ಅದು ಯಾವ ಕೋನದಿಂದ ಜನರು ಇವರಲ್ಲಿ ದೇವರನ್ನು ಕಂಡರೋ..? ಭಕ್ತಿಯ ಪರಾಕಾಷ್ಠೆ, ಮೌಢ್ಯಕ್ಕೇ ಅದೇನು ಅಂತ ಹೇಳಲಿ ಭಗವಂತ..!. ದೇವರು ಅಂದರೇ ನಂಬಿಕೆ, ಅವನಿಗೆ ನಿಚ್ಚಳ ರೂಪವಿಲ್ಲ, ಅತೀಂದ್ರಿಯ ಶಕ್ತಿ. ಆದರೆ ದೇವರು ಹುಲುಮಾನವನ ರೂಪದಲ್ಲಿ ಕಲಿಯುಗದಲ್ಲಿ ಅವತಾರವೆತ್ತುತ್ತಾನಾ..? ಇಲ್ಲಿ ಕೆಲ ಸ್ವಘೋಷಿತ ದೇವಮಾನವರಿದ್ದಾರೆ. ದೇವರು ಅಂತ ತಮ್ಮನ್ನು ತಾವು ಕರೆದುಕೊಂಡಿದ್ದಾರೆ. ಈ ದೇವರುಗಳಲ್ಲಿ ಕೆಲವರ ಮೇಲೆ ರೇಪ್ ಕೇಸಿದೆ, ಕೆಲವರ ಮೇಲೆ ಕೊಲೆ, ರಿಯಲ್ ಎಸ್ಟೇಟ್, ಅತ್ಯಾಚಾರ, ಬೆದರಿಕೆ ಇತ್ಯಾದಿ ಕೇಸ್ ಗಳಿವೆ. ಆದರೂ ಭಕ್ತರು ಇವರನ್ನು ಬಿಟ್ಟುಕೊಡುವುದಿಲ್ಲ. ದೇವರು ರೇಪ್ ಮಾಡ್ತಾನಾ..? ಕೊಲೆ ಮಾಡಿಸ್ತಾನಾ..? ಹತ್ಯಾಕಾಂಡಗಳನ್ನೂ ನಡೆಸುತ್ತಾನಾ..? ಎನ್ನುವುದು ನನಗೆ ಅರ್ಥವಾಗದ ಸಂಗತಿ.
ಇವತ್ತು ನಾನು ಹತ್ತು ಸ್ವಘೋಷಿತ ದೇವರುಗಳ ಲಿಸ್ಟ್ ಹಿಡಿದುಕೊಂಡು ಬಂದಿದ್ದೇನೆ. ಅವರ ಅವತಾರ, ಅವರ ಮಹಾನ್ ಸಾಧನೆ, ಕೇಸುಗಳ ಬಗ್ಗೆ ವಿವರಿಸ್ತೀನಿ. ಇವರೆಲ್ಲರ ಪೈಕಿ ಇತ್ತೀಚೆಗಷ್ಟೆ ಗಂಡಸು ಅಂತ ಸಾಬೀತಾದ ನಿತ್ಯಾನಂದನೂ ಒಬ್ಬ. ಇತ್ತೀಚೆಗೆ ನಿತ್ಯಾನಂದ ತನ್ನದೊಂದು ದೇವಸ್ಥಾನ ಕಟ್ಟಿಸುವುದಕ್ಕೆಂದು ನಂಜನಗೂಡು ಸುತ್ತಾಮುತ್ತಾ ಓಡಾಡಿಕೊಂಡಿದ್ದ ಸುದ್ದಿಯಿತ್ತು. ಅದಕ್ಕಾಗಿ ದೇಶದ ನೂರಕ್ಕೂ ಹೆಚ್ಚು ಶಿವನ ದೇವಸ್ಥಾನಗಳಿಗೆ ಹೋಗಿ ಅಧ್ಯಯನ ಮಾಡಿ ಬಂದಿದ್ದನಂತೆ. ಅಷ್ಟಕ್ಕೂ ಜಟ್ಟಿ ಜಾರಿದ್ರೂ ಮೀಸೆ ಮಣ್ಣಾಗಲಿಲ್ಲ ಎಂಬ ಕೆಟಗರಿಗೆ ಸೇರುವ ಈ ನಿತ್ಯಾನಂದ ಮಾಡಿಕೊಂಡ ಎಡವಟ್ಟು, ಅವನನ್ನು ಆವರಿಸಿಕೊಂಡ ವಿವಾದಗಳು ಒಂದೆರಡಲ್ಲ.
