ರ್ಯಾಪರ್, ಕನ್ನಡ ಬಿಗ್ ಬಾಸ್ ಸೀಸನ್ 5 ರ ವಿನ್ನರ್ ಚಂದನ್ ಶೆಟ್ಟಿ ಅವರು ಸೋಮವಾರಪೇಟೆಯ ಒಕ್ಕಲಿಗ ಸಮಾಜ ಭವನಕ್ಕೆ ಭೇಟಿ ನೀಡಿ ಪ್ರವಾಹ ಪೀಡಿತ ನಿರಾಶ್ರಿತರ ಕಷ್ಟಗಳನ್ನು ಆಲಿಸಿದ್ದಾರೆ.
ನಿರಾಶ್ರಿತರ ಕಷ್ಟಗಳನ್ನು ಆಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಒಕ್ಕಲಿಗರ ಸಮಾಜ ಭವನದಲ್ಲಿ ಸಾಕಷ್ಟು ನಿರಾಶ್ರಿತರಿಗೆ ಇರೋದಕ್ಕೆ ಅವಕಾಶ ನೀಡಲಾಗಿದೆ. ಸುಮಾರು ಕಡೆಗಳಿಂದ ದಾಸ್ತಾನು ಪದಾರ್ಥಗಳು, ತಿಂಡಿ, ತಿನಿಸುಗಳು, ಹೊದಿಕೆ, ಔಷಧಿ ಮತ್ತು ಅಗತ್ಯ ವಸ್ತುಗಳು ಬಂದಿವೆ.

ಸದ್ಯಕ್ಕೆ ಊಟ-ತಿಂಡಿಗೆ ಯಾವುದೇ ಕೊರತೆ ಇಲ್ಲ. ಆದರೆ ಇಲ್ಲಿ ಸಮಸ್ಯೆ ಏನಾಗಿದೆ ಎಂದರೆ ಸಾಕಷ್ಟು ಮನೆಗಳು ಪ್ರವಾಹದಲ್ಲಿ ಕೊಚ್ಚಿ ಹೋಗಿವೆ. ಮಳೆ ನಿಂತ ಮೇಲೆ ನಾವು ಎಲ್ಲಿಗೆ ಹೋಗುವುದು, ಎಲ್ಲಿ ಇರುವುದು, ನಮ್ಮ ಜೀವನ ಹೇಗೆ ಎಂಬ ಪ್ರಶ್ನೆ ನಿರಾಶ್ರಿತರಲ್ಲಿ ಮೂಡಿದೆ. ಆದ್ದರಿಂದ ನಾನು ಸರ್ಕಾರಕ್ಕೆ ಮತ್ತು ಸಾರ್ವಜನಕರಲ್ಲಿ ಮನವಿ ಮಾಡಿಕೊಳ್ಳುತ್ತೇನೆ.

ಯಾರಿಗಾದರೂ ದೇಣಿಗೆ ನೀಡಬೇಕೆಂದು ಬಯಸುವವರು ಹಣ ಸಹಾಯ ಮಾಡಿ ಮನೆ ಕಟ್ಟಿಸಿಕೊಡಿ. ನಾನು ಸಹ ನನ್ನ ಕೈಲಾದಷ್ಟು ಸಹಾಯ ಮಾಡುತ್ತೇನೆ ಎಂದಿದ್ದಾರೆ. ಚಂದನ್ ಅವರು ಈಗಾಗಲೇ ತಮ್ಮ ಕೈಲಾದಷ್ಟು ಮಟ್ಟಿನ ಅಗತ್ಯವಸ್ತುಗಳನ್ನು ತಲುಪಿಸಿದ್ದಾರೆ.






