ಇವತ್ತು ವಿಶ್ವಮಾನವ ಅಂಬೇಡ್ಕರ್ ಅವರ ನೂರ ಇಪ್ಪತ್ತೈದನೆ ಜನ್ಮದಿನ. ಯಾವ ಅಸ್ಪೃಶ್ಯತೆಯ ವಿರುದ್ಧ ಅವರು ಹೋರಾಡಿದ್ದರೋ, ಯಾವ ದಲಿತರ ವಿರುದ್ಧ ನಡೆಯುತ್ತಿದ್ದ ಶೋಷಣೆಗಳ ವಿರುದ್ಧ ಧ್ವನಿಯೆತ್ತಿದರೋ- ಇವತ್ತು ಅದೇ ಸಮುದಾಯದ ಮೀಸಲಾತಿ ಹಕ್ಕಿಗೆ ಭಂಗ ತರುವ ಪ್ರಯತ್ನವಾಗುತ್ತಿದೆ. ಇತ್ತೀಚೆಗೆ ದೇಶದಲ್ಲಿ ಮೀಸಲಾತಿಗಾಗಿ ಪ್ರಬಲ ಸಮುದಾಯದವರು ನಡೆಸುತ್ತಿರುವ ಹೋರಾಟ ಅದೆಷ್ಟು ಅಳತೆ ಮೀರಿದೆ ಎಂಬುದು ಎಲ್ಲರಿಗೂ ಗೊತ್ತಿದೆ. ಅಧಿಕಾರಕ್ಕೇರಲು ಅನೇಕ ಸರ್ಕಾರಗಳು ಸುಳ್ಳು ಆಶ್ವಾಸನೆಗಳನ್ನು ಕೊಟ್ಟಿದ್ದೇ ಈಗ ದೊಡ್ಡದಾಗುತ್ತಿದೆ. ಇದ್ದಬಿದ್ದವರೆಲ್ಲಾ ನಮಗೂ ಮೀಸಲಾತಿ ಕೊಡಿ ಎಂದು ಸರ್ಕಾರದ ಕಾಲರ್ ಹಿಡಿದು ಕೇಳುತ್ತಿದ್ದಾರೆ. ಜಾಟರು, ಕಾಪು ಜನಾಂಗದವರು, ಪಟೇಲರು, ರಜಪೂತರೆಲ್ಲಾ ನಮಗೆ ಮೀಸಲಾತಿ ಕೊಡಿ ಎಂದು ಬೀದಿಗಿಳಿದಿದ್ದಾರೆ. ಜಾಟರು ಕೊಟ್ಟ ಗಡುವ ಮುಗಿದು ಮುಂದಿನ ದಿನಗಳಲ್ಲಿ ದೊಡ್ಡಮಟ್ಟದ ರಕ್ತಸಿಕ್ತ ಹೋರಾಟದ ಆತಂಕವಿದೆ. ಹೀಗಿರುವಾಗಲೇ ಅನುಮಾನವೊಂದು ಹುಟ್ಟಿಕೊಂಡಿತ್ತು. ಇದುವರೆಗೆ ಮೀಸಲಾತಿ ಪಡೆಯುತ್ತಿದ್ದ ದಲಿತರ ಮೀಸಲಾತಿಯನ್ನು ತಪ್ಪಿಸಲು ಮೇಲ್ವರ್ಗದವರು ಪಿತೂರಿ ನಡೆಸುತ್ತಿದ್ದಾರೆ ಎಂಬ ಅನುಮಾನ.
ಉದ್ಯೋಗ, ಶಿಕ್ಷಣದಲ್ಲಿ ದಲಿತರಿಗೆ ನಮ್ಮ ದೇಶದಲ್ಲಿ ಮೀಸಲಾತಿಯಿದೆ. ಅವರಿಗೆ ಸಿಗುವ ಮೀಸಲಾತಿ ನಮಗೂ ಸಿಗಬೇಕು ಎಂದು ದೇಶದ ಪ್ರಬಲ ಜನಾಂಗವೆಂದು ಗುರುತಿಸಿಕೊಂಡಿರುವ ಐದು ಜನಾಂಗದವರು ಹೋರಾಟ ನಡೆಸುತ್ತಿದ್ದಾರೆ. ಇದಕ್ಕೆ ಸಂಬಂಧಪಟ್ಟಂತೆ ಹಲವಾರು ಪ್ರತಿಭಟನೆಗಳು ನಡೆದಿವೆ. ಪ್ರತಿಭಟನೆ ಹಿಂಸಾರೂಪವನ್ನು ಪಡೆದುಕೊಂಡಿವೆ. ಹತ್ತಿರತ್ತಿರ ಐವತ್ತು ಮಂದಿ ಬಲಿಯಾಗಿದ್ದಾರೆ. ಆದರೆ ಪ್ರಬಲ ಜನಾಂಗದವರ ಹೋರಾಟದ ಹಿಂದೆ ಸರ್ಕಾರದ ಮಹತ್ವಾಕಾಂಕ್ಷೆ, ಪಿತೂರಿ ಇದೆ ಎನ್ನಲಾಗುತ್ತಿದೆ. ಆ ಮೂಲಕ ಯಾರಿಗೂ ಮೀಸಲಾತಿ ಬೇಡ ಎಂದು ಸರ್ಕಾರ ಅಂತಿಮ ನಿರ್ಧಾರಕ್ಕೆ ಬರುವ ಪ್ರಯತ್ನವಿದು ಎಂದು ಆರೋಪಿಸಲಾಗುತ್ತಿದೆ. ಆದರೆ ಇವೆಲ್ಲ ಆರೋಪ ಮಾಡಿದಷ್ಟು ಸುಲಭವಲ್ಲ ಎಂಬುದೇ ಸತ್ಯ. ಮೀಸಲಾತಿ ತೆಗೆದ ಕೂಡಲೆ ದಲಿತರನ್ನು ಸುಮ್ಮನೇ ಕೂರುತ್ತಾರೆ ಎನ್ನುವುದು ಅತೀದೊಡ್ಡ ಸುಳ್ಳು.