ನಿತ್ಯಾನಂದ ಹೆಚ್ಚು ಸುದ್ದಿಯಾಗಿದ್ದು ಜಂಪಿಂಗ್ ಯೋಗದ ಮೂಲಕ. ದೇಶ-ವಿದೇಶದ ಭಕ್ತರನ್ನು ಬೇಕಾಬಿಟ್ಟಿ ಕುಲುಕಾಡಿಸುತ್ತಿದ್ದ ನಿತ್ಯಾನಂದ, ವಿಚಿತ್ರ ಪ್ರಾರ್ಥನೆಗಳ ಮೂಲಕ ಮನೆಮಾತಾದ. ಆನಂತರ ನಟಿ ರಂಜಿತಾ ಜೊತೆ ರಾಸಲೀಲೆ ಪ್ರಕರಣದಲ್ಲಿ ಸಿಲುಕಿದ ನೋಡಿ..! ಖೇಲ್ ಖತಂ, ನಾಟಕ್ ಬಂದ್. ಕೇಸ್ ಆಗಿ, ಆಶ್ರಮ ಬಿಟ್ಟು, ಪ್ರತಿಭಟನೆ ಅನುಭವಿಸಿ ಕಡೆಗೆ ನಾನು ಗಂಡಸೇ ಅಲ್ಲ ಅಂತ ಹೇಳಿಬಿಟ್ಟ. ಕೊನೆಗೂ ನಾಲ್ಕು ವರ್ಷದ ನಂತರ ನಿತ್ಯಾನಂದ ಗಂಡಸೆನ್ನುವುದು ಸಾಬೀತಾಗಿತ್ತು. ಕೇಸಿನ್ನೂ ನಡೆಯುತ್ತಿದೆ. ಈ ಸ್ವಘೋಷಿತ ದೇವರದ್ದು ಒಂದೆರಡು ವಿಕೃತಿಗಳಲ್ಲ. ತನ್ನ ತಂದೆ ಸತ್ತಾಗ ಅವರ ತಲೆ ಮೇಲೆ ಕಾಲಿಟ್ಟಿದ್ದ. ಆದರೆ ಅವನನ್ನು ಅನುಸರಿಸುತ್ತಿರುವ ಭಕ್ತರು ಇವತ್ತಿಗೂ ನಿತ್ಯಾನಂದನನ್ನು ಬಿಟ್ಟುಕೊಡಲು ಸಿದ್ಧರಿಲ್ಲ. ಅವನನ್ನು ದೇವರು ಎಂದೇ ನಂಬಿದ್ದಾರೆ. ವಿಪರ್ಯಾಸವೆಂದರೇ ಅವನ ಅಸಂಖ್ಯಾ ಭಕ್ತರ ಪೈಕಿ ಹಲವರು ವಿದ್ಯಾವಂತರು..!
