ಐತಿಹಾಸಿಕ ನಗರ ವಿಜಯಪುರದಲ್ಲಿ ನಾಡೇ ಬೆಚ್ಚಿಬೀಳುವಂತಹ ಘಟನೆ ನಡೆದಿದೆ. ಶಾಲಾಬಾಲಕಿಯನ್ನು ಗಾಂಜಾದ ಮತ್ತಿನಲ್ಲಿ ದುರುಳರು ಅತ್ಯಾಚಾರ ಮಾಡಿ ಕೊಂದುಹಾಕಿದ್ದಾರೆ. ವಿಪರ್ಯಾಸವೆಂದರೇ ಪರೇಶ್ ಮೇಸ್ತಾನ ಗೊಂದಲದ ಸಾವಿಗೆ ಕಠೋರ ಹೋರಾಟ ಮಾಡಿದವರು, ವಿಜಯಪುರದ ಕಡೆ ಮುಖ ಮಾಡಿಲ್ಲ. ಬೆಂಕಿ ಹಚ್ಚುವ ಹೇಳಿಕೆ ನೀಡಿದ ರಾಜಕಾರಣಿಗಳು ಸೊಲ್ಲೆತ್ತಿಲ್ಲ. ಅನ್ಯಕೋಮಿನವರು ಅಪರಾಧಿಗಳಾದರೇ ಮಾತ್ರವೇ ಹೋರಾಟದ ಜ್ವಾಲೆ ಹೊತ್ತಿಕೊಳ್ಳುತ್ತಾ ಎಂದು ಸೋಶಿಯಲ್ ಮೀಡಿಯಾದಲ್ಲಿ ದೊಡ್ಡ ಡಿಬೆಟ್ ನಡೆಯುತ್ತಿದೆ. ಮೇಲ್ನೋಟಕ್ಕೆ ಮಾತ್ರವಲ್ಲ, ವಾಸ್ತವದಲ್ಲೂ ಅದೇ ಸತ್ಯಸಂಗತಿ.
ಅವಳು ದಾನಮ್ಮ. ವಿಜಯಪುರದ ಮಲ್ಲಿಕಾರ್ಜುನ ಪ್ರೌಢಶಾಲೆಯಲ್ಲಿ ಒಂಬತ್ತನೇ ತರಗತಿಯ ವಿದ್ಯಾರ್ಥಿನಿ. ನಿನ್ನೆ ಮಂಗಳವಾರ ಮಧ್ಯಾಹ್ನ ಊಟಕ್ಕೆ ಮನೆಗೆ ಬಂದಿದ್ದಳು. ಊಟ ಮುಗಿಸಿಕೊಂಡು ಒಂದು ಮೂವತ್ತರ ಸುಮಾರಿಗೆ ವಾಪಾಸು ಶಾಲೆಗೆ ತೆರಳುವಾಗ ದಾರಿಮಧ್ಯೆ ಮೂರ್ನಾಲ್ಕು ಜನರಿದ್ದ ಆಟೋದಲ್ಲಿ ಅವಳನ್ನು ಅಪಹರಿಸಲಾಗುತ್ತದೆ. ಕೂಡಲೇ ಜೊತೆಗಿದ್ದ ಬಾಲಕಿ ಸ್ಕೂಲಿಗೆ ಹೋಗಿ ಈ ವಿಚಾರವನ್ನು ಶಿಕ್ಷಕರ ಗಮನಕ್ಕೆ ತರುತ್ತಾಳೆ. ಹುಡುಕಾಟ ಶುರುವಾಗುತ್ತದೆ. ಮಧ್ಯಾಹ್ನ ಒಂದು ಮೂವತ್ತಕ್ಕೆ ಈ ಘಟನೆ ನಡೆದಿತ್ತು. ಆ ಕ್ಷಣದಿಂದ ಹುಡುಕಾಡತೊಡಗಿದರು. ಮಧ್ಯಾಹ್ನ ಸುಮಾರು ಮೂರು ಮೂವತ್ತರ ಹೊತ್ತಿಗೆ ದರ್ಗಾದ ಹೊರವಲಯದ ಪೊದೆಗಳ ನಡುವೆ ಅಸ್ಥವ್ಯಸ್ಥ ಸ್ಥಿತಿಯಲ್ಲಿ, ತೀರಾ ಅಸ್ವಸ್ಥೆಯಾಗಿ ದಾನಮ್ಮ ಬಿದ್ದಿದ್ದಳು. ಕೂಡಲೇ ಅವಳನ್ನು ಸ್ಥಳೀಯ ಆಸ್ಪತ್ರೆಗೆ ಸೇರಸಲಾಯಿತು. ದಾನಮ್ಮ ಬದುಕಲಿಲ್ಲ. ವೈದ್ಯರು ಸ್ಪಷ್ಟವಾಗಿ ಹೇಳಿದ್ದರು ಇದು ಭಯಾನಕವಾದ ರೇಪ್ ಅಂಡ್ ಮರ್ಡರ್. ಮಾಡಿದವರು ಅದೇ ಬೀದಿಯ ಮಂಜುನಾಥ ನಗರದ ಗಾಂಜಾ ವ್ಯಸನಿ ಹುಡುಗರು.
