ಸುವರ್ಣ ನ್ಯೂಸ್ ಚಾನೆಲ್ಲಲ್ಲಿ ಪ್ರೈಮ್ ಟೈಮ್ ಡಿಬೇಟ್ ನಡೆಸಿಕೊಡ್ಬೇಕು.. ನಮಸ್ಕಾರ ನೀವು ನೋಡ್ತಾ ಇದೀರಾ ಸುವರ್ಣ ನ್ಯೂಸ್ ನಾನು ಸ್ಕಂದ ಆಗುಂಬೆ ಅಂತ ಮಾತು ಶುರು ಮಾಡ್ಲಾ..? ಅಯ್ಯೋ ತುಂಬಾ ಹಳೇ ಸ್ಟೈಲ್ ಆಗೋಗಿರುತ್ತೆ ಅಷ್ಟ್ರಲ್ಲಿ.. ಸೋ ಬೇರೆ ಥರ ಏನಾರ್ ಹುಡ್ಕ್ಬೇಕು. ಊಹ್ಞೂಂ ಬೇಡ.. ಆ ವಿಜಯಲಕ್ಷ್ಮಿ ಶಿಬರೂರು ಮೇಡಂಗೆ ಏನ್ ಧೈರ್ಯ ನೋಡು, ಅವ್ರ್ ಥರಾನೇ ಇನ್ವೆಸ್ಟಿಗೇಟಿವ್ ಜರ್ನಲಿಸಂ ಮಾಡ್ಬೇಕು. ಅದೂ ಬೇಡ ಪೇಪರ್ರೇ ಬೆಟರ್ರು ಸ್ವಲ್ಪ ಆದ್ರೂ ಎಥಿಕ್ಸ್ ಉಳ್ಕೊಂಡಿದೆ ಇಲ್ಲೇ ಇದ್ದು ಒಳ್ಳೇ ಹೆಸ್ರು ಮಾಡಣ. ಏಯ್ ರೆಡಿಯೋ ಟ್ರೈ ಮಾಡ್ಬೋದು.. ಆರ್ ಜೆ ಆದ್ರೆ ಹೆಂಗೆ..? ಅಥ್ವಾ ಎಂಟ್ರಟೈನ್ಮೆಂಟ್ ಚಾನೆಲ್ ಸೇರ್ಕೊಂಡ್ಬಿಡ್ಲಾ? ಧಾರಾವಾಹಿಗೆ ಸಂಭಾಷಣೆ ಬರ್ದ್ರೆ ಒಳ್ಳೇ ದುಡ್ ಬರುತ್ತಂತೆ ಅದ್ ಕೂಡ ಮಾಡ್ಬೇಕು.. ಜಯಂತ್ ಕಾಯ್ಕಿಣಿ ಥರ ಪದ್ಯ ಬರ್ಯೋದ್ ಕಲೀಬೇಕು.. ಒಳ್ಳೇ ಲೈಫು ಅಂದ್ರೆ ಈ ಲೆಕ್ಚರರ್ಸ್ಗಳದ್ದು ಒಳ್ಳೇ ಸ್ಯಾಲ್ರಿನೂ ಇರುತ್ತೆ, ಟೈಮೂ ಇರುತ್ತೆ.. ಅತ್ತೆ ಮಾವನತ್ರ ಹೋಗಿ ಹೆಣ್ ಕೇಳೋಕೆ ಒಂದ್ ಧೈರ್ಯನೂ ಇರತ್ತೆ.. ಉಸ್ತಾದ್ ಹೊಟೇಲ್ ಫಿಲಂ ನೋಡಿ ಮೆಡುಲಾ ಅಬ್ಲಾಂಗೇಟಾದಲ್ಲಿ ವೇರಿಯೇಷನ್ ಆಗಿದೆ ಒಂದ್ ಹೋಟ್ಲು ಇಟ್ ಬಿಡ್ಲಾ..? ಹೇಗೂ ಆಗುಂಬೆ ಪಕ್ದಲ್ಲೇ ಊರಿದೆ ಒಂದ್ ಹೋಂ ಸ್ಟೇ ಮಾಡಿದ್ರೆ ಹೆಂಗೆ..? ಒಂದ್ ಸ್ಕೂಲ್ ಮಾಡ್ಬೇಕು.. ಟ್ರಾವೆಲ್ ಏಜೆನ್ಸಿ ಮಾಡಿದ್ರೆ ಒಳ್ಳೇದು.. ಅದ್ರಲ್ ಲಾಭ ಬಂದ್ರೆ ವಿಜಯ್ ಸಂಕೇಶ್ವರ್ ಥರ ಒಂದ್ ಪೇಪರ್ರು, ಚಾನೆಲ್ಲು ಶುರು ಮಾಡ್ಬೋದು ನೋಡು.. ಅದೆಲ್ಲಕ್ಕಿಂತ ಮೊದ್ಲು ಒಂದ್ ಡಿಎಸ್ಎಲ್ಆರ್ ತಗೋಬೇಕು, ಒಂದ್ ಬೈಕ್ ತಗೊಂಡ್ ಆರಾಮಾಗ್ ಸುತ್ತಾಡ್ಬೇಕು.. ಫಿಲ್ಮಿಗ್ ಹೋಗೋಕ್ ಜೊತೆಗ್ ಒಂದ್ ಜನ ಇಲ್ಲಾ ಅಂತೀನಿ ಒಂದ್ ಹುಡ್ಗಿನ್ ಪಟಾಯಿಸ್ಕೋಬೇಕು.. ಅಬ್ಬಬ್ಬಬ್ಬಾ ಇದೇನ್ ಲೈಫಾ ತರ್ಕಾರಿ ಮಾರ್ಕೆಟ್ಟಾ?? ಇಷ್ಟೊಂದ್ ಆಪ್ಷನ್ ಇದ್ಯಲ್ಲಾ.. ಏನ್ ಮಾಡೋದು ಗುರೂ….?
ಹದಿನೇಳು – ಹದಿನೆಂಟು – ಹತ್ತೊಂಬತ್ತು – ಇಪ್ಪತ್ತು – ಇಪ್ಪತ್ತೊಂದು
ಭಯಂಕರ ಗೊಂದಲದ ವಯಸ್ಸು!! ನನ್ನ ಗುರಿ ಯಾವುದು ಅಂಥ ಸ್ಪಷ್ಟಪಡಿಸಿಕೊಂಡು ಹೋಗೋ ಟೈಮಲ್ಲೇ ಒಂದಷ್ಟು ಕವಲು ದಾರಿಗಳು ಧಿಡೀರನೆ ಪ್ರತ್ಯಕ್ಷವಾಗ್ತಾವೆ..! ಊಹ್ಞೂಂ ಅದು ನನ್ನ ದಾರಿಯಲ್ಲ ಅಂತ ಪದೇ ಪದೇ ನನಗೆ ನಾನೇ ಹೇಳಿಕೊಂಡು ಮತ್ತೊಂದು ನಾಲ್ಕು ಹೆಜ್ಜೆ ಇಡುವಷ್ಟರಲ್ಲಿ ಮತ್ತಷ್ಟು ದಾರಿ! ರಾತ್ರಿ ಮಲಗಿದಾಗ ಅದರಲ್ಲಿ ಹೋದ್ರೆ ಹೇಗಿರುತ್ತೆ? ಇದ್ರಲ್ಲಿ ಹೋದ್ರೆ ಹೇಗಿರುತ್ತೆ? ಅಂತ ಒಂದಷ್ಟು ಕನಸು ಕಾಣೋಕೆ ಶುರುಮಾಡಿದ್ರೆ ಒಂದೊಳ್ಳೇ ಕನಸಿನ ಲೋಕವೇ ಹುಟ್ಕೊಂಡ್ಬಿಡುತ್ತೆ ನೋಡಿ..!