ಇತ್ತೀಚೆಗೆ ಅಂಬೇಡ್ಕರ್ ರಾಷ್ಟ್ರೀಯ ಸ್ಮಾರಕ ಭವನದ ಶಿಲಾನ್ಯಾಸ ನೆರವೇರಿಸಿದ ನರೇಂದ್ರ ಮೋದಿ, `ದಲಿತರಿಗೆ ನೀಡಿರುವ ಮೀಸಲಾತಿ ಹಕ್ಕನ್ನು ಯಾವುದೇ ಕಾರಣಕ್ಕೂ ಕಸಿದುಕೊಳ್ಳುವುದಿಲ್ಲ. ಈ ಹಿಂದೆ ವಾಜಪೇಯಿ ಅವರು ಪ್ರಧಾನಿಯಾಗಿದ್ದಾಗ ಇದೇ ರೀತಿಯ ಕಮೆಂಟ್ ಮಾಡಲಾಗಿತ್ತು. ದಲಿತರಿಗೆ ಅನ್ಯಾಯವಾಗುತ್ತದೆ ಎಂದು ಹೇಳಲಾಗಿತ್ತು. ಆದರೆ ವಾಜಪೇಯಿ ಎರಡೆರಡು ಬಾರಿ ಪ್ರಧಾನಿಯಾಗಿದ್ದರು. ಯಾವತ್ತು ಅವರು ದಲಿತರಿಗೆ ತೊಂದರೆ ಕೊಟ್ಟಿಲ್ಲ. ನನ್ನ ಅವಧಿಯಲ್ಲೂ ದಲಿತರಿಗೆ ಅನ್ಯಾಯವಾಗುವುದಿಲ್ಲ’ ಎಂದು ಹೇಳಿದ್ದರು. ಇದರ ಜೊತೆಗೆ ಅಂಬೇಡ್ಕರ್ ಅವರನ್ನು ದಲಿತ ನಾಯಕ ಎಂದು ಬಿಂಬಿಸಲಾಗುತ್ತಿದೆ. ಆದರೆ ಅವರು ಯಾವುದೇ ಒಂದು ವರ್ಗಕ್ಕೆ ಸೇರಿದವರಲ್ಲ. ಅವರು ವಿಶ್ವಮಾನವ. ಎಲ್ಲರಿಗೂ ಎಲ್ಲಾ ಕಾಲಕ್ಕೂ ಸಲ್ಲುವವರು ಎಂದರು. ಅಂಬೇಡ್ಕರ್ ಅವರನ್ನು ವಿಶ್ವಮಾನವ ಎಂದು ಕರೆದ ನರೇಂದ್ರ ಮೋದಿಯವರ ಮಾತಿನಲ್ಲಿ ಅಕ್ಷರಶಃ ಸತ್ಯವಿದೆ. ಈ ದೇಶದಲ್ಲಿ ಮೇಲು, ಕೀಳೆಂಬ ಭಾವನೆಗಳೇ ಬೇಕಾಗಿಲ್ಲ. ಎಲ್ಲರೂ ಒಂದೇ ಎಂಬರ್ಥದಲ್ಲಿ ಮಾತಾಡಿದ್ದು ಎಲ್ಲರ ಮೆಚ್ಚುಗೆಗಳಿಸಿದ್ದು ಸುಳ್ಳಲ್ಲ.