ದಾನಮ್ಮನ ಜೊತೆಗಿದ್ದ ಹುಡುಗಿಯ ಹೇಳಿಕೆಯ ಮೇರೆಗೆ ಪೊಲೀಸರು ಸಾಗರ್, ಕೈಲಾಶ್ ಸೇರಿದಂತೆ ಮೂರ್ನಾಲ್ಕು ಮಂದಿಯನ್ನು ಎತ್ತಾಕಿಕೊಂಡು ಬಂದು ವಿಚಾರಣೆ ನಡೆಸುತ್ತಿದ್ದಾರೆ. ಆರೋಪಿಗಳು ಗಾಂಜಾದ ಮತ್ತಿನಲ್ಲಿ ಕೃತ್ಯವೆಸಗಿದ್ದಾರೆ ಎಂಬುದು ಫಸ್ಟ್ ರಿಪೋರ್ಟ್. ಯಾವುದೇ ಅಮಲಾದರೇನು..?- ಅಪ್ರಾಪ್ತೆಯನ್ನು ಹರಿದುಮುಕ್ಕಿದ್ದಾರೆ. ಹೆಣ್ಣುಮಕ್ಕಳಿಗೆ ಈ ವ್ಯವಸ್ಥೆ ಸೇಫಲ್ಲ ಎನ್ನುವುದು ಮತ್ತೆ ಖಾತ್ರಿಯಾಗಿದೆ. ಪೇಟಿಂಗ್ ಕೆಲಸ ಮಾಡುವ ಅಪ್ಪ ಹನುಮಂತ, ಇಬ್ಬರು ಮಕ್ಕಳನ್ನು ಕಷ್ಟಪಟ್ಟು ಸಾಕುತ್ತಿದ್ದ. ಕೈಗೆ ಬಂದ ಮಗಳು ಇಷ್ಟೊಂದು ಘೋರವಾಗಿ ಸಾವನ್ನಪ್ಪುತ್ತಾಳೆ ಎನ್ನುವುದು ಅರಗಿಸಿಕೊಳ್ಳಲು ಸಾಧ್ಯವೇ..?
