1. ಪಾಕ್ ಇನ್ನೂ ಭಾರತ ನೀಡಿರುವ ಸಾಕ್ಷ್ಯಗಳನ್ನು ಅವಲೋಕಿಸುತ್ತಿದೆಯಂತೆ..!
ಪಂಜಾಬಿನ ಪಠಾಣ್ ಕೋಟ್ನ ವಾಯು ನೆಲೆ ಮೇಲಿನ ಉಗ್ರರ ದಾಳಿಯ ಬಗ್ಗೆ ಭಾರತ ಸರ್ಕಾರ ನೀಡಿರುವ ಸಾಕ್ಷ್ಯಗಳನ್ನು ಪಾಕಿಸ್ತಾನ ಇನ್ನೂ ವಿಚಾರಿಸುತ್ತಿದೆಯಂತೆ..! ನಾವು ಭಾರತ ಒದಗಿಸಿರುವ ಸಾಕ್ಷ್ಯಗಳನ್ನು ಕೂಲಂಕುಷವಾಗಿ ಅವಲೋಕಿಸುತ್ತಿದ್ದೇವೆಂದು ಪಾಕ್ ವಿದೇಶಾಂಗ ಸಚಿವಾಲಯವೇ ಹೇಳಿದೆ.
ಪಾಕಿಸ್ಥಾನವೂ ಭಾರತ ಸರ್ಕಾರದೊಂದಿಗೆ ಸಂಪರ್ಕದಲ್ಲಿದೆ. ಭಯೋತ್ಪಾಧನೆಯನ್ನು ಪರಿಣಾಮಕಾರಿಯಾಗಿ ಮಟ್ಟ ಹಾಕುವುದಕ್ಕೆ ನಾವೂ ಬದ್ಧರಾಗಿದ್ದೇವೆಂದು ಪಾಕ್ ಹೇಳಿದೆ..!
2. ಶ್ರೀಲಂಕಾದಿಂದ ಮೀನುಗಾರರನ್ನು ಬಿಡುಗೆಗೊಳಿಸಿ : ಜಯಲಲಿತಾ
ಶ್ರೀಲಂಕಾ 104 ಭಾರತೀಯ ಮೀನುಗಾರರನ್ನು ಸೆರೆಹಿಡಿದಿಟ್ಟುಕೊಂಡಿರುವುದಕ್ಕೆ ವಿಷಾದ ವ್ಯಕ್ತಪಡಿಸಿರುವ ತಮಿಳುನಾಡಿನ ಮುಖ್ಯಮಂತ್ರಿ ಜಯಲಲಿತಾ, ಈ ಕೂಡಲೇ ನಮ್ಮ ಮೀನುಗಾರರನ್ನು ಬಿಡಿಗಡೆ ಮಾಡಿಸಿ ದೇಶಕ್ಕೆ ವಾಪಸ್ಸು ಕರೆತನ್ನಿ, ಈ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳಿ ಎಂದು ಕೇಂದ್ರ ಸರ್ಕಾರಕ್ಕೆ ಆಗ್ರಹಿಸಿದ್ದಾರೆ.
104 ಜನ ಮೀನುಗಾರರನ್ನೂ 66 ಹಡಗುಗಳನ್ನೂ ಹಿಂತಿರುಗಿಸುವಂತೆ ಪ್ರಧಾನಿ ಮೋದಿ ಕೊಲೊಂಬೋ ಜೊತೆಗೆ ಉನ್ನತ ಮಟ್ಟದ ಮಾತುಕತೆ ನಡೆಸಬೇಕೆಂದು ಜಯಲಲಿತಾ ಒತ್ತಾಯಿಸಿದ್ದಾರೆ.
