ಆವಳ್ಯಾಕೋ ಇವತ್ತು ತುಂಬಾ ನೆನಪಾಗ್ತಿದಾಳೆ…ಬೆಳಿಗ್ಗೆ ಏಳೋ ಟೈಮಲ್ಲೇ ಅವಳ ನೆನೆಸಿಕೊಂಡು ಕಣ್ಣೀರು ಕೆನ್ನೆ ಮೇಲೆ ಜಾರಿತ್ತು.! ನಾಳೆ ಅವಳ ಬರ್ತಡೇ, ಅವಳಿಗೆ ರಾತ್ರಿ ಹನ್ನರೆಡು ಗಂಟೆಗೇ ವಿಶ್ ಮಾಡಬೇಕು ಅನ್ಕೊಂಡಿದ್ದೆ, ಫಸ್ಟ್ ವಿಶ್ ನಾನೇ ಮಾಡಬೇಕು ಅಂತ ಯಾವಾಗಲೂ ಎಕ್ಸ್ ಪೆಕ್ಟ್ ಮಾಡ್ತಾಳೆ ಆ ಮುದ್ದು ಗೆಳತಿ..! ಆದ್ರೆ ಏನ್ ಮಾಡ್ಲಿ, ಅವಳು ನನ್ನ ಬಿಟ್ಟು ಹೋಗಿದ್ದಾಳೆ, ಎಲ್ಲೋ ದೂರದ ಊರಿಗೆ ಹೋಗಿದ್ದಿದ್ರೆ ಮತ್ಯಾವತ್ತೋ ಬರ್ತಾಳೆ ಅನ್ಕೋತಿದ್ದೆ. ಅವಳು ಮತ್ತೆಂದೂ ಬಾರದ ಜಾಗಕ್ಕೆ ಹೋಗಿಬಿಟ್ಟಿದ್ದಾಳೆ..! ನನ್ನ ಬಿಟ್ಟು ಹೋದ ನನ್ನ ಜೀವದ ಗೆಳತಿ ಬದುಕ್ಕಿದ್ದಿದ್ರೆ ಪ್ರೀತಿಯಿಂದ ವಿಶ್ ಮಾಡೋ ಖುಷಿ ನನ್ನದಾಗಿರುತ್ತಿತ್ತು. ಆದ್ರೆ ಆ ಸಂತೋಷ ನನಗಿಲ್ಲ, ಅವಳು ನನ್ನ ಏಕಾಂಗಿಯಾಗಿ ಬಿಟ್ಟು ಹೋದ ನನ್ನ ಜೀವದ ಜೀವ ಪೂರ್ಣಿಮಾ..
ರಿಲೇಟಿವ್ ಆಗಿದ್ರೂ ಅವಳು ನಂಗೆ ಸಂಬಂಧಿ ಅನ್ನೋದಕ್ಕಿಂತ, ಬೆಸ್ಟ್ ಫ್ರೆಂಡ್ ಅನ್ನೋದು ಸತ್ಯ..! ಯಾವಾಗಲೂ ಹಾಡುಹರಟೆ ನಮ್ಮದು. ಅದಕ್ಕೇ, ಆ ದಿನದ ಹರಟೆ ಪದೇಪದೇ ಕಾಡುತ್ತೆ ನನಗೆ..! ಮಾತಾಡ್ತಾ ಆಡ್ತಾ ಅವಳು ಕುತ್ತಿಗೆ ಬಳಿ ಹುಟ್ಟಿದ್ದ ಸಣ್ಣ ಗುಳ್ಳೆ ತೋರಿಸಿ ಏನಾಗಿದೆ ನೋಡು ಅಂತ ಕೇಳಿದಾಗ, `ಕ್ಯಾನ್ಸರ್ ಇರಬೇಕು ಕಣೇ ಅಂತ ತಮಾಷೆಗೆ ರೇಗಿಸಿದ್ದು ದೇವರಿಗೆ ಕೇಳಿಬಿಡ್ತಾ ಅನ್ನೋ ನೋವಿದೆ..! ಆ ದೇವ್ರು ಅವಳಿಗೆ ನಿಜವಾಗಿಯೂ ಕ್ಯಾನ್ಸರ್ ಕೊಟ್ಟುಬಿಟ್ಟ..! ಅವಳನ್ನು ನಮ್ಮೆಲ್ಲರಿಂದ ಬೇಗ ಕರೆದುಕೊಂಡು ಹೋಗಿಬಿಟ್ಟ..! ಗೆಳತಿ.. ಐ ರಿಯಲಿ ಮಿಸ್ ಯೂ ಕಣೇ..!
