ಪಾಕಿಸ್ತಾನ; ಅದರ ರಕ್ತದಲ್ಲೇ ವಿಷವಿದೆ. ಆ ದೇಶದ ಮುಂದೆ ಒಗ್ಗಟ್ಟು ಎಂಬ ಪದವೇ ಅರ್ಥಹೀನ. ಭಾರತದ ಮೇಲೆ ಹಿಂಬಾಗಿಲಿನಿಂದ ದಾಳಿಗಿಳಿಯುವ ಆ ದೇಶಕ್ಕೆ ನಮ್ಮ ದೇಶವನ್ನು ನೇರಾ ನೇರಾ ಎದುರಿಸುವ ಸಾಮರ್ಥ್ಯವಿಲ್ಲ. ಮೂರು ಮೂರು ಯುದ್ಧಗಳಲ್ಲಿ ಅದನ್ನು ಬಗ್ಗುಬಡಿದಿರುವ ಭಾರತ ಇವತ್ತು ಅಭಿವೃದ್ಧಿಯ ಕಡೆ ಚಿತ್ತ ನೆಟ್ಟಿದೆ. ಆದರೆ ಪಾಕಿಸ್ತಾನ ಮಾತ್ರ ಭಾರತದ ಮೇಲೆ ದ್ವೇಷವನ್ನು ಮುಂದುವರಿಸುತ್ತಿದೆ. ಆ ದೇಶಕ್ಕೆ ಆರ್ಥಿಕವಾಗಿ ಉದ್ಧಾರವಾಗುವ ಉಮ್ಮೇದಿಗಿಂತ, ಭಾರತವನ್ನು ಕೆಣಕುವ, ಕೆರಳಿಸುವ ಆಸಕ್ತಿಯೇ ಹೆಚ್ಚಿದೆ.
ಕುಲಭೂಷಣ್ ಜಾಧವ್ ಅವರ ಪೂರ್ವಪರ, ನಡೆದ ಘಟನೆಯನ್ನು ತಿಳಿಯುವ ಮುನ್ನ- ಭೇಟಿಗೆ ಅವರ ಪತ್ನಿ, ತಾಯಿಗೆ ವಿಶ್ವದ ಒತ್ತಡಕ್ಕೆ ಮಣಿದು ಮಾನವೀಯತೆಯ ಆಧಾರದಲ್ಲಿ ಅವಕಾಶ ಮಾಡಿಕೊಟ್ಟ ಪಾಕಿಸ್ತಾನ ಅಮಾನವೀಯವಾಗಿ ನಡೆದುಕೊಂಡಿದೆ. ನೇರ ಭೇಟಿಗೆ ಅವಕಾಶ ನೀಡದೇ, ಒಂದು ಅಪ್ಪುಗೆಯನ್ನು ಕಲ್ಪಿಸದೇ, ಮಾತೃಭಾಷೆಯಲ್ಲಿ ಮತನಾಡಲು ಬಿಡದೇ – ಸೌಂಡ್ ಪ್ರೂಫ್ ಕೋಣೆಯಲ್ಲಿ ಗಾಜಿನ ಪರದೆಯಲ್ಲಿ ಕೇವಲ ಮುಖವನ್ನು ನೋಡುತ್ತಾ, ಹೆಡ್‍ಫೋನ್ ಮೂಲಕ ಇಂಗ್ಲೀಷ್‍ನಲ್ಲಿ ಸಂಭಾಷಿಸುವಂತೆ ಮಾಡಿದ ಪಾಕಿಸ್ತಾನದ ನಡೆ ಸೆಕ್ಯೂರಿಟಿಯ ನೆಪವೇ, ಆತಂಕವೇ, ಉದ್ದೇಶಪೂರ್ವಕವೇ ಅರ್ಥವಾಗದಾಗಿದೆ.
ಜಾಧವ್ ಭೇಟಿಗೂ ಮುನ್ನ ನೊಂದ ಜೀವಗಳಾದ ಅವರ ತಾಯಿ ಅವಂತಿ, ಪತ್ನಿ ಚೇತನ್‍ಕುಲ್‍ರನ್ನು ಪಾಕ್ ತೀರಾ ಅನಾಗರೀಕವಾಗಿ ನಡೆಸಿಕೊಂಡಿತ್ತು. ಬಿಂದಿ ಅಳಿಸಿದ್ದು, ಮಾಂಗಲ್ಯ ಬಿಚ್ಚಿಸಿದ್ದು, ಶಂಕೆಯ ನೆಪವೊಡ್ಡಿ ಶೂ ತೆಗೆಸಿದ್ದು – ಇಪ್ಪತ್ತೊಂದು ತಿಂಗಳ ನಿರೀಕ್ಷೆಗೆ ವಿಷವುಣ್ಣಿಸಿದಂತಾಗಿದೆ. ಪಾಕ್ ತನ್ನ ನಡಾವಳಿಗೆ ಭದ್ರತೆಯ ನೆಪವೊಡ್ಡಬಹುದು. ಭಾರತ ಸಂಪ್ರದಾಯದ ಬಗ್ಗೆ ಮಾತನಾಡುತ್ತಿದೆ. ಇನ್ನೊಂದು ಮಗ್ಗಲು ಕುಲಭೂಷಣ್ ಜಾಧವ್ ಜೊತೆ ಮುಕ್ತ ಅವಕಾಶ ಕೊಟ್ಟಿದ್ದರೇ, ಅವರನ್ನು ಹೀನಾಯವಾಗಿ ನಡೆಸಿಕೊಂಡ ಕ್ರೌರ್ಯ ಬಹಿರಂಗವಾಗಬಹುದು ಎಂದು ಪಾಕ್ ಹೀಗೆ ನಡೆದುಕೊಂಡಿದೆ ಎನ್ನಲಾಗುತ್ತಿದೆ.
