ಸೇನಾ ಮೇಜರ್ ಒಬ್ಬರ ಪತ್ನಿಯ ಶವ ದೆಹಲಿಯ ರಸ್ತೆಯೊಂದರಲ್ಲಿ ಪತ್ತೆಯಾಗಿದ್ದು , ಇದನ್ನು ಅಪಘಾತ ಎನ್ನಲಾಗಿತ್ತು. ಆದರೆ, ಇದು ಕೊಲೆ ಎಂಬ ಸಂಗತಿ ಇದೀಗ ಬಯಲಾಗಿದೆ.
ಮೇಜರ್ ಅಮಿತ್ ದ್ವಿವೇದಿ ಅವರ ಪತ್ನಿ ಶೈಲಜಾ ದ್ವಿವೇದಿ (35) ಅವರ ಮೃತದೇಹ ದೆಹಲಿಯ ಕಂಟೋನ್ಮೆಂಟ್ ಮೆಟ್ರೋ ನಿಲ್ದಾಣದ ಬಳಿ ಶನಿವಾರ ಸಿಕ್ಕಿತ್ತು.ಇದೊಂದು ಅಪಘಾತ ಎಂದು ಭಾವಿಸಲಾಗಿತ್ತು.ಈಗ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದ್ದು ಶೈಲಜಾ ಅವರ ಪತಿಗೆ ಪರಿಚಯವಿದ್ದ ವ್ಯಕ್ತಿ ಈಕೆಯನ್ನು ಕೊಂದಿದ್ದಾರೆ ಎಂದು ತಿಳಿದುಬಂದಿದೆ. ಶಂಕಿತ ಸಹ ಮೇಜರ್ ಎನ್ನಲಾಗುತ್ತಿದೆ.
ಶೈಲಜಾ ಅವರು ಶನಿವಾರ ಬೆಳಗ್ಗೆ 10 ಗಂಟೆಗೆ ಬ್ಯಾಸ್ ಆಸ್ಪತ್ರೆಗೆ ಫಿಸಿಯೋಥೆರಪಿ ಅಧಿವೇಶನಕ್ಕೆ ಹೋಗಬೇಕಿತ್ತು. ಅಧಿವೇಶನದ ಬಳಿಕ ಅವರನ್ನು ಕರೆದುಕೊಂಡು ಹೋಗಲು ಚಾಲಕ ಬಂದಾಗ ಅವರು ಅಧಿವೇಶನಕ್ಕೆ ಹಾಜರಾಗಿಲ್ಲ ಎಂಬ ಮಾಹಿತಿ ಸಿಕ್ಕಿದೆ. ಚಾಲಕ ಈ ವಿಷಯವನ್ನು ಮೇಜರ್ ಅಮಿತ್ ಅವರಿಗೆ ತಿಳಿಸಿದ್ದಾನೆ. ಎಷ್ಟು ಹುಡುಕಿದರೂ ಶೈಲಜಾ ಅವರು ಸಿಗದೇ ಇದ್ದಾಗ ಸಂಜೆ 4.30ರ ಸುಮಾರಿಗೆ ಪೊಲೀಸರಿಗೆ ದೂರು ನೀಡಲಾಗಿದೆ. ಆಗ ಪೊಲೀಸರು ಅಪಘಾತದಲ್ಲಿ ಮೃತಪಟ್ಟ ಮಹಿಳೆ ಶವ ತೋರಿಸಿದ್ದಾರೆ. ಅದು ಶೈಲಜಾ ಅವರ ಎಂದು ಅಮಿತ್ ಗುರುತು ಹಿಡಿದಿದ್ದರು. ಶೈಲಜಾ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ ಎನ್ನಲಾಗಿತ್ತು. ಪೊಲೀಸರು ತನಿಖೆ ನಡೆಸಿದಾಗ ಮೃತದೇಹದ ಸುತ್ತ ಒಂದೇ ವಾಹನ ಪದೇ ಪದೇ ಹಾದು ಹೋಗಿರುವುದು ತಿಳಿದಿದೆ. ಬಳಿಕ ಶೈಲಜಾ ಅವರ ಕರೆ ದಾಖಲೆಗಳನ್ನು ಪರಿಶೀಲಿಸಿದಾಗ ಆರೋಪಿಯು ಕಿರುಕುಳ ನೀಡುತ್ತಿದ್ದುದು ತಿಳಿದುಬಂದಿದ್ದು, ಶಂಕಿತನನ್ನು ವಶಕ್ಕೆ ಪಡೆದಿದ್ದಾರೆ.