3. ಇಂದಿನಿಂದ ನಂದಿನಿ ಹಾಲಿಗೆ 4 ರೂಪಾಯಿ ಹೆಚ್ಚಳ
ಇಂದಿನಿಂದ ನಂದಿನ ಹಾಲಿನ ದರ ಲೀಟರ್ಗೆ 4 ರೂಪಾಯಿ ಹೆಚ್ಚಿದೆ. ಮೊಸರು ಬೆಲೆಯೂ 2 ರೂಪಾಯಿ ಹೆಚ್ಚಿದ್ದು ಗ್ರಾಹಕರಿಗೆ ಬೆಲೆ ಏರಿಕೆ ಬಿಸಿ ತಟ್ಟಿದೆ. ಇದರ ಬೆನ್ನಲ್ಲೇ ಕಾಫಿ, ಟೀ ಬೆಲೆಯೂ ಹೆಚ್ಚಾಗಿದೆ.
2013ರಲ್ಲಷ್ಟೇ ಎರಡು ಬಾರಿ ದರ ಹೆಚ್ಚಿಸಿ ರಾಜ್ಯದ ಜನತೆಗೆ ಶಾಕ್ ನೀಡಿದ್ದ ರಾಜ್ಯ ಸರ್ಕಾರ ಈ ಬಾರಿ ಉತ್ಪದನಾ ವೆಚ್ಚ ಮತ್ತು ಬರದ ನೆಪವೊಡ್ಡಿ ದರ ಹೆಚ್ಚಿಸಿದೆ. ಕೆಎಂಎಫ್ ಲೀಟರ್ ಗೆ 5 ರೂಪಾಯಿ ಏರೆಕೆ ಮಾಡುವಂತೆ ಪ್ರಸ್ತಾವನೆ ಸಲ್ಲಿಸಿತ್ತು, ಆದರೆ ಸರ್ಕಾರ 4 ರೂಪಾಯಿ ಹೆಚ್ಚಿಸಿದೆ.
ಬದಲಾದ ಹಾಲಿನ ದರ ಪಟ್ಟಿ :
ಬ್ಲ್ಯೂ ಪ್ಯಾಕ್ : 29 ರಿಂದ 33 ರೂಪಾಯಿಗೆ ಏರಿಕೆಯಾಗಿದೆ
ಟೋನ್ಡ್ ಹಾಲು : 30 ರಿಂದ 34ಕ್ಕೆ ಹೆಚ್ಚಾಗಿದೆ.
ಫುಲ್ ಕ್ರೀಮ್ ಟೋನ್ಡ್ 34ರಿಂದ 38 ರೂಗಳು, ಶುಭಂ 35ರೂನಿಂದ 39 ರೂಪಾಯಿಗಳು, ಸಮೃದ್ಧಿ 42ರೂನಿಂದ 46 ರೂಪಾಯಿಗಳಿಗೂ, ಮೊಸರು 36ರೂಪಾಯಿಯಿಂದ 38 ರೂಪಾಯಿಗಳಿಗೂ ಏರಿಕೆ ಆಗಿದೆ.
4. ಬಿಎಸ್ ವೈಗೆ ಬಿಗ್ ರಿಲೀಫ್; 15 ಪ್ರಕರಣಗಳನ್ನು ರದ್ದುಗೊಳಿಸಿದ ಹೈಕೋರ್ಟ್
ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪರ ವಿರುದ್ಧ ದಾಖಲಾಗಿದ್ದ 15 ಪ್ರರಣಗಳನ್ನು ರಾಜ್ಯ ಹೈಕೋರ್ಟ್ ರದ್ದುಗೊಳಿಸಿದೆ. . ಆರೋಪಗಳಿಗೆ ಗುರಿಯಾಗಿ ರಾಜ್ಯ ಮತ್ತು ಕೇಂದ್ರದಲ್ಲಿ ಪ್ರಮುಖ ಜವಾಬ್ದಾರಿಯುತ ಹುದ್ದೆಗಳಿಂದ ವಂಚಿತರಾಗಿದ್ದ ಯಡಿಯೂರಪ್ಪ ಈಗ ಎಲ್ಲಾ ಕಳಂಕಗಳಿಂದ ಮುಕ್ತರಾಗಿದ್ದಾರೆ. ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ನಡೆದಿದ್ದ ಡಿ-ನೋಟಿಫಿಕೇಷನ್ ಪ್ರಕರಣಗಳ ಕುರಿತು ಸಿಎಜಿ ನೀಡಿದ್ದ ವರದಿ ಆಧರಿಸಿ ವಕೀಲ ಜಯಕುಮಾರ್ ಹಿರೇಮಠ್ ಎಂಬವರು ದೂರು ನೀಡಿದ್ದರು.
