ಪರಶುರಾಮ ಸೃಷ್ಟಿಯ ಸಪ್ತ ಕ್ಷೇತ್ರಗಳಲ್ಲಿ ಒಂದಾದ ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಬ್ರಹ್ಮ ರಥ ನೀಡಲು ಉದ್ಯಮಿ, ಜಯಕರ್ನಾಟಕ ಸಂಘಟನೆಯ ಸಂಸ್ಥಾಪಕರಾದ ಮುತ್ತಪ್ಪ ರೈ ನಿರ್ಧರಿಸಿದ್ದಾರೆ ಎಂದು ತಿಳಿದು ಬಂದಿದೆ.
ಮುತ್ತಪ್ಪ ರೈ ಹಾಗೂ ಬಿಡದಿ ರಿಯಾಲಿಟಿ ವೆಂಚರ್ ಪಾಲುದಾರ ಅಜಿತ್ ಶೆಟ್ಟಿ ಈ ರಥವನ್ನು ನೀಡಲಿದ್ದಾರೆ.
ಜಂಟಿಯಾಗಿ ಎರಡೂವರೆ ಕೋಟಿ ಮೌಲ್ಯದ ಬ್ರಹ್ಮರಥವನ್ನು ದೇವಸ್ಥಾನಕ್ಕೆ ನೀಡಲು ನಿರ್ಧರಿಸಿದ್ದಾರೆ. ಇದೇ 15ರಂದು ಇಬ್ಬರೂ ಕುಕ್ಕೆ ಸುಬ್ರಹ್ಮಣ್ಯಕ್ಕೆ ತೆರಳಿ ದೇವಸ್ಥಾನದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಲಿದ್ದಾರೆ. ಇದಾದ ಬಳಿಕ ಬ್ರಹ್ಮರಥ ನೀಡುವುದಕ್ಕೆ ಎಲೆ ವೀಳ್ಯ ಸ್ವೀಕರಿಸಲಿದ್ದಾರೆ.
ಬಳಿಕ ಬ್ರಹ್ಮರಥ ಕೆತ್ತನೆಯ ಕಾರ್ಯ ಆರಂಭವಾಗಲಿದೆ. ಬ್ರಹ್ಮರಥವನ್ನ ರಾಷ್ಟ್ರ, ರಾಜ್ಯ, ಶಿಲ್ಪಕಲಾ ಅಕಾಡಮಿ ಪ್ರಶಸ್ತಿ ಪುರಸ್ಕೃತ, ರಾಷ್ಟ್ರೀಯ ಶಿಲ್ಪ ಗುರು ಪ್ರಶಸ್ತಿ ಗೌರವಕ್ಕೆ ಪಾತ್ರರಾಗಿರುವ ಖ್ಯಾತ ಶಿಲ್ಪಿ, ಕುಂದಾಪುರ ತಾಲೂಕಿನ ಕೋಟಾದ ಶಿಲ್ಪಿ ಲಕ್ಷ್ಮೀ ನಾರಾಯಣ ಆಚಾರ್ಯರ ಉಸ್ತುವಾರಿಯಲ್ಲಿ ತಯಾರಿಸಲಾಗುತ್ತೆ.
ರಥದ ಕೆತ್ತನೆಗೆ ದಾಂಡೇಲಿ ಅರಣ್ಯದಿಂದ ದೊಡ್ಡ ಮರ ತರಲಾಗತ್ತೆ. ಬ್ರಹ್ಮರಥ 64.10 ಅಡಿ ಉದ್ದ, 18 ಅಡಿ ಅಗಲವಿರಲಿದೆ.
ಈ ಹಿಂದೆ ಮುತ್ತಪ್ಪ ರೈ ತಮ್ಮ ಇಷ್ಟ ದೇವರು ಪುತ್ತೂರು ಮಹಾಲಿಂಗೇಶ್ವರನಿಗೆ 1 ಕೋಟಿ ಮೌಲ್ಯದ ಬ್ರಹ್ಮರಥವನ್ನು ಕೊಟ್ಟು ಗಮನ ಸೆಳೆದಿದ್ದರು. ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೂ ಬ್ರಹ್ಮರಥ ಬೇಕೆಂಬ ಬೇಡಿಕೆ ಕಳೆದ 10 ವರ್ಷಗಳಿಂದಲೂ ಇತ್ತು. ಈ ಬಗ್ಗೆ ದೇವಸ್ಥಾನದ ಆಡಳಿತ ಮಂಡಳಿ ಕೂಡ ಮನವಿ ಸಲ್ಲಿಸಿತ್ತು.
(ಭಾಗ್ಯೇಶ್ ರೈ)