ಈ ಅಸಾರಾಮ್ ಬಾಪು ಭಕ್ತಿ ಯೋಗ, ಜ್ಞಾನ ಯೋಗ, ಕರ್ಮ ಯೋಗದ ಪಟು. 1977ರಲ್ಲೇ ಗುಜರಾತ್ನಲ್ಲಿ ಹತ್ತೆಕೆರೆ ಜಾಗದಲ್ಲಿ ಆಶ್ರಮ ಕಟ್ಟಿಕೊಂಡು ತನ್ನನ್ನು ದೇವರು ಅಂತ ಘೋಷಿಸಿಕೊಂಡ. ಆರಂಭದಲ್ಲಿ ಈತ ಜಮೀನು ಒತ್ತುವರಿ ಪ್ರಕರಣದಲ್ಲಿ ತಗಲಾಕ್ಕೊಂಡ. ಈ ದೇವರು ದೆಹಲಿಯಲ್ಲಿ ಗ್ಯಾಂಗ್ರೇಪ್ ನಡೆದ ಸಂದರ್ಭದಲ್ಲಿ ವಿವಾದಾತ್ಮಕ ಹೇಳಿಕೆ ಕೊಟ್ಟಿದ್ದ. `ರೇಪಿಸ್ಟ್ ಗಳ ಹತ್ರ, ಅಣ್ಣಾ ಅಂತ ಹೇಳಿ ಕಾಲಿಗೆ ಬೀಳಬೇಕಿತ್ತು, ರೇಪ್ ಆಗ್ತಿರಲಿಲ್ಲ’ ಅಂದಿದ್ದ. ಆಮೇಲೆ ಇವನೇ ಜೋದ್ಪುರ್ ಆಶ್ರಮದಲ್ಲಿ ಹದಿನಾರು ವರ್ಷದ ಬಾಲಕಿಯನ್ನು ರೇಪ್ ಮಾಡಿದ ಎಂದು ಆರೋಪ ಕೇಳಿಬಂತು. ದೆಹಲಿ ಪೊಲೀಸ್ ಠಾಣೆಯಲ್ಲಿ ಬಾಲಕಿಯ ಹೆತ್ತವರು ಇವನ ಮೇಲೆ ದೂರು ದಾಖಲಿಸಿದ್ದರು. ಕೇಸ್ ದಾಖಲಾದ ನಂತರ ವಿಚಾರಣೆಗೆ ಹಾಜರಾಗದ ಅಸಾರಂ ಮೇಲೆ ಅರೆಸ್ಟ್ ವಾರೆಂಟ್ ಜಾರಿಯಾಯಿತು. ತಲೆಮರೆಸಿಕೊಂಡು ತಿರುಗುತ್ತಿದ್ದ ಇವನನ್ನು ಕೊನೆಗೂ ಜೋದ್ಪುರ ಪೊಲೀಸರು ಬಂಧಿಸಿದ್ದರು. ಕೊನೆಗೆ ಪ್ರಭಾವ ಬಳಸಿ ರೇಪ್ ಕೇಸಿನಿಂದ ಬಚಾವಾದ. ವಾಮಾಚಾರಕ್ಕಾಗಿ ಮಕ್ಕಳ ಕೊಲೆ, ಭೂಕಬಳಿಕೆ, ಅತ್ಯಾಚಾರ, ಗ್ಯಾಂಗ್ ರೇಪ್ ವಿವಾದ, ಕೊಲೆಯತ್ನ, ಮೋದಿ ಮತ್ತು ಮೋದಿಯ ವಿರುದ್ಧ ಅವಹೇಳನಕಾರಿ ಹೇಳಿಕೆಗಳಿಂದ ಕೆಟ್ಟದಾಗಿ ಸುದ್ದಿಯಾಗಿದ್ದ ಇವನನ್ನು ಕೆಲವು ಮೂಢರು `ದೇವರು’ ಎಂದು ನಂಬಿದ್ದಾರೆ.
