲೂ ಹೋಲ್ಸ್ ಕುರಿತಾದ ವಿಚಾರ ಕೆದಕಿದಾಗ ಹೊರಬೀಳುವ ಮತ್ತೊಂದು ವಿಕ್ಷಿಪ್ತ ಸತ್ಯವೆಂದರೆ ಫ್ಲೋರಿಡಾದಿಂದ 60 ಕಿ.ಮೀ ದೂರದಲ್ಲಿರುವ ಈ ದ್ವೀಪಗಳಲ್ಲಿ ಫ್ಲೋರಿಡಾದಲ್ಲಿರುವ ಜೀವರಾಶಿಯ ಶೇ 1 ರಷ್ಟು ಕೂಡ ಬಹಾಮಾ ದ್ವೀಪದಲ್ಲಿಲ್ಲ. ಭೂಮಿಯ ವಿಕಸನವನ್ನ ಗಮನಿಸಿದಾಗ ಇಷ್ಟು ದೊಡ್ಡ ವ್ಯತ್ಯಾಸ ಸೂಸುವ ಜಾಗ ಜಗತ್ತಿನಲ್ಲಿ ಅತೀ ವಿರಳ. ಹಾಗಾದ್ರೆ ಈ ಭಾಗದ ಜೀವರಾಶಿಯನ್ನ ನಿರ್ನಾಮ ಮಾಡಿದ್ದು ಅದ್ಯಾವ ಶಕ್ತಿ…? ಎನ್ನುವ ಕೌತುಕ ಸಹಜವಾಗಿಯೇ ಎಲ್ಲರ ನಿದ್ದೆಗೆಡಿಸಿದೆ. ಈ ಕೌತುಕ ಸಾಮಾನ್ಯ ಜನರಿಗಷ್ಟೇ ಅಲ್ಲ.. ವೈಜ್ಞಾನಿಕ ಸಂಶೋಧಕರಿಗೂ ಕೂಡ ಕಬ್ಬಿಣದ ಕಡಲೆಯಂತಾಗಿರುವ ಈ ಜಾಗದ ಆಂತರ್ಯ ಎಷ್ಟು ರೋಚಕವೋ..? ಅಷ್ಟೇ ನಿಗೂಢ..? ಈಗ ಖಾಲಿ ದ್ವೀಪದಂತಿರುವ ಬಹಾಮಾಸ್, ಸಾವಿರಾರು ವರ್ಷಗಳ ಹಿಂದೆ ವೈವಿಧ್ಯಮಯ ಜೀವರಾಶಿಯನ್ನ ಹೊತ್ತು ಅಲ್ಲಿನ ಪ್ರಕೃತಿ ಸೌಂದರ್ಯಕ್ಕೆ ಇನ್ನಿಲ್ಲದ ಕೊಡುಗೆಯನ್ನಿತ್ತಿದೆ. ಆದರೆ ಕಾಲ ಉರುಳಿದಂತೆ ಸಾಮಾನ್ಯ ಜೀವಿಗಳಾದ ಹಲ್ಲಿ, ಪಕ್ಷಿಗಳಾದ ಗೂಬೆ, ಬಾವಲಿ, ಸರಿಸೃಪಗಳಾದ ಹಲವು ಪ್ರಭೇದದ ಹಾವುಗಳು, ಮೊಸಳೆ ಸೇರಿದಂತೆ ಅನೇಕ ಪ್ರಾಣಿಗಳ ಸಂತತಿ ನಶಿಸಿ ಹೋಗಿದೆ. ಸಾವಿರ ವರ್ಷಗಳ ಹಿಂದಿದ್ದ ಆ ಜೀವರಾಶಿಗೆ ಎದುರಾದ ಘೋರ ಅಂತ್ಯವಾದರೂ ಏನು ಎಂದು ಭೇದಿಸಹೊರಟಾಗ ನಿಬ್ಬೆರಗಾಗುವ ಸತ್ಯವೊಂದು ವಿಜ್ಞಾನಿಗಳನ್ನ ಚಕಿತಗೊಳಿಸಿತ್ತು. ಅದೇನೆಂದರೆ ಆಹಾರವನ್ನರಸಿ ಈ ಬ್ಲೂಹೋಲ್ಗೆ ಇಳಿದ ಜೀವಿಗಳ್ಯಾವೂ ಕೂಡ ಜೀವಂತವಾಗಿ ಆಚೆ ಬಂದಿಲ್ಲ. ನೀರಿನಲ್ಲೇ ಬದುಕು ಕಟ್ಟಿಕೊಂಡಿರುವ ಮೊಸಳೆ, ಆಮೆಗಳು ಕೂಡ ಈ ಬ್ಲೂ ಹೋಲ್ಗಿಳಿದು ತಮ್ಮ ಸಂತತಿಯ ಕೊನೆಯ ಪಳೆಯುಳಿಕೆಗಳಾಗಿವೆ ಅನ್ನುವ ವಿಚಾರ ಮಾನವನ ವಿಕಸನಕ್ಕೆ ಬೃಹತ್ ಪೆಟ್ಟು ಎಂದು ಬಣ್ಣಿಸಲಾಗ್ತಿದೆ.