ಇದೀಗ ಭಾರತ ಪಾಕಿಸ್ತಾನದ ನಡಾವಳಿಯನ್ನು ಟೀಕಿಸಿದೆ. ಪಾಕ್ ಭಾರತದ ಮಹಿಳೆಯರು ಮತ್ತವರ ಘನತೆಯನ್ನು ಅವಮಾನಿಸಿದೆ. ಅಂತಾರಾಷ್ಟ್ರೀಯ ನ್ಯಾಯಾಲಯದಲ್ಲಿ ನೀಡಿರುವ ಗಡುವು ಮುಗಿಸಿ, ಜಾಧವ್ ಅವರನ್ನು ನಿರಪರಾಧಿ ಎಂದು ಸಾಬೀತುಪಡಿಸಿ ಭಾರತಕ್ಕೆ ಕರೆಸಿಕೊಳ್ಳಬೇಕು. ಮಾತುಕತೆಯ ಸಮಯದಲ್ಲಿ ಜಾಧವ್ ಅವರನ್ನು ನೋಡಿದರೇ ತಿಳಿಯುತ್ತದೆ. ಪಾಕಿಸ್ತಾನದ ಅತ್ಯಂತ ಕ್ರೂರವಾಗಿ ಅವರನ್ನು ನಡೆಸಿಕೊಂಡಿದೆ. ಅವರ ತಲೆ ಮತ್ತು ಕತ್ತಿನಲ್ಲಿ ಕಪ್ಪ ನೀಲಿಮಿಶ್ರಿತ ಗಾಯವಿದೆ. ಕಿವಿಯೆಲುಬಿನ ಗಾಯ ಕಾಣುತ್ತಿಲ್ಲ. ಕೋಟ್ ಹಾಕಿ ಕೂರಿಸಿದ್ದು ಚಿತ್ರಹಿಂಸೆಯನ್ನು ಮುಚ್ಚಿಡುವುದಕ್ಕಾಗಿದೆ.
ಪಾಕಿಸ್ತಾನದ ಈ ನಡೆಯೇ ಅನುಮಾನಿಸುವಂತಾಗಿದೆ. ಪಾಕ್ ಈ ಕುರಿತು ಏನೇ ಪ್ರತಿಕ್ರಿಯೆ ಕೊಟ್ಟರೂ ಅದು ನಿಸ್ಸಂಶಯವಾಗಿ ಭಾರತದ ಮೇಲೆ ಪೂರ್ವಗ್ರಹಪೀಡಿತವಾಗಿದೆ. ಮಾನವೀಯತೆಯನ್ನೇ ಮರೆತಿದೆ. ಹಫೀಜ್‍ನಂತಹ ಉಗ್ರರೇ ಅಲ್ಲಿ ಪಕ್ಷ ಕಟ್ಟುತ್ತಾರೆಂದ ಮೇಲೆ, ಕ್ರೌರ್ಯದ ನಾಡಿನಲ್ಲಿ ಸಹಬಾಳ್ವೆಯನ್ನು ನಿರೀಕ್ಷಿಸುವುದು ತಪ್ಪಾಗುತ್ತದೆ. ಪಾಕಿಸ್ತಾನಕ್ಕೆ ಬುದ್ದಿ ಕಲಿಸದೇ ವಿಧಿಯಿಲ್ಲ ಎಂಬ ಮಾತು ಕೇಳಿಬರುತ್ತಿದೆ.