ಸುಪ್ರಿಂ ಕೋರ್ಟ್ ಖಂಡಾತುಂಡವಾಗಿ ಕೆಲವು ಪ್ರಬಲ ಸಮುದಾಯಗಳಿಗೆ ಮೀಸಲಾತಿ ಕೊಡಲಾಗುವುದಿಲ್ಲ ಎಂದರೂ, ಈ ದೇಶದಲ್ಲಿ ಮೀಸಲಾತಿ ಹೋರಾಟಗಳು ನಡೆಯುತ್ತಿವೆ. ಹಿಂಸಾತ್ಮಕ ಹೋರಾಟಕ್ಕೆ ಬೇಸತ್ತು ಸರ್ಕಾರ ಬೇಡಿಕೆ ಈಡೇರಿಸುವ ಭರವಸೆ ಕೊಡುತ್ತದೆ. ಇಂತಹ ಹಲವು ಹೋರಾಟಗಳಲ್ಲಿ ಇತ್ತೀಚೆಗೆ ಭಾರಿ ಸದ್ದು ಮಾಡಿದ್ದು ಹರ್ಯಾಣದ ಜಾಟ್ ಸಮುದಾಯದ ಹೋರಾಟ. ಒಂದು ಹಂತದಲ್ಲಿ ವಿಕೋಪಕ್ಕೆ ಹೋಗಿ ಸಾವುನೋವುಗಳಿಗೆ ಕಾರಣವಾಯಿತು. ಆಸ್ತಿಪಾಸ್ತಿ ನಷ್ಟವಾಯಿತು. ಇದೀಗ ಜಾಟರು ಮೀಸಲಾತಿಯ ಕುರಿತು ಮಾರ್ಚ್ ಹದಿನೆಂಟಕ್ಕೆ ಸರ್ಕಾರಕ್ಕೆ ಕೊಟ್ಟ ಗಡುವು ಮುಗಿದಿದೆ. ಸರ್ಕಾರ ನಮ್ಮ ಬೇಡಿಕೆಯನ್ನು ಈಡೇರಿಸಿಲ್ಲ ಎಂದು ಹೋರಾಟಕ್ಕೆ ಸಜ್ಜಾಗಿದೆ. ಈ ಹಿಂದೆ ನಡೆದಿದ್ದ ಹಿಂಸಾತ್ಮಕ ಹೋರಾಟದಲ್ಲಿ ಹತ್ತೊಂಬತ್ತು ಮಂದಿ ಸಾವಿಗೀಡಾಗಿ, ನೂರಾರು ಕೋಟಿ ಆಸ್ತಿಪಾಸ್ತಿ ನಷ್ಟವಾಗಿತ್ತು. ಹೆದರಿದ ಸರ್ಕಾರ ಜಾಟರ ಬೇಡಿಕೆಯನ್ನು ಈಡೇರಿಸುವುದಾಗಿ ಭರವಸೆ ಕೊಟ್ಟಿತ್ತು. ಹಾಗಾಗಿ ಜಾಟ್ ಸಮುದಾಯದವರು ಸರ್ಕಾರಕ್ಕೆ ಮಾರ್ಚ್ ಹದಿನೆಂಟರ ಗಡುವು ವಿಧಿಸಿತ್ತು. ಆದರೆ ಇದೀಗ ಸರ್ಕಾರ ಮಾತು ತಪ್ಪಿದೆ ಎಂದು ದೊಡ್ಡಮಟ್ಟದ ಹೋರಾಟಕ್ಕೆ ಜಾಟರು ಸಿದ್ದವಾಗಿದ್ದಾರೆ.
ಈ ಮೀಸಲಾತಿಯ ವಿಚಾರಕ್ಕೆ ಬರುವುದಾದರೇ, ದೇಶದಲ್ಲಿ ಪ್ರಬಲ ಸಮುದಾಯಗಳಾದ, ಮೀಸಲಾತಿಗಾಗಿ ಬೀದಿಗಿಳಿದಿರುವ ಪಟೇಲ್, ಕಾಪು, ಗುಜ್ಜರ್, ಜಾಟ್- ಇವರ್ಯಾರು ತೀರಾ ಹಿಂದುಳಿದವರಲ್ಲ. ಆರ್ಥಿಕವಾಗಿ ಬಲಿಷ್ಠರಾಗಿದ್ದಾರೆ. ಆದರೂ ಅವರಿಗೆ ಮೀಸಲಾತಿ ಬೇಕು. ಇಂತಹ ಒಬಿಸಿ ಮಹತ್ವಾಕಾಂಕ್ಷೆಗಳು ಅವರಲ್ಲಿ ಮೊಳಕೆಯೊಡೆಯುವುದಕ್ಕೆ ಕಾರಣ ರಾಜಕಾರಣ. ಎಲ್ಲಾ ಪಕ್ಷದವರು ಅಧಿಕಾರಕ್ಕಾಗಿ ಒಂದಲ್ಲ ಒಂದು ಸಂದರ್ಭದಲ್ಲಿ ಮೀಸಲಾತಿ ಭರವಸೆಗಳ ಸುರಿಮಳೆಯನ್ನೇ ಸುರಿಸಿ ಅಧಿಕಾರಕ್ಕೇರಿದ ನಂತರ ಸುಮ್ಮನಾದರು. ಅದರ ಪರಿಣಾಮವೇ ಪ್ರತಿಭಟನೆ, ಹೋರಾಟ, ಹಿಂಸಾಪ್ರವೃತ್ತಿ. ಈ ದೇಶ ಸುಧಾರಿಸುವ ಲಕ್ಷಣಗಳೇ ಕಾಣಿಸುತ್ತಿಲ್ಲ. ಅಷ್ಟಕ್ಕೂ ಯಾವ ಕಾರಣಕ್ಕಾಗಿ ನಿಮಗೆ ಮೀಸಲಾತಿ ಕೊಡಬೇಕು ಎಂಬ ಪ್ರಶ್ನೆಗೆ ಇವರ್ಯಾರ ಬಳಿಯೂ ಉತ್ತರವಿಲ್ಲ. ಮೀಸಲಾತಿ ನೀಡಿ ತಮ್ಮ ಸಮುದಾಯವನ್ನು ಮೇಲೆತ್ತಬೇಕಾದ ಸನ್ನಿವೇಶ ವರ್ತಮಾನದಲ್ಲಿ ಇದೆಯೇ ಎಂಬ ಪ್ರಶ್ನೆಗೂ ಅವರು ಉತ್ತರ ಕೊಡುವ ಸ್ಥಿತಿಯಲ್ಲಿಲ್ಲ. ತಮ್ಮ ಜನಬಲವನ್ನು, ಹಣಬಲವನ್ನು ಮುಂದಿಟ್ಟುಕೊಂಡು ಅವರು ಸರ್ಕಾರವನ್ನು ಬ್ಲಾಕ್ ಮೇಲ್ ಮಾಡುತ್ತಿದ್ದಾರಾ..? ಖಡಾಖಂಡಿತವಾಗಿ ಹೌದು ಎಂದು ಹೇಳುವುದು ಕಷ್ಟ. ಆದರೆ ಮೇಲ್ವರ್ಗದ ಈ ಚಳುವಳಿಯ ಹಿಂದೆ ರಾಜಕೀಯ ದುರುದ್ದೇಶವಿದೆ ಎಂಬುದೇ ಹಕೀಕತ್ತಾಗಿದೆ. ಗುಟ್ಟಾಗಿ ಕೆಲ ಪ್ರಬಲ ಸಂಘಟನೆಗಳು ಬೆಂಬಲ ನೀಡುತ್ತಿರುವುದೂ ಮಾಧ್ಯಮಗಳಲ್ಲೇ ಚರ್ಚೆಯಾಗುತ್ತಿವೆ.
ಒಟ್ಟಿನಲ್ಲಿ ಮೀಸಲಾತಿ ವ್ಯವಸ್ಥೆಯನ್ನೇ ಅಸ್ತವ್ಯಸ್ತಗೊಳಿಸಿ, ಕಟ್ಟಕಡೆಗೆ ಯಾರಿಗೂ ಮೀಸಲಾತಿ ಬೇಡ ಎಂಬ ಪರಿಸ್ಥಿತಿಯನ್ನು ನಿರ್ಮಾಣ ಮಾಡುವುದು ರಾಜಕಾರಣದ ಉದ್ದೇಶವಾ..? ಅಂತಹ ಅನುಮಾನಗಳಿಗೆ ಮೋದಿ ಉತ್ತರ ಕೊಟ್ಟಾಗಿದೆ. ಆದರೆ ಅವರ ಅಂತಿಮ ಗುರಿ, ಸಾಮಾಜಿಕ ನ್ಯಾಯವನ್ನು ಇಲ್ಲವಾಗಿಸುವುದಾ..? ಖಾತ್ರಿಯಿಲ್ಲ. ಮೇಲ್ವರ್ಣ, ಮೇಲ್ವರ್ಗಕ್ಕೂ ಮೀಸಲಾತಿ ನೀಡಿದ ಬಳಿಕ ದಲಿತರಿಗೆ ನೀಡುವ ಮೀಸಲಾತಿಗೆ ಏನರ್ಥ ಉಳಿಯುತ್ತದೆ ಹೇಳಿ..? ಮೇಲ್ನೋಟಕ್ಕೆ ಇದೊಂದು ತುಳಿತಕ್ಕೊಳಗಾದವರ ಚಳುವಳಿಯಂತೆ ಭಾಸವಾದರೂ, ಆಳದಲ್ಲಿ ತುಳಿತಕ್ಕೊಳಗಾದವರ ವಿರುದ್ಧ ನಡೆಯುತ್ತಿರುವ ಚಳುವಳಿ ಎನ್ನಲಾಗುತ್ತಿದೆ. ಒಂದೆಡೆ ದೇಶಾದ್ಯಂತ ದಲಿತರ ಮೇಲೆ, ಶೋಷಿತರ ಮೇಲೆ ದೌರ್ಜನ್ಯ ಹೆಚ್ಚುತ್ತಿವೆ. ಮೀಸಲಾತಿ ದಲಿತರಿಗೆ ನ್ಯಾಯ ಕೊಡುತ್ತಿಲ್ಲ ಎನ್ನುವ ಕೂಗು ಜೋರಾಗಿದೆ. ಇದರ ಬೆನ್ನಿಗೇ ಇರುವ ಮೀಸಲಾತಿಯನ್ನೇ ತೆಗೆದು ಹಾಕಿ ಅವರನ್ನು ಇನ್ನಷ್ಟು ಅತಂತ್ರರನ್ನಾಗಿಸುವ, ಅವರ ಧ್ವನಿಯನ್ನು ಸಂಪೂರ್ಣ ಅಡಗಿಸುವ ಭಾಗವಾಗಿ, ಮೇಲ್ವರ್ಗದ ಜನ ಮೀಸಲಾತಿಗಾಗಿ ಬೀದಿಗಿಳಿದಿರಬಹುದಾ..? ಇದೊಂದು ಮಗ್ಗಲಿನ ಸಂಶಯವಷ್ಟೇ
