ತಾನು ಕಣ್ಣು ಮುಚ್ಚುವ ಮೊದಲು ತನ್ನ ಕಂದಮ್ಮನನ್ನು ನೋಡಬೇಕು ಎಂದು ತಾಯಿಯೊಬ್ಬರು ರೋಧಿಸುತ್ತಿದ್ದಾರೆ. ಹಾಸನದ ರೂಪಶ್ರೀಯೇ ಈ ತಾಯಿ.
2 ವರ್ಷಗಳ ಹಿಂದೆ ಇವರು ಆಲೂರು ತಾಲೂಕು ರಾಜನಹಳ್ಳಿಯ ಮಹೇಶ್ ಎಂಬಾತನನ್ನು ಮದುವೆಯಾಗಿದ್ದರು. ಮೊದಲ ಮಗು ಜನಿಸಿದ ಬಳಿಕ ಮತ್ತೊಂದು ಮಗುವಿಗೆ ಅಂತರ ಇರಲಿ ಎಂದು ವೈದ್ಯರು ಹೇಳಿದ್ದರೂ, ರೂಪಶ್ರೀ ಗರ್ಭಿಣಿಯಾಗಿದ್ದರು. 2ನೇ ಮಗುವಾದರೆ ತಾಯಿ ಜೀವಕ್ಕೆ ಅಪಾಯ ಎಂದು ವೈದ್ಯರು ಹೇಳಿದ ನಂತರ ಶಸ್ತ್ರಚಿಕಿತ್ಸೆ ಮಾಡಿಸಲಾಯಿತು. ಆಗ ಇವರಿಗೆ ಎರಡೂ ಕಿಡ್ನಿ ವೈಫಲ್ಯವಾಗಿವೆ ಎಂಬ ಆಘಾತಕಾರಿ ವಿಷಯ ತಿಳಿಯಿತು. ಅಲ್ಲಿಂದ ಇಲ್ಲಿಯವರೆಗೂ ರೂಪಶ್ರೀಗೆ ಆಸ್ಪತ್ರೆಯಲ್ಲೇ ಕಾಲ ಕಳೆಯುತ್ತಿದ್ದಾರೆ.
ಹಾಸನದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ರೂಪಶ್ರೀಗೆ ತನ್ನ ಒಬ್ಬನೇ ಮಗ ಲಲಿತ್ ಕುಮಾರ್ ನನ್ನು ಒಂದು ಬಾರಿ ನೋಡೋ ಬಯಕೆ. ಅದಕ್ಕಾಗಿ ಮಗ ಬೇಕು, ಮಗಬೇಕು ಅಂತ ಒಂದೇ ಸಮನೆ ಹಂಬಲಿಸುತ್ತಿದ್ದಾರೆ. ಯಾವಾಗ ಸಾಯುತ್ತೇನೋ ಗೊತ್ತಿಲ್ಲ. ಅಷ್ಟರೊಳಗೆ ತನ್ನ ಮಗನನ್ನು ಒಮ್ಮೆ ಒಡಲಲ್ಲಿ ಮಲಗಿಸಿ ಮುದ್ದಾಡಬೇಕು ಅಂತ ತನ್ನ ಸುತ್ತಮುತ್ತ ಇರೋ ರೋಗಿಗಳ ಬಳಿ ಹೇಳಿಕೊಂಡು ಕಣ್ಣೀರಿಡುತ್ತಿದ್ದಾರೆ.
ರೂಪಶ್ರೀ ತಂದೆ ಹೆಸರಿನಲ್ಲಿ 2 ಎಕರೆ ಆಸ್ತಿಯಿದೆ. ಅದರಲ್ಲಿ ಪಾಲು ಬೇಕು ಎಂದು ಪತಿ ಮಹೇಶ್ ಮತ್ತು ಆತನ ಮನೆಯವರು, ತಾಯಿಯಿಂದ ಮಗುವನ್ನು ಬೇರ್ಪಡಿಸಿದ್ದಾರೆ. ಕೊಡಬಾರದ ಕಿರುಕುಳ ಕೊಡುತ್ತಿದ್ದಾರೆ ಎಂದು ರೂಪಶ್ರಿ ಪೋಷಕರು ಆರೋಪಿಸಿದ್ದಾರೆ., ಹಾಸನ ನಗರ ಠಾಣೆಯಲ್ಲಿ ದೂರು ಕೂಡ ದಾಖಲಿಸಿದ್ದಾರೆ. ಪತ್ನಿ ಅನಾರೋಗ್ಯದಿಂದ ನರಳುತ್ತಿದ್ದರೂ ಒಮ್ಮೆಯೂ ಆಸ್ಪತ್ರೆಯತ್ತ ಪತಿ ಸುಳಿದಿಲ್ಲ…! ಪೋಷಕರೇ ಈಗಾಗಲೇ 2 ಲಕ್ಷ ಖರ್ಚು ಮಾಡಿ ರೂಪಶ್ರೀಯನ್ನು ನೋಡಿಕೊಳ್ತಾ ಇದ್ದಾರೆ.