ನಿಜ, ಪಾಕಿಸ್ತಾನ ಭಾರತದ ವಿಚಾರದಲ್ಲಿ ಪದೇಪದೇ ಮೋಸ ಮಾಡುತ್ತಿದೆ. ವಿನಾಕಾರಣ ತೊಂದರೆ ಕೊಡುತ್ತಿದೆ. ಪಾಕ್ ಹೇಳುವಂತೆ ಬಲೂಚಿಸ್ತಾನದಲ್ಲಿ ಪಾಕ್ ಸೈನಿಕರಿಂದ ಬಂಧಿತನಾಗಿದ್ದ ಭಾರತದ ನೌಕಾಪಡೆಯ ನಿವೃತ್ತ ಅಧಿಕಾರಿ ಕುಲಭೂಷಣ್ ಜಾಧವ್‍ಗೆ ಅಲ್ಲಿನ ಸೇನಾ ನ್ಯಾಯಾಲಯ ಮರಣದಂಡನೆ ಶಿಕ್ಷೆ ವಿಧಿಸಿದೆ. ಅಸಲಿಗೆ ಜಾಧವ್ ಬಲೂಚಿಸ್ತಾನಕ್ಕೆ ಹೋಗೇ ಇಲ್ಲ ಎಂದು ಭಾರತ ಹೇಳುತ್ತಿದೆ. ಪಾಕಿಸ್ತಾನ ಮಾತ್ರ ಬಲೂಚಿಸ್ತಾನದಲ್ಲಿ ಸೆರೆಸಿಕ್ಕ ಇಂಡಿಯನ್ ರಾ ಏಜೆಂಟ್ ಎಂದು ಹೇಳುತ್ತಿದೆ. ಈ ಬಗ್ಗೆ ಭಾರತದ ಜೊತೆ ಒಂದು ಸೆಕೆಂಡು ಕೂಡ ಚರ್ಚಿಸದೇ, ಸತ್ಯಾಸತ್ಯತೆಗಳ ಮಾಹಿತಿ ಕೇಳದೇ ತೀರ್ಪು ಪ್ರಕಟಿಸಿರುವುದು; ದೇಶದ ಮೇಲಿನ ಸೇಡಿನ ಹೆಜ್ಜೆಯೇ ಹೊರತು ಬೇರೇನಲ್ಲ.
ಒಂದುವೇಳೆ ಪಾಕಿಸ್ತಾನ ಜಾಧವ್ ಮೇಲೆ ಮರಣದಂಡನೆ ವಿಧಿಸಲು ಮುಂದಾದರೇ ಅದು ಪೂರ್ವಯೋಜಿತ ಕೊಲೆಯಾಗುತ್ತೆ ಎಂದು ಭಾರತ ಹೇಳಿದೆ. ಭಾರತದಲ್ಲಿರುವ ಪಾಕಿಸ್ತಾನದ ಹೈಕಮಿಷನರ್ ಅಬ್ದುಲ್ ಬಸಿತ್ ಅವರನ್ನು ಕರೆಸಿಕೊಂಡು ವಿದೇಶಾಂಗ ಕಾರ್ಯದರ್ಶಿ ಎಸ್. ಜೈಶಂಕರ್ ಈ ಕುರಿತು ಪ್ರತಿಭಟನೆ ದಾಖಲಿಸಿದ್ದಾರೆ. ಜಾಧವ್ ವಿರುದ್ಧದ ಇಡೀ ವಿಚಾರಣೆ `ಪ್ರಹಸನ’ದಂತೆ ನಡೆದಿದೆ. ಅವರ ವಿರುದ್ಧ ಯಾವುದೇ `ವಿಶ್ವಾಸಾರ್ಹ ಪುರಾವೆ’ಯನ್ನು ಪಾಕಿಸ್ತಾನ ಹೊಂದಿಲ್ಲ ಎಂದು ಪ್ರತಿಭಟನಾ ಪತ್ರದಲ್ಲಿ ಹೇಳಲಾಗಿದೆ.
ಜಾಧವ್ ಅವರನ್ನು ಕಳೆದ ವರ್ಷ ಇರಾನ್‍ನಿಂದ ಅಪಹರಿಸಲಾಗಿತ್ತು. ಅವರು ಪಾಕಿಸ್ತಾನಕ್ಕೆ ಹೇಗೆ ತಲುಪಿದರು ಮತ್ತು ಅವರು ಅಲ್ಲಿ ಹೋಗಿದ್ದರು ಎಂಬ ಬಗ್ಗೆ ನಂಬಿಕೆ ಬರುವ ಯಾವುದೇ ವಿವರಣೆಯನ್ನು ಪಾಕಿಸ್ತಾನ ನೀಡಿಲ್ಲ ಎಂದೂ ಭಾರತ ಆಕ್ಷೇಪ ವ್ಯಕ್ತಪಡಿಸಿದೆ. ಆದರೆ `ಭಾರತದ ಗುಪ್ತಚರ ಸಂಸ್ಥೆ `ರಾ’ ಪರವಾಗಿ ಬೇಹುಗಾರಿಕಾ ಕೆಲಸಗಳಲ್ಲಿ ತೊಡಗಿದ್ದ ಹಾಗೂ ಪಾಕಿಸ್ತಾನದಲ್ಲಿ ವಿಧ್ವಂಸಕ ಕೃತ್ಯ ನಡೆಸಲು ಸಂಚು ರೂಪಿಸಿದ್ದಕ್ಕಾಗಿ ಮರಣದಂಡನೆ ವಿಧಿಸಲಾಗಿದೆ. ಅವರ ವಿರುದ್ಧದ ಎಲ್ಲ ಆರೋಪಗಳೂ ಸಾಬೀತಾಗಿವೆ. ಪಾಕಿಸ್ತಾನ ಸೈನ್ಯ ಕಾಯ್ದೆ ಅಡಿಯಲ್ಲಿ ಫೀಲ್ಡ್ ಜನರಲ್ ಕೋರ್ಟ್ ಮಾರ್ಷಲ್ ಮೂಲಕ ವಿಚಾರಣೆ ನಡೆಸಿ ಈ ತೀರ್ಪು ನೀಡಲಾಗಿದೆ ಎಂದು ಪಾಕಿಸ್ತಾನದ ಸೇನೆ ಮುಖ್ಯಸ್ಥ ಜನರಲ್ ಕಮರ್ ಜಾವೇದ್ ಬಾಜ್ವಾ ಹೇಳಿದ್ದಾರೆ.
