ಕೋಲ್ಕತ್ತ ನೈಟ್ ರೈಡರ್ಸ್ ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್ 5 ವಿಕೆಟ್ ಗಳ ವಿರೋಚಿತ ಗೆಲುವು ದಾಖಲಿಸಿದೆ.
ಚೆನ್ನೈ ನ ಎಂ ಎ ಚಿದಂಬರಂ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಸೂಪರ್ ಕಿಂಗ್ಸ್ ನಾಯಕ ಮಹೇಂದ್ರ ಸಿಂಗ್ ಧೋನಿ ಕೋಲ್ಕತ್ತ ನೈಟ್ ರೈಡರ್ಸ್ ಗೆ ಬ್ಯಾಟಿಂಗ್ ಗೆ ಆಹ್ವಾನ ನೀಡಿದರು.
ಆದರೆ ಧೋನಿ ಲೆಕ್ಕಾಚರವನ್ನು ತಲೆಕೆಳಗಾಗಿಸುವಂತೆ ಬ್ಯಾಟ್ ಬೀಸಿದ ದಿನೇಶ್ ಕಾರ್ತಿಕ್ ನೇತೃತ್ವದ ಕೋಲ್ಕತ್ತ ನಿಗಧಿತ 20 ಓವರ್ ಗಳಲ್ಲಿ 6 ವಿಕೆಟ್ ಕಳೆದುಕೊಂಡು 202 ರನ್ ಗಳ ಬೃಹತ್ ಮೊತ್ತ ಪೇರಿಸಿತು. ಆ್ಯಂಡ್ರ ರಸೇಲ್ ಅಜೇಯ 88 ರನ್ ಗ ಬಲದಿಂದ ಈ ಮೊತ್ತ ಪೇರಿಸಲು ಸಾಧ್ಯವಾಗಿತ್ತು.
ಗುರಿ ಬೆನ್ನಟ್ಟಿದ ಧೋನಿ ಪಡೆಗೆ ಶೇನ್ ವ್ಯಾಟ್ಸನ್ (42) , ಅಂಬಟಿ ರಾಯ್ಡು (39) ರನ್ ಉತ್ತಮ ಆರಂಭ ಒದಗಿಸಿದರು. ನಂತರ ಒಂದು ಹಂತದಲ್ಲಿ ಸೋಲಿನ ದವಡೆಗೆ ಸಿಲುಕಿದ್ದ ತಂಡವನ್ನು ಮೇಲೆತ್ತಿ ಗೆಲುವಿನ ಕಡೆಗೆ ಕೊಂಡೊಯ್ದಿದ್ದು ಸ್ಯಾಮ್ ಬಿಲ್ಲಿಂಗ್ಸ್ (56). ಆದರೆ, ಬಿಲ್ಲಿಂಗ್ಸ್ ಔಟಾದ ನಂತರ ಮತ್ತೆ ಗೆಲುವು ಕೋಲ್ಕತ್ತಾ ಕಡೆಗೆ ವಾಲಿದಂತಿತ್ತು. ಕೊನೆಯ ಓವರ್ ನಲ್ಲಿ ಗೆಲ್ಲಲು 17 ರನ್ ಬೇಕಿದ್ದಾಗ ಕಾರ್ತಿಕ್ ವಿನಯ್ ಕುಮಾರ್ ಅವರ ಕೈಗೆ ಬಾಲಿತ್ತರು. ಮೊದಲ ಎಸೆತದಲ್ಲಿ ವಿನಯ್ ಎಸೆದ ನೋ ಬಾಲ್ ನಲ್ಲಿ ಬ್ರಾವೋ ಸಿಕ್ಸ್ ಬಾರಿಸಿದರು. ಅಂತಿಮವಾಗಿ 2 ಎಸೆತದಲ್ಲಿ 4 ರನ್ ಬೇಕಿದ್ದಾಗ ರವೀಂದ್ರ ಜಡೇಜ ಸಿಕ್ಸರ್ ಬಾರಿಸಿ ಗೆಲುವಿನ ದಡ ಸೇರಿಸಿದರು.