ಅವನು ಬಾಬಾ ರಾಮ್ಪಾಲ್. ಸಧ್ಯಕ್ಕೆ ಜೈಲಿನಲ್ಲಿದ್ದಾನೆ. ಇಂಜಿನಿಯರ್ ಆಗಿದ್ದ ರಾಮ್ ಪಾಲ್ ತನ್ನನ್ನು ಸಂತನೆಂದು ಘೋಷಿಸಿಕೊಂಡಿದ್ದ. ಕಬೀರದೋಹಾಗಳನ್ನು ಹೇಳಿಕೊಂಡು ಭಕ್ತರನ್ನು ಆಕರ್ಷಿಸಿದ್ಧ. ಆನಂತರ ತನ್ನನ್ನು ದೇವರು ಅಂತ ಘೋಷಿಸಿಕೊಂಡ. ಆರಂಭದಲ್ಲಿ ರಾಮ್ ಪಾಲ್ ಉದ್ದೇಶಗಳು ಸರಿಯಾಗಿಯೇ ಇತ್ತು. ತನ್ನ ಭಕ್ತರಿಗೆ ಮಾಂಸ, ಮಧ್ಯ, ತಂಬಾಕು ವಸ್ತುಗಳನ್ನು ತ್ಯಜಿಸುವಂತೆ ಹೇಳಿದ್ದ. ಅಸ್ಪೃಶ್ಯತೆ, ನೃತ್ಯಗಳನ್ನು ನಿಷೇಧಿಸಿದ್ದ. ಭಿಕ್ಷುಕರಿಗೆ ಹಣ ನೀಡಬೇಡಿ, ಕುಡಿಯಲು ಏನಾದ್ರೂ ಕೊಟ್ಟು ಕಳುಹಿಸಿ ಅಂದ. ಆದರೆ ಇವನನ್ನು ಯಾರೂ ಪ್ರಶ್ನಿಸುವಂತಿರಲಿಲ್ಲ. ಅಂಥವರನ್ನು ಆಶ್ರಮದ ಹೊರಗೆ ತಡೆಯಲಾಗುತ್ತಿತ್ತು. ಆಮೇಲಾಮೇಲೆ ತನ್ನನ್ನು ಬ್ರಹ್ಮ, ವಿಷ್ಣು, ಶಿವನ ಅವತಾರ ಎಂದ. ಸಂತ ಕಬೀರ ಸರ್ವೋಚ್ಛ ದೇವರು ಎಂದು ಹೇಳಿದ. ವಿಚಿತ್ರವೆಂದರೇ ಇವನಿಗೆ ಪ್ರತಿನಿತ್ಯ ಹಾಲಿನಿಂದ ಅಭಿಷೇಕ ಮಾಡಬೇಕಾಗಿತ್ತು. ಅದೇ ಹಾಲಿನಿಂದ ಕೀರು, ಪಾಯಸ ಮಾಡಿ ಭಕ್ತರಿಗೆ ಹಂಚಲಾಗುತ್ತಿತ್ತು. ಇಂಥ ಸ್ವಘೋಷಿತ ದೇವಮಾನವ ಕಡೆಗೆ ಐದು ಜನ ಮಹಿಳೆಯರು ಹಾಗೂ ಮಗುವೊಂದರ ಹತ್ಯೆ ಕೇಸಿನಲ್ಲಿ ತಗಲಾಕ್ಕೊಂಡ. ಅದೂ ಸಾಬೀತಾಗಿತ್ತು. ಜಾಮೀನುರಹಿತ ವಾರಂಟ್ ಜಾರಿಯಾದರೂ ಆರಾಮಾಗಿ ಓಡಾಡಿಕೊಂಡಿದ್ದ. ಕೊನೆಗೂ ಪೊಲೀಸರು ಹೆಡೆಮುರಿಕಟ್ಟಿ ಜೈಲಿಗೆ ದಬ್ಬಿ ಆತನ ಆಶ್ರಮವನ್ನು ತಡಕಾಡಿದಾಗ ಐಷಾರಾಮಿ ಜಗತ್ತು ಅನಾವರಣವಾಗಿತ್ತು. ಬಿಎಂಡಬ್ಲ್ಯೂ ಕಾರುಗಳು, ಸ್ವಿಮ್ಮಿಂಗ್ ಫೂಲ್ಗಳು..! ಬಪ್ಪರೇ ಮಗನಾ..! ಅಂತ ಪೊಲೀಸರು ನಿಬ್ಬೆರಗಾಗಿದ್ದರು. ಆದರೂ ಇವನು ಸಾವಿರಾರು ಭಕ್ತರ ಪಾಲಿಗೆ ದೇವರು, ಕರ್ಮಕಾಂಡ..!