ಬಲೂಚಿಸ್ತಾನ ಹಾಗೂ ಕರಾಚಿಯಲ್ಲಿ ವಿಧ್ವಂಸಕ ಕೃತ್ಯಗಳಿಗೆ ಪ್ರೇರಣೆ ನೀಡುವ ಮೂಲಕ ಶಾಂತಿ ಸುವ್ಯವಸ್ಥೆ ಭಂಗಗೊಳಿಸಲು ಭಾರತೀಯ ಗೂಢಚರ ಸಂಸ್ಥೆ `ರಾ’ ನನ್ನನ್ನು ನಿಯೋಜಿಸಿದೆ ಎಂದು ನ್ಯಾಯಾಧೀಶರ ಮುಂದೆ ಜಾಧವ್ ಒಪ್ಪಿಕೊಂಡಿದ್ದಾರೆ ಎಂದು ಪಾಕಿಸ್ತಾನ ಪ್ರಕಟಣೆಯಲ್ಲಿ ತಿಳಿಸಿದೆ. ಜಾಧವ್ ಅವರು ಭಾರತೀಯ ನೌಕಾಪಡೆಯ ನಿವೃತ್ತ ಅಧಿಕಾರಿ ಎಂದು ಭಾರತ ದೃಢಪಡಿಸಿತ್ತು. ಆದರೆ ಸರ್ಕಾರದೊಂದಿಗೆ ಅವರಿಗೆ ಯಾವುದೇ ಸಂಪರ್ಕವಿಲ್ಲ ಎಂದು ಕೂಡ ಹೇಳಿತ್ತು. ಜಾಧವ್ ಅವರಿಗೆ ಕಾನ್ಸುಲ್ ಕಚೇರಿಯಿಂದ ನೆರವು ಪಡೆಯಲು ಅವಕಾಶ ಕೊಡಬೇಕು ಎಂದು ಪಾಕಿಸ್ತಾನದಲ್ಲಿರುವ ಹೈಕಮಿಷನ್ ಕಚೇರಿ ಮೂಲಕ ಭಾರತ ಕೋರಿತ್ತು. ಅಂತರರಾಷ್ಟ್ರೀಯ ಕಾನೂನು ಪ್ರಕಾರ ಅದಕ್ಕೆ ಅವಕಾಶ ಇದೆ. ಆದರೆ ಹದಿಮೂರು ಮನವಿ ಸಲ್ಲಿಸಿದರೂ ಪಾಕಿಸ್ತಾನ ಅದಕ್ಕೆ ಅವಕಾಶ ಕೊಟ್ಟಿಲ್ಲ.
ಪಾಕಿಸ್ತಾನದ ಆರೋಪಗಳು..!
* 2016ರ ಮಾರ್ಚ್ 3ರಂದು ಬಲೂಚಿಸ್ತಾನದಲ್ಲಿ ಜಾಧವ್ ಬಂಧನ
* ಜಾಧವ್ ಅವರನ್ನು ಭಾರತದ ಗೂಢಚರ ಸಂಸ್ಥೆ `ರಾ’ ಪಾಕಿಸ್ತಾನದಲ್ಲಿ ನಿಯೋಜಿಸಿದೆ
* ಬಲೂಚಿಸ್ತಾನದಲ್ಲಿ ವಿಧ್ವಂಸಕ ಕೃತ್ಯ ನಡೆಸುವುದು ಜಾಧವ್ ಉದ್ದೇಶವಾಗಿತ್ತು
* ತಪ್ಪೊಪ್ಪಿಗೆ ವಿಡಿಯೋ ಪಾಕ್ ಸೇನೆಯಿಂದ ಬಿಡುಗಡೆಯಾಗಿದೆ
ಪಾಕಿಸ್ತಾನ ಹೇಳುವಂತೆ 2016ರ ಮಾರ್ಚ್ ಮೂರರಂದು ಬಲೂಚಿಸ್ತಾನದಲ್ಲಿ ಜಾಧವ್ ಅವರ ಬಂಧನವಾಗಿದೆ. ಆತ ಬಲೂಚಿಸ್ತಾನದಲ್ಲಿ ವಿದ್ವಂಸಕ ಕೃತ್ಯ ನಡೆಸಲು ಇಂಡಿಯನ್ ರಾ ಏಜೆನ್ಸಿ ನೇಮಿಸಿದೆ. ಜಾಧವ್ ಈ ಎಲ್ಲಾ ತಪ್ಪುಗಳನ್ನು ಒಪ್ಪಿಕೊಂಡಿದ್ದಾನೆ. ಅದಕ್ಕೆ ಸಂಬಂಧಪಟ್ಟ ವಿಡಿಯೋ ಸಾಕ್ಷ್ಯ ತನ್ನ ಬಳಿಯಿದೆ.
