GST ಬದಲಾವಣೆಯಿಂದ ರಾಜ್ಯದ ಜನರಿಗೆ 15 ಸಾವಿರ ಕೋಟಿ ರೂಪಾಯಿ ನಷ್ಟ: ಮುಖ್ಯಮಂತ್ರಿ ಸಿದ್ದರಾಮಯ್ಯ
ಬೆಂಗಳೂರು: GST ಬದಲಾವಣೆಯಿಂದ ರಾಜ್ಯದ ಜನರಿಗೆ 15 ಸಾವಿರ ಕೋಟಿ ರೂಪಾಯಿ ನಷ್ಟವಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ಗಾಂಧಿನಗರ ವಿಧಾನಸಭಾ ಕ್ಷೇತ್ರದ ಚಿಕ್ಕಪೇಟೆಯ ಆಧುನೀಕರಣ ಮತ್ತು ಗಾಂಧಿನಗರ ಕ್ಷೇತ್ರದ ರಸ್ತೆಗಳ ವೈಟ್ ಟಾಪಿಂಗ್ ಕಾಮಗಾರಿಗಳಿಗೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದರು.
GST ಜಾರಿ ಮಾಡಿ 8 ವರ್ಷ ಇಡೀ ಭಾರತೀಯರ ಹಣ ಸುಲಿದಿದ್ದು ಇದೇ ಕೇಂದ್ರ ಸರ್ಕಾರ ಮತ್ತು ಇದೇ ನರೇಂದ್ರ ಮೋದಿ. ಎಂಟು ವರ್ಷ ಸುಲಿಗೆ ಮಾಡಿ ಈಗ ಮೋದಿ ಫೋಟೋ ಹಾಕಿ “ದೀಪಾವಳಿ ಗಿಫ್ಟ್” ಎಂದು ನಾಚಿಕೆ ಇಲ್ಲದೆ ಬೆನ್ನು ತಟ್ಟಿಕೊಳ್ಳುತ್ತಿದ್ದಾರೆ. ಇಂಥಾ ನಕಲಿಗಳಿಗೆ ನೀವು ಓಟು ಹಾಕಿ ಈಗ ಏಕೆ ತಲೆ ಮೇಲೆ ಕೈ ಹೊತ್ತುಕೊಳ್ತೀರಿ ಎಂದು ಸಾರ್ವಜನಿಕರಿಗೆ ಪ್ರಶ್ನಿಸಿದರು.
“ದೀಪಾವಳಿ ಗಿಫ್ಟ್” ಎಂದು ಜಾಹಿರಾತು ನೀಡಿರುವ ಮೋದಿ ಸರ್ಕಾರದ. GST ಬದಲಾವಣೆಯಿಂದ ರಾಜ್ಯಕ್ಕೆ, ರಾಜ್ಯದ ಜನರಿಗೆ 15 ಸಾವಿರ ಕೋಟಿ ರೂಪಾಯಿ ನಷ್ಟವಾಗಿದೆ ಎಂದು ಲೆಕ್ಕ ಬಿಚ್ಚಿಟ್ಟರು.ಒಂದು ಲಕ್ಷದ 20 ಸಾವಿರ ಕೋಟಿ ವೆಚ್ಚದಲ್ಲಿ ಬೆಂಗಳೂರಿನ ಅಭಿವೃದ್ಧಿಗೆ ಮುಂದಾಗಿದ್ದೀವಿ. ಕೇಂದ್ರದಿಂದ ನಯ ಪೈಸೆ ಕೊಡುತ್ತಿಲ್ಲ ಎಂದು ವಿವರಿಸಿದರು. ಬಿಜೆಪಿ ಅಧಿಕಾರದಲ್ಲಿದ್ದಾಗ ಒಂದೇ ಒಂದು ಹೊಸ ರಸ್ತೆ ನಿರ್ಮಿಸಲಿಲ್ಲ. ಒಂದೇ ಒಂದು ರಸ್ತೆ ಗುಂಡಿ ಮುಚ್ಚಲಿಲ್ಲ. ಈಗ ಇರುವ ರಸ್ತೆಗಳೆಲ್ಲಾ ಕಾಂಗ್ರೆಸ್ ಸರ್ಕಾರದ ಕಾಲದಲ್ಲೇ ಆಗಿರುವಂಥವು ಎಂದರು.