ಸಂಸದ ಶ್ರೀರಾಮುಲು ಅವರು ತನ್ನ ಮದುವೆಗೆ ಬರಲಿಲ್ಲ. ಅವರು ಬಂದರೆ ಮಾತ್ರ ಮದುವೆ ಆಗುತ್ತೇನೆ ಎಂದು ಹಠ ಹಿಡಿದು 2ಬಾರಿ ಮದುವೆ ಕ್ಯಾನ್ಸಲ್ ಮಾಡಿದ್ದ ವ್ಯಕ್ತಿ ಕೊನೆಗೂ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.
ಅಭಿಮಾನಿಯ ಪ್ರೀತಿ , ಅಭಿಮಾನಕ್ಕೆ ಸೋತ ಶ್ರೀರಾಮುಲು ಅವರು ಮದುವೆಗೆ ಬಂದು ನವ ವಧು-ವರರಿಗೆ ಶುಭ ಹಾರೈಸಿದರು.
ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ವಡಕಿ ಗ್ರಾಮದ ಅಣ್ತಮ್ಮಂದಿರಾದ ಮಂಜುನಾಥ್ ಮತ್ತು ಹನುಮೇಶ್ ಅವರಿಗೆ ಮದುವೆ ನಿಶ್ಚಯವಾಗಿತ್ತು. ಶ್ರೀರಾಮುಲು ಅವರ ಅಪ್ಪಟ ಅಭಿಮಾನಿಯಾದ ಮಂಜುನಾಥ್ ಅವರು ತನ್ನ ನೆಚ್ಚಿನ ಜನನಾಯಕ ಬರಲಿಲ್ಲ ಎಂದು ಎರಡು ಬಾರಿ ಮದುವೆ ಕ್ಯಾನ್ಸಲ್ ಮಾಡಿಸಿದ್ದರು. ಅಣ್ಣನ ದೆಸೆಯಿಂದ ತಮ್ಮ ಹನುಮೇಶ್ ಅವರ ಮದುವೆಯೂ ಆಗಿರಲಿಲ್ಲ.
ಕೊನೆಗೆ ಕುಟುಂಬದವರು ಹಾಗೂ ಗ್ರಾಮಸ್ಥರು ಮಂಜುನಾಥ್ ಅವರನ್ನು ಕರೆದುಕೊಂಡು ಶ್ರೀರಾಮುಲು ಅವರನ್ನು ಭೇಟಿ ಮಾಡಿಸಿದ್ದರು.
ಶ್ರೀರಾಮುಲು ಮದುವೆಗೆ ಬರುವುದಾಗಿ ಭರವಸೆ ನೀಡಿದ್ದರು.ಕೊನೆಗೂ ಅಭಿಮಾನಿಯ ಮದುವೆ ಕಾರ್ಯಕ್ರಮದಲ್ಲಿ ಶ್ರೀರಾಮುಲು ಭಾಗಿಯಾಗಿದ್ದರು.
ಶ್ರೀರಾಮುಲು ಬರುವಿಕೆಯ ಬಗ್ಗೆ ಮೊದಲೇ ಗೊತ್ತಿದ್ದರಿಂದ ಜನಸಾಗರವೇ ಗ್ರಾಮದಲ್ಲಿ ಸೇರಿತ್ತು. ನೆಚ್ಚಿನ ಜನನಾಯಕನ ಜೊತೆ ತಮ್ಮ ಮದುವೆಯ ಫೋಟೋವನ್ನು ಕ್ಲಿಕ್ಕಿಸಿ ಮಂಜುನಾಥ್, ಹನುಮೇಶ್ ಖುಷಿಪಟ್ಟರು. ಅಲ್ಲಿ ಸೇರಿದ್ದ ಜನಕೂಡ ರಾಮುಲು ಜೊತೆ ಸೆಲ್ಫಿಗಾಗಿ ಮುಗಿಬಿದ್ದರು.