ಈಗ ವಿಚಾರಕ್ಕೆ ಬನ್ನಿ. ಉತ್ತರ ಕನ್ನಡದ ಹೊನ್ನಾವರದಲ್ಲಿ ಎರಡು ಕೋಮಿನ ಯುವಕರ ವಾಹನಗಳು ಟಚ್ ಆಗಿ ಸಣ್ಣ ಪ್ರಮಾಣದ ಗಲಾಟೆಯಾಯಿತು. ರೋಡ್ ಆಕ್ಸಿಡೆಂಟ್ ಸಮಯದಲ್ಲಿ ಆಗುವದಕ್ಕಿಂತ ಸ್ವಲ್ಪ ದೊಡ್ಡ ಪ್ರಮಾಣದಲ್ಲಿ ಆದ ಗಲಾಟೆಯದು. ಅದಾದ ನಂತರ ಆ ರಾತ್ರಿ ಪರೇಶ್ ಮೇಸ್ತ ಎಂಬ ಬೆಸ್ತರ ಹುಡುಗನ ಶವ ಕೊಳದಲ್ಲಿ ತೇಲತೊಡಗಿತ್ತು. ಶವ ವೈದ್ಯಕೀಯ ಪರೀಕ್ಷೆಗೆ ಹೋಗುವ ಮುನ್ನವೇ ಮುಸಲ್ಮಾನರು ಹತ್ಯೆ ಮಾಡಿದರು ಎಂದು ಸಂಘ ಪರಿವಾರ ಹಾಗೂ ಬಿಜೆಪಿಯ ನಾಯಕರು ಬೀದಿಗಿಳಿದರು. ಇತಿಹಾಸದಲ್ಲಿ ಕಂಡು ಕೇಳರಿಯದ ಕೋಮುಸಂಘರ್ಷಕ್ಕೆ ಹೊನ್ನಾವರ, ಶಿರಸಿ ತುತ್ತಾಯಿತು. ಹಿಂದೂಗಳಿಗೆ ರಕ್ಷಣೆಯೇ ಇಲಲದಂತಾಗಿದೆ. ಜಿಹಾದಿ ಶಕ್ತಿಗಳು ರಕ್ತಪಾತ ನಡೆಸುತ್ತಿವೆ. ರಕ್ತಕ್ಕೆ ರಕ್ತವೇ ಉತ್ತರ ಎಂಬರ್ಥದಲ್ಲಿ ಪ್ರತಿಭಟನೆ ನಡೆಯಿತು. ಮಸೀದಿಗಳಿಗೆ ಕಲ್ಲು ತೂರಲಾಯಿತು. ಪೊಲೀಸ್ ಅಧಿಕಾರಿ ಹೇಮಂತ್ ನಿಂಬಾಳ್ಕರ್ ಕಾರಿಗೆ ಬೆಂಕಿ ಹಚ್ಚಲಾಯಿತು. ಅನಂತ್ ಕುಮಾರ್ ಹೆಗ್ಡೆ, ಶೋಭ ಕರಂದ್ಲಾಜೆಯಾದಿಯಾಗಿ ಅನೇಕರು ಬೀದಿಗೀಳಿದು ಹೋರಾಡಿದರು. ಶಿರಸಿಯಿಂದ ಶಿವಮೊಗ್ಗದ ಸಾಗರದ ಕಡೆ ಪ್ರತಿಭಟನೆಯ ಕಾವು ತಟ್ಟುತ್ತಿದೆ ಎನ್ನುವಷ್ಟರಲ್ಲಿ ರಾಜ್ಯ ಸರ್ಕಾರ ಪರೇಶ್ ಮೇಸ್ತ ಕೇಸನ್ನು ಸಿಬಿಐಗೆ ಒಪ್ಪಿಸಿತ್ತು. ಆದರೆ ಹೋರಾಟಗಾರರ ರಕ್ತ ತಣ್ಣಗಾಗಲಿಲ್ಲ.
ಕಾವ್ಯ ಹೆಸರಿನ ಶಾಲಾ ಬಾಲಕಿ ಕೈಗೆ ಗಾಯ ಮಾಡಿಕೊಂಡು ಆಸ್ಪತ್ರೆ ಸೇರಿದಳು. ಸ್ಕೂಲಿನಿಂದ ಬರುವಾಗ ಇಬ್ಬರು ಮುಸ್ಲಿಂ ಯುವಕರು ಚಾಕುವಿನಿಂದ ಕೈ ಕುಯ್ದರು ಎಂದಳು. ಅಷ್ಟೇ ಮತ್ತೆ ಉತ್ತರ ಕನ್ನಡದಲ್ಲಿ ಹಿಂದೂ ರಕ್ಷಕರು ಮೈಕೊಡವಿ ಎದ್ದುನಿಂತರು. ಜಿಹಾದಿಗಳು ಮಿತಿಮೀರುತ್ತಿದ್ದಾರೆ ಎಂದು ಬಿಜೆಪಿ ನಾಯಕರು ಯಥಾಪ್ರಕಾರ ಕಿಡಿನುಡಿದರು. ಆದರೆ ಕಡೆಗೆ ಪೊಲೀಸರ ಮುಂದೆ, ಈಶ್ವರ ನಾಯಕ್ ಎಂಬ ಹುಡುಗನ ಕಾಟ ಜಾಸ್ತಿಯಾಗಿದೆ. ಅದಕ್ಕಾಗಿ ನಿಂಬೆ ಮುಳ್ಳಿನಿಂದ ಕೈ ಕುಯ್ದುಕೊಂಡೆ ಎಂದಳು. ಹಾಗಾದರೇ ಆತುರಕ್ಕೆ ಬಿದ್ದು ಅನಗತ್ಯ ವಯೊಲೆನ್ಸ್ ಸೃಷ್ಟಿಸಿದವರು ಪಾಲಿಸಿದ್ದು ಯಾವ ಧರ್ಮ..? ಅವರಿಗೇನು ಶಿಕ್ಷೆ..? ಒಂದು ಸಮುದಾಯವನ್ನು ವಿರೋಧಿಸಲೇಬೇಕೆಂದುಕೊಂಡವರ ಒಳಮರ್ಮವೇನು..?