ಹಿಂದುಳಿದವರು ಎಂದು ನಿರ್ಧರಿಸಲು ಜಾತಿಯು ಒಂದು ಪ್ರಮುಖ ಅಂಶ ಎನ್ನುವುದು ನಿಜವೇ ಆದರೂ, ಅದೊಂದೇ ಅಂಶ ಈ ಕುರಿತ ನಿರ್ಧಾರಕ್ಕೆ ಮುಖ್ಯವಾಗುವುದಿಲ್ಲ ಎಂಬ ಕಾರಣಕ್ಕೆ ಪ್ರಬಲ ಸಮುದಾಯಗಳನ್ನು ಹಿಂದುಳಿದ ವರ್ಗವೆಂದು ಪರಿಗಣಿಸಲು ಸುಪ್ರೀಂ ಕೋರ್ಟ್ ನಿರಾಕರಿಸಿತ್ತು. ಯುಪಿಎ ಸರ್ಕಾರ 2014ರ ಮೇ ತಿಂಗಳಲ್ಲಿ ಲೋಕಸಭಾ ಚುನಾವಣೆಗೆ ಮುನ್ನವೇ ಜಾಟ್ ಸಮುದಾಯವನ್ನು ಒಬಿಸಿ ಪಟ್ಟಿಗೆ ಸೇರಿಸುವ ಆದೇಶವನ್ನು ಹೊರಡಿಸಿತ್ತು. ಆಶ್ಚರ್ಯಕರವೆಂಬಂತೆ ಮೋದಿ ಸರ್ಕಾರ ಕೂಡ ಯುಪಿಎ ಸರ್ಕಾರದ ಈ ನಿರ್ಧಾರವನ್ನು ಬೆಂಬಲಿಸಿ ಜಾಟ್ ಸಮುದಾಯಕ್ಕೆ ಮೀಸಲಾತಿಯನ್ನು ವಿಸ್ತರಿಸಿ ಅಧಿಸೂಚನೆ ಹೊರಡಿಸಿತ್ತು. ಸದ್ಯಕ್ಕೆ ಮೀಸಲಾತಿ ಹೋರಾಟದಲ್ಲಿ ಹೆಚ್ಚು ಕೇಳಿಸುತ್ತಿರುವುದು ಜಾಟರ ಹೋರಾಟ. ಒಟ್ಟು ಒಂಬತ್ತು ರಾಜ್ಯಗಳಲ್ಲಿ ಜಾಟ್ ಸಮುದಾಯದವರ ಪ್ರಾಬಲ್ಯವಿತ್ತು. 2014ರಲ್ಲಿ ಮನಮೋಹನ್ ಸಿಂಗ್ ನೇತೃತ್ವದ ಯುಪಿಎ ಸರ್ಕಾರ ಅಧಿಕಾರವನ್ನು ಮುಂದುವರಿಸುವ ಉದ್ದೇಶದಿಂದ, ಲೋಕಸಭೆ ಚುನಾವಣೆಗೂ ಮುನ್ನ ಜಾಟರಿಗೆ ಒಬಿಸಿಯಡಿ ಮೀಸಲಾತಿ ಕೊಡುವುದಾಗಿ ಭರವಸೆ ನೀಡಿತ್ತು. ಹಲವು ವರ್ಷಗಳಿಂದ ಹೋರಾಟ ನಡೆಸುತ್ತಿರುವ ಜಾಟರಿಗೆ ಯುಪಿಎ ಸರ್ಕಾರದ ಆಶ್ವಾಸನೆ ನೀಡಿದ ಬೆನ್ನಿಗೆ, ನರೇಂದ್ರ ಮೋದಿ ಕೂಡ ಜಾಟರಿಗೆ ನಾವೂ ಮೀಸಲಾತಿ ಕೊಡೋಕೆ ರೆಡಿ ಎಂದರು. ಈ ಹಂತದಲ್ಲಿ ಕೆಲವರು ಜಾಟರಿಗೇಕೆ ಮೀಸಲಾತಿ ಕೊಡಬೇಕು ಎಂದು ಸುಪ್ರಿಂ ಕೋರ್ಟ್ ಮೆಟ್ಟಿಲೇರಿದರು. ಸುಪ್ರಿಂ ಕೋರ್ಟ್, ಜಾಟರನ್ನು ಹಿಂದುಳಿದ ವರ್ಗವೆಂದು ಪರಿಗಣಿಸುವುದಿಲ್ಲ ಎಂದಿತ್ತು. ಕಡೆಗೆ ಮೋದಿ ಸರ್ಕಾರ ಆಡಳಿತಕ್ಕೆ ಬಂತು. ಜಾಟರ ಮೀಸಲಾತಿ ನಿರೀಕ್ಷೆಗಳು ಈಡೇರಲಿಲ್ಲ. ಹೋರಾಟ, ಪ್ರತಿಭಟನೆಗಳು ನಡೆಯತೊಡಗಿದವು.