ಬಹಾಮ ಪ್ರದೇಶ ಕೂಡ ಭೂಮಿಯ ಇತರೆ ಭಾಗಗಳಂತೆ ಪ್ರಾಣಿ – ಪಕ್ಷಿಗಳ ವಿಕಸನಕ್ಕೆ ಸಾಕ್ಷಿಯಾಗಿದೆ. ಆದ್ರೆ ಕಾಲಾನಂತರದ ಪ್ರಾಕೃತಿಕ ಬದಲಾವಣೆಗಳು ಅಲ್ಲಿನ ಜೀವ ಸಂಕುಲಕ್ಕೆ ಕಂಟಕಪ್ರಾಯವಾಗಿ ಪರಿಣಮಿಸಿದ್ದು ನಿಜಕ್ಕೂ ಘೋರ ದುರಂತವೇ ಸರಿ. ನಾವು ನಿಮಗೆ ಆಗಲೇ ತಿಳಿಸಿದಂತೆ ಆ ದ್ವೀಪದಲ್ಲಿ ಕಾಣಸಿಗುವ ಬ್ಲೂಹೋಲ್ಸ್ ತನ್ನತ್ತ ಸುಳಿದ ಯಾವ ಜೀವಿಯನ್ನೂ ಬದುಕಲು ಬಿಟ್ಟಿಲ್ಲ. ಆಹಾರ ಅರಸಿ ಅಲ್ಲಿ ಸುಳಿದ ಜೀವಿಗಳೆಲ್ಲಾ ಆ ನಿಗೂಢ ಶಕ್ತಿಗೆ ಬಲಿಯಾಗಿವೆ. ಅಂದಹಾಗೆ ಆ ಬ್ಲೂಹೋಲ್ಸ್ ಅನ್ನು ತಲುಪೋದು ಅಷ್ಟು ಸುಲಭದ ಮಾತಲ್ಲ. ಬಹಾಮಾ ದ್ವೀಪ ಸಾಲುಗಳ ಹಲವೆಡೆ ಬಾಯ್ತೆರೆದಿರುವ ಬ್ಲೂ ಹೋಲ್ಸ್ ಅನ್ನು ನೋಡಲು ಹಲವು ಸವಾಲುಗಳನ್ನ ಭೇದಿಸಬೇಕು. ಅವು ಮಾಮೂಲಿಯಾದ ಸವಾಲುಗಳಲ್ಲ. ಸಾಮಾನ್ಯವಾಗಿ ನಾವು ನೀವು ಪ್ರಾಕೃತಿಕ ವಿಕೋಪಗಳಲ್ಲಿ ಒಂದೆಂದು ಕಂಡುಕೊಂಡಿರುವ ಅತೀವ ಬಿಸಿಲಿನ ಝಳ ಇನ್ನಿಲ್ಲದಂತೆ ಕಾಡುತ್ತೆ. ಕಾರ್ಕೋಟಕ ವಿಷ ಕಾರುವ ಮುಳ್ಳಿನ ಗಿಡ ನಿಮ್ಮನ್ನ ಆ ದಾರಿಯುದ್ದಕ್ಕೂ ಸಾವಿನ ಭಯವನ್ನ ಪರಿಚಯಿಸುತ್ತವೆ. ಅಚ್ಚರಿ ಅನಿಸಿದರೂ ಇದೇ ನಿಜ. ಸರಿಸುಮಾರು 110 ಡಿಗ್ರಿ ಫ್ಯಾರನ್ಹೀಟ್ ನಷ್ಟು ತೀವ್ರತೆಯ ಬಿಸಿಲಿನ ಝಳ ನಿಮ್ಮ ಪ್ರಾಣವನ್ನೇ ಕಸಿದುಕೊಳ್ಳುತ್ತದೆ. ವಾಹನಗಳು