ಆದರೆ ಈ ಹಿಂದೂ ರಕ್ಷಕರು ಎನ್ನುವವರು ವಿಜಯಪುರದ ಕಡೆ ಸುಳಿದಿಲ್ಲ. ದಾನಮ್ಮನನ್ನು ಅತ್ಯಂತ ಕ್ರೂರವಾಗಿ ಅತ್ಯಾಚಾರವೆಸಗಿ ಕೊಂದರೂ ಇವರ ಆಕ್ರೋಶ ಹೊರಬಿದ್ದಿಲ್ಲ. ಏಕೆಂದರೇ ದಾನಮ್ಮನ ವಿಚಾರದಲ್ಲಿ ಮುಸ್ಲೀಂರ ಕೈವಾಡವಿಲ್ಲ. ಇದ್ದಿದ್ದರೇ ಹಿಂದೂ ರಕ್ಷಣೆಯ ಹೆಸರಿನಲ್ಲಿ ವಿಜಯಪುರಕ್ಕೆ ಬೆಂಕಿ ಬೀಳುತ್ತಿತ್ತು ಎನ್ನುವುದು ಸೋಶಿಯಲ್ ಮೀಡಿಯಾದಲ್ಲಿ ವ್ಯಕ್ತವಾಗುತ್ತಿರುವ ಆಕ್ರೋಶ. ತಪ್ಪನ್ನು ಧರ್ಮದ ಆಧಾರದಲ್ಲಿ ಲಾಭ ಮಾಡಿಕೊಳ್ಳುವ ಅನಿವಾರ್ಯತೆ ಸಂಘಗಳಿಗಿರಬಹುದೇನೋ..? ಆದರೆ ರಾಜಕೀಯ ಪಕ್ಷವೆನಿಸಿಕೊಂಡಿರುವ ಬಿಜೆಪಿಗೇನಾಗಿದೆ..? ಚುನಾವಣಾ ಹತ್ತಿರ ಬರುತ್ತಿದ್ದಂತೆ ಲಾಭದಾಯಕ ಅಂಶಗಳಿಗೆ ಮಹತ್ವ ಕೊಡುವ ಭರದಲ್ಲಿ ಸಮಾಜದ ಸಾಮರಸ್ಯ ಕದಡಿ ಕೋಮುಗಲಭೆಯನ್ನುಂಟು ಮಾಡುವುದು ಯಾವ ಶಾಸಂಕಾಂಗ ವ್ಯವಸ್ಥೆ..?
ದಲಿತರ ಮೇಲಿನ ಶೋಷಣೆಯ ವಿರುದ್ಧ ಧರ್ಮಸಂಸತ್‍ನಲ್ಲಿ ಹಿಂದೂ ಸಂಘಟನೆಗಳು ಧ್ವನಿಯೆತ್ತಿದ್ದವು. ಬಿಜೆಪಿ ಇದರ ಅಂಗಪಕ್ಷವಾಗಿದೆ. ಅತ್ತ ಕೇಂದ್ರ ಸರ್ಕಾರ ಕೂಡ ವಿಕಾಸದ ಮಾತನಾಡುತ್ತಿದೆ. ಎಲ್ಲಾ ಪಕ್ಷಗಳಲ್ಲಿರುವಂತೆ ಬಿಜೆಪಿಯಲ್ಲೂ ಫೈರ್‍ಬ್ರಾಂಡ್ ರಾಜಕಾರಣಿಗಳಿರಬಹುದು. ಉತ್ತರ ಭಾರತದ ಕೆಲ ರಾಜ್ಯಗಳ ಬಿಜೆಪಿಯಂತೆ ರಾಜ್ಯ ಬಿಜೆಪಿ ಕೋಮು ಸಂಗತಿಯಲ್ಲಿ ಅರ್ಜೆನ್ಸಿ ಮಾಡಿಕೊಂಡಿರುವುದು ಕಡಿಮೆ. ಆದರೆ ಹೊನ್ನಾವರದ ಗಲಭೆ ಪ್ರಶ್ನೆಗೀಡು ಮಾಡಿತ್ತು.