ನನಗೆ ಹತ್ತನೇ ತರಗತಿಯಿಂದಲೇ ಪತ್ರಿಕೋದ್ಯಮದೆಡೆಗೆ ಸೆಳೆತವಿತ್ತು.. ಬಟ್ ಟೆಂಥಲ್ಲಿ ಒಳ್ಳೇ ಮಾರ್ಕ್ಸ್ ಬಂದಿದೆ ನೆಕ್ಸ್ಟ್ ಸೈನ್ಸ್ ತಗೊಂಡ್ರೆ ವೆಟರ್ನರಿಗೆ ಒಳ್ಳೇ ಸ್ಕೋಪಿದೆ ನೋಡು ಅಂತ ಒಬ್ರು ಹೇಳಿದ್ ಮಾತು ಕಿವಿಗ್ ಬಿದ್ದಿದ್ದೇ ತಡ, ಹೇಗೂ ನಂಗೆ ದನ, ಕರು, ನಾಯಿ, ಬೆಕ್ಕು ಅಂದ್ರೆ ಲವ್ವು ಸೋ ಈ ಫೀಲ್ಡಲ್ಲಿ ಸಕ್ಸಸ್ ಆಗ್ಬೋದು ಅಂತ ಪಿಸಿಎಂಬಿ ಅಂತ ಫಾರ್ಮ್ ಫಿಲ್ ಮಾಡೇ ಬಿಟ್ಟೆ.. ಎರಡೇ ತಿಂಗ್ಳಲ್ಲಿ ಜೀವನ ಅಲ್ಲೋಲ – ಕಲ್ಲೋಲ. ಸೈನು, ಕಾಸು, ಟ್ಯಾನು, ತೀಟಾ ಅಂತ ಮ್ಯಾಥ್ಸ್ ಕ್ವಾಟ್ಲೆ ಕೊಡ್ತಿದ್ರೆ, ಕೆಮಿಕಲ್ಲು, ಗ್ರಾವಿಟೇಷನ್ನು ಅಂತ ಕೆಮಿಸ್ಟ್ರಿ – ಫಿಸಿಕ್ಸ್ ಎರಡರ ಸಹಭಾಗಿತ್ವದಲ್ಲಿ ಕೀಟ್ಲೆ ಶುರುವಾಗಿತ್ತು, ಇದ್ದಿದ್ರಲ್ಲಿ ಬಯೋಲಜಿಯೇ ಕ್ವೈಟ್ ಇಂಟ್ರೆಸ್ಟಿಂಗ್ ಅನ್ಸಿದ್ದು..!! ಫಸ್ಟ್ ಪಿಯು & ಸೆಕೆಂಡ್ ಪಿಯು ಫೈನಲ್ ಎಕ್ಸಾಂ ಬಿಟ್ರೆ ಮತ್ತೆಲ್ಲಾ ಟೆಸ್ಟು, ಪ್ರಿಪರೇಟರಿಗಳಲ್ಲೂ ಪಿಸಿಎಂಬಿ ಸಬ್ಜೆಕ್ಟ್ಗಳಲ್ಲಿ ಢುಮ್ಕಿ ಹೊಡೆದ ಕೀರ್ತಿ ನನ್ ಮೇಲಿದೆ, ನಮ್ ದೂರದ ನೆಂಟ್ರು ಕಮ್ ಅಜ್ಜ ನಮ್ ಕಾಲೇಜ್ ಪ್ರಿನ್ಸಿಪಾಲ್ ಆಗಿದ್ರಿಂದ ಅವ್ರಿಂದಾನೇ ನಾನ್ ಫಸ್ಟ್ ಪಿಯುಸಿ ಪಾಸಾಗಿದ್ದು ಅನ್ನೋ ಡೌಟ್ ಇವತ್ತಿಗೂ ಹಂಗೇ ಇದೆ. ಇಡೀ ಪಿಯುಸಿ ಲೈಫಲ್ಲಿ ಕ್ಲಾಸಿಗಿಂತ ಜಾಸ್ತಿ ಡಿಬೇಟು – ಡ್ರಾಮಾ ಅಂತ ಹೋಗಿ ಅದ್ರಲ್ಲೊಂದಿಷ್ಟು ಪ್ರೈಜ್ ತಗೊಂಡು ಒಂದ್ ರೇಂಜಿಗೆ ಮರ್ಯಾದೆ ಉಳ್ಸ್ಕೊಂಡಿದ್ದೆ, ಜೊತೆಗೆ ನಮ್ ಕನ್ನಡ ಮಾಷ್ಟ್ರು ಶ್ರೀವತ್ಸ ಸರ್ ಕೂಡ ಕ್ಲೋಸ್ ಆಗಿದ್ರಿಂದ ಕಲ್ಚರಲ್ ಆ್ಯಕ್ಟಿವಿಟೀಸಲ್ಲಿ ಈ ಹುಡ್ಗ ಇದಾನೆ ಅಂತ ನನ್ನನ್ನ ಸ್ವಲ್ಪ ಬೆಳಕಿಗೆ ತಂದು ಉಳಿದ ಲೆಕ್ಚರರ್ಸ್ಗಳ ಕೆಂಗಣ್ಣಿಗೆ ಗುರಿಯಾಗೋದ್ ತಪ್ಪಿಸ್ತಿದ್ರು.. ಅದೇನೇ ಆದ್ರೂ ಮುಗ್ಧತೆ ಮಾತ್ರ ಕಳೆದುಕೊಂಡಿರ್ಲಿಲ್ಲ, ಎಲ್ಲವಕ್ಕೂ ಒಂದು ಮುಕ್ತಾಯ ಅನ್ನೋದ್ ಇರುತ್ತೆ ನೋಡಿ, ಅವತ್ತೊಂದಿನ ಡ್ರಾಮಾ ಪ್ರಾಕ್ಟಿಸ್ಸಿಗೆ ಅಂತ ಭಾನುವಾರ ಕಾಲೇಜಿಗೆ ಹೋದೋನಿಗೆ ಮಟಮಟ ಮಧ್ಯಾಹ್ನ ಆಗೋಷ್ಟ್ರಲ್ಲಿ ಜ್ಯೂನಿಯರ್ ಒಬ್ಬಳ ಮೇಲೆ ಸಿಕ್ಕಾಪಟ್ಟೆ ಕ್ರಷ್ ಆಗ್ಬಿಟ್ಟಿತ್ತು.. ಅದು ಒನ್ ವೇ ಲವ್ವಾಗಿ ನಾ ಲವ್ ಲೆಟ್ರು ಬರ್ಯೋ ಮಟ್ಟಕ್ಕೆ ಹಾಳಾಗಿ, ಅದು ಪೇಪರ್ರಲ್ಲಿ ಪಬ್ಲಿಶ್ ಆಗಿ, ಆ ಮ್ಯಾಟ್ರು ಇಡೀ ಕಾಲೇಜಿಗೆಲ್ಲಾ ಗೊತ್ತಾಗಿ, ನಮ್ ಕ್ಲಾಸ್ಮೇಟ್ಸ್ ಎಲ್ಲಾ ರೇಗಿಸೋಕೆ ಶುರು ಮಾಡಿ, ಅವ್ಳೊಂದು ಸಲ ತಿರುಗಿ ಲುಕ್ ಕೊಟ್ಟು ನಗುವಷ್ಟರಲ್ಲಿ ಮುಗ್ಧತೆಗೆ ಕೊನೇ ಮೊಳೆ ಹೊಡೆದಾಗಿತ್ತು.. ಶ್ರೀ ಹರಿ ಕೃಷ್ಣಾರ್ಪಣಮಸ್ತು. ಪಿಯುಸಿ ಮುಗೀತು, ಪಿಸಿಎಂಬಿ ಪಾಸಾಯ್ತು..