ಮೊದಲೇ ಹೇಳಿದಂತೆ, ನೆಮ್ಮದಿಯಿಂದಿರುವ ಸಮುದಾಯಕ್ಕೆ ಪೆಟ್ರೋಲ್ ಸುರಿದು. ಬೆಂಕಿ ಕಟ್ಟಿ ಕೊಡುವುದೇ ಈ ರಾಜಕಾರಣಿಗಳು. ಇವರು ಅಧಿಕಾಕ್ಕೇರಲು ಸೂಕ್ಷ್ಮ ಭರವಸೆಗಳ ಬೀಜವನ್ನು ಬಿತ್ತಿ, ಇಡೀ ಸಮುದಾಯವನ್ನು ರೊಚ್ಚಿಗೇಳುವಂತೆ ಮಾಡುತ್ತಾರೆ. ಇನ್ನೇನು ದಲಿತರಂತೆ ಹಲವು ಸದುಪಯೋಗಪಡೆದುಕೊಳ್ಳಬಹುದು. ಉದ್ಯೋಗ, ಶಿಕ್ಷಣವನ್ನು ಬಡಿದು ಬಾಯಿಗೆ ಹಾಕಿಕೊಳ್ಳಬಹುದು ಎಂದು ನಿರ್ಧರಿಸಿದವರಿಗೆ ಸಹಜವಾಗಿಯೇ ಭ್ರಮನಿರಸನವಾಗಿತ್ತು. ರಾಜಕಾರಣ ಕೇವಲ ಜಾಟರ ಮೇಲೆ ಮಾತ್ರವಲ್ಲ, ಪಟೇಲರು, ಗುಜ್ಜರರು, ಕಾಪು ಸಮುದಾಯದವರ ಮೇಲೂ ಪಗಡೆಯಾಡುತ್ತಿದೆ. ನಿಜಕ್ಕೂ ದೇಶದಲ್ಲಿ ಮೀಸಲಾತಿಗಾಗಿ ಹೋರಾಟ ನಡೆಸುತ್ತಿರುವ ಯಾರಿಗೂ ಒಬಿಸಿ ಪಟ್ಟಿಯಲ್ಲಿ ಸೇರುವ ಅರ್ಹತೆಗಳಿಲ್ಲ. ದಲಿತರಂತೆ ಅವರ್ಯಾರು ಹಿಂದುಳಿದ ವರ್ಗಕ್ಕೆ ಸೇರುವುದಿಲ್ಲ. ಆರ್ಥಿಕವಾಗಿಯೂ, ಸಾಮಾಜಿಕವಾಗಿಯೂ ಬಲಿಷ್ಠರಾಗಿದ್ದಾರೆ. ನಮಗೆ ಮೀಸಲಾತಿ ಸಿಗದಿದ್ದರೂ ಪರ್ವಾಗಿಲ್ಲ, ಸಧ್ಯ ಮೀಸಲಾತಿಯ ಪ್ರಯೋಜನ ಪಡೆಯುತ್ತಿರುವವರು ಅದರಿಂದ ವಂಚಿತರಾಗಬೇಕೆಂಬ ಉದ್ದೇಶ ಅವರಲ್ಲಿ ಅಡಕವಾಗಿರಬಹುದು. ಸೂಕ್ಷ್ಮವಾಗಿ ಇವನ್ನು ಅವಲೋಕಿಸಿದಾಗ, ಇವರ ಹೋರಾಟಗಳ ಉದ್ದೇಶ ಈ ರೀತಿಯಾಗಿ ಸ್ಪಷ್ಟವಾಗುತ್ತದೆ.
