ಒಂದು ಕಡೆ ದಾವೂದ್‍ನನ್ನು ಭಾರತ ಯಾವಾಗ ಅರೆಸ್ಟ್ ಮಾಡುತ್ತದೆ ಎಂಬ ನಿರೀಕ್ಷೆಗಳು ತಟಸ್ಥವಾಗಿವೆ. ಅತ್ತ ದಾವೂದ್ ಕಂಪನಿಯಿಂದ ಆತನ ಪರಮಾಪ್ತ ಬಂಟ ಚೋಟಾ ಶಕೀಲ್ ಹೊರಗೆ ಹೋಗಿದ್ದಾನೆ. ತನ್ನದೇ ಸಪರೇಟ್ ಗ್ಯಾಂಗ್ ಕಟ್ಟಿಕೊಂಡಿದ್ದಾನೆಂಬುದು ನಿನ್ನೆ ಮೊನ್ನೆಯವರೆಗಿನ ಸುದ್ದಿ. ಈಗ ಛೋಟಾ ಶಕೀಲ್ ಸತ್ತಿದ್ದಾನೆ. ಅದೂ ಜನವರಿಯಲ್ಲಿ ಸಾವನ್ನಪ್ಪಿದ್ದಾನೆ. ಅವನ ಹೆಸರಿನಲ್ಲಿ ರಹೀಂ ಮರ್ಚಂಟ್ ಅಂಡರ್ ವರ್ಲ್ಡ್ ನಿಭಾಯಿಸುತ್ತಿದ್ದಾನೆ ಎನ್ನುವುದು ಲೆಟೆಸ್ಟ್ ಸುದ್ದಿ. ಒಂದು ವೇಳೆ ಶಕೀಲ್ ಸತ್ತಿದ್ದೇ ನಿಜವಾದರೇ, ಅದು ಸಹಜ ಸಾವಾ..? ಅಥವಾ ದಾವೂದ್, ಐಎಸ್‍ಐ ಸೇರಿ ಕೊಲ್ಲಿಸಿದ್ದಾರಾ..?. ಬಯಲಾಗದ ನಿಗೂಢ.
ಡಿ ಕಂಪನಿಯ ಸಾರಥ್ಯವನ್ನು ದಾವೂದ್ ಇಬ್ರಾಹೀಂ ತಮ್ಮ ಅನೀಸ್ ಇಬ್ರಾಹೀಂ ವಹಿಸಿಕೊಂಡಿದ್ದಾನೆ. ಹೀಗಾಗಿ ಕಡೆಗಣನೆಗೀಡಾಗಿರುವ ಚೋಟಾ ಶಕೀಲ್, ತನ್ನದೇ ನೆಟ್‍ವರ್ಕ್ ಮೂಲಕ ಸಪರೇಟ್ ಗ್ಯಾಂಗ್ ಕಟ್ಟಿಕೊಂಡಿದ್ದಾನೆ ಎಂಬುದು ವಾರದಾಚೆಯ ಸುದ್ದಿ. ಅತ್ತ ಶಕೀಲ್ ಈ ವಿಚಾರವನ್ನು ನಿರಾಕರಿಸಿರುವ ಬೆನ್ನಿಗೆ, ದಾವೂದ್‍ನನ್ನು ಹಿಮಾಲಯದೆತ್ತರಕ್ಕೆ ಬೆಳೆಸಿದ ನಂತರ, ಈಗ ದೂರವಿಟ್ಟಿದ್ದಾನೆ ಎಂಬ ಕಾರಣಕ್ಕೆ ಶಕೀಲ್ ಮುನಿಸಿಕೊಂಡಿದ್ದಾನೆ ಎನ್ನುವುದು ಸಮರ್ಥನೆಯ ಸುದ್ದಿ. ಆದರೆ ಈಗ ಎಲ್ಲ ಊಹಪೋಹಗಳನ್ನು ಮೀರಿ ಛೋಟಾ ಶಕೀಲ್ ಮೃತಪಟ್ಟಿದ್ದಾನೆ ಎಂಬ ರಣ ಸುದ್ದಿ ಹೊರಬಿದ್ದಿದೆ. ಅವ್ನು ಸಹಜವಾಗಿ ಸತ್ನಾ..? ಕೊಲೆಯಾದ್ನಾ..?- ದಟ್ ಈಸ್ ಸೀಕ್ರೆಟ್.
