ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ತಮ್ಮ ಅಭಿಮಾನಿಯ ಪಾಲಿಗೆ ಲವ್ ಗುರುವಾಗಿದ್ದಾರೆ.
ಲವ್ ಕಳೆದುಕೊಂಡಿದ್ದ ಅಭಿಮಾನಿಗೆ ಕಿಚ್ಚ ದೈರ್ಯತುಂಬಿದ್ದರು. ಈಗ ಆ ಅಭಿಮಾನಿ ಜೀವನದಲ್ಲಿ ಯಶಸ್ಸುಗಳಿಸಿದ್ದು, ಸುದೀಪ್ ಅವರಿಗೆ ಧನ್ಯವಾದ ತಿಳಿಸಿದ್ದಾರೆ.
ಅಭಿಮಾನಿಯೊಬ್ಬ ತನ್ನ ಪ್ರೀತಿಯನ್ನು ಕಳೆದುಕೊಂಡಿದ್ದರು. ಆ ನೋವನ್ನು ತನ್ನ ನೆಚ್ಚಿನ ನಟ ಸುದೀಪ್ ಬಳಿ ಹೇಳುವ ಮೂಲಕ ಕಣ್ಣೀರಿಟ್ಟಿದ್ದರು. ಟ್ವಿಟ್ಟರ್ ಮೂಲಕ ತಾನು ಪ್ರೀತಿಯನ್ನು ಕಳೆದುಕೊಂಡಿರುವುದಾಗಿ ತನ್ನ ದುಃಖ ತೋಡಿಕೊಂಡಿದ್ದರು.
`ಪ್ರೀತಿ ಮಾಡೋಕೆ ಆಸ್ತಿ, ಅಂತಸ್ತು, ಅಂದ ಹಾಗೂ ಚೆಂದ ಇವೆಲ್ಲಾ ಬೇಕಾ ಬಾಸ್. ಎಲ್ಲಾ ಬಿಟ್ಟು ಹುಚ್ಚನ ತರಹ ಪ್ರೀತಿಸಿದ್ದರು ಅರ್ಥನೇ ಮಾಡಿಕೊಳ್ಳುತ್ತಿಲ್ಲ. ಸ್ನೇಹ ಕಳೆದುಕೊಳ್ಳಬೇಕಾಗುತ್ತದೆ ಎಂದು ಸುಮ್ಮನೆ ನೋವು ಅನುಭವಿಸಿದ್ದೀನಿ. ಏನೂ ಮಾಡಬೇಕೆಂದು ತಿಳಿಯುತ್ತಿಲ್ಲ ಅಣ್ಣ. ಅವಳು ಇಲ್ಲದೇ ನನಗೆ ಇರೋಕೆ ಆಗಲ್ಲ ಎಂದು ಅಭಿಮಾನಿಯೊಬ್ಬರು ಕಿಚ್ಚನಿಗೆ ಟ್ವೀಟ್ ಮಾಡಿದ್ದರು.
ಅಭಿಮಾನಿಯ ನೋವಿಗೆ ಕಿಚ್ಚ ಸ್ಪಂದಿಸಿ `ಒಂದು ಜೀವನ. ಒಂದು ಅವಕಾಶ. ಪ್ರೀತಿ ಎಂದರೆ ಕೊಡುವುದು ಹೊರತು ಅದನ್ನು ಕಿತ್ತುಕೊಳ್ಳುವುದ್ದಲ್ಲ. ನಿಮ್ಮ ಕುಟುಂಬಕ್ಕೆ ನೀವು ಒಳ್ಳೆಯವರಾಗಿರಿ. ಅಲ್ಲದೇ ನಿಮ್ಮ ಜೀವನದಲ್ಲಿರುವ ವ್ಯಕ್ತಿಗಳನ್ನು ಪ್ರೀತಿಯಿಂದ ನೋಡಿಕೊಳ್ಳಿ. ನಿಮ್ಮ ಜೀವನವನ್ನು ಅದ್ಭುತವಾಗಿರುವ ಹಾಗೆ ಮಾಡಿಕೊಳ್ಳಿ. ಸುಮ್ಮನೆ ನಿನ್ನ ಜೀವನವನ್ನು ಹಾಳು ಮಾಡಿಕೊಳ್ಳಬೇಡಿ” ಎಂದು ರೀ-ಟ್ವೀಟ್ ಮಾಡಿದ್ದರು.
“ಕಿಚ್ಚ ಬಾಸ್ ನೀವು ಹೇಳಿದ್ದು ನೂರಕ್ಕೆ ನೂರ ರಷ್ಟು ಸತ್ಯ ಆಯ್ತು. ನಿಮ್ಮ ಮಾತನ್ನು ನಾನು ಪರಿಪಾಲಿಸಿದೆ. ಎಲ್ಲಾ ಪರೀಕ್ಷೆ ಸರಿ ಬರಿದಿದ್ದೀನಿ. ಇಂದು ನನ್ನ ತಂದೆ-ತಾಯಿಗೂ ಒಳ್ಳೆಯದಾಗಿದೆ. ಪ್ರೀತಿ ತಾನಾಗಿ ಸಿಕ್ಕಿದೆ. ಧನ್ಯವಾದಗಳು ಕಿಚ್ಚ ಬಾಸ್. ನನ್ನ ತಾಯಿ ತಂದೆ ಜೊತೆ ನೀವು ನನಗೆ ದೇವತಾ ಮನುಷ್ಯರಾಗಿದ್ದೀರಿ” ಎಂದು ಅಭಿಮಾನಿ ತಮ್ಮ ಟ್ವೀಟ್ ನಲ್ಲಿ ತಿಳಿಸಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿದ ಕಿಚ್ಚ, `ನೀವು ನನ್ನ ಮಾತನ್ನು ಗೌರವಿಸಿ ಅದನ್ನು ಪಾಲಿಸಿದ್ದಕ್ಕೆ ನನಗೆ ತುಂಬಾ ಖುಷಿಯಾಗಿದೆ. ಈ ಜಗತ್ತಿನಲ್ಲಿ ನಿಮಗೆ ನಿಮ್ಮ ಜೀವನ ಉಡುಗೊರೆಯಾಗಿ ದೊರೆತಿದೆ ಹಾಗೂ ಅದಕ್ಕಿಂತ ಮಿಗಿಲಾದದ್ದು ಯಾವುದು ಇಲ್ಲ. ನೀವು ನಿಮ್ಮ ಜೀವನಕ್ಕೆ ಹತ್ತಿರವಾಗಿರಿ, ಆಗ ನಿಮಗೆ ಯಾವುದೇ ತೊಂದರೆ ಆಗುವುದಿಲ್ಲ ಎಂದು ಹೆಮ್ಮೆ ವ್ಯಕ್ತಪಡಿಸಿದ್ದಾರೆ.