ಈ ಹಿಂದೆ ಪಟೇಲ್ ಸಮುದಾಯ ತಮ್ಮ ಸಮುದಾಯವನ್ನು ಒಬಿಸಿ ಕೆಟಗರಿ ಅಡಿ ಸೇರಿಸಬೇಕು ಎಂದು ಬೀದಿಗಿಳಿದಿತ್ತು. ಆದರೆ ಮೀಸಲಾತಿಯ ಅರ್ಥ ಮತ್ತು ವ್ಯಾಪ್ತಿ, ಆಶಯ ಉದ್ದೇಶವೇ ಈ ಸಮುದಾಯಕ್ಕೆ ಇದ್ದಂತಿರಲಿಲ್ಲ, ಅಥವಾ ಈ ಹೋರಾಟದ ನೇತೃತ್ವವಹಿಸಿರೋ ಹಾರ್ದಿಕ್ ಪಟೇಲ್ಗೆ ಅರ್ಥವಾದಂತಿಲ್ಲ. ತಮಗೆ ಮೀಸಲಾತಿಯನ್ನು ಒಬಿಸಿ ಕೆಟಗರಿಯಲ್ಲಿ ನೀಡಲು ಸಾಧ್ಯವಿಲ್ಲದಿದ್ದರೆ, ಜಾತಿ ಆಧಾರಿತ ಮೀಸಲಾತಿಯನ್ನೇ ರದ್ದುಗೊಳಿಸಿ ಎಂಬ ತರ್ಕರಹಿತವಾದವನ್ನು ಹೋರಾಟಗಾರರು ಮುಂದಿಟ್ಟಿದ್ದರು. ಗುಜರಾತ್ ಸಿಎಂ ಆನಂದಿ ಬೆನ್ ಪಟೇಲ್, ಪಟೇಲ್ರನ್ನು ಒಬಿಸಿ ಕೆಟಗರಿಗೆ ಸೇರಿಸಲು ಸಾಧ್ಯವಿಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದರು. ಇದಕ್ಕೆ ಸುಪ್ರೀಂ ಕೋರ್ಟ್ ನಿರ್ದೇಶನವನ್ನು ಉಲ್ಲೇಖಿಸಿದ್ದರು. ಸುಪ್ರೀಂ ಕೋರ್ಟ್ 1992ರಲ್ಲಿ ನೀಡಿರುವ ನಿರ್ದೇಶನದಂತೆ ಯಾವುದೇ ರಾಜ್ಯ ನೀಡುವ ಮೀಸಲಾತಿ ಪ್ರಮಾಣ ಶೇಕಡಾ ಐವತ್ತನ್ನು ಮೀರುವಂತಿಲ್ಲ. ಈಗಾಗಲೇ ಗುಜರಾತ್ನಲ್ಲಿ ಒಬಿಸಿ ಶೇಕಡಾ 27, ಎಸ್ಸಿ ಶೇಕಡಾ 15, ಎಸ್ಟಿಗೆ ಶೇಕಡಾ 7ರಷ್ಟು ಮೀಸಲಾತಿ ನೀಡಲಾಗಿದ್ದು ಪಟೇಲ್ ಸಮುದಾಯವನ್ನು ಒಬಿಸಿಯಡಿ ಸೇರಿಸಲು ಸಾಧ್ಯವಿಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದರು.
ಇತ್ತೀಚೆಗಷ್ಟೇ ಆಂಧ್ರ ಪ್ರದೇಶದಲ್ಲಿ ಮೀಸಲಾತಿಗಾಗಿ ಕಾಪು ಜನಾಂಗ ತೀವ್ರ ತೆರನಾದ ಹೋರಾಟ ನಡೆಸಿತ್ತು. ಅದನ್ನು ಹತ್ತಿಕ್ಕುವಲ್ಲಿ ಅಲ್ಲಿನ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಯಶಸ್ವಿಯಾದರೂ ಅವರಿಗೆ ಭರವಸೆಯನ್ನು ಕೊಟ್ಟಿದ್ದರು. ಈ ಕಾಪು ಸಮುದಾಯದಲ್ಲಿ ತೆಲಗ, ಬಲಿಜ, ಒಂಟರಿ, ಮುನ್ನೂರು ಕಾಪು, ತುರ್ಪು ಕಾಪು ಅಂತ ಒಟ್ಟು ಐದು ಉಪಜಾತಿಗಳಿವೆ. ಆಂಧ್ರಪ್ರದೇಶ ಏಕೀಕರಣದ ಸಂದರ್ಭದಲ್ಲಿ ಕಾಪುಗಳಿಗೆ ಮುಂದುವರೆದ ಜಾತಿಯ ಸ್ಥಾನಮಾನ ನೀಡಲಾಗಿತ್ತು. 1921ರ ಜಾತಿ ಗಣತಿಯ ದತ್ತಾಂಶಗಳನ್ನು ಆಧರಿಸಿ ಕಾಪುಗಳನ್ನು ಮುಂದುವರೆದ ಜಾತಿ ಎಂದು ಗುರುತಿಸಲಾಗಿತ್ತು. ಇದೇ ದತ್ತಾಂಶಗಳನ್ನು ಆಧರಿಸಿ ತೆಲಗ ಮತ್ತು ಬಲಿಜ ಕಾಪುಗಳಿಗೆ ಮಾತ್ರ ಹಿಂದುಳಿದ ಜಾತಿಗಳ ಸ್ಥಾನಮಾನ ನೀಡಲಾಗಿತ್ತು. ತಮಗೆ ಮೀಸಲಾತಿ ನೀಡಬೇಕು ಎಂದು ಅಂದಿನಿಂದಲೂ ಕಾಪು ಸಮುದಾಯದ ಇತರ ಒಳಜಾತಿಗಳು ಹೋರಾಟ ನಡೆಸುತ್ತಲೇ ಇವೆ.