ಕೂಡ ಚಲಿಸಲಾಗದ ಕ್ಲಿಷ್ಟಕರ ಹಾದಿ ಬಹಾಮದಲ್ಲಿ ನಿಮ್ಮ ಸಹನೆ ಪರೀಕ್ಷಿಸುತ್ತವೆ. ಬ್ಲೂ ಹೋಲ್ಸ್ ತಲುಪುವ ಅಧಮ್ಯ ಛಲವಂತರು ಮಾತ್ರ ಕಾಲ್ನಡಿಗೆಯಲ್ಲಾದ್ರೂ ಕ್ರಮಿಸಿ ಸಾವಿನ ಕೂಪದ ದರ್ಶನ ಪಡೆಯುತ್ತಾರೆ.
ಇದಿಷ್ಟೇ ಅಗಿದ್ದರೆ ಆ ಜಾಗ ಅಷ್ಟು ಭಯಂಕರ ಅನಿಸುತ್ತಿರಲಿಲ್ಲವೇನೋ..? ನಿಜವಾದ ಸವಾಲು ಬ್ಲೂ ಹೋಲ್ಸ್ನ ನೀರಿಗಿಳಿದ ಮೇಲೆ ಎದುರಾಗ್ತವೆ. ಆ ಗುಹೆಗಳನ್ನ ಪ್ರವೇಶಿಸೊದಕ್ಕೆ ಗಂಡೆದೆಯ ಗುಂಡಿಗೆ ಅತ್ಯವಶ್ಯಕ. ಅಲ್ಲಿಗೆ ಕಾಲಿರಿಸಿ ಜೀವಂತ ಮರಳುವುದೆಂದರೆ ಸಾವಿರ ಬಾರಿ ಮರುಹುಟ್ಟು ಪಡೆದಂತೆಯೇ..! ಕಾರಣ; ಗುಹೆಗಳಲ್ಲಿನ ಮಣ್ಣಿನ ರಚನೆ ಹೇಗಿದೆ ಅಂದ್ರೆ ನೀರಿನ ಗುಳ್ಳೆಯ ಬುಗ್ಗೆ ಪಸರಿಸಿದರೂ ಕಳಚಿ ಮೈ ಮೇಲೆ ಬೀಳುವಷ್ಟು ಸೂಕ್ಷ್ಮವಾಗಿರುತ್ತದೆ. ಬೆಳಕಿಲ್ಲದೆ ಸಾಗುವ ಕಗ್ಗತ್ತಲ ಹಾದಿಯಲ್ಲಿ ಮಣ್ಣಿನ ಜಾರುವಿಕೆ ಅನ್ವೇಷಕರನ್ನು ಸೀದಾ ಸಾವಿನ ಮನೆ ಸೇರಿಸೋದ್ರಲ್ಲಿ ಸಂಶಯವೇ ಇಲ್ಲ. ಇದು ಮೊದಲೆನೇಯ ಸವಾಲಾದರೇ ಅದರ ಹತ್ತು ಪಟ್ಟು ತೀವ್ರತೆಯುಳ್ಳ ಸಾಲು ಸಾಲು ಸವಾಲುಗಳು ಡೈವರ್ಸ್ ಪ್ರಾಣಾಹುತಿಗಾಗಿ ಕಾಯುತ್ತಿರುವಂತಿವೆ. ಅವುಗಳ ಪೈಕಿ ಗಾಳಿಯ ಒತ್ತಡ ಕೂಡ ಒಂದು. ಸಾಮಾನ್ಯವಾಗಿ ಸಮುದ್ರಮಟ್ಟದಲ್ಲಿ ನಮ್ಮ ಮೇಲೆ ಪ್ರತಿ ಚದುರ ಇಂಚಿಗೆ 15 ಪೌಂಡ್ಗಳಷ್ಟು