5. ವಿಜ್ಞಾನಿಗೆ ಬೆದರಿಕೆ : ಸಿ.ಎಫ್.ಟಿ.ಆರ್.ಐ ನಿರ್ದೇಶಕನ ವಿರುದ್ಧ ದೂರು
ಮೈಸೂರಿನ ಸಿ.ಎಫ್.ಟಿ.ಆರ್.ಐ ನಿರ್ದೇಶಕ ಡಾ.ರಾಮರಾಜಶೇಖರನ್ ವಿರುದ್ಧ ಅದೇ ಸಂಸ್ಥೆಯಲ್ಲಿ ವಿಜ್ಞಾನಿಯೊಬ್ಬರು ದೇವರಾಜ ಠಾಣೆಯಲ್ಲಿ ಕೊಲೆ ಬೆದರಿಕೆ ದೂರು ನೀಡಿದ್ದಾರೆ. ಸಂಸ್ಥೆಯ ನಿದರ್ೇಶಕರು ಕೊಲೆ ಬೆದರಿಕೆ ಹಾಕಿದ್ದಾರೆ. ಹಾಗಾಗಿ ತಮಗೆ ರಕ್ಷಣೆ ನೀಡಬೇಕೆಂದು ಸಿ.ಎಫ್.ಟಿ.ಆರ್.ಐ ನ ಫುಡ್ ಇಂಜಿನಿಯರಿಂಗ್ ವಿಭಾಗದ ಮುಖ್ಯ ವಿಜ್ಞಾನಿ ಡಾ. ಕೆ.ಎಸ್.ಎಂ.ಎಸ್. ರಾಘವರಾವ್ ರಾತ್ರಿ ದೂರು ನೀಡಿದ್ದಾರೆ.
6. ಹೇಮಾವತಿ ಯೋಜನೆಗೆ ಸಿಎಂ ಸಿದ್ದರಾಮಯ್ಯರಿಂದ ಶಂಕುಸ್ಥಾಪನೆ
ಕಾವೇರಿ ನೀರಾವರಿ ನಿಗಮದಿಂದ ರಾಮನಗರ ಜಿಲ್ಲೆಯ ಮಾಗಡಿಯಲ್ಲಿ 325 ಕೋಟಿ ವೆಚ್ಚದ 83 ಕೆರೆಗಳಿಗೆ ನೀರು ತುಂಬಿಸುವ ಹೇಮಾವತಿ ಯೋಜನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಶಂಕುಸ್ಥಾಪನೆ ಮಾಡಿದರು. ತುಮಕೂರು ಶಾಖಾ ನಾಲೆಯಿಂದ ರಾಮನಗರ ಜಿಲ್ಲೆಯ ಮಾಗಡಿ ತಾಲ್ಲೂಕು ಮತ್ತು ತುಮಕೂರು ಜಿಲ್ಲೆ ಕುಣಿಗಲ್ ತಾಲ್ಲೂಕಿನ ಉತ್ತರಿದುರ್ಗ ಹೋಬಳಿಯ ಗ್ರಾಮಗಳ 83 ಕೆರೆಗಳು ಈ ಯೋಜನೆಗೆ ಒಳಪಡಲಿವೆ.