ವಾಟ್ ನೆಕ್ಸ್ಟ್? ಅಂತ ಯೋಚಿಸುವಾಗ ಸಂಯುಕ್ತ ಕರ್ನಾಟಕದ ಸ್ಟೇಟ್ ಲೆವೆಲ್ ಕಾಂಪಿಟೇಷನ್ ಒಂದರ ಆ್ಯಡ್ ಕಣ್ಣಿಗೆ ಬಿದ್ದು, ಅಪ್ಪನ ಜೊತೆಗೆ ಹುಬ್ಬಳ್ಳಿಗೆ ಹೋಗಿಯಾಗಿತ್ತು. ಆಕಸ್ಮಿಕ, ಅನಿರೀಕ್ಷಿತ, ಲಕ್ಕು ಏನೆನ್ನಬಹುದೋ ಗೊತ್ತಿಲ್ಲ, ರಾಜ್ಯ ಮಟ್ಟದ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಪಡೆದು ಹಲ್ ಕಿರೀತಾ ವೇದಿಕೆ ಮೇಲೆ ನಿಂತಿದ್ದೆ.. ಇಪ್ಪತ್ತೈದ್ ಸಾವ್ರ ದುಡ್ಡು, ಒಂದ್ ದೊಡ್ ಟ್ರೋಫಿ.. ಮಾರನೇ ದಿನ ಪೇಪರ್ ನೋಡಿದ್ರೆ ಫ್ರಂಟ್ ಪೇಜಲ್ಲೇ ಫೋಟೋ ಸಮೇತ “ಚಾಣಾಕ್ಷತನ ಮೆರೆದು ಚಾಣಕ್ಯನಾದ ಆಗುಂಬೆಯ ಸ್ಕಂದ” ಅನ್ನೋ ಹೆಡ್ಲೈನು.. ಹೀಗೇ ಪಿಯುಸಿ ಮುಗ್ದು ಡಿಗ್ರಿ ಸೇರೋಷ್ಟ್ರಲ್ಲಿ ನನ್ನ ಮೂಲ ಆಸಕ್ತಿಯಾದ ಪತ್ರಿಕೋದ್ಯಮ ನನಗೇ ಗೊತ್ತಿಲ್ಲದಂತೆ ನನ್ನ ಸೆಳೆದುಕೊಂಡ್ಬಿಡ್ತು. ಸೆಕೆಂಡ್ ಇನ್ನಿಂಗ್ಸ್… ಡಿಗ್ರಿ ಲೈಫು..
ಸೈನ್ಸ್ ಟು ಆರ್ಟ್ಸ್.. ಖುಷ್ ಖುಷಿಯಾಗಿ ಡಿಗ್ರಿಗ್ ಸೇರಿದೆ.. ಸ್ಟೇಟ್ ಲೆವೆಲ್ಲಲ್ಲಿ ಫಸ್ಟು.. ಪೇಪರ್ ಫ್ರಂಟ್ ಪೇಜಲ್ಲಿ ಫೋಟೋ.. ಆಲ್ರೆಡಿ ಪಬ್ಲಿಶ್ ಆಗಿರೋ ಒಂದ್ನಾಲ್ಕು ಲವ್ ಲೆಟ್ರು ಇದನ್ನೆಲ್ಲಾ ಗಮನಿಸಿದ ನಮ್ ಲೆಕ್ಚರರ್ ಲೋಹಿತ್ ಸರ್ “ನಿಂಗ್ ಜರ್ನಲಿಸಂನಲ್ಲೇ ಇಂಟ್ರೆಸ್ಟ್ ಇದೆ ಅನ್ನೋದಾದ್ರೆ ಯಾವ್ದಾರ್ ಒಂದ್ ಪೇಪರ್ ಆಫೀಸಿಗೆ ಕಳ್ಸ್ತೀನಿ… ಹೋಗ್ತೀಯಾ” ಅಂತ ಕೇಳಿ ಕನ್ನಡಪ್ರಭ ಆಫೀಸ್ ದಾರಿ ತೋರ್ಸಿದ್ರು. ಅಲ್ಲಿಗೆ ನನ್ನಿಷ್ಟದ ಕ್ಷೇತ್ರದ ಗಂಧಗಾಳಿ ಅಧಿಕೃತವಾಗಿ ಮೈ ಸೋಕಿತ್ತು. ಅಂಶಿ ಪ್ರಸನ್ನಕುಮಾರ್ ಸರ್ ಅವರೊಂದಿಗೆ ಮೊದಲ ಬಾರಿಗೆ ಮಾತನಾಡಿದ ದಿನವಿನ್ನೂ ನೆನಪಿದೆ, ಆಮೇಲೆ ದಿನಾ ಸಂಜೆ ಕಾಲೇಜ್ ಮುಗಿಸಿ ಕನ್ನಡಪ್ರಭಕ್ಕೆ ಹೋಗೋದು ರೂಢಿಯಾಯ್ತು.. ಪತ್ರಿಕೋದ್ಯಮದ ಅಆಇಈ ಕಲಿಯೋಕೆ ಶುರುಮಾಡಿದೆ, ಸರಿಯಾಗಿ ಹೋಗಿದ್ರೆ ಇಷ್ಟೊತ್ತಿಗೆ ವರ್ಗೀಯ ವ್ಯಂಜನಗಳ ತನಕ ಆದ್ರೂ ಕಲೀತಿದ್ನೋ? ಏನೋ? ವಾರದಲ್ ಒಂದ್ ದಿನ ಅದೂ ಇದೂ ಕೆಲ್ಸ, ತಿಂಗ್ಳಲ್ ಒಂದ್ ವಾರ ಊರು, ಹಾಗೇ ಹೀಗೇ ಅಂತ ರೆಗ್ಯುಲರ್ಲಿ ಇರ್ರೆಗ್ಯುಲ್ಲರ್ ಆಗಿ ಹೋಗ್ತಾ ಇರೋದ್ರಿಂದ ಔ.. ಅಂ.. ಅಃ ತನಕ ಬಂದು ನಿಂತಿದೆ ವಿದ್ಯಾಭ್ಯಾಸ. ಇನ್ನೊಂದೆರಡು ತಿಂಗ್ಳಲ್ಲಿ ಡಿಗ್ರಿ ಮುಗ್ಯುತ್ತೆ… ಈಗ ಮತ್ತದೇ ವಾಟ್ ನೆಕ್ಸ್ಟ್? ಅನ್ನೋ ಪ್ರಶ್ನೆ ಹಗಲೂ ರಾತ್ರಿ ಕಾಡೋಕೆ ಶುರು ಮಾಡಿದೆ..
ಕೆಲ್ಸಕ್ ಹೋಗು, ಎಂಎ ಮಾಡು, ಕಾಂಪಿಟೇಟಿವ್ ಎಕ್ಸಾಂ ಬರಿ ಹೀಗೆ ಹತ್ತಾರು ಸಜೆಷನ್ಗಳು ಕಿವಿಗೆ ಬೀಳ್ತಿದೆ. ಈಗ್ಲೇ ಕೆಲ್ಸಕ್ ಸೇರೋವಷ್ಟ್ ಅನಿವಾರ್ಯತೆ ಇಲ್ಲ, ಆಗಿದ್ದಾಗ್ಲಿ ಎಂಎ ಮಾಡಣ ಅಂತ ನಂಗ್ ನಾನೇ ಉತ್ತರ ಹುಡುಕೋಷ್ಟ್ರಲ್ಲಿ ಎಲ್ಲಿ ಎಂಎ ಮಾಡೋದು? ಯಾವ್ ಯುನಿವರ್ಸಿಟಿ ಬೆಟರ್ರು? ಎಂಬೆಲ್ಲಾ ಅಡಿಷನಲ್ ಪ್ರಶ್ನೆಗಳು ಕೈಕಟ್ಕೊಂಡ್ ಎದುರಿಗೆ ನಿಂತ್ಬಿಡ್ತಾವೆ..
ಇರೋ ಭಾರವೇ ಜಾಸ್ತಿಯಾಗಿದೆ ಶಿವಾ ಅನ್ಕೊಳ್ಳೋ ಹೊತ್ತಲ್ಲಿ ಮೊಬೈಲಲ್ಲಿ ನೋಟಿಫಿಕೇಷನ್ ಸೌಂಡ್.. ಅವ್ಳೇ ಮೆಸೇಜ್ ಮಾಡಿರ್ಬೇಕು ಅಂತ ಖುಷಿಯಿಂದ ನೋಡಿದ್ರೆ ಯಾವ್ದೋ ಗ್ರೂಪಲ್ಲಿ ಮಲ್ಕೊಂಡಿರೋ ಮಗು ಚಿತ್ರದ್ ಕೆಳ್ಗೆ ಶುಭರಾತ್ರಿ ಅಂತ ಗೀಚಿರೋ ಮೆಸೇಜು, ದೇಹದಲ್ಲಿ ಹಡ್ರೆಂಡ್ ಡಿಗ್ರಿ ಸೆಲ್ಸಿಯಸ್ ತಾಪಮಾನ.. ಇರೋಬರೋ ಗ್ರೂಪ್ಗಳನ್ನೆಲ್ಲಾ ಮ್ಯೂಟ್ ಮಾಡಿ.. ಅವಳ ನಂಬರ್ರಿಗೆ ಮಾತ್ರ ಲಾಂಗ್ ವೈಬ್ರೇಷನ್ ಆಪ್ಷನ್ ಸೆಲೆಕ್ಟ್ ಮಾಡಿ, ಹಾಯ್.. ಅಂತ ಮೆಸೇಜ್ ಕಳ್ಸಿ ಎರ್ಡೆರ್ಡ್ ನಿಮ್ಷಕ್ಕೂ ಅವ್ಳ್ ಆನ್ಲೈನಿಗ್ ಬಂದ್ಲಾ ಅಂತಾ ಕಾಯೋದು ಒಂಥರಾ ಖುಷಿ ಕೊಡುತ್ತೆ, ಆನ್ಲೈನಲ್ಲಿದ್ದೂ ಮೆಸೇಜ್ ನೋಡಿಲ್ಲ ಅಂದ್ರೆ ಬೇಜಾರು.. ಮೆಸೇಜ್ ನೋಡಿಯೂ ರಿಪ್ಲೈ ಮಾಡಿಲ್ಲ ಅಂದ್ರೆ ವಿಪರೀತ ಸಂಕಟ.. ಲಾಂಗ್ ವೈಬ್ರೇಷನ್.. ಪಕ್ಕಾ ಅವ್ಳದ್ದೇ ಮೆಸೇಜು ಅಂತ ಓಪನ್ ಮಾಡಿದ್ರೆ ಮಲ್ಕೋ ಸುಮ್ನೆ.. ಬೈ ಅನ್ನೋ ರೆಡಿಮೇಡ್ ಮೆಸೇಜು, ಮೊದಮೊದಲೆಲ್ಲಾ ಬೇಜಾರ್ ಮಾಡ್ಕೊತ್ತಿದ್ದ ಮನ್ಸು ಬರ್ತಾ ಬರ್ತಾ ರೂಢಿ ಮಾಡ್ಕೊಂಡ್ ಬಿಡ್ತು.. ವಾರಕ್ಕೋ ಹದಿನೈದು ದಿನಕ್ಕೋ ಒಮ್ಮೆ ಅವಳಾಗೇ ಖುಷಿಯಿಂದ ಮಾತಾಡಿದಾಗ ದೀಪಾವಳಿ.. ಉಳಿದ ಸಮಯವೆಲ್ಲಾ ಸೂತಕದಲ್ಲಿ ಬರೋ ಹಬ್ಬಗಳಿದ್ದಂತೆ.. ಇವತ್ತಿಗೂ ಅವಳು ಎದುರಿಗೆ ಸಿಕ್ಕಾಗ ಮಾತು ಹೊರಡಲ್ಲ.. ಒನ್ ವೇ ಲವ್ ಹಣೆಬರಹವೇ ಇಷ್ಟು ಅವ್ರಿಗ್ ಲವ್ವಾಗಲ್ಲ, ನಮ್ಗ್ ಬ್ರೇಕಪ್ ಆಗಲ್ಲ ಅಂತ ಬಯ್ಕೊಂಡು.. ಬರೀ ಐದರ ಸ್ಪೀಡಲ್ಲೇ ತಿರುಗೋ ಟೇಬಲ್ ಫ್ಯಾನನ್ನ ಮುಖಕ್ಕೆ ಗಾಳಿ ಬರೋ ಥರ ಇಟ್ಕೊಂಡ್ ಮಲಗ್ತೀನಿ… ಮತ್ತೆ ಕನ್ಸು ಬೀಳುತ್ತೆ – ಜರ್ನಲಿಸ್ಟ್? ಆರ್ ಜೆ? ಸ್ಕೂಲು? ಲೆಕ್ಚರರ್? ಟ್ರಾವೆಲ್ ಏಜೆನ್ಸಿ? ಹೋಟೆಲ್ಲು? ಹೋಂ ಸ್ಟೇ? ಏನ್ ಮಾಡಣ.. ಯಾವ್ದ್ ಮಾಡಣ..? ಆಪ್ಷನ್ಸ್ ಸಿಕ್ಕಾಪಟ್ಟೆ ಇದಾವೆ.. ಗೊಂದಲ ಮುಂದುವರಿಯುತ್ತದೆ.
-ಸ್ಕಂದ ಆಗುಂಬೆ