ಗಾಳಿಯ ಒತ್ತಡ ಪ್ರಭಾವ ಬೀರುತ್ತೆ. ಆದ್ರೆ ಬ್ಲೂಹೋಲ್ಸ್ನ ತಳಭಾಗ ತಲುಪಿದಾಗ ಅನ್ವೇಷಕರ ಮೇಲೆ ಪಸರಿಸುವ ಒತ್ತಡ 8 ಪಟ್ಟು ಹೆಚ್ಚಿರುತ್ತೆ.. ಅಂದರೆ ಪ್ರತಿ ಚದುರ ಇಂಚಿಗೆ 130 ಪೌಂಡ್ ಗಳಷ್ಟು.. ಇದನ್ನರಿತ ಯಾವ ಅನ್ವೇಷಕನೂ ಆ ತಳ ತಲುಪುವ ದುಸ್ಸಾಹಸಕ್ಕೆ ಕೈ ಹಾಕಿಲ್ಲ. ಕೇಳೋಕೆ ಇಷ್ಟು ಜಟಿಲವೆನಿಸುವ ಆ ಮಾರ್ಗ ಭೇದಿಸೋದು ಸುಲಭದ ಮಾತಲ್ಲ. ಆದ್ರೆ ಬದುಕಿ ಬರುವ ಮಾರ್ಗವನ್ನೂ ಸಹ ಚಾಲಾಕಿ ಅನ್ವೇಷಕರು ಕಂಡುಕೊಂಡಿದ್ದಾರೆ. ಅದು ಅವರು ಸಾಗುವ ಹಾದಿಯಲ್ಲಿ ನೈಲಾನ್ ದಾರದ ಗೈಡ್ ಲೈನ್ ಹಾಕುವುದು. ತಾವು ಹೊತ್ತೊಯ್ಯುವ ಅಮ್ಲಜನಕದ ಸಿಲಿಂಡರ್ ಖಾಲಿಯಾಗುವ ಮುನ್ಸೂಚನೆ ದೊರೆತಾಗ ಬಂದ ದಾರಿಯಲ್ಲಿ ಹಿಂತಿರುಗಲು ಆ ನೈಲಾನ್ ದಾರವೇ ಅವರ ಜೀವರಕ್ಷಕವಾಗುತ್ತೆ. ಇಷ್ಟೆಲ್ಲಾ ಮುಂಜಾಗ್ರತೆಯ ತರುವಾಯವೂ ಅನೇಕರು ಆ ಅತೀಂದ್ರೀಯ ಶಕ್ತಿಗೆ ಬಲಿಯಾಗಿದ್ದಾರೆ…
ಬ್ಲೂ ಹೋಲ್ಸ್ ಗೆ ತನ್ನದೇ ಆದ ನೈಸರ್ಗಿಕ ಇತಿಹಾಸವಿದೆ. ಸಾವಿನ ಸೌದವೆಂದೇ ಕುಖ್ಯಾತವಾಗಿರುವ ಈ ಜಲಾಂತರ್ಗಾಮಿ ಗುಹೆಗಳಿಗೆ 3ಲಕ್ಷ ವರ್ಷಗಳ ಇತಿಹಾಸವಿದೆ. 