This website and its content is copyright of – © Thenewindiantimes.com 2015. All rights reserved.
Any redistribution or reproduction of part or all of the contents Without Permission or Courtesy in any form is prohibited.
ಅವತ್ತು ತಮಾಷೆಗೆ ಆಡಿದ ಮಾತು ಎರಡು ಮೂರು ತಿಂಗಳಲ್ಲಿ ನಿಜವಾಗಿಬಿಡ್ತು..! ಕುತ್ತಿಗೆಯ ಮೇಲಿನ ಆ ಗುಳ್ಳೆ ಕ್ಯಾನ್ಸರ್ ಟ್ಯೂಮರ್ ಅಂತ ಡಯಾಗನೈಸ್ ಆಯ್ತು..ಛೇ! ಒಂದೊಂದ್ ಸಲ ದೇವ್ರು ನಾವಾಡೋ ಮಾತು ಕೇಳಿಸ್ಕೊಂಡು ತಥಾಸ್ತು ಅಂತ ಹೇಳ್ತಾನಂತೆ. ಆದ್ರೆ ಮಾಡಿದ ತಮಾಷೆಯನ್ನೇ ಅಷ್ಟು ಸೀರಿಯಸ್ ಆಗಿ ತಗೊಂಡುಬಿಟ್ಟ ಕಟುಕ ದೇವ್ರು..!ಯಾಕಾದ್ರೂ ಆ ತರ ತಮಾಷೆ ಮಾಡಿಬಿಟ್ನೋ ಅಂತ ಕಣ್ಣೀರಿಟ್ಟ ಮೇಲಾದ್ರೂ, ಕರುಣೆಯಿಂದ ಅವಳ ರೋಗ ವಾಸಿ ಮಾಡಿಬಿಡಬಹುದಿತ್ತು..! ಆದ್ರೆ ಅವನು ಆಡಿದ್ದೇ ಆಟ.. ಓ ದೇವ್ರೇ..ಐ ಹೇಟ್ ಯೂ..!
ಅವಳಿಗಾಗ ಬರೀ 21 ವರ್ಷ..! ಕ್ಯಾನ್ಸರ್ ಇದೆ ಅಂತ ಗೊತ್ತಾದ ಆ ಕ್ಷಣ ಹೇಗಾಗಿರಬೇಡ ಅವಳಿಗೆ..? ಬದುಕಿನ ಭರವಸೆಯೆಲ್ಲಾ ಒಮ್ಮೆಲೇ ಕಳಚಿ ಬಿದ್ದುಹೋಗಿರುತ್ತೆ. ದೇವರು ನಂಗ್ಯಾಕೆ ಮೋಸ ಮಾಡಿದ ಅಂತ ಅವಳು ಬಿಕ್ಕಿಬಿಕ್ಕಿ ಅತ್ತ ದಿನ ನೆನಸ್ಕೊಂಡ್ರೆ ಇವತ್ತು ನನ್ನ ಕಣ್ಣಲ್ಲಿ ನೀರು ತುಂಬಿಕೊಳ್ಳುತ್ತೆ, ಎದೆಯಲ್ಲಿ ಹೇಳಲಾಗದ ಸಂಕಟ, ಕೈಕಾಲು ನಡುಗುತ್ತೆ..! ಅವತ್ತು ಅವಳನ್ನು ಸಮಾಧಾನ ಪಡಿಸೋಕೂ ನನ್ನ ಹತ್ರ ಮಾತುಗಳಿರಲಿಲ್ಲ..! ಈ ದೇವ್ರು ಅನ್ನೋನೇ ಇಲ್ಲ ಅಂತ ಅವತ್ತೇ ನನಗನಿಸಿದ್ದು..! ಅವನು ಇದ್ದಿದ್ರೆ ಅವಳಿಗೆ ಹೀಗೆಲ್ಲಾ ಮಾಡ್ತಿದ್ನಾ..?