ಭಾರತದ ವಾದವೇನು..?
* ಜಾಧವ್ ನೌಕಾಪಡೆಯಲ್ಲಿದ್ದರು
* ಅವರು ಅವಧಿಗೆ ಮುನ್ನವೇ ನಿವೃತ್ತಿ ಪಡೆದಿದ್ದಾರೆ
* ಅವರೊಂದಿಗೆ ಭಾರತದ ಸೇನೆಗೆ ಈಗ ಯಾವ ಸಂಬಂಧವಿಲ್ಲ
* ಜಾಧವ್ ವಿರುದ್ಧ ಯಾವುದೇ `ವಿಶ್ವಾಸಾರ್ಹ ಪುರಾವೆ’ ಇಲ್ಲ
* ಜಾಧವ್ ಬಂಧನದ ಬಗ್ಗೆ ಪಾಕಿಸ್ತಾನ ನೀಡಿರುವ ವಿವರಣೆ ಸುಳ್ಳು
* ಜಾಧವ್ ವಿಚಾರಣೆ ಮಾಹಿತಿಯನ್ನು ಭಾರತದ ಹೈಕಮಿಷನ್‍ಗೆ ಪಾಕಿಸ್ತಾನ ನೀಡಿಲ್ಲ
ಇನ್ನು ಜಾಧವ್ ಅವರಿಗೆ ವಿನಾಕಾರಣ ಮರಣದಂಡನೆ ವಿಧಿಸಿರುವ ಪಾಕಿಸ್ತಾನದ ಕ್ರಮವನ್ನು ಅಂತರಾಷ್ಟ್ರೀಯ ಮಾನವ ಹಕ್ಕುಗಳ ಸಂಸ್ಥೆ ಆಮ್ನೆಸ್ಟಿ ಇಂಟರ್‍ನ್ಯಾಶನಲ್ ವಿರೋಧಿಸಿದೆ. ಒಂದು ವೇಳೆ ಪಾಕ್ ಜಾಧವ್ ಅವರಿಗೆ ಮರಣದಂಡನೆ ವಿಧಿಸಿದರೇ ಅದು ಅಂತಾರಾಷ್ಟ್ರೀಯ ಕಾನೂನು ಉಲ್ಲಂಘನೆಯಾಗಲಿದೆ ಎಂದಿದೆ. ಸೇನಾ ನ್ಯಾಯಾಲಯಗಳು ಆರೋಪಿಯ ಹಕ್ಕುಗಳನ್ನು ನಿರಾಕರಿಸುತ್ತವೆ ಮತ್ತು ಅನುಮಾನಾಸ್ಪದವಾದ ರೀತಿಯಲ್ಲಿ ಕಾರ್ಯನಿರ್ವಹಿಸುತ್ತವೆ. ಸೇನೆಗೆ ಸಂಬಂಧಿಸಿದ ವಿಚಾರಗಳನ್ನು ಬಿಟ್ಟು ಬೇರೆ ಯಾವ ಆರೋಪಿಗಳನ್ನೂ ಇಂತಹ ನ್ಯಾಯಾಲಯಗಳಲ್ಲಿ ವಿಚಾರಣೆ ನಡೆಸಬಾರದು ಎಂದು ಆಮ್ನೆಸ್ಟಿ ಹೇಳಿದೆ. ಅಂತಾರಾಷ್ಟ್ರೀಯ ನ್ಯಾಯಾಲಯ ಜಾಧವ್ ಮರಣದಂಡನೆಗೆ ತಡೆಯೊಡ್ಡಿದ್ದು ಗಮನಾರ್ಹ.
ಕುಲಭೂಷಣ್ ಜಾಧವ್ ಯಾರು..?
