ಪ್ರವಾಸಿ ಶ್ರೀಲಂಕಾ ವಿರುದ್ಧ ಟೀಂ ಇಂಡಿಯಾ ಗೆಲುವಿನ ಓಟವನ್ನು ಮುಂದುವರೆಸಿದ್ದು, ಇಂದೋರ್ ನಲ್ಲಿ ಇಂದು ನಡೆದ 2ನೇ ಟಿ20 ಪಂದ್ಯದಲ್ಲಿ 88 ರನ್ ಗಳ ಜಯಗಳಿಸಿದೆ. ಈ ಮೂಲಕ 3 ಪಂದ್ಯಗಳ ಟಿ20 ಸರಣಿಯನ್ನು ಇನ್ನೂ ಒಂದು ಪಂದ್ಯ ಬಾಕಿ ಇರುವಂತೇ ತನ್ನ ತೆಕ್ಕೆಗೆ ಹಾಕಿಕೊಳ್ಳುವಲ್ಲಿ ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾ ಯಶಸ್ವಿಯಾಗಿದೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಭಾರತ ನಾಯಕ ರೋಹಿತ್ ಶರ್ಮಾ (118) ಶತಕ ಹಾಗೂ ಆರಂಭಿಕ ಆಟಗಾರ ಕನ್ನಡಿಗ ಕೆ.ಎಲ್ ರಾಹುಲ್ ಅವರ ಅರ್ಧಶತಕ (89)ದ ನೆರವಿನಿಂದ 260 ರನ್ ಗಳ ಬೃಹತ್ ಮೊತ್ತವನ್ನು ಗಳಿಸಿತ್ತು.
ಇದಕ್ಕೆ ಉತ್ತರವಾಗಿ ಬ್ಯಾಟಿಂಗ್ ಆರಂಭಿಸಿದ ಶ್ರೀಲಂಕಾ ಭಾರತೀಯ ಬೌಲರ್ ಗಳ ದಾಳಿಗೆ ತಲೆಬಾಗಿ ಸೋಲಪ್ಪಿತು. ಶ್ರೀಲಂಕಾ ಪರ ಉಪುಲ್ ತರಂಗ (47) ಮತ್ತು ಕುಶಲ್ ಪೆರೇರ (77) ಹೋರಾಟ ನಡೆಸಿದರೂ ಗೆಲುವು ಸಾಧ್ಯವಾಗಲಿಲ್ಲ. 17.2 ಓವರ್ ಗಳಲ್ಲಿ ಲಂಕಾ ಗಳಿಸಿದ್ದು 172 ರನ್ ಮಾತ್ರ.
ಟೀ ಇಂಡಿಯಾ ಪರ ಯಜ್ವೇಂದ್ರ ಚಹಾಲ್ 4, ಕುಲ್ದೀಪ್ ಯಾದವ್ 3, ಉನಾದ್ಕತ್ ಹಾಗೂ ಹಾರ್ದಿಕ್ ಪಾಂಡ್ಯ ತಲಾ 1 ವಿಕೆಟ್ ಪಡೆದರು. ನಾಯಕ ರೋಹಿತ್ ಶರ್ಮಾ ಪಂದ್ಯ ಪುರುಷ ಪ್ರಶಸ್ತಿಗೆ ಪಾತ್ರರಾದರು.