ಈ ಕಳ್ಳ ದೇವರಿನ ಹೆಸರು ಚಂದ್ರಸ್ವಾಮಿ. ತಾಂತ್ರಿಕ ಪಂಡಿತ ಗೋಪಿನಾಥ್ ಪಂಡಿತ್ ಅವರಿಂದ ಅದ್ಯಾವಾಗ ತಂತ್ರ ವಿದ್ಯೆಗಳನ್ನು ಕಲಿತನೋ ಚಿಕ್ಕಂದಿನಲ್ಲೇ ಮನೆಬಿಟ್ಟು ಸಂತನಾದ. ಆಮೇಲೆ ತಾನೇ ದೇವರು ಅಂತ ಘೋಷಿಸಿಕೊಂಡ. ಅಂತರಾಷ್ಟ್ರಿಯ ಅಕ್ರಮ ಮನಿಟ್ರಾನ್ಸ್ ಫರ್ ದಂಧೆ ಮಾಡತೊಡಗಿದ. ಈ ಭಗವಂತನ ಹೆಸರು ರಾಜೀವ್ ಗಾಂಧಿ ಕೊಲೆ ಕೇಸಿನಲ್ಲೂ ತಳುಕು ಹಾಕಿಕೊಂಡಿತ್ತು. ಬಿಹಾರ ಕಾಡಿನಲ್ಲಿ ವಾಸವಿದ್ದ ಈ ಚಂದ್ರಸ್ವಾಮಿಗೆ ನೇಮಿಚಂದ್ ಜೈನ್ ಎಂಬ ಇನ್ನೊಂದು ಹೆಸರಿದೆ. ಮಹಾಕಾಳಿ ಉಪಾಸಕ ಅಂತ ವಿದೇಶ ಪ್ರವಾಸಕ್ಕೆ ಹೊರಟ ಇವನ ಖರ್ಚು ವೆಚ್ಚವೇ ಒಂದೂವರೆ ಕೋಟಿಯನ್ನು ದಾಟಿತ್ತು. ಹಲವಾರು ಚೀಟಿಂಗ್ ಪ್ರಕರಣಗಳು ಇವನ ಮೇಲಿತ್ತು. ರಾಜೀವ್ ಗಾಂಧಿ ಹತ್ಯೆ ಕೇಸಿನಲ್ಲಿ ಸಿಬಿಐ ಇವನ ಮೇಲೆ ದೋಷಾರೋಪ ಪಟ್ಟಿಯನ್ನು ಸಲ್ಲಿಸಿತ್ತು. ಇನ್ನು ತನ್ನನ್ನು ತಾನು ಶ್ರೀ ಸಾಯಿಬಾಬಾನ ಅಪರಾವತಾರ ಎಂದು ತಿರುಗಾಡುತ್ತಿದ್ದ ಸ್ವಾಮಿ ಭೀಮಾನಂದ ಜೈ ಮಹಾರಾಜ್ ಇಚ್ಛಾಧಾರಿ ಚಿತ್ರಕೂಟದ ಸ್ವಾಮಿ. 1988ರ ಸಮಯದಲ್ಲಿ ನವದೆಹಲಿಯಲ್ಲಿ ಸೆಕ್ಯೂರಿಟಿ ಗಾರ್ಡಾಗಿ ಕೆಲಸ ಮಾಡಿಕೊಂಡಿದ್ದ. ಆನಂತರ ಸೆಕ್ಯೂರಿಟಿ ಕೆಲಸ ಬಿಟ್ಟು ಭೀಮಾನಂದ ಮಸಾಜ್ ಪಾರ್ಲರ್ ನಲ್ಲಿ ಕೆಲಸ ಮಾಡಿಕೊಂಡಿದ್ದ. ಮಸಾಜ್ ಪಾರ್ಲರ್ ನಲ್ಲಿ ಮಸಾಜ್ ಮಾಡುವುದರ ಬದಲು ಹೆಣ್ಣುಮಕ್ಕಳ ದಂಧೆ ನಡೆಸತೊಡಗಿದ. ವೇಶ್ಯಾವಾಟಿಕೆ ಆರೋಪದಲ್ಲಿ ಪೊಲೀಸರು ಜೈಲಿಗೆ ದಬ್ಬಿ ಸಮಾರುಬ್ಬಿದ್ದರು. ಅಲ್ಲಿಂದ ಬಂದವನೇ ಚಿತ್ರಕೂಟದಲ್ಲಿ 200 ಹಾಸಿಗೆ ಸಾಮಥ್ರ್ಯದ ಆಸ್ಪತ್ರೆ ಕಟ್ಟಿದ್ದ. ಚಿತ್ರಕೂಟದಲ್ಲಿ ದೊಡ್ಡ ದೇವಸ್ಥಾನ ನಿರ್ಮಿಸಿ ತಾನು ದೇವಮಾನವ ಅಂಥ ಜನರನ್ನು ವಂಚಿಸಲು ಶುರುಮಾಡಿದ್ದ.