ತನಗೆ ಕ್ಯಾನ್ಸರ್ ಅಂತ ಗೊತ್ತಾದ ಮೇಲೂ ಅವಳು ಬದುಕಿದ ಆ ದಿನಗಳಿದ್ಯಲ್ಲಾ, ಅದುದು ನನ್ನನ್ನು ಯಾವತ್ತೂ ಕಾಡುತ್ತೆ..! ನೀನ್ಯಾಕೇ ಬೇಜಾರ್ ಮಾಡ್ಕೋತಿಯ..? ಕ್ಯಾನ್ಸರ್ ರೋಗದಲ್ಲಿ ನಂಗೆ ಬಂದಿರೋ ಕ್ಯಾನ್ಸರ್ರೇ ಸಣ್ಣದಂತೆ ಕಣೇ, ನಂಗೇನೂ ಆಗಲ್ಲ ಅಂತ ಭರವಸೆಯಲ್ಲೇ ಬದುಕಿದ್ಲು..! ಜೀವ, ಜೀವನ ಎರಡನ್ನೂ ಕಿತ್ತುಕೊಂಡ ಕ್ಯಾನ್ಸರ್ ಆವರಿಸಿಕೊಂಡಿದ್ರು ತನ್ನ ಲೈಫನ್ನು ಪ್ರೀತಿಸಿದ ಪರಿ ಎಂಥವರ ಕಲ್ಲುಮನಸ್ಸನ್ನೂ ಕರಗಿಸಿಬಿಡ್ತಿತ್ತು.! ಅವಳನ್ನು ಸಮಾಧಾನ ಮಾಡೋಕೆ ಕಣ್ಣಲ್ಲಿ ನೀರು ತುಂಬಿಕೊಂಡು ಹೋದವರಿಗೆಲ್ಲಾ ಅವಳೇ ಸಮಾಧಾನ ಮಾಡಿ ಕಳಿಸ್ತಿದ್ಲು..! ಕ್ಯಾನ್ಸರ್ ಬಂದೋರೆಲ್ಲಾ ಸಾಯಲ್ಲ ಕಣೇ ಹುಚ್ಚಿ, ಜಸ್ಟ್ ಇನ್ನೂ ಸ್ಟಾರ್ಟಿಂಗ್ ಸ್ಟೇಜಲ್ಲಿದೆ, ನಂಗೇನೂ ಆಗಲ್ಲ ಅಂತ ಅವಳು ಹೇಳ್ದಾಗ ಕಣ್ಣಂಚಲ್ಲಿ ತುಂಬಿದ್ದ ಕಣ್ಣೀರನ್ನ ಹಾಗೇ ಅಂಗೈಯಲ್ಲಿ ಗೊತ್ತಾಗದಂತೆ ಒರೆಸಿ ಮೌನಿಯಾಗಿಬಿಟ್ಟಿದ್ದೆ.
ದೇಹಕ್ಕೆ ಹೊಕ್ಕಿರೋದು ಪಾಪಿ ಕ್ಯಾನ್ಸರ್, ಆದ್ರೂ ಕಾಲೇಜಿಗೆ ಹೋಗೋದನ್ನ ನಿಲ್ಲಿಸಿರಲ್ಲ ಅವಳು.. ಹದಿನೈದು ದಿನಕ್ಕೊಮ್ಮೆ ಮಾಡಿಸೋ ಕೀಮೋಥೆರಪಿಯ ನೋವಿದ್ದರೂ, ಪರೀಕ್ಷೆಯನ್ನು ಧೈರ್ಯವಾಗಿ ಎದುರಿಸಿದ್ಲು..! ಡಿಸ್ಟಿಂಕ್ಷನ್ ಮಾರ್ಕ್ಸ್ ತೆಗೆದು ಪಾಸಾಗಿಬಿಟ್ಟಿದ್ಲು..! ಅವಳಿಗೆ ವಿಶ್ ಮಾಡೋಕೆ ಹೋದವರಿಗೆಲ್ಲಾ ಸಿಕ್ಕಾಪಟ್ಟೆ ನಗಿಸಿ ಕಳಿಸಿದ್ದನ್ನು ಮರೆಯೋದಾದ್ರೂ ಹೇಗೆ..? ಗೆಳತಿ… ನೀನು ನನ್ನ ಪಾಲಿನ ಅದ್ಭುತ ಕಣೇ..!