ಛೋಟಾ ಶಕೀಲ್ ಕಳೆದ ಜನವರಿಯಲ್ಲೇ ಸತ್ತುಹೋಗಿದ್ದಾನೆ. ಪಾಕಿಸ್ತಾನದ ಇಸ್ಲಾಮಾಬಾದ್‍ನ ಒಡಿಸ್ಸಾ ಎಂಬ ಸಂಘಟನೆಯ ಸಭೆಗೆ ಹೋಗಿದ್ದಾಗ ಹೃದಯಾಘಾತವಾಗಿತ್ತು. ಕೂಡಲೇ ಆತನನ್ನು ರಾವಲ್ಪಿಂಡಿಯ ಕಂಬೈನ್ಡ್ ಮೆಡಿಕಲ್ ಹಾಸ್ಪಿಟಲ್‍ಗೆ ಏರ್ ಆಂಬ್ಯುಲೆನ್ಸ್ ಮೂಲಕ ಸಾಗಿಸಲಾಗಿತ್ತು. ಆದರೆ ಅಷ್ಟರಲ್ಲೇ ಶಕೀಲ್ ಮೃತಪಟ್ಟಿದ್ದಾನೆ ಎನ್ನುವುದು ಒಂದು ಮಾಹಿತಿ. ಐಎಸ್‍ಐಗೆ ಚಳ್ಳೇಹಣ್ಣು ತಿನ್ನಿಸುತ್ತಿದ್ದ, ಭಾರತಕ್ಕೆ ಶರಣಾಗುವ ಸಾಧ್ಯತೆಯಿದ್ದ ಛೋಟಾ ಶಕೀಲ್‍ನನ್ನು ಒಡಿಸ್ಸಾ ಸಭೆಯಲ್ಲಿ ಪಾಕಿಸ್ತಾನ ಗುಪ್ತಚರ ದಳ ಐಎಸ್‍ಐ ಗುಂಡಿಕ್ಕಿ ಕೊಂದಿದೆ ಎನ್ನುವುದು ಇನ್ನೊಂದು ಊಹಪೋಹ. ಹಾಗೆಯೇ ದಾವೂದ್‍ಗೆ ಸಡ್ಡು ಹೊಡೆದು, ಆತನ ನೆಟ್‍ವರ್ಕ್ ದುರುಪಯೋಗಪಡಿಸಿಕೊಂಡಿದ್ದಾನೆ ಎಂಬ ಕಾರಣಕ್ಕೆ ದಾವೂದ್ ಕೊಲ್ಲಿಸಿದ್ದಾನೆ ಎನ್ನುವುದು ಮತ್ತೊಂದು ಊಹಪೋಹ. ಹಾಗಾದ್ರೇ ಶಕೀಲ್ ಹೇಗೆ ಸತ್ತಾ..? ನಿಜಕ್ಕೂ ಅವನು ಸತ್ತಿದ್ದಾನಾ..? ಅವನ ಹೆಸರಿನಲ್ಲಿ ಮತ್ತೊಬ್ಬ ಡಾನ್ ರಹೀಂ ಮರ್ಚಂಟ್ ಡಿ ಕಂಪನಿ ನಿಭಾಯಿಸುತ್ತಿದ್ದಾನಾ..? ಎಂಬೆಲ್ಲಾ ಪ್ರಶ್ನೆಗಳಿಗಿನ್ನೂ ನಿಖರ ಉತ್ತರ ಸಿಗಬೇಕಿದೆ.