ಸ್ವಾಮಿ ಗುರುಮಿತ್ ರಾಮ್ ರಹೀಮ್ ಸಿಂಗ್. ದೇರಾ ಸಚ್ಚಾ ಸೌಧ ಸಂಘಟನೆಯ ಮುಖ್ಯಸ್ಥ. ಈತ ಅತ್ಯಾಚಾರ ಆರೋಪದಲ್ಲಿ ಸಿಬಿಐ ತನಿಖೆ ಎದುರಿಸಿದ ಹರ್ಯಾಣದ ಸ್ವಾಮೀಜಿ. ಆರಂಭದಲ್ಲಿ ಸಾಮಾಜಿಕ ಕಾರ್ಯಕ್ರಮದಲ್ಲಿ ತೊಡಗಿಸಿಕೊಂಡಿದ್ದ. ತನ್ನ ಸಂಘದ ಹೆಸರಿನಲ್ಲಿ ಅನೇಕ ಒಳ್ಳೆ ಕೆಲಸಗಳನ್ನು ಮಾಡುತ್ತಿದ್ದೇನೆ ಅಂತ ತೋರಿಸಿಕೊಳ್ಳುತ್ತಿದ್ದ. ತನ್ನ ಹೆಸರಿನಲ್ಲಿ ವೆಬ್ಸೈಟನ್ನು ನಿರ್ಮಿಸಿಕೊಂಡಿದ್ದ. ಅದರಲ್ಲಿ ತನ್ನನ್ನು ಬರಹಗಾರ, ಸೃಷ್ಠಿಕರ್ತ, ಕೃಷಿಕ, ವಿಜ್ಞಾನಿ, ಕ್ರೀಡಾಪಟು, ತತ್ವಜ್ಞಾನಿ, ನಿರ್ದೇಶಕ, ಸಂಗೀತಗಾರ, ಗೀತರಚನೆಕಾರ, ಒಳ್ಳೆ ಧಾರ್ಮಿಕ ಪ್ರಚಾರಕ ಅಂತೆಲ್ಲಾ ಬರೆಸಿಕೊಂಡಿದ್ದ. ಇಷ್ಟೆಲ್ಲಾ ಕ್ವಾಲಿಟಿಯಿರುವ ಸ್ವಾಮೀಜಿಯ ವಸ್ತ್ರವಿನ್ಯಾಸವೇ ವಿಚಿತ್ರವಾಗಿತ್ತು. ಒಂದೊಂದು ಬಾರಿ ಒಂದೊಂದು ಅವತಾರದಲ್ಲಿ ಜನರ ಮುಂದೆ ಬರುತ್ತಿದ್ದ. ಒಮ್ಮೆ ಸ್ವಾಮೀಜಿಯಾದರೇ ಮತ್ತೊಮ್ಮೆ ಪಾಪ್ ಸಿಂಗರ್ಗಳ ಥರ ಸಾವಿರಾರು ಅಭಿಮಾನಿಗಳ ಮುಂದೆ ಕಿರುಚಾಡುತ್ತಿದ್ದ. ಇವನ ಅನುಯಾಯಿಗಳು ಹುಚ್ಚೆದ್ದು ನೋಡುತ್ತಿದ್ದರು. ಆದರೆ ಈ ಪಾಖಂಡಿ ಸ್ವಾಮೀಜಿ ತನ್ನ `ದೇರಾ ಸಚ್ಚಾ ಸೌಧ’ ಸಂಸ್ಥೆಯ ಮಹಿಳೆ ಮೇಲೆ ಅತ್ಯಾಚಾರ ಮಾಡಿದ್ದ. ಸಂಸ್ಥೆಯ ಮ್ಯಾನೇಜರ್ ಒಬ್ಬನನ್ನು ಕೊಲೆ ಮಾಡಿಸಿದ್ದ. ಇದು ಕಾವಿಯೊಳಗಿನ ಸಂತನ ಪರಾಕ್ರಮವಗಿತ್ತು..!!