ಅವತ್ತು ಇಡೀ ಜಗತ್ತಿಗೆ ಹೊಸ ವರ್ಷದ ದಿನ. ಆದರೆ ಅವಳ ಪಾಲಿಗೆ ಇಷ್ಟು ವರ್ಷದ ಜೀವನ ಮುಗಿಸೋ ದಿನ..! ಪೂರ್ಣಿಮಾ ಅಂತ ತುಂಬು ಚಂದ್ರನ ಹೆಸರಿಟ್ಟುಕೊಂಡವಳ ಪಾಲಿಗೆ ಅವತ್ತಿನ ದಿನ ಖಗ್ರಾಸ ಸೂರ್ಯಗ್ರಹಣ..! ಅವತ್ತು ಸಾಯಂಕಾಲ ಬಂದ ಫೋನ್ ನನ್ನ ಜಗತ್ತನ್ನು ಕತ್ತಲೆ ಮಾಡಿತ್ತು..! ಅವಳು ಇನ್ನಿಲ್ಲ ಅನ್ನೋ ಸತ್ಯವನ್ನು ಒಪ್ಪಿಕೊಳ್ಳೋಕೆ ನನಗೂ, ಅವಳನ್ನು ತುಂಬಾ ಇಷ್ಟ ಪಡೋ ನನ್ನ ಮನಸ್ಸಿಗೂ ಸಾಧ್ಯವೇ ಇರಲಿಲ್ಲ..! ಅವಳ ಜೊತೆಗಿದ್ದ ಪ್ರತಿ ಕ್ಷಣಗಳು ನೆನಪಾದ್ವು, ಅವಳ ನಗು, ಅವಳ ತುಂಟತನ, ಜಾಣತನ, ಮುದ್ದುಮುಖ ಎಲ್ಲಾ ನನ್ನ ಕಾಡ್ತಾ ಇತ್ತು..! ನಾನವಳನ್ನು ಅದೆಷ್ಟು ಹಚ್ಚಿಕೊಂಡಿದ್ದೆ ಅನ್ನೋದು ಆ ಕ್ಷಣದಲ್ಲಿ ನೆಲಕ್ಕೆ ಬೀಳುತ್ತಿದ್ದ ಪ್ರತಿ ಕಣ್ಣೀರ ಹನಿಗಳು ಹೇಳುತ್ತಿತ್ತು..!