7. ಎನ್.ಐ.ಎ ತಂಡದಿಂದ ಪಠಾಣ್ ಕೋಟ್ ಉಗ್ರರ ದಾಳಿ ತನಿಖೆ
ಪಾಕ್ ಮೂಲದ ಉಗ್ರರ ದಾಳಿಗೆ ಗುರಿಯಾದ ಪಠಾಣ್ ಕೋಟ್ ವಾಯುನೆಲೆಗೆ ಕೇಂದ್ರ ರಕ್ಷಣಾ ಸಚಿವ ಮನೋಹರ್ ಪಾರಿಕ್ಕರ್, ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ಧೋವಲ್ ಭೇಟಿ ನೀಡಿದ ಬೆನ್ನಲ್ಲೇ ಘಟನೆಯ ಬಗ್ಗೆ ರಾಷ್ಟ್ರೀಯ ತನಿಖಾ ತಂಡದ ತನಿಖೆಯು ಆರಂಭಗೊಂಡಿದೆ. ಈಗಾಗಲೇ ರಾಷ್ಟ್ರೀಯ ತನಿಖಾ ದಳದ 20 ಜನರ ತಂಡ ಪಠಾಣ್ಕೋಟ್ ವಾಯು ನೆಲೆಗೆ ಆಗಮಿಸಿದ್ದು, ಉಗ್ರರ ದಾಳಿಯ ಕುರಿತಂತೆ ವಿಶೇಷ ತನಿಖೆ ಕೈಗೊಂಡಿದೆ.
8. ಸರ್ಕಾರಿ ಗೌರವಗಳೊಂದಿಗೆ ಹುತಾತ್ಮ ನಿರಂಜನ್ ಅಂತ್ಯಕ್ರಿಯೆ
ಪಂಜಾಬ್ ನ ಪಠಾಣ್ ಕೋಟ್ ವಾಯುನೆಲೆಯ ಮೇಲೆ ನಡೆದ ಉಗ್ರರ ದಾಳಿಯ ವೇಳೆ ವೀರಮರಣವನ್ನಪ್ಪಿದ ಕನ್ನಡಿಗ ಲೆಫ್ಟಿನೆಂಟ್ ಜನರಲ್ ನಿರಂಜನ್ಕುಮಾರ್ ಅವರ ಅಂತ್ಯಕ್ರಿಯೆ ಇಂದು ಅವರ ಹುಟ್ಟೂರಾದ ಕೇರಳದ ಪಾಲಕ್ಕಾಡ್ ಜಿಲ್ಲೆಯ ಇಳಂಬುಲಸ್ಸೇರಿಯಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರಿತು. ಬಂಧು-ಬಳಗದವರು, ಅಭಿಮಾನಿಗಳು, ಸಾರ್ವಜನಿಕರು ಸಹಸ್ರಾರು ಸಂಖ್ಯೆಯಲ್ಲಿ ನೆರೆದು, ಅಗಲಿದ ವೀರಯೋಧನಿಗೆ ಅಶೃತರ್ಪಣ ಸಲ್ಲಿಸಿದರು.