ದಾವೂದ್ ಪಾಪದ ಅಷ್ಟು ಹೆಜ್ಜೆಗಳ ಮೇಲೆ ಶಕೀಲ್ ನಡೆದಿದ್ದಾನೆ. ದಾವೂದ್ ಅಣತಿಯಂತೆ ನೂರಾರು ಕೃತ್ಯಗಳನ್ನು ಎಸಗಿದ್ದಾನೆ. ಮುಂಬೈ ಬ್ಲಾಸ್ಟ್‍ನಿಂದ ಹಿಡಿದು ಅಸಂಖ್ಯಾತ ಹತ್ಯೆಗಳಿಗೆ ನೇತೃತ್ವ ವಹಿಸಿಕೊಂಡಿದ್ದಾನೆ. ಮೊದಲು ದಾವೂದ್ ಜೊತೆಗಿದ್ದು ಆನಂತರ ದೂರವಾದ ಚೋಟಾ ರಾಜನ್‍ನನ್ನು ಹೊಡೆಯಲು ರಶೀದ್ ಮಲಬಾರಿ ಎಂಬ ಕ್ರೂರ ಹಂತಕನನ್ನು ಬ್ಯಾಂಕಾಕ್ ಕಳುಹಿಸಿ ರಿವಾಲ್ವರ್ ಮೊರೆಸಿದ್ದ. ಡಿ ಕಂಪನಿಯ ಒಟ್ಟಾರೆ ವ್ಯವಹಾರವನ್ನು ನೋಡಿಕೊಳ್ಳುತ್ತಿದ್ದ ಶಕೀಲ್ ಡಿ ಕಂಪನಿಯಿಂದ ದೂರವಾಗಿದ್ದು ನಿಜವಾದರೇ ಅದು ನಿಜಕ್ಕೂ ದಾವೂದ್‍ಗೆ ನಷ್ಟ. ಹಾಗಂತ ಈಗ ಡಿ ಕಂಪನಿಯ ಸಾರಥ್ಯವಹಿಸಿಕೊಂಡಿರುವ ಅನಿಸ್ ಇಬ್ರಾಹೀಂ ಏನೂ ಸಣ್ಣ ಸರಂಜಾಮಲ್ಲ. ಆದರೆ ಶಕೀಲ್‍ಗೆ ಹೋಲಿಸಿದರೇ ಏನೇನೂ ಅಲ್ಲ.
ಅಷ್ಟಕ್ಕೂ ದಾವೂದ್ ಬದುಕಿರುವ ಬಗ್ಗೆಯೇ ಡೌಟ್‍ಗಳಿವೆ. ದಾವೂದ್ ಸತ್ತೋದ್ನಾ..? ಪಾಕಿಸ್ತಾನದಲ್ಲಿ ಹೇಗೋ ಗೊತ್ತಿಲ್ಲ. ಭಾರತದಲ್ಲಿ ಈ ಸುದ್ದಿ ಹರಿದಾಡಿತ್ತು. ಒಂದು ಕಡೆ ತೀವ್ರ ಹೃದಯಾಘಾತಕ್ಕೆ ಒಳಗಾಗಿ ಭೂಗತ ಪಾತಕಿ ದಾವೂದ್ ಇಬ್ರಾಹಿಂ ಪಾಕಿಸ್ತಾನದಲ್ಲಿ ಮೃತಪಟ್ಟಿದ್ದಾರೆ ಎಂಬ ಸುದ್ದಿ, ಆರೋಗ್ಯ ಸ್ಥಿರವಾಗಿದ್ದು, ಡಾನ್ ದಾವೂದ್ ಗುಣಮುಖನಾಗಿದ್ದಾನೆ ಎಂಬುದು ಡಿ ಕಂಪನಿಯ ಸಮಜಾಯಿಷಿ. 63 ವರ್ಷ ವಯಸ್ಸಿನ ದಾವೂದ್ ಇಬ್ರಾಹಿಂ ಬದುಕಿರುವುದು ಡೌಟು ಎನ್ನುವುದು ನಿನ್ನೆ ಮೊನ್ನೆ ಹರಿದಾಡುತ್ತಿರುವ ಸುದ್ದಿಯಲ್ಲ. ಅವನು ಸತ್ತಿದ್ದರೂ ಬದುಕಿದ್ದಾನೆ ಎಂದು ತೋರಿಸುತ್ತಾ ಡಿ ಕಂಪನಿ ಜಗತ್ತಿನ ತುಂಬಾ ವ್ಯಾಪಾರ ಕಾಯ್ದುಕೊಂಡಿದೆ ಎನ್ನುವುದು ಬಲ್ಲ ಮೂಲಗಳ ಮಾಹಿತಿಯೂ ಹೌದು.