ಮೈಸೂರು ಗಲಭೆ, ಹೊನ್ನಾವರದ ಗಲಭೆಯ ನಂತರ ದೇಶದಾದ್ಯಂತ ವ್ಯಕ್ತವಾದ ವಿರೋಧಗಳಿಂದ ಬಿಜೆಪಿ ಯೂಟರ್ನ್ ತೆಗೆದುಕೊಂಡಿರುವುದು ಸ್ಪಷ್ಟವಾಗಿದೆ. ಸಿದ್ದರಾಮಯ್ಯನವರ ವಿಕಾಸ ಆಡಳಿತವನ್ನು ವಿಕಾಸದ ಮಂತ್ರದಿಂದವಷ್ಟೇ ಬೀಳಿಸಬೇಕೆಂಬ ನಿರ್ಣಯಕ್ಕೂ ಬಂದಿದೆ. ಹೀಗಾಗಿ ರಾಜ್ಯದ ಬಹುದೊಡ್ಡ ಸಮಸ್ಯೆಯಾದ ಮಹದಾಯಿ, ಕಾವೇರಿ ವಿವಾದವನ್ನು ಚುನಾವಣಾಪೂರ್ವ ಬಗೆಹರಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾಗಿದೆ. ಬಹುಶಃ ರಾಜ್ಯ ಬಿಜೆಪಿ ನಾಯಕರಿಗೂ ಧರ್ಮಾತೀತ ರಾಜಕಾರಣವನ್ನು ಬದಿಗಿಟ್ಟು, ವಿಕಾಸಮಂತ್ರ ಹೇಳುವಂತೆ ಕಿವಿಮಾತು ಹೇಳಬೇಕಿದೆ..!
ಏಕೆಂದರೇ ರಾಜ್ಯದಲ್ಲಿ ಉತ್ತರಭಾರತದ ಶೈಲಿಯ ರಾಜಕಾರಣದಿಂದ ದಲಿತರು, ಮುಸಲ್ಮಾನರ ಮತಗಳಿಗೆ ಕತ್ತರಿ ಬೀಳಬಹುದೆಂಬ ಆತಂಕವೂ ಇದೆ. ಹೀಗಾಗಿಯೇ ಕಾಂಗ್ರೆಸ್ ಎಪ್ಪತ್ತು ವರ್ಷಗಳಲ್ಲಿ ಮುಸಲ್ಮಾನರಿಗೆ, ದಲಿತರಿಗೆ ಏನು ಮಾಡಿದೆ ಎಂದು ಮೋದಿ ಕೇಳಿದ್ದರು. ನಿಜವಲ್ಲವೇ ಎಂದನಿಸಿದ್ದು ಸುಳ್ಳಲ್ಲ. ಹೀಗಾಗಿ ರಾಜಕಾರಣವನ್ನು ವಿಕಾಸದ ಕಡೆಗೆ ತಿರುಗಿಸುವ ಬಿಜೆಪಿ, ಸಂಘರ್ಷದ ಆಚೆಗೆ ನಿಲ್ಲಬೇಕಿದೆ. ಸಾಮಾಜಿಕ ಪಿಡುಗುಗಳನ್ನು ಲಾಭವಾಗಿ ಪರಿವರ್ತಿಸಿಕೊಳ್ಳುವ ಬದಲು ಅವನ್ನು ಮೆಟ್ಟಿ ನಿಂತು ಸಾಮಾಜಿಕ ನ್ಯಾಯದ ಮೂಲಕ ಮತದಾರರ ಮುಂದೆ ನಿಲ್ಲಬೇಕು.
