ಕೋಲಾರ: ಕೋಲಾರ ಜಿಲ್ಲೆಯ ಕೆಜಿಎಫ್ ತಾಲೂಕಿನ ಚಂಬರಸನಹಳ್ಳಿಯಲ್ಲಿ ಮದುವೆಯ ಮೊದಲ ರಾತ್ರಿಯೇ ನವದಂಪತಿ ಹೊಡೆದಾಡಿಕೊಂಡು ವಧುವಿನ ಜೊತೆಗೆ ವರನೂ ಮೃತಪಟ್ಟಿರುವ ಘಟನೆ ನಡೆದಿದೆ. ವಧು ಲಿಖಿತ ಶ್ರೀ ಹಾಗೂ ನವೀನ್ ಮೃತ ದುರ್ಧೈವಿಗಳಾಗಿದ್ದು, ನಿನ್ನೆ ಸಪ್ತಪದಿ ತುಳಿದಿದ್ದಾರೆ. ಆದ್ರೆ, ಅದೇನಾಯ್ತೋ ಏನೋ ರೂಮ್ಗೆ ಹೋಗಿ ಇಬ್ಬರೂ ಹೊಡೆದಾಡಿಕೊಂಡಿದ್ದಾರೆ.
ಇದರಿಂದ ತೀವ್ರವಾಗಿ ಗಾಯಗೊಂಡಿದ್ದ ವಧು ಲಿಖಿತ ಶ್ರೀ ಸಾವನ್ನಪ್ಪಿದ್ದಾಳೆ. ಆಸ್ಪತ್ರೆ ಸೇರಿದ್ದ ವರ ನವೀನ್ (28) ಇಂದು ಚಿಕಿತ್ಸೆ ಫಲಕಾರಿಯಾಗದೆ ಸಾವಿಗೀಡಾಗಿದ್ದಾನೆ. ಕೋಲಾರದ ಅರ್.ಎಲ್. ಜಾಲಪ್ಪ ಆಸ್ಪತ್ರೆಯಲ್ಲಿ ನಿನ್ನೆ ದಾಖಲಾಗಿದ್ದ ನವೀನ್ ಕುಮಾರ್‌ನನ್ನು ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ರಾತ್ರಿ ರವಾನಿಸಲಾಗಿತ್ತು.
ನಿನ್ನೆ ಬೆಳಗ್ಗೆ ಅದ್ಧೂರಿಯಾಗಿ ಲಿಖಿತಶ್ರೀ ಹಾಗೂ ನವೀನ್ ಮದುವೆಯಾಗಿತ್ತು. ಕೆಲಗಂಟೆಗಳ ನಂತರ ರೂಮ್‌ಗೆ ಹೋಗಿದ್ದ ನವದಂಪತಿ ಅಲ್ಲೇ ಹೊಡೆದಾಡಿಕೊಂಡಿದ್ದಾರೆ. ಇಬ್ಬರೂ ಮಚ್ಚು ಹಿಡಿದು ಕೊಚ್ಚಿಕೊಂಡಿದ್ದಾರೆ. ಇದರಿಂದ ಗಂಭೀರವಾಗಿ ಗಾಯಗೊಂಡ ಇಬ್ಬರನ್ನೂ ಕೆಜಿಎಫ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಿಸದೇ ವಧು ನಿನ್ನೆಯೇ ಕೊನೆಯುಸಿರೆಳೆದಿದ್ದಳು. ಸ್ಥಳಕ್ಕೆ ಆ್ಯಂಡರ್‌ಸನ್ ಪೇಟೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.