3ಲಕ್ಷ ವರ್ಷಗಳ ಹಿಂದೆ ಬಹಾಮಾ ಪ್ರದೇಶದಲ್ಲಿ ಸಮುದ್ರಮಟ್ಟದಿಂದ 400 ಅಡಿ ಎತ್ತರದ ಸುಣ್ಣದ ಕಲ್ಲಿನ ಗುಡ್ಡಗಳಿದ್ದವು. ಕಾಲಾನಂತರ ಹವಾಮಾನದಲ್ಲಾದ ಪ್ರಮುಖ ಬದಲಾವಣೆಗಳ ಫಲವಾಗಿ ಆ ಗುಡ್ಡಗಳಲ್ಲಿ ಗುಹೆಗಳು ನಿರ್ಮಿಸಲ್ಪಟ್ಟವು.. ಸಮುದ್ರ ಮಟ್ಟದಲ್ಲಿ ನೀರಿನ ಪ್ರಮಾಣ ಏರತೊಡಗಿದಂತೆ ಆ ಗುಹೆಗಳು ಜಲಾಂತರ್ಗಾಮಿಯಾದವು. ಅಷ್ಟೇ ಅಲ್ಲ, ಭುವನದ ಇತರೆ ಭಾಗಗಳಂತೆ ಬಹಾಮಾ ದ್ವೀಪಗಳಲ್ಲೂ ಮಾನವರ ಸಂತತಿ ಇತ್ತು. ಶತಮಾನಗಳ ಕಾಲ ಅಲ್ಲಿ ಅಸ್ತಿತ್ವದಲ್ಲಿದ್ದ ಆ ಜನಾಂಗದ ಹೆಸರೇ ಲುಕಾಯನ್ಸ್. 1492ರಲ್ಲಿ ವಾಸ್ಕೋಡಿಗಾಮ ಅನ್ವೇಷಣೆಯ ಮಾರ್ಗಮಧ್ಯೆ ಈ ಜನಾಂಗವನ್ನ ಭೇಟಿಯಾಗಿದ್ದಾಗಿ ಸ್ವತಃ ದಾಖಲಿಸಿದ್ದಾನೆ. ಆ ಜನಾಂಗವು ಬ್ಲೂ ಹೋಲ್ಸ್ ಅವರ ಸೃಷ್ಠಿಗೆ ಕಾರಣವೆಂದು ನಂಬಿದ್ದರು. ಹಾಗೆನೇ, ತಮ್ಮನ್ನಗಲಿದ ಜನಾಂಗದ ಮೃತದೇಹವನ್ನ ಆ ಬ್ಲೂ ಹೋಲ್ಸ್ ನಲ್ಲಿ ವಿಸರ್ಜಿಸುತ್ತಿದ್ದರು. ಹೀಗೆ ಜೀವಿಸುತ್ತಿದ್ದ ಲುಕಾಯಲ್ಸ್ ಜನಾಂಗ ಇದ್ದಕ್ಕಿದ್ದಂತೆ ಸರ್ವನಾಶವಾಗಿ ಹೋಗುತ್ತೆ. ಆ ಕರಾಳ ಅಧ್ಯಾಯಕ್ಕೆ ಬ್ಲೂ ಹೋಲ್ಸ್ನಲ್ಲಿರುವ ಕಾಣದ ಶಕ್ತಿಯ ಕೊಡುಗೆ ಇದ್ದಿತ್ತಾ ಎಂದು ಇತಿಹಾಸಕಾರರು ಈಗಲೂ ಭ್ರಮನಿರಸನಗೊಂಡಿದ್ದಾರೆ. ಇತ್ತೀಚೆಗಿನ ಸಂಶೋಧನೆ ಒಂದಿಡೀ ಜನಾಂಗಕ್ಕೆ ಜವರಾಯನ ಕಟುಶಾಪ ಯಾಕೆ ತಟ್ಟಿತ್ತೆಂಬ ಉತ್ತರವನ್ನ ಕಂಡುಕೊಂಡಿದ್ದಾರೆ. ಆ ಉತ್ತರ ಅಷ್ಟೇ ಭಯಾನಕ. ಆ ಉತ್ತರವೇ ಸಾಮಾನ್ಯವಾಗಿ ಕಣ್ಣಿಗೂ ಕಾಣದ ಅತಿಸೂಕ್ಷ್ಮ ಜೀವಾಣು.