ಕುಲಭೂಷಣ್ ಸುಧೀರ್ ಜಾಧವ್ ಅಲಿಯಾಸ್ ಕುಲಭೂಷಣ್ ಯಾದವ್ ಅಲಿಯಾಸ್ ಹುಸೈನ್ ಮುಬಾರಕ್ ಪಟೇಲ್. ಮುಂಬೈ ಮೂಲದ ಇವರು 1987ರಲ್ಲಿ ಇಂಡಿಯನ್ ನ್ಯಾಷನಲ್ ಡಿಫೆನ್ಸ್ ಅಕಾಡೆಮಿ ಸೇರಿಕೊಂಡಿದ್ದರು. 1991ರಲ್ಲಿ ಭಾರತೀಯ ನೌಕಾಪಡೆಯ ಇಂಜಿನಿಯರಿಂಗ್ ವಿಭಾಗಕ್ಕೆ ನೇಮಕವಾದರು. ಪಾರ್ಲಿಮೆಂಟ್ ಮೇಲೆ ದಾಳಿ ನಡೆದ ನಂತರ ಜಾಧವ್ ಭಾರತದ ಗೂಡಚರ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದರು. 2003ರಲ್ಲಿ ಇರಾನ್‍ನ ಚಾಬಹಾರ್‍ನಲ್ಲಿ ಸಣ್ಣ ಉಧ್ಯಮ ಆರಂಭಿಸಿದ್ದರು ಎನ್ನಲಾಗುತ್ತಿದೆ.
ಮಾರ್ಚ್ ಮೂರು 2016ರಂದು ಇರಾನ್ ಮೂಲಕ ಬಲೂಚಿಸ್ತಾನ ಪ್ರವೇಶಸಿದ ಇವರನ್ನು ಚಮನ್ ಬಾರ್ಡರ್‍ನಲ್ಲಿ ತಡೆದ ಪಾಕ್ ಸೈನಿಕರು ತಪಾಸಣೆಗೊಳಪಡಿಸಿದ್ದರು. ತಪಾಸಣೆಯ ವೇಳೆ ಅವರ ಪಾಸ್‍ಪೋರ್ಟ್‍ನಲ್ಲಿ ನಮೂದಿಯಾಗಿದ್ದ ಹೆಸರು ಹುಸೈನ್ ಮುಬಾರಕ್ ಪಟೇಲ್. ತೀವ್ರ ತಪಾಸಣೆಗೊಳಪಡಿಸಿದಾಗ ಆತ ಭಾರತದ ನೌಕಾಪಡೆಯ ಉದ್ಯೋಗಿಯಾಗಿದ್ದು, ಆನಂತರ ಇಂಡಿಯನ್ ರಾ ಏಜೆಂಟ್ ಆಗಿ ಕೆಲಸ ಮಾಡುತ್ತಿದ್ದಾರೆ. ಬಲೂಚಿಸ್ತಾನ ಹಾಗೂ ಕರಾಚಿಯಲ್ಲಿ ವಿಧ್ವಂಸಕ ಕೃತ್ಯವನ್ನು ನಡೆಸಲು ರಾ ಅವರನ್ನು ನೇಮಿಸಿದೆ ಎಂದು ಪಾಕಿಸ್ತಾನ ಹೇಳಿತ್ತು.
ಜಾಧವ್ ಬಲೂಚಿಸ್ತಾನದ ಪ್ರತ್ಯೇಕತಾವಾದಿಗಳ ಜೊತೆ ಸಂಪರ್ಕವಿಟ್ಟುಕೊಂಡಿದ್ದ. ಅವರ ಮೂಲಕ ದೇಶದಲ್ಲಿ ಆತಂಕವಾದವನ್ನು ಬಿತ್ತಲು ಪಿತೂರಿ ನಡೆಸಿದ್ದ ಎಂದು ಬಲೂಚಿಸ್ತಾನದ ಗೃಹಮಂತ್ರಿ ಸರ್ಫರಾಜ್ ಭಗ್ತಿ ಹೇಳಿಕೆ ಕೊಟ್ಟಿದ್ದರು. ಪಾಕಿಸ್ತಾನಿ ವಿರೋಧಿ ಉಗ್ರರಿಗೆ ಹಣಕಾಸನ್ನು ಪೂರೈಸಿ ಅವರ ಮೂಲಕ ಕರಾಚಿ ಹಾಗೂ ಗ್ವಾದಾರ್ ಸ್ಫೋಟಕ್ಕೆ ಸಂಚು ರೂಪಿಸಿದ್ದ ಎಂದು ಪಾಕಿಸ್ತಾನ ಹೇಳಿತ್ತು. ಜಾಧವ್ ಇಸ್ಲಾಂಗೆ ಕನ್ವರ್ಟ್ ಆಗಿದ್ದ. ನಕಲಿ ಐಡಿ ಮಾಡಿಕೊಂಡಿದ್ದ. ಬಲೂಚಿಸ್ತಾನದ ಗದಾನಿಯಲ್ಲಿ ಗುಜರಿ ವ್ಯಾಪಾರ ಮಾಡಿಕೊಂಡಿದ್ದ. ವ್ಯಾಪಾರದ ನೆಪದಲ್ಲಿ ಪಾಕಿಸ್ಥಾನಿ ಪ್ರತ್ಯೇಕತವಾದಿಗಳ ತಲೆ ವಿಷ ಬೀಜ ಬಿತ್ತುತ್ತಿದ್ದ. ಅವರಿಗೆ ಹಣ ಪೂರೈಸಿ ದೇಶದ್ರೋಹದ ಕೆಲಸಕ್ಕೆ ಚಿತಾವಣೆ ನೀಡುತ್ತಿದ್ದ. ಬಲೂಚಿಸ್ತಾನದಲ್ಲಿ ದೇಶವಿರೋಧಿ ಚಟುವಟಿಕೆಯನ್ನು ಎನ್‍ಕ್ಯಾಶ್ ಮಾಡಿಕೊಳ್ಳಲು ಇಂಡಿಯನ್ ರಾ ಏಜೆನ್ಸಿ ಪಿತೂರಿ ನಡೆಸಿತ್ತು ಎಂದು ಪಾಕಿಸ್ತಾನ ಸೇನೆಯ ಲೆಫ್ಟಿನೆಂಟ್ ಜನರಲ್ ಅಸೀಮ್ ಸಲೀಂ ಬಾಜ್ವಾ ಹೇಳಿದ್ದರು.