ಅವಳು ನನ್ನ ಅದ್ಯಾಕೆ ಅಷ್ಟು ಇಷ್ಟಪಡ್ತಿದ್ಲೋ ದೇವರಿಗೇ ಗೊತ್ತು..! ಒಟ್ಟಿಗೇ ಕೂತು ಊಟ ಮಾಡ್ತಿದ್ದಾಗ ಕೈತುಂಬ ತುತ್ತು ಮಾಡಿ ಬಾಯಿಗಿಡುತ್ತಿದ್ದ ಆ ದಿನಗಳನ್ನು ನಾನ್ಯಾವತ್ತೂ ಮರೆಯೋಕೆ ಸಾಧ್ಯ ಇಲ್ಲ..! ನಮ್ಮಿಬ್ಬರಲ್ಲೇ ಉಳಿದು ಹೋದ ಸೀಕ್ರೇಟ್ ಗಳು ಅದೆಷ್ಟೋ…! ಅವಳ ಭಾವ, ಬದುಕು, ಭಾವನೆ, ನನಗೆ ಅವಳ ಎಲ್ಲಾ ವಿಚಾರಗಳೂ ಗೊತ್ತು..! ಅವಳ ಕ್ಲಾಸಿನಲ್ಲಾಗೋ ಪ್ರತೀ ಜೋಕಿಂದ ಹಿಡಿದು, ಮನೆಯ ವಿಷಯಗಳೂ ಗೊತ್ತಿರ್ತಾ ಇತ್ತು ನಂಗೆ..! ಸಿಟ್ಟಿಂದ ಕೂಗಿದ್ದು, ಜೊತೆಗೇ ಅತ್ತಿದ್ದು,ಬೊಗಸೆ ತುಂಬಿ ಪ್ರೀತಿ ಕೊಟ್ಟಿದ್ದು,ಕಾಡಿಸಿದ್ದು ಎಲ್ಲವೂ ಈಗ ಬರೀ ನೆನಪಷ್ಟೆ.! ಪ್ರತೀ ದಸರಾ ರಜಾ, ಬೇಸಿಗೆ ರಜಾ ಬಂದ್ರೆ ಅವಳ ಮನೆಗೆ ಹೋಗಿ 4 ದಿನ ಉಳ್ಕೊಳ್ಳೋ ನನಗೆ,ಅವಳಿಲ್ದೇ ಇರೋ ಅತ್ತೆಯ ಮನೆಗೆ ಹೋಗೋದಿಕ್ಕೆ ಮನಸೇ ಆಗಲ್ಲ..! ಅದು ನನಗೆ ಯಾವತ್ತೂ ಅತ್ತೆ ಮನೆಯಲ್ಲ, ನನ್ನ ಗೆಳತಿಯ ಮನೆ..!
ಅವ್ಳು ಯಾವಾಗ್ಲೂ ಹೇಳ್ತಾ ಇದ್ಲು..’ಪದ್ದು ನಿನ್ ಫಸ್ಟ್ ಸ್ಯಾಲರೀಲಿ ನಂಗೆ ಎಂತಾ ಕೊಡಿಸ್ತೀಯ..?’ ಅಂತ. `ನಿಂಗಿಷ್ಟ ಆಗೋ ಡ್ರೆಸ್ ಕೊಡಿಸ್ತೀನಿ’ ಅಂತಾನೂ ಹೇಳಿದ್ದೆ ನಾನು. ಮೊನ್ನೆ ತಾನೇ ಫಸ್ಟ್ ಸ್ಯಾಲರಿ ಕೈಗೆ ಬಂತು. ಸಂಬಳದ ಸಂತೋಷಕ್ಕಿಂತ, ಅವಳಿಗೇನೂ ಕೊಡಿಸಲಾಗದ ನೋವಿನ ಭಾರವೇ ಜಾಸ್ತಿ ಇದೆ..! ನಾಳೆ ಅವಳ ಹುಟ್ಟುಹಬ್ಬ..! ಹ್ಯಾಪಿ ಬರ್ತಡೇ ಟೂ ಯೂ ಅಂತ ಹೇಳಿಸಿಕೊಳ್ಳೋಕೆ ಅವಳೂ ಇಲ್ಲ, ಹಾಗಂತ ಅವಳಿಲ್ಲದಿದ್ದರೂ ಹಾಡೋಕೆ ನನ್ನ ಕಂಠಕ್ಕೆ ಶಕ್ತಿ ಇಲ್ಲ..! ನೀನಿಲ್ಲದಿದ್ದರೇನು ಗೆಳತಿ, ನಿನ್ನ ಜೊತೆಗೆ ಕಳೆದ ಒಂದೊಂದು ಕ್ಷಣವೂ, ನಾನು ಜೀವಂತವಿರುವವರೆಗೂ ಜೀವಂತ..! ಸ್ವರ್ಗದಲ್ಲಿರೋ ನಿನಗಿದೋ `ಹ್ಯಾಪಿ ಹ್ಯಾಪಿ ಬರ್ತಡೇ….!’
- ಪದ್ಮಾ ಭಟ್