ಅಂತರ್ಜಾಲದಲ್ಲಿ ಹೊನ್ನಾವರದ ಗಲಭೆ ದೊಡ್ಡಮಟ್ಟದ ಚರ್ಚೆಯಾಗುತ್ತಿರುವುದಕ್ಕೆ ಕಾರಣ ದಾನಮ್ಮನ ಸಂಗತಿಯಲ್ಲಿ ಬಿಜೆಪಿ ನಾಯಕರು ಯಾವುದೇ ರೀತಿಯ ಹೇಳಿಕೆಯನ್ನಾಗಲಿ, ಪ್ರತಿಭಟನೆಯನ್ನಾಗಲಿ ಮಾಡದಿರುವುದೇ ಆಗಿದೆ. ಪರೇಶ್ ಮೇಸ್ತ ಹಿಂದುಳಿದ ವರ್ಗದವನು, ದಾನಮ್ಮನೂ ಹಿಂದುಳೀದ ವರ್ಗದವಳೇ..? ಸಾಬೀತಾಗದ ಅನಿಸಿಕೆಯಲ್ಲಿ ಆರೋಪಿತರು ಬೇರೆ ಬೇರೆ ಕೋಮಿನವರು. ಅದರಲ್ಲೂ ದಾನಮ್ಮಳನ್ನು ಕ್ರೂರವಾಗಿ ಅತ್ಯಾಚಾರವೆಸಗಿ ಕೊಲ್ಲಲಾಗಿದೆ. ಕಾಂಗ್ರೆಸ್ ಆಡಳಿತದಲ್ಲಿ ಹೆಣ್ಣುಮಕ್ಕಳಿಗೆ ರಕ್ಷಣೆ ಇಲ್ಲ ಎಂಬದೂ ಟಾಪಿಕ್ ಆಗಬಹುದಿತ್ತು. ಹೊನ್ನಾವರಕ್ಕೆ ಸಿಡಿದವರು ವಿಜಯಪುರಕ್ಕೆ ಮರುಗದಿದ್ದಿದ್ದು ಒಪ್ಪಿಕೊಳ್ಳುವ ಸಂಗತಿಯೇ ಅಲ್ಲ.
ರಾಜನ ಆಶ್ವಾಸನೆಗಿಂತ ಸೈನ್ಯದ ನಡಾವಳಿಯೇ ಮುಖ್ಯವಾಗಿರುವುದರಿಂದ ಹಿಂದುಳಿದ ವರ್ಗ ಗಾವುದ ನಿಂತಿದೆ. ಮೇಸ್ತ, ದಾನಮ್ಮನಂತಹವರ ಸಂಗತಿಯಲ್ಲಿ ಬೆತ್ತಲಾಗುವುದರಿಂದ ಅವಿರತ ಮಾರಕಿವಾಗಿ ಪರಿಣಮಿಸುತ್ತದೆ. ಹೀಗಾಗಿ ಸಾಮಾಜಿಕ ಪಿಡುಗಿನ ವಿರುದ್ಧ ಶಾಸಕಾಂಗ ವ್ಯವಸ್ಥೆ ಪಕ್ಷಬೇಧ ಮರೆತು, ಹೋರಾಡಬೇಕಿದೆ. ದೇಶದ ಈ ದೊಡ್ಡ ವ್ಯವಸ್ಥೆಯ ಮೇಲೆ ಜನರ ಬದುಕು ನಿಲುವು ಅಡಕವಾಗಿರುತ್ತದೆ. ಹಾಗೆಯೇ ಧರ್ಮರಕ್ಷಕರಿಗೂ ಇಂತಹ ಪ್ರಕರಣಗಳಿಗೂ ಅಸಲಿಗೆ ಸಂಬಂಧವೇ ಇಲ್ಲ. ಇಲ್ಲಿ ದಲಿತ ಸಂಘಟನೆಗಳು ಹೆಚ್ಚು ಪ್ರಖರವಾಗಬೇಕು. ಸರ್ಕಾರದ ಕೊರಳಪಟ್ಟಿ ಹಿಡಿದು ಅನ್ಯಾಯದ ವಿರುದ್ಧ ಸಿಡಿಯಬೇಕು. ಅದೆಲ್ಲಕ್ಕಿಂತ ಹೆಚ್ಚಾಗಿ ಆಡಳಿತ ಹೆಣ್ಣುಮಕ್ಕಳ ರಕ್ಷಣೆಗೆ ಹೆಚ್ಚು ಒತ್ತುಕೊಡಬೇಕು. ಮನೆ ಬಿಟ್ಟ ಮಗಳು ಮನೆಗೆ ವಾಪಾಸಾಗುತ್ತಾಳಾ ಎಂಬ ಭರವಸೆ ಇಲ್ಲದಿದ್ದರೇ ಹೇಗೆ..? ಇದರ ಮಧ್ಯೆ ಅಸಹ್ಯ ರಾಜಕಾರಣ ಬೇರೆ..? ನಾನ್ಸೆನ್ಸ್.