ಆದರೆ ಭಾರತ ಪಾಕಿಸ್ತಾನದ ಆರೋಪವನ್ನು ನಿರಾಕರಿಸಿ, ಆತ ಇಂಡಿಯನ್ ನೇವಿಯಲ್ಲಿ ಕೆಲಸ ಮಾಡುತ್ತಿದ್ದದ್ದು ನಿಜ. ಆದರೆ ಆತನಿಗೂ ಇಂಡಿಯನ್ ರಾ ಏಜೆನ್ಸಿಗೂ ಸಂಬಂಧವಿಲ್ಲ ಎಂದು ಹೇಳಿತ್ತು. ಆದರೆ ಪಾಕಿಸ್ತಾನ ಜಾಧವ್ ಬಗ್ಗೆ ಪಕ್ಕಾ ಸಾಕ್ಷ್ಯ ನಮ್ಮ ಬಳಿಯಿದೆ ಎಂದು ಇನ್ನಷ್ಟು ಮಾಹಿತಿಯನ್ನು ಹೊರಗಿಟ್ಟಿತ್ತು. ಜಾಧವ್ 2003ರಲ್ಲಿ ಜಾಬಹಾರ್‍ಗೆ ಹುಸೈನ್ ಮುಬಾರಕ್ ಪಟೇಲ್ ಎಂಬ ಹೆಸರಿನಲ್ಲಿ ಎಲ್ 9630722 ನಂಬರಿನ ಫೇಕ್ ಪಾಸ್‍ಪೋರ್ಟ್ ಮೂಲಕ ಪ್ರವೇಶಿಸಿದ್ದ. ಅದರಲ್ಲಿ ಆಗಸ್ಟ್ 30, 1968ರಲ್ಲಿ ಮಹಾರಾಷ್ಟ್ರದ ಮುಂಬೈನಲ್ಲಿ ಜನಿಸಿದ ವಿವರವಿತ್ತು. ಆದರೆ 2013ರ ಹೊತ್ತಿಗೆ ಬಲೂಚಿಸ್ತಾನದ ಪ್ರತ್ಯೇಕವಾದಿಗಳ ಜೊತೆಗೆ ಸೇರಿಕೊಂಡ. ಆತ ನೌಕಾಯುದ್ಧಗಳ ಪಟ್ಟುಗಳನ್ನು ಕರಗತ ಮಾಡಿಕೊಂಡಿದ್ದ. ಬಲೂಚಿ ಹೋರಾಟಗಾರರರಿಗೆ ಅಪಾರ ಪ್ರಮಾಣದಲ್ಲಿ ಹಣ, ವೆಪನ್‍ಗಳನ್ನು ಪೂರೈಸುತ್ತಿದ್ದ ಹಾಜಿ ಬಲೂಚ್ ಸಂಪರ್ಕ ಬೆಳೆಸಿಕೊಂಡಿದ್ದ.