ನಂಬಲು ಕಷ್ಟವೆನಿಸಿದರೂ ಇದು ಸತ್ಯ. ಪ್ರಕೃತಿಮಾತೆಯ ಈ ಸೃಷ್ಠಿ ಲುಕಾಯನ್ಸ್ ಜನಾಂಗಕ್ಕೆ ಮರಣಶಾಸನವಾಯಿತು. ಹೇಳಹೆಸರಿಲ್ಲದಂತೆ ಅಲ್ಲಿ ಮಾನವನ ಸಂತತಿ ಕಣ್ಮರೆ ಆಯಿತು. ಇದಕ್ಕೆ ಕಾರಣೀಭೂತವಾಗಿದ್ದು ಕೂಡ ಆ ಧಾತು. ನಮ್ಮ ಕಣ್ಣಿಗೆ ಕಾಣದ ಅತಿ ಸೂಕ್ಷ್ಮ ಬ್ಯಾಕ್ಟೀರಿಯಾ. ಪ್ರಾಕೃತಿಕವಾಗಿ ಅಲ್ಲಿನ ರಾಸಾಯನಿಕ ಸತ್ವಗಳ ಫಲವೋ ಅಥವಾ ಪ್ರಕೃತಿಯ ಶಾಪವೋ ಎಂಬಂತೆ ಆ ಸೂಕ್ಷ್ಮ ಜೀವಿ ಇತರೆ ಜೀವಿಗಳನ್ನ ಬಲಿ ಪಡೆದಿತ್ತು ಎಂದು ಸಂಶೋಧಕರು ಕಂಡುಕೊಂಡಿದ್ದಾರೆ. ಸಾಮಾನ್ಯವಾಗಿ ಜೈವಿಕ ಅಂಶದಿಂದ ಉತ್ಪಾದಿತವಾಗುವ ಗಿಡ, ಜೀವಿಗಳ ಕೊಳೆಯುವಿಕೆಗೆ ಬ್ಯಾಕ್ಟೀರಿಯಾ ನೆರವಾಗ್ತವೆ. ಆದ್ರೆ ಬಹಾಮಾದಲ್ಲಿ ಕಂಡ ಈ ವಿಚಿತ್ರ ಜೀವಾಣು ಪ್ರಾಣಿ ಪಕ್ಷಿ ಸೇರಿದಂತೆ ಮಾನವನ ಅಳಿವಿಗೆ ಕಾರಣವೆಂಬುದು ಅತ್ಯಂತ ಆಘಾತಕಾರಿ ಅಂಶವಾಗಿದೆ. ದಶಕಗಳ ಸಂಶೋಧನೆ ತಂದಿತ್ತ ಉತ್ತರವೂ ಅದೇ..! ಈ ವಿಚಿತ್ರ ಬ್ಯಾಕ್ಟೀರಿಯಾ ವಿಶಕಾರಕ ಅಂಶವನ್ನ ಹೊರಸೂಸುವ ಶಕ್ತಿ ಹೊಂದಿದೆ.. ಆ ವಿಶಕಾರಕ ಅಂಶವೇ “ಹೈಡ್ರೋಜನ್ ಸಲ್ಫೈಡ್”. ಈ ರಾಸಾಯನಿಕ ಅಂಶ ಜಗತ್ತಿನ ಪ್ರಸಿದ್ಧ ರಾಸಾಯನಿಕ ತಜ್ಞರನ್ನ ಕೂಡ ನಿಬ್ಬೆರಗಾಗಿಸುವಷ್ಟು ಕ್ರೌರ್ಯತೆ ಮೆರೆದಿದೆ. ಇಂಥಾ ಕಾರ್ಕೋಟಕ ವಿಷ ಉತ್ಪತಿಯಾಗಿದ್ದಾದ್ರೂ ಹೇಗೆ..? ಜಗತ್ತಿನಲ್ಲೆಲ್ಲೂ ಕಾಣಸಿಗದ ಆ ಜೀವಾಣು ಬಹಾಮಾದಲ್ಲಿ ಕಾಣ್ತಿರೋದು ಯಾಕೆ..? ಹೀಗೆ ಹಲವು ಪ್ರಶ್ನೆಗಳು ಹುಟ್ಟುತ್ತವೆ. ಕಾರಣ ಇಲ್ಲಿ ಯಥೇಚ್ಛವಾಗಿ ದೊರಕುವ ರಾಸಾಯನಿಕ ಸಂಪತ್ತು. ಯಾಕಂದ್ರೆ.. ಅಲ್ಲಿನ ಭೂಭಾಗದ ಸೃಷ್ಠಿಯ ಇತಿಹಾಸದತ್ತ ಕಣ್ಣಾಡಿಸಿದಾಗ ಗೋಚರವಾಗುವಂತೆ ಸುಣ್ಣದ ಕಲ್ಲಿನ ಪ್ರಭಾವ ಕಾಣಸಿಗುತ್ತೆ. ಶತಮಾನಗಳ ನಿರಂತರ ರಾಸಾಯನಿಕ ಪ್ರತಿಕ್ರಿಯೆ ಈ ವಿಷಕಾರಕ ಬ್ಯಾಕ್ಟೀರಿಯಾದ ಉದ್ಭವಕ್ಕೆ ತನ್ನ ಕೊಡುಗೆಯನ್ನಿತ್ತಿದೆ. ಆದ್ರೆ ಆ ಜೀವಾಣು ಜವರಾಯನ ಪ್ರತಿರೂಪ ಎನ್ನುವುದು ಅತ್ಯಂತ ವಿಷಾದನೀಯ ಸಂಗತಿ.