ಆದರೆ ಇಲ್ಲಿ ಯಾರನ್ನೂ ದೂರಿ ಪ್ರಯೋಜನವಿಲ್ಲ. ಎಲ್ಲವೂ ಅವರವರಿಗೆ ಅರ್ಥವಾಗಬೇಕಿದೆ. ರಾಜಕೀಯ ಲಾಭಕೋರತನದಲ್ಲಿ ನಡೆದ ಅವಘಡಗಳು ಮರೆಯಾಗಬಾರದು. ಪರೇಶ್ ಮೇಸ್ತನ ಸಾವಿನ ತನಿಖೆ ಸಿಬಿಐ ನಡೆಸುತ್ತಿದೆ. ಅದು ಕೊಲೆಯಲ್ಲ, ಆಕಸ್ಮಿಕ ಸಾವೆಂದರೂ ನಂಬದ ಕಾರಣಕ್ಕೆ; ಸಿಬಿಐ ವರದಿಯವರೆಗೆ ಕಾದುನೋಡಬೇಕು. ಆದರೆ ಅದಕ್ಕೂ ಮುನ್ನ ಕಿಡಿ ಹಾಕುವ ವೈಪರಿತ್ಯಕ್ಕಷ್ಟೆ ನಮ್ಮ ವಿರೋಧ. ತೀರ್ಥಹಳ್ಳಿಯ ನಂದಿತಾ ಪ್ರಕರಣಕ್ಕಿಂತ ಉದಾಹರಣೆ ಬೇಕಿಲ್ಲ.
ಪರೇಶ್ ಮೇಸ್ತನ ತಂದೆಯ ಕಣ್ಣೀರಿನ ಬಗ್ಗೆ ವಾರಗಟ್ಟಳೇ ನಿಡುಸುಯ್ದವರು, ದಾನಮ್ಮನ ವಿಚಾರದಲ್ಲಿ ಆಕೆಯ ತಂದೆ ಹನುಮಂತನ ಕಂಬನಿಗೆ ಮರುಗಬೇಕು. ಒಂದೊಂದು ಹನಿ ಕಣ್ಣೀರಿಗೂ ಲೆಕ್ಕ ಸಿಗಬೇಕು. ಈಗ ದಾನಮ್ಮನನ್ನು ಗಾಂಜಾದ ಮತ್ತಿನಲ್ಲಿ ಕೆಡಿಸಿ ಕೊಂದಿದ್ದಾರೆ ಎಂಬುದು ಬಹಿರಂಗ ಸತ್ಯವಾಗಿರುವುದರಿಂದ, ಹಂತಕರ ಬಂಧನವೂ ಆಗಿರುವುದರಿಂದ ಯಾರೆಂಬ ಸಸ್ಪೆನ್ಸ್, ಥ್ರಿಲ್ಲಿಂಗ್ ಉಳಿದುಕೊಂಡಿಲ್ಲ. ಆದರೆ ಹಂತಕರು ಅನ್ಯಕೋಮಿನವರಲ್ಲ ಎಂಬ ಕಾರಣಕ್ಕೆ ಇಂತಹ ಗಲಭೆಗೆ ಮುಂಚೂಣಿಯಲ್ಲಿರುವವರು ಸೈಲೆಂಟಾಗಿದ್ದಕ್ಕೆ ವಿರೋಧ. ಹಾಗೆಯೇ ಇಲ್ಲಿ ಗಾಂಜಾ ಸರಬರಾಜು ಮಾಡುವವರನ್ನು ಬೆಂಡೆತ್ತದ ಹೊರತು ಅಮಲು ಇನ್ನಷ್ಟು ಅಪಾಯವನ್ನು ಮಾಡಿಬಿಡುತ್ತದೆ.