ಇದರ ಜೊತೆಗೆ ದಾವೂದ್ ಆರ್ಥಿಕ ಸ್ಥಿತಿ ಚಿಂತಾಜನಕವಾಗಿದೆ ಎಂಬ ಸುದ್ದಿಯೂ ಹರಡಿತ್ತು. ಕೇವಲ ಒಂದೆರಡು ವರ್ಷಗಳಲ್ಲಿ ಮಣ್ಣಗೆದು ಸಾವಿರಾರು ಕೋಟಿ ಸಂಪಾದಿಸುವವರು ಉದಾಹರಣೆಗಿರುವಾಗ, ಅನಾಮತ್ತು ಮೂವತ್ತಕ್ಕೂ ಹೆಚ್ಚು ವರ್ಷಗಳ ಕಾಲ ಜಗತ್ತಿನಲ್ಲಿ ಸ್ಮಗ್ಲಿಂಗ್ ನಡೆಸುತ್ತಿರುವ, ಕ್ರಿಕೆಟ್ ಬೆಟ್ಟಿಂಗ್‍ನಲ್ಲಿ ಪಾರಮ್ಯ ಮೆರೆಯುತ್ತಿರುವ, ಖೋಟಾ ನೋಟನ್ನು ಚಲಾವಣೆ ಮಾಡುತ್ತಿರುವ, ಬಾಲಿವುಡ್ಡನ್ನು ನಿಭಾಯಿಸುತ್ತಿರುವ, ಶೇಕಡಾ ನಲವತ್ತರಷ್ಟು ಪಾಕಿಸ್ತಾನವನ್ನು ಸಲಹುತ್ತಿರುವ ದಾವೂದ್ ಇಬ್ರಾಹಿಂ ಬಳಿ ಎಷ್ಟು ಹಣವಿರಬಹುದು..?. ಕೆಲ ತಿಂಗಳ ಹಿಂದಷ್ಟೇ ಅವನ ಸೌದಿಯ ಅಂದಾಜು ಹತ್ತರಿಂದ ಹದಿನೈದು ಸಾವಿರ ಕೋಟಿಯಷ್ಟು ಆಸ್ತಿಯನ್ನು ಸೌದಿ ಸರ್ಕಾರ ಮುಟ್ಟುಗೋಲು ಹಾಕಿಕೊಂಡಿತ್ತು. ಅಷ್ಟಕ್ಕೆ ದಾವೂದ್ ದಿವಾಳಿಯಾದ ಎನ್ನುವುದು ತಮಾಷೆಯಾಗುತ್ತದೆ.
ದಾವೂದ್ ಜಗತ್ತಿನ ಹಲವು ದೇಶಗಳಲ್ಲಿ ಬೇಜಾನ್ ಪ್ರಾಪರ್ಟಿ ಮಾಡಿಕೊಂಡಿದ್ದಾನೆ. ಏಷ್ಯಾ, ಮಿಡ್ಡಲ್ ಈಸ್ಟ್, ಆಫ್ರಿಕಾ, ಯು.ಕೆ, ವೆಸ್ಟರ್ನ್ ಯೂರೋಪ್- ಮುಂತಾದ ಕಡೆ ತನ್ನ ಸಾಮ್ರಾಜ್ಯವನ್ನು ವಿಸ್ತರಿಸಿದ್ದಾನೆ. ಅಷ್ಟೆಲ್ಲಾ ಯಾಕೆ..? ಭಾರತ ಒಂದರಿಂದಲೇ ಅವನಿಗೆ ಸಾವಿರಾರು ಕೋಟಿ ತಿಂಗಳ ಆದಾಯವಿದೆ ಎನ್ನಲಾಗುತ್ತದೆ. ಅನಭಿಷಿಕ್ತ ದೊರೆಯಂತೆ ಮೆರೆಯುತ್ತಿರುವ ದಾವೂದ್ ಟರ್ನ್‍ಓವರ್ ನಿರಂತರವಾಗಿದೆ. ಅದನ್ನೆಲ್ಲಾ ನೋಡಿಕೊಳ್ಳುತ್ತಿದ್ದವನೇ ಚೋಟಾ ಶಕೀಲ್. ಈಗ ಅವನು ಹೊರಬಂದರೇ ಅವೆಲ್ಲಾ ನೆಟ್‍ವರ್ಕ್‍ಗಳನ್ನು ತಾನೇ ಸಂಭಾಳಿಸುತ್ತಾನೆ. ಅನೀಸ್ ಇಬ್ರಾಹಿಂ ಹಾಗೂ ಅವನ ಮಧ್ಯೆ ಸಮರವೇರ್ಪಡುತ್ತದೆ. ಸಧ್ಯಕ್ಕೆ ಡಿ ಕಂಪನಿಯಿಂದ ಹೊರಬಂದಿರುವುದರ ಬಗ್ಗೆ ಶಕೀಲ್ ನಿರಾಕರಣೆಯ ಸುದ್ದಿಯಿತ್ತು. ಈಗ ಸತ್ತ ಸುದ್ದಿ ಯಾವುದೂ ಖಾತ್ರಿಯಿಲ್ಲ.