ಹಾಡಿನ ಜಾಡು ಹಿಡಿದು….
||ಸಂಗೀತಕ್ಕೆ ಮನಸೋಲದೇ ಇರೋರು ಇದ್ದಾರ? ಖಂಡಿತಾ ಇಲ್ಲ…! ಕೆಲವು ಸಿನಿಮಾ ಹಾಡುಗಳನ್ನಂತು ಪದೇ ಪದೇ ಗುನುಗುತ್ತಿರುತ್ತೇವೆ. ಕೆಲವೊಂದು ಹಾಡುಗಳಿಗೆ ಕೇಳುಗರಾದ ನಾವು-ನೀವು ನಮ್ಮದೇ ಆದ ಅರ್ಥ ಕಂಡುಕೊಂಡಿರುತ್ತೇವೆ. ಆದರೆ, ಎಷ್ಟೋ ಹಾಡುಗಳ ಬಗ್ಗೆ ನಾವು ಅಂದುಕೊಂಡಿರೋದೇ ಬೇರೆ, ರಚನೆಕಾರರು ಬರೆಯುವಾಗ ಕಲ್ಪಿಸಿಕೊಂಡಿರೋದೇ ಬೇರೆ ಆಗಿರುತ್ತೆ..!
ನಾವಿಲ್ಲಿ ಕೆಲವೊಂದು ಕನ್ನಡ ಹಾಡುಗಳ ಹುಟ್ಟಿನ ಮೂಲ ಮತ್ತು ರಚನೆಗಾರರು ಯಾವ ಅರ್ಥದಲ್ಲಿ ಬರೆದಿದ್ದಾರೆ ಎಂಬುದನ್ನು ಹೇಳುವ ಪ್ರಯತ್ನ ಮಾಡುತ್ತಿದ್ದೇವೆ…||
ಭಾಗ-6
ದೇವರ ಕಣ್ಣು
ನಿನ್ನ ನೀನು ಮರೆತರೇನು ಸುಖವಿದೆ..? ತನ್ನತನವ ತೊರೆದರೇನು ಸೊಗಸಿದೆ, ಅರ್ಥಗರ್ಭಿತ ಸಾಲುಗಳು, ಅದಕ್ಕೆ ಇಂಪಾದ ಸಂಗೀತ, ಜೊತೆಗೆ ಬೇಸ್ ವಾಯ್ಸ್. ಇದೆಲ್ಲ ಇದ್ಮೇಲೆ ಹಾಡು ಸೂಪರ್ ಡೂಪರ್ ಹಿಟ್ ಆಗೊದ್ರಲ್ಲಿ ಡೌಟಿಲ್ಲ ಅಲ್ವಾ..? ಕೋಪ ಮಾಡ್ಕೊಂಡಿರೊ ಗೆಳೆಯ ಅಥವಾ ಗೆಳತಿಯನ್ನ ರಮಿಸೋಕೆ ಅಂತಲೇ ಬರೆದಂತಿರೋ ಈ ಹಾಡು ಹುಟ್ಟಿದ್ದು ಯಾವುರೋ ರೊಮ್ಯಾಂಟಿಕ್ ಮೂಡಲ್ಲಿದ್ದಾಗ ಅಂದ್ಕೊಂಡ್ರ?
ಆಗಿನ ಕಾಲದಲ್ಲಿ ಟಾಪ್ ಗೀತರಚನೆಕಾರರಲ್ಲಿ ಒಬ್ಬರಾಗಿದ್ದ ಚಿ.ಉದಯಶಂಕರ್ ಅವ್ರು ಟಿ.ಜಿ ಲಿಂಗಪ್ಪ ಅವ್ರ ಸಂಗೀತಕ್ಕೆ ಸುಮಧುರ ಗೀತೆಯನ್ನ ರಚಿಸಬೇಕಾಗಿತ್ತು. ಹಾಡನ್ನೇನೋ ಬರೆದಿದ್ರೂ ಆದ್ರೂ ಉದಯಶಂಕರ್‍ಗೆ ಹಾಡಿನ ಬಗ್ಗೆ ಸಮಾಧಾನ ಇರ್ಲಿಲ್ಲ. ಹಾಡಿನ ರೀ ರೆಕಾರ್ಡಿಂಗ್ ಟೈಮಲ್ಲಿ ಬಂದು ಸರ್ ನಾನು ಬೇರೆ ಸಾಹಿತ್ಯವನ್ನ ಬರೆದು ಕೊಡ್ತೀನಿ. ಟ್ಯೂನ್ ಮಾಡ್ತೀರಾ ಅಂದು ಬಿಟ್ರು. ಅದಕ್ಕೆ ಲಿಂಗಪ್ಪ ಅವ್ರು, ನೋಡು ತಮ್ಮ ನೀನು ಐದು ನಿಮಿಷದಲ್ಲಿ ಬರೆದು ಕೊಟ್ರೆ, ನಾನೂ ಐದೇ ನಿಮಿಷದಲ್ಲಿ ಟ್ಯೂನ್ ಹಾಕ್ತೀನಿ ಅಂತ ಚಾಲೆಂಜ್ ಹಾಕಿದ್ರು. ಇದೇ ಯೋಚನೆಯಲ್ಲೇ ಟಾಯ್ಲೆಟ್‍ಗೆ ಹೋದ ಉದಯಶಂಕರ್, ಬೆಳಗಿನಿಂದ ತಾವು ಟಾಯ್ಲೆಟ್‍ಗೆ ಹೋಗಿಲ್ಲ ಅನ್ನೋದು ಆಗ ನೆನಪಿಗೆ ಬಂತಂತೆ.
ಆಗ ತಮ್ಮಷ್ಟಕ್ಕೆ ತಾವೇ ನಕ್ಕು, ನನ್ನನ್ನು ನಾನೆ ಮರೆತೆ ಇವತ್ತು, ಇದ್ರಲ್ಲಿ ಯಾವ ಸುಖವಿದೆ ಅಂದುಕೊಂಡ್ರಂತೆ. ಹಾಗೇ ಅದೇ ಸ್ವಾರಸ್ಯಕರವಾದ ಸಾಲನ್ನೇ ಗುನುಗಿಕೊಮಡು ಬಂದ ಉದಯಶಂಕರ್ ಎರಡೇ ನಿಮಿಷದಲ್ಲಿ ಹಾಡಿನ ಸಾಲನ್ನು ಬರೆದು ಲಿಂಗಪ್ಪನವ್ರ ಕೈಗೆ ಇಟ್ರಂತೆ. ಚಾಲೆಂಜ್ ಮಾಡಿದಂತೆ ಲಿಂಗಪ್ಪನವರೂ ಐದೇ ನಿಮಿಷದಲ್ಲಿ ಟ್ಯೂನ್ ಮಾಡಿದ್ರು. ಆಶ್ಚರ್ಯ ಪಡೋ ವಿಷ್ಯ ಅಂದ್ರೆ, ಟಾಯ್ಲೆಟ್ ಅಂದ ತಕ್ಷಣ ನಾವು ಮೂಗು ಮುಚ್ಚಿಕೊಂಡು ಎರಡು ನಿಮಿಷ ಇದ್ದು ಬರೋ ಜಾಗದಲ್ಲೇ ಕಾಣದ ಗೆಳತಿಯ ನೆನಪಿಗೆ ಜಾರಿ ಹೋಗಿದ್ರು ಉದಯಶಂಕರ್.