ತನ್ನನ್ನು ದೇವರು ಅಂತ ಕರೆದುಕೊಂಡ ಸ್ವಾಮಿ ಸದಾಚಾರಿ ಮಾಜಿ ಪ್ರಧಾನಿ ಇಂದಿರಾ ಗಾಂಧಿಗೆ ಜ್ಯೋತಿಷ್ಯ ಹೇಳಿದ್ದನಂತೆ. ಅದೇನು ಹೇಳಿದ್ನೋ ಎಂಬುದು ಇಂದಿರಗಾಂಧಿಯವರಿಗೆ ಮಾತ್ರ ಗೊತ್ತು. ಸ್ವಾಮಿ ಸದಾಚಾರಿ ಮೇಲೆ ಅನೇಕ ವಂಚನೆ ಕೇಸ್ಗಳು ದಾಖಲಾಗಿದ್ದವು. ಅಧಿಕಾರದಲ್ಲಿದ್ದವರಿಂದ ಸಮಾಜಘಾತುಕ ಕೆಲಸಕ್ಕೆ ನೆರವು ಪಡೆದುಕೊಳ್ಳಲು ಯತ್ನಿಸಿದ್ದ ಆರೋಪ ಇವನ ಮೇಲಿತ್ತು. ಹಾಗೆಯೇ ಸ್ವಾಮಿ ಪ್ರೇಮಾನಂದ ತನ್ನನ್ನು ಸತ್ಯ ಸಾಯಿ ಬಾಬಾನ ಅವತಾರ ಎಂದು ಹೇಳಿದ್ದ. ಸುಳ್ಳಿನಿಂದ ನಿರ್ಮಿಸಿದ ಕೋಣೆಯಲ್ಲಿ 13 ಮಹಿಳೆಯರನ್ನು ಅತ್ಯಾಚಾರ ಮಾಡಿದ. ಶ್ರೀಲಂಕಾದ ಪ್ರಜೆಯೊಬ್ಬನನ್ನು ಕೊಲೆ ಮಾಡಿದ. ಹಲವು ವಿಚಾರಣೆ ಮತ್ತು ವೈದ್ಯಕೀಯ ಪರೀಕ್ಷೆಗಳ ನಂತರ ಪ್ರೇಮಾನಂದನಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿತ್ತು. 2011ರಲ್ಲಿ ಪ್ರೇಮಾನಂದ ತಮಿಳುನಾಡಿನ ಜೈಲಿನಲ್ಲಿ ಸಾವನ್ನಪ್ಪಿದ. ಸ್ವಾಮಿ ಶ್ರದ್ದಾನಂದ ಎಂಬಾತ ಹೆಂಡತಿಗೆ ಬೆಂಕಿಯಿಟ್ಟು ಕೊಂದಿದ್ದ. ಈ ಪ್ರಕರಣದಲ್ಲಿ ಸುಪ್ರಿಂ ಕೋರ್ಟ್ ಅವನಿಗೆ ಜೀವಾವಧಿ ಶಿಕ್ಷೆ ವಿಧಿಸಿತ್ತು. ಸ್ವಾಮಿ ಅಮೃತ ಚೈತನ್ಯ ಎಂಬ ಮತ್ತೊಬ್ಬ ಕಳ್ಳಸ್ವಾಮಿಗೆ ಲೈಂಗಿಕ ದೌರ್ಜನ್ಯ ಕೇಸಿನಲ್ಲಿ ಜೀವಾವಧಿ ಶಿಕ್ಷೆ ವಿಧಿಸಲಾಗಿತ್ತು. ಅವನು ವಿದೇಶಿ ಮಹಿಳೆಯ ಮೇಲೆ ಅತ್ಯಾಚಾರವೆಸಗಿದ್ದು ಸಾಬೀತಾಗಿತ್ತು.