9. ನಾಳೆ ಮೇಲ್ಮನೆ ನೂತನ ಸದಸ್ಯರ ಪ್ರಮಾಣವಚನ
ರಾಜ್ಯ ವಿಧಾನ ಪರಿಷತ್ನ 24 ಮಂದಿ ಸದಸ್ಯರು ಇಂದು ನಿವೃತ್ತಿ ಹೊಂದುತ್ತಿದ್ದು, ಹೊಸದಾಗಿ ಆಯ್ಕೆಯಾಗಿರುವ 25 ಸದಸ್ಯರ ಪ್ರಮಾಣ ವಚನ ನಾಳೆ ಬೆಳಗ್ಗೆ ನಡೆಯಲಿದೆ. ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎಸ್.ಆರ್ ಪಾಟೀಲ್ ಸೇರಿದಂತೆ ಆಡಳಿತಾರೂಢ ಕಾಂಗ್ರೆಸ್, ಪ್ರತಿಪಕ್ಷಗಳಾದ ಬಿಜೆಪಿ, ಜೆಡಿಎಸ್ ಹಾಗೂ ಪಕ್ಷೇತರ ಸದಸ್ಯರ ಪ್ರಮಾಣವಚನ ಸ್ವೀಕಾರ ಸಮಾರಂಭ ನಾಳೆ ಬೆಳಗ್ಗೆ 9 ಗಂಟೆಗೆ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ನಲ್ಲಿ ನಡೆಯಲಿದೆ. ನೂತನ ಸದಸ್ಯರಿಗೆ ಸಭಾಪತಿ ಡಿ.ಎಚ್.ಶಂಕರಮೂರ್ತಿ ಅಧಿಕಾರ ಹಾಗೂ ಗೌಪ್ಯತೆಯ ಪ್ರಮಾಣವಚನ ಬೋಧಿಸಲಿದ್ದಾರೆ. ಆಡಳಿತಾರೂಢ ಕಾಂಗ್ರೆಸ್ನ ಹನ್ನೆರಡು ಮಂದಿ, ಬಿಜೆಪಿಯ ಏಳು, ಜೆಡಿಎಸ್ನ ನಾಲ್ವರು ಹಾಗೂ ಒಬ್ಬ ಪಕ್ಷೇತರ ಸದಸ್ಯರು ಇಂದು ನಿವೃತ್ತರಾದರು.
10. ಪಠ್ಯದಲ್ಲಿ ಯೋಗ ಅಳವಡಿಸಲು ಸಿದ್ಧತೆ
ವಿಶ್ವದಲ್ಲೆಡೆ ದಿನದಿಂದ ದಿನಕ್ಕೆ ಜನಮನ್ನಣೆ ಗಳಿಸುತ್ತಿರುವ ಯೋಗವನ್ನು ಶಿಕ್ಷಣದಲ್ಲಿ ಕಡ್ಡಾಯಗೊಳಿಸಲು ರಾಜ್ಯ ಸರ್ಕಾರ ಮುಂದಾಗಿದೆ. ಇನ್ನು ಮುಂದೆ ಪೂರ್ವ ಪ್ರಾಥಮಿಕ ಶಿಕ್ಷಣದಿಂದ ಪದವಿವರೆಗಿನ ಶಿಕ್ಷಣದಲ್ಲಿ ಯೋಗವನ್ನು ಒಂದು ವಿಷಯವನ್ನಾಗಿ ಪಠ್ಯದಲ್ಲಿ ಅಳವಡಿಸಲು ಸರ್ಕಾರ ಗಂಭೀರ ಚಿಂತನೆ ನಡೆಸಿದೆ. ಮುಂಬರುವ ಶೈಕ್ಷಣಿಕ ವರ್ಷದಿಂದ ಎಲ್ಲಾ ಹಂತದ ಶಿಕ್ಷಣದಲ್ಲಿ ಯೋಗ ಒಂದು ಪಠ್ಯವಾಗಿ ಬೋಧಿಸಬೇಕೆಂದು ಶಿಕ್ಷಕರಿಗೆ ತರಬೇತಿ ನೀಡಲು ಪೂರ್ವ ಸಿದ್ಧತೆಗಳು ಸದ್ದಿಲ್ಲದೆ ನಡೆದಿವೆ. ಮೂರು ದಿನಗಳ ಹಿಂದೆ ಬೆಂಗಳೂರಿಗೆ ಕಾರ್ಯಕ್ರಮ ನಿಮಿತ್ತ ಆಗಮಿಸಿದ್ದ ಕೇಂದ್ರ ಮಾನವ ಸಂಪನ್ಮೂಲ ಸಚಿವೆ ಸ್ಮೃತಿ ಇರಾನಿಯವರು ಈ ಬಗ್ಗೆ ಶಿಕ್ಷಣ ಇಲಾಖೆ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದ್ದಾರೆ.