ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ನಡುವಿನ ಅಸಹನೆಗೆ ಬೆಂಕಿ ಬಿದ್ದಿದೆ ಎಂದು ಬಿಜೆಪಿ ಟೀಕಿಸಿದೆ. ಈ ಸಂಬಂಧ ಬೆಂಗಳೂರಿನಲ್ಲಿ ಟ್ವೀಟ್ ಮಾಡಿರುವ ಬಿಜೆಪಿ, ರಾಹುಲ್ ಗಾಂಧಿ ನಿರ್ದೇಶನದಂತೆ ಡಿಕೆಶಿ ಎಲ್ಲರೆದುರು ಸಿದ್ದರಾಮಯ್ಯ ಅವರನ್ನು ಅಪ್ಪಿಕೊಂಡರು. ಆದರೆ, ಒಪ್ಪಿಕೊಂಡಿಲ್ಲ ಎನ್ನುವುದು ಮತ್ತೆ ಸಾಬೀತಾಗಿದೆ. ಸಿದ್ದರಾಮಯ್ಯ ಹಾಗೂ ಡಿಕೆಶಿ ನಡುವಿನ ಅಸಹನೆಗೆ ಬೆಂಕಿ ಬಿದ್ದಿದೆ, ನಿಜ ಬಣ್ಣ ಬಯಲಾಗುತ್ತಿದೆ’ ಎಂದು ಕುಟುಕಿದೆ. ಯಾರ ಹುಟ್ಟುಹಬ್ಬದ ಸಂಭ್ರಮದಲ್ಲೂ ಭಾಗಿಯಾಗದ ಗಾಂಧಿ ಕುಟುಂಬ ನನ್ನ ಹುಟ್ಟು ಹಬ್ಬಕ್ಕೆ ಬಂದಿದ್ದಾರೆ ಎಂದು ಬೀಗುತ್ತಿದ್ದ ಸಿದ್ದರಾಮಯ್ಯ ಅವರಿಗೆ ಈಗ ನಿರಾಸೆಯಾಗಿದೆ. ಸಿದ್ದರಾಮಯ್ಯ ಬೇಡಿಕೆಗಳಿಗೆ ರಾಹುಲ್ ಗಾಂಧಿಯ ದಿವ್ಯ ಮೌನದ ಉತ್ತರ ನೀಡುತ್ತಿದ್ದಾರೆ. ರಾಹುಲ್ ಮೌನದ ಹಿಂದೆ ಡಿಕೆಶಿ ಅವರ ಕೈವಾಡವಿದೆಯೇ?’ ಎಂದು ಬಿಜೆಪಿ ಪ್ರಶ್ನಿಸಿದೆ.
ಕಾಂಗ್ರೆಸ್ ಹಮ್ಮಿಕೊಂಡಿರುವ ಸ್ವಾತಂತ್ರೋತ್ಸವದ ಅಮೃತ ಮಹೋತ್ಸವ ಪಾದಯಾತ್ರೆ ಕಾರ್ಯಕ್ರಮದಲ್ಲಿ ಸಿದ್ದರಾಮಯ್ಯ ಅವರನ್ನು ಹೊರಗಿಡಲಾಗುತ್ತಿದೆಯೇ? ಅಥವಾ ಪಕ್ಷದಿಂದಲೇ ನಡೆಯುವ ಕಾರ್ಯಕ್ರಮಕ್ಕೆ ಸಿದ್ದರಾಮಯ್ಯ ಅತಿಥಿಯೇ?’ ಎಂದು ಬಿಜೆಪಿ ಲೇವಡಿ ಮಾಡಿದೆ.