ಈ ಹಾಜಿ ಬಲೂಚ್ ಪಾಕಿಸ್ತಾನದ ಸಫೂರ ಬಸ್ ಬಾಂಬ್ ದಾಳಿಯ ರೂವಾರಿಯಾಗಿದ್ದ. ಅನಾಮತ್ತು ನಲವತ್ತೈದು ಮುಸಲ್ಮಾನ ಪ್ರಯಾಣಿಕರ ಸಾವಿಗೆ ಕಾರಣನಾಗಿದ್ದ. ಇಂತಹ ಹಿನ್ನೆಲೆಯಿರುವ ಹಾಜಿ ಬಲೂಚ್ ಜೊತೆ ಜಾಧವ್ ನಿರಂತರ ಸಂಪರ್ಕದಲ್ಲಿದ್ದ. ಹಲವಾರು ಭಾರಿ ಸಭೆ ನಡೆಸಿದ್ದ. ಕರಾಚಿ ಹಾಗೂ ಸಿಂಧ್ ಪ್ರಾಂತ್ಯದಲ್ಲಿ ಕಿಡಿ ಹಾಕುವ ರೂಪುರೇಶೆಗಳನ್ನು ಸಿದ್ದಪಡಿಸಿದ್ದರು. ಇಷ್ಟು ಮಾತ್ರವಲ್ಲ ಜಾಧವ್ ಗ್ವಾದಾರ್ ಬಂದರು ಮೇಲೆ ಕಣ್ಣಿಟ್ಟಿದ್ದ. ಚೀನಾ-ಪಾಕ್ ಎಕಾನಾಮಿಕ್ ಕಾರಿಡಾರ್ ಅನ್ನು ಧ್ವಂಸಗೊಳಿಸಲು ಸ್ಕೆಚ್ ರೂಪಿಸಿದ್ದ. ಈ ಕಾರಿಡಾರ್ ಬಗ್ಗೆ ಮೊದಲಿನಿಂದಲೂ ಬಲೂಚಿಸ್ತಾನ್, ಗಿಲ್ಗಿಟ್, ಬಲ್ಟಿಸ್ತಾನದ ಜನರಿಗೆ ಅಸಮಾಧಾನಗಳಿವೆ. ಅದನ್ನೇ ಎನ್‍ಕ್ಯಾಶ್ ಮಾಡಿಕೊಂಡು ಅವರನ್ನೇ ಬಳಸಿಕೊಂಡು ಎಕಾನಾಮಿಕ್ ಕಾರಿಡಾರ್ ಯೋಜನೆಯನ್ನು ಹಾಳುಗೆಡವಲು ಸಂಚು ಮಾಡಿದ್ದ ಎಂದು ಲೆಫ್ಟಿನೆಂಟ್ ಜನರಲ್ ಅಸೀಮ್ ಸಲೀಂ ಬಾಜ್ವಾ ಹೇಳಿದ್ದರು.
ಜಾಧವ್ ತನನ್ನು ರಾ ಏಜೆಂಟ್ ಎಂದು ಒಪ್ಪಿಕೊಂಡಿದ್ದಾನೆ. ಆತ ಪಾಕಿಸ್ತಾನದಲ್ಲಿ ನಡೆಸಲು ಇಚ್ಛಿಸಿದ್ದ ಕೃತ್ಯಗಳ ಬಗ್ಗೆ ಬಾಯಿಬಿಟ್ಟಿದ್ದಾನೆ. ಅವೆಲ್ಲದರ ವಿಡಿಯೋ ಸಾಕ್ಷ್ಯ ತಮ್ಮ ಬಳಿಯಿದೆ ಎಂದು ಪಾಕಿಸ್ತಾನ ಹೇಳುತ್ತಿದೆ. ಈ ಆಧಾರದಲ್ಲಿಯೇ ದೇಶದ್ರೋಹದ ಕೃತ್ಯವೆಸಗಿದ ಈತನಿಗೆ ಪಾಕ್ ಸೇನಾ ನ್ಯಾಯಾಲಯ ಮರಣದಂಡನೆ ಶಿಕ್ಷೆಯನ್ನು ವಿಧಿಸಿದೆ ಎಂದಿದೆ. ಆದರೆ ಪಾಕ್ ಹೇಳುತ್ತಿರುವುದೆಲ್ಲಾ ಸುಳ್ಳು. ಇವೆಲ್ಲವನ್ನು ಮೀರಿ ಜಾಧವ್ ಅವರನ್ನು ನೆಣಿಗೇರಿಸಿದರೇ ಅದು ಪೂರ್ವಯೋಜಿತ ಕೃತ್ಯವಾಗುತ್ತದೆ ಎಂದು ಭಾರತ ಹೇಳುತ್ತಿದೆ. ಈಗ ಇಪ್ಪತ್ತೊಂದು ತಿಂಗಳ ನಂತರ ವಿಶ್ವ ಒತ್ತಡಕ್ಕೆ ಮಣಿದು ಭೇಟಿ ಎಂಬ ನಾಟಕ ಮಾಡಿ ಜಾಧವ್ ಕುಟುಂಬ ಸದಸ್ಯರನ್ನು ಅಲ್ಲಿನಡಳಿತ, ಮಾಧ್ಯಮ ಅವಮಾನಿಸಿದೆ. ಅಮೃತವುಣ್ಣಲು ಹೋದವರಿಗೆ ವಿಷ ಬಡಿಸುವ ಪ್ರವೃತ್ತಿ ಬದಲಾಗುವುದಿಲ್ಲ. ಶೇಮ್ ಆನ್ ಯೂ ಪಾಕಿಸ್ತಾನ್.
ಪಾಕಿಸ್ತಾನದ ನಿರ್ಧಾರವನ್ನು ಖಂಡಿಸಿದ ಭಾರತ.