ಅಲ್ಲಿ ಸಂಭ್ರಮ ಮನೆ ಮಾಡಿತ್ತು. ಸಾರ್ಥಕತೆಯ ಭಾವ ಮೂಡಿತ್ತು…! ಹೊಸ ಕ್ರಾಂತಿಗೆ ಮುನ್ನುಡಿ ಬರೆದ ವೇದಿಕೆ ಅದಾಗಿತ್ತು…! ಯುವತಂಡವೊಂದು ಸುದ್ದಿ ಮಾಧ್ಯಮ ಲೋಕದಲ್ಲಿ ಸಂಚಲನ ಮೂಡಿಸಲು ನಾವು ರೆಡಿ ಇದ್ದೇವೆ ಎಂದು ಸಾರಿತ್ತು…!
ಇದು ‘ಒಂದೇ ದಾರಿ…ಒಂದೇ ಗುರಿ’ ಎಂಬ ಟ್ಯಾಗ್ ಲೈನ್ ನೊಂದಿಗೆ ನಿಮ್ಮನ್ನು ತಲುಪಲಿರುವ ‘ಜಿ6 ನ್ಯೂಸ್’ ನ ಲೋಗೋ ಬಿಡುಗಡೆ ಸಮಾರಂಭದ ಝಲಕ್.
ಹೌದು, ಕನ್ನಡ ಸುದ್ದಿವಾಹಿನಿ ಜಗತ್ತಿಗೆ ಇನ್ನೊಂದು ಚಾನಲ್ ಶೀಘ್ರದಲ್ಲೇ ಪಾದಾರ್ಪಣೆ ಮಾಡಲಿದೆ. ಜನಪ್ರಿಯ ನಿರೂಪಕ, ಪತ್ರಕರ್ತ ಚಂದನ್ ಶರ್ಮ ಅವರ ಸಾರಥ್ಯದಲ್ಲಿ ಬರಲಿರುವ ಈ ಚಾನಲ್ ಹೆಸರು ಜಿ6 ನ್ಯೂಸ್…! ಅಂದ್ರೆ, ಗುಡ್ ನ್ಯೂಸ್ 6…!
ಇಂದು (ಶುಕ್ರವಾರ ರಾತ್ರಿ) ಈ ಹೊಸ ಸುದ್ದಿವಾಹಿನಿಯ ಲೋಗೋ ಬಿಡುಗಡೆ ಸಮಾರಂಭ ಬೆಂಗಳೂರಿನ ಕ್ಯಾಪಿಟಲ್ ಹೋಟೆಲ್ ನಲ್ಲಿ ಅದ್ಧೂರಿಯಾಗಿ ನೆರವೇರಿತು.
ಜಿ6 ನ್ಯೂಸ್ ದೇಶ ಕಾಯುವ ಯೋಧರಿಗೆ ಅರ್ಪಣೆಯಾಗಿದೆ. ಸೇನೆಗೆ ತನ್ನನ್ನು ತಾನು ಸಮರ್ಪಿಸಿಕೊಂಡು ಪ್ರಪ್ರಥಮ ಚಾನಲ್ ಜಿ6 ನ್ಯೂಸ್.
ಲೋಗೋ ಲಾಂಚ್ ಕಾರ್ಯಕ್ರಮ ಹಾಗೂ ತಮ್ಮ ಸುದ್ದಿವಾಹಿನಿಯನ್ನು ಯೋಧರಿಗೆ ಅರ್ಪಿಸಿದ ಜಿ6 ತಂಡ ತಾವು ಸತ್ಯ, ಪ್ರಾಮಾಣಿಕ ದಾರಿಯಲ್ಲಿ ಸಾಗಿ ಜನರ ಮನಸ್ಸನ್ನು ತಲುಪುತ್ತೇವೆ ಎಂದು ಶಪತ ಮಾಡಿತು. ಸಂಸ್ಥೆಗೆ ಬರುವ ಲಾಭದಲ್ಲಿ ಶೇ. 10ರಷ್ಟನ್ನು ಭಾರತೀಯ ಸೇನೆ ಮೀಸಲಿಡುವುದಾಗಿ ಚೇರ್ ಮನ್ ಡಾ. ಸತ್ಯನಾರಾಯಣ ಗುಪ್ತ ಅವರು ತಿಳಿಸಿದರು.
ದಶಕಕ್ಕೂ ಹೆಚ್ಚು ಕಾಲ ದೇಶ ಸೇವೆಯಲ್ಲಿ ತೊಡಗಿದ್ದ ನಿ. ಯೋಧರಾದ ಮುರುಳಿ, ಅಚ್ಚಪ್ಪ ಮತ್ತು ಬಂಡಾರಿಯವರನ್ನು ಗೌರವಿಸಲಾಯಿತುನ ಸನ್ಮಾನಿತರು ಚಾನಲ್ ಅನ್ನು ಸೇನೆಗೆ ಅರ್ಪಿಸುತ್ತಿರುವುದಕ್ಕೆ ಸಂತೋಷ ವ್ಯಕ್ತಪಡಿಸಿ, ಶುಭ ಹಾರೈಸಿದ್ರು.