ಆ ಪರಿ ಕಾಡಿದ ಬ್ಯಾಕ್ಟೀರಿಯಾದ ಇನ್ನೊಂದು ಅಚ್ಚರಿದಾಯಕ ಸಂಗತಿ ಒಂದಿದೆ. ಅದೇನೆಂದರೆ ಸಾಮಾನ್ಯವಾಗಿ ಯಾವುದೇ ಜೀವಿ ಸಾವಿಗೀಡಾದಾಗ ಆ ಮೃತದೇಹ ಕೊಳೆಯುವಂತೆ ಮಾಡುವುದು ಬ್ಯಾಕ್ಟೀರಿಯಾದ ನೈಜಗುಣ. ಇದು ಸೃಷ್ಠಿಯ ಸತ್ಯ ಆದರೆ ಇಲ್ಲಿ ದೊರಕಿರುವ ಬ್ಯಾಕ್ಟೀರಿಯಾ ಜೀವಿಗಳ ಅಸ್ತಿ ಪಂಜರವನ್ನೂ ಕೊಳೆಯಲು ಬಿಟ್ಟಿಲ್ಲ. ಹೌದು 400 ವರ್ಷಗಳ ಹಿಂದೆ ಸಾವನ್ನಪ್ಪಿದ ಅದೆಷ್ಟೋ ಜೀವಿಗಳ ಅಸ್ತಿಯನ್ನ ಈ ಬ್ಲೂ ಹೋಲ್ಸ್ ತನ್ನೊಡಲಾಳದಲ್ಲಿಟ್ಟುಕೊಂಡಿದೆ. ಆ ಬ್ಯಾಕ್ಟೀರಿಯಾವೆ ಬಹಾಮದಲ್ಲಿನ ಹತ್ಯಾಖಾಂಡದ ರೂವಾರಿ ಎನ್ನುವ ಸಂಶೋಧಕರ ಉತ್ತರ ಬ್ಲೂಹೋಲ್ಸ್ ನ ರಕ್ತಸಿಕ್ತ ಅಧ್ಯಾಯಕ್ಕೆ ನವ ವೃತ್ತಾಂತವಾಗಿದೆ.
- ಅಭಿಷೇಕ್ ರಾಮಪ್ಪ .
POPULAR STORIES :
ಇದ್ದಕ್ಕಿದ್ದಂತೆ ಗೇಲ್ ಸಿಡಿತಿರೋದು ಯಾಕೆ..!? ಕೊಹ್ಲಿ ಬಳಿ ಗೇಲ್ ಹೇಳಿದ್ದೇನು ಗೊತ್ತಾ..!?
ಐಶ್ವರ್ಯಗೆ ಶಾಕ್ ಕೊಟ್ಟ ಅಭಿಷೇಕ್ ಬಚ್ಚನ್ ನ ನಡುವಳಿಕೆ..! #Video
ಮುಳುಗಲಿದೆ ಮುಂಬೈ..! ಕೋಲ್ಕತಾಕ್ಕೂ ಅಪಾಯ ತಪ್ಪಿದಲ್ಲ..!
ಈ ಅವಳಿ ಸೋದರಿಯರಿಗೆ ವಿಚಿತ್ರ ಬಯಕೆ..!? ಅದೇನಂತಾ ನೀವೇ ಓದಿ..!?