ಯಾವುದೇ ಸಾವುಗಳು ರಾಜಕೀಯಕ್ಕೆ ದಾಳವಾಗಬಾರದು. ಅಧಿಕಾರಕ್ಕೆ ಐದು ವರ್ಷದ ವ್ಯಾಲಿಡಿಟಿ ಇರುತ್ತದೆ. ಸತ್ತವರು ಐದು ವರ್ಷದ ಮೇಲೆ ಎದ್ದುಬರುವ ನಿದರ್ಶನಗಳಿಲ್ಲ. ಬದುಕಿದ್ದವರು ಹಾಗೂ ಸತ್ತವರ ಮಧ್ಯೆ ಒದ್ದಾಡುವ ಪ್ರಮೇಯ ಬರಬಾರದು. ಆಕ್ರೋಶ ಹಾಗೂ ಸಾವಿನ ಮಧ್ಯೆ ಹೈರಾಣಾಗುವವರ ಆತಂಕವೂ ಬೇಕಿಲ್ಲ. ಯಾರೇ ಆಗಲೀ, ಅನ್ಯಾಯವನ್ನು ಕಠೋರವಾಗಿ ಖಂಡಿಸಲೇಬೇಕು. ಧರ್ಮಗಳು ಇಲ್ಲಿ ಗಣನೆಗೆ ಬರಬಾರದು.
ದಾನಮ್ಮನ ಸಾವಿಗೆ ನ್ಯಾಯ ಸಿಗಬಹುದು. ಹಂತಕರಿಗೆ ಶಿಕ್ಷೆಯಾಗಬಹುದು. ಮೇಸ್ತನಿಗೆ ಪ್ರತಿಭಟಿಸಿದವರು ದಾನಮ್ಮನಿಗೆ ಸಿಡಿಯಲಿಲ್ಲ ಎಂಬುದು ಅಸಲಿಗೆ ಮ್ಯಾಟರ್ರೇ ಅಲ್ಲ. ಇದರಿಂದ ಏನೂ ಪ್ರಯೋಜನವಿಲ್ಲ. ಸತ್ತವರು ಬದುಕಿ ಬರುವುದಿಲ್ಲ. ಬದಲಿಗೆ ಇಂತಹ ಘಟನೆಗಳು ನಡೆಯದಂತೆ, ಹೆಣ್ಣುಮಕ್ಕಳಿಗೆ ಇನ್ನಷ್ಟು ಭದ್ರತೆ ಒದಗಿಸುವ ಕೆಲಸವಾಗಬೇಕಿದೆ. ಮನೆಯಿಂದ ಹೊರಗೆ ಕಾಲಿಟ್ಟ ಹೆಣ್ಣು ಸೇಫಾಗಿ ವಾಪಾಸಾಗುತ್ತಾಳೆ ಎನ್ನುವುದಕ್ಕೆ ಕಠೋರ ಕಾನೂನಿನ ಅಗತ್ಯವಿದೆ. ಭಾರತದ ನ್ಯಾಯಾಂಗ ವ್ಯವಸ್ಥೆ ಈ ವಿಚಾರದಲ್ಲಿ ಇನ್ನಷ್ಟು ಕಠಿಣವಾಗಬೇಕು. ದಾನಮ್ಮನನ್ನು ಕೆಡಿಸಿಕೊಂದವರಲ್ಲಿ ಅಪ್ರಾಪ್ತರಿದ್ದರು ಎಂಬ ವಿಚಾರವಿರುವುದರಿಂದ, ದೆಹಲಿಯ ನಿರ್ಭಯ ಪ್ರಕರಣದಲ್ಲಿ ಅಪ್ರಾಪ್ತ ಬಿಡುಗಡೆಯಾಗಿ ಹೊರಬಂದಂತಹ ದೃಷ್ಠಾಂತಗಳಿರುವುದರಿಂದ- ಆ ನಿಟ್ಟಿನಲ್ಲಿ ಮಾರ್ಪಾಡಾಗಬೇಕಿದೆ. ನ್ಯಾಯಾಂಗದ ಮಾರ್ಪಾಡು ಶಾಸಕಾಂಗ ಮಾಡಬೇಕು. ಅತ್ತ ಗಮನಹರಿಸುವ ಬದಲು ರಾಜಕೀಯ ಲಾಭವನ್ನಷ್ಟೆ ಯೋಚಿಸುವುದು ಸರಿಯಲ್ಲ. ಸಾರೀ.. ದಾನಮ್ಮ.