ಜಿ6 ನ ಎಕ್ಸಿಕ್ಯೂಟಿವ್ ಎಡಿಟರ್ ಚಂದನ್ ಶರ್ಮ, ”ನಿಮ್ಮ ಮುಂದೆ ಕನಸನ್ನು ತೆರೆದಿಡುತ್ತಿದ್ದೇವೆ. ಅದು ಜಿ6 ಎಂಬ ಕನಸು. ಒಂದು ದೃಢವಾದ ಸಂಕಲ್ಪ ಮಾಡುತ್ತುದ್ದೇವೆ. ಇತಿಹಾಸ ರಚಿಸಲು ತುದಿಕಾಲಲ್ಲಿ ನಿಂತಿದ್ದೇವೆ. ಸಂಸ್ಥೆಯ ಚೇರ್ ಮನ್ ಡಾ. ಸತ್ಯನಾರಾಯಣ ಗುಪ್ತ ಅವರು ನಮ್ಮನ್ನು ಮನೆ ಮಕ್ಕಳಂತೆ ನೋಡಿಕೊಳ್ಳುತ್ತಿದ್ದಾರೆ. ಉದ್ಯೋಗಿಗಳು ಎಂದು ಭಾವಿಸಿಲ್ಲ. ಇದರಿಂದಾಗಿಯೇ ಇಂಥಾ ದೊಡ್ಡ ಸಂಸ್ಥೆಯನ್ನು ಕಟ್ಟಲು ಸಾಧ್ಯವಾಯಿತು. ಕರ್ನಾಟಕದಲ್ಲಿ ಯಾವ ಮೀಡಿಯಾ ಹೌಸ್ ಗೂ ಇಲ್ಲದ ದೊಡ್ಡದಾದ ಸ್ವಂತ ಕಟ್ಟಡ ಜಿ6 ಗೆ ಇದೆ. ಮಾರ್ಚ್ ಅಥವಾ ಏಪ್ರಿಲ್ ನಲ್ಲಿ ನಿಮ್ಮ ಮುಂದೆ ಬರಲಿದ್ದೇವೆ “ಎಂದು ಹೇಳಿದ್ರು.
ಗೃಹರಕ್ಷಕ ದಳದ ಐಜಿಪಿ ಡಿ. ರೂಪ ಅವರು ಮಾತನಾಡಿ, ಕಸ್ತೂರಿ ನಾಡಿನಲ್ಲಿ ಹೊಸ ಶ್ರೀಗಂಧದ ಮರ ಹುಟ್ಟಿದೆ. ಇದು ಹೆಮ್ಮರವಾಗಿ ಬೆಳೆಯಲಿ. ತಂಪು ನೀಡಲಿ, ಇದರ ಕಂಪು ಎಲ್ಲೆಡೆ ಸೂಸಲಿ ಎಂದು ಜಿ6 ನ್ಯೂಸ್ ಗೆ ಶುಭ ಹಾರೈಸಿದರು.
ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡ, ಕೆಪಿಸಿಸಿ ಅಧ್ಯಕ್ಷ ಡಾ.ಜಿ ಪರಮೇಶ್ವರ್, ನಿವೃತ್ತ ಲೋಕಾಯುತ್ತ ನ್ಯಾ. ಸಂತೋಷ್ ಹೆಗ್ಡೆ ಕಾರ್ಯಕ್ರಮಕ್ಕೆ ಬರಲು ಸಾಧ್ಯವಾಗದೇ ಇದ್ದಿದ್ದರಿಂದ ವೀಡಿಯೋ ಸಂದೇಶದ ಮೂಲಕ ಶುಭ ಕಾಮನೆಗಳನ್ನು ತಿಳಿಸಿದರು. ಗೃಹಸಚಿವ ರಾಮಲಿಂಗರೆಡ್ಡಿ, ಬಿಬಿಎಂಪಿ ಮೇಯರ್ ಸಂಪತ್ ರಾಜ್, ಮಾಜಿ ಸಚಿವ ಬಿ.ಜೆ ಪುಟ್ಟಸ್ವಾಮಿ, ನೂತನ ಒಡೆಯರ್(ನಿ.ಪ್ರಿನ್ಸಿಪಲ್ ಚೀಫ್ ಕಮಿಷನರ್ ಆಫ್ ಇನ್ ಕಮ್ ಟ್ಯಾಕ್ಸ್) , ಜಯದೇವ ಹೃದ್ರೋಗ ಸಂಸ್ಥೆ ನಿರ್ದೇಶಕರಾದ ಡಾ. ಸಿ.ಎನ್ ಮಂಜುನಾಥ್, ಹಿರಿಯ ವಕೀಲರಾದ ಎಂ.ಟಿ ನಾಣಯ್ಯ, ಜಿ6 ನ ಚೇರ್ ಮನ್ ಡಾ. ಸತ್ಯನಾರಾಯಣ ಗುಪ್ತ, ಎಂಡಿ ನರೇಶ್ ಗುಪ್ತ, ಸಿಇಒ ಸುಮನಾ ಗುಪ್ತ, ಎಡಿಟರ್ ಇನ್ ಚೀಫ್ ಪ್ರದೀಪ್ ಕುಮಾರ್ ಆರ್ ಮತ್ತಿತರರು ಉಪಸ್ಥಿತರಿದ್ದರು.