ಇವರೆಲ್ಲರನ್ನೂ ನಮ್ಮ ದೇಶದ ಜನರು ದೇವರು ಎಂದು ಪೂಜಿಸುತ್ತಿದ್ದಾರೆ. ಪ್ರೀತಿಸುತ್ತಿದ್ದಾರೆ. ಕಳ್ಳಸ್ವಾಮಿಗಳು, ಕೊಲೆಗಡುಕರು, ಅತ್ಯಾಚಾರಿಗಳು ಎಂದು ಕೋರ್ಟ್ ತೀರ್ಪು ಕೊಟ್ಟು ಜೈಲಿಗೆ ಕಳುಹಿಸಿದರೂ ಆರಾಧಿಸುವುದನ್ನು ಮಾತ್ರಬಿಟ್ಟಿಲ್ಲ. ಜನರ ಮೌಢ್ಯಕ್ಕೆ ಏನು ಹೇಳೋಣ ಹೇಳಿ..! ನಿನ್ನನ್ನು ನೀನೇ ಕಾಪಾಡಿಕೋ ಭಗವಂತ..!!
If you Like this Story , Like us on Facebook The New India Times
POPULAR STORIES :
ಬಹುನಿರೀಕ್ಷಿತ 3 ಪೆಗ್ ಕನ್ನಡ ರ್ಯಾಪ್ ಸಾಂಗ್ ..!
70 ವರ್ಷದ ಕುರುಡು ಅಜ್ಜಿಗೆ ಕಣ್ಣುಬಂತು..!? ವಿಜ್ಞಾನವನ್ನೇ ಬೆಚ್ಚಿಬೀಳಿಸಿದ ಘಟನೆ..!
ಹಾಸನ ಸೂಸೈಡ್ ಕೇಸ್ಗೆ ಟ್ವಿಸ್ಟ್..! ಅವನ ಸಾವಿಗೆ ಕಾರಣವಾಗಿದ್ದು `ಪ್ರೇಯಸಿ’ ರೂಪದ ಅತ್ತಿಗೆ..!
ಮಾದಕ ನಟಿಗೆ ಇವತ್ತು ಬರ್ತ್ ಡೇ ಸಂಭ್ರಮ..! ಅವಳ ಬದುಕಿನಲ್ಲಿ ಗುಡುಗು, ಸಿಡಿಲಿನದ್ದೇ ಆರ್ಭಟ..! Sunny Leone Story
“ನಿನ್ನ ಪ್ರೀತಿ ಇಲ್ಲದೇ ನಾನು ಬದುಕಿರೋದಿಲ್ಲ.. ಬದುಕಿದ್ರೆ ನಿನ್ನ ಜೊತೆನೇ ನೆನಪಿರಲಿ ಚಾಂದಿನಿ”
ಅವ್ನಿಗೆ ಪ್ರೇಯಸಿಯನ್ನು ಬುಲ್ಲೆಟ್ನಲ್ಲಿ ಕೂರಿಸೋ ಆಸೆ..!? ಅದಕ್ಕಾಗಿ ಅವ್ನು ಏನ್ ಮಾಡ್ದ ಗೊತ್ತಾ..!?