ಭಾರತದ ಸಂವಿಧಾನ ಮೀಸಲಾತಿ ಕುರಿತಾಗಿ ಸ್ಪಷ್ಟತೆಗಳನ್ನು ನೀಡಿದೆ. ಸಂವಿಧಾನದ ವಿಧಿಗಳು ಮೀಸಲಾತಿಯನ್ನು ಯಾರಿಗೆ ಮತ್ತು ಯಾವ ಕಾರಣಕ್ಕೆ ನೀಡಬೇಕು ಎನ್ನುವುದನ್ನು ಸ್ಪಷ್ಟಪಡಿಸಿದೆ. ಈಗ ಪಟೇಲ್, ಗುಜ್ಜರ್, ಕಾಪು, ಜಾಟ್ ಸಮುದಾಯದವರು ಕೇಳುತ್ತಿರುವ ಬೇಡಿಕೆ ಸಂವಿಧಾನ ನಿಗಧಿಪಡಿಸಿರುವ ಮೀಸಲಾತಿಯ ಆಶಯಕ್ಕೆ ವಿರುದ್ಧವಾದದ್ದು. ಸಾಮಾಜಿಕವಾಗಿ, ಆಥರ್ಿಕವಾಗಿ, ರಾಜಕೀಯವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದ ಜನಾಂಗಕ್ಕೆ ಮೀಸಲಾತಿ ಸಿಗಬೇಕು ಎಂದು ಸಂವಿಧಾನದಲ್ಲಿ ವಿವರಿಸಲಾಗಿದೆ. ಶತಶತಮಾನಗಳಿಂದ ತುಳಿತಕ್ಕೆ ಒಳಗಾಗಿ, ಸರ್ಕಾರಿ ಹುದ್ದೆಗಳನ್ನು ಒಳಗೊಂಡಂತೆ ಶೈಕ್ಷಣಿಕವಾಗಿ ಮೇಲೆತ್ತುವ ಉದ್ದೇಶ ಇದರ ಹಿಂದಿದೆ. ಇಂದಿಗೆ ಮೀಸಲಾತಿ ಕಾರಣಕ್ಕೆ ಹಲವು ಜನಾಂಗ ಕೆಲವೊಂದಾದರೂ ಹಕ್ಕನ್ನು ಪಡೆಯುವುದಕ್ಕೆ ಸಾಧ್ಯವಾಗಿದೆ.
ಒಟ್ಟಿನಲ್ಲಿ ವಿಶ್ವಮಾನವ ಅಂಬೇಡ್ಕರ್ ಈ ದೇಶದಲ್ಲಿ ತಂದ ಬದಲಾವಣೆ, ಹೋರಾಟಗಳು ಅಸಾಮಾನ್ಯ. ಅವರ ಹೋರಾಟದ ಪ್ರತಿಫಲಗಳನ್ನು ನಿರ್ನಾಮ ಮಾಡುವ ಪ್ರಯತ್ನಗಳನ್ನು ಮೊದಲು ನಾಶಪಡಿಸಬೇಕಿದೆ.
POPULAR STORIES :
ಎಲ್ಲಾದ್ರೂ ಹುಡುಗಿ ವಿದ್ಯುತ್ ಕಂಬ ಹತ್ತೋದು ನೋಡಿದಿರಾ…? #Video
ಆಶಿತಾ-ಶಕೀಲ್ ಲವ್ ಸ್ಟೋರಿ..! ಪ್ರೇಮಕ್ಕಿಲ್ಲ ಜಾತಿ-ಧರ್ಮ..!?
ಕತ್ರೀನಾ ಕೈಫ್ ರೇಟು ಹದಿನೈದು ಕೋಟಿ..!? ದೀಪಿಕಾ, ಕಂಗನಾ ಭಯಂಕರ್ ಕಾಸ್ಟ್ಲೀ..!?
ಅದು ತೇಜೋಮಹಲ್ ಅಲ್ಲ, ಶುದ್ಧ ತಾಜ್ ಮಹಲ್..! ತಾಜ್ ಮಹಲ್ ಬಗ್ಗೆ ಗೊತ್ತಿರದ ರಹಸ್ಯಗಳು..!
ಪ್ರಭಾಕರ್ ಸಾವಿಗೆ ಕಾರಣವಾಗಿದ್ದು ಆ ವೈದ್ಯ..!? ಅಮ್ಮನ ಕೈ ತುತ್ತು ತಿನ್ನದೆ ಮಲಗುತ್ತಿರಲಿಲ್ಲ ಈ ಜೀವ..!
ಅಂಗವೈಕಲ್ಯ ಗೆದ್ದ ಮಹಾನ್ ಸಾಧಕ..! ಅವ್ನು ಆತ್ಮಹತ್ಯೆಗೂ ಯತ್ನಿಸಿದ್ದ..!!
ಗಂಡನನ್ನು ಕೊಂದು, ಅವನ ತಲೆಯನ್ನು ಸೂಪ್ ಮಾಡಿ ಕುಡಿದಳು, `ಹೆಣ್ಣು ಒಲಿದರೇ ನಾರಿ, ಮುನಿದರೇ ಮಾರಿ..!’