ಅಂದು ನೇಗಿಲು ಹಿಡಿದಿದ್ದ ಕೈಯಲ್ಲಿಂದು ಪೆನ್ನಿದೆ…!

Date:

ಪತ್ರಕರ್ತರ ಲೈಫ್ ತುಂಬಾ ಆರಾಮಾಗಿರುತ್ತೆ, ಅವರದ್ದು ಐಷಾರಾಮಿ ಜೀವನ, ಯಾವ್ದೇ ಕಷ್ಟಗಳಿರಲ್ಲ ಎಂಬುದು ಬಹಳಷ್ಟು ಜನರಲ್ಲಿರೋ ತಪ್ಪು ಕಲ್ಪನೆ. ಬೇರೆ ಬೇರೆ ಕ್ಷೇತ್ರದ ಸಾಧಕರಂತೆ ಪತ್ರಿಕೋದ್ಯಮದಲ್ಲಿನ ಸಾಧಕರೂ ಕೂಡ ಕಲ್ಲು-ಮುಳ್ಳಿನ ಹಾದೀಲಿ ನಡೆದು ಬಂದವರು..! ಜನಪ್ರಿಯ ಹಾಗೂ ಸಾಧನೆಯ ಶಿಖರವನ್ನೇರಿರೋ ಪತ್ರಕರ್ತರ ಜೀವನದ ಕಥೆಯನ್ನು ನಿಮ್ಮ ಮುಂದೆ ತರುವ ಪ್ರಯತ್ನ ನಮ್ಮದು..! ಇದೇ ಪತ್ರಕರ್ತರ ‘ಲೈಫ್ ಕಹಾನಿ’.

ಅವತ್ತು ಹೊಲದಲ್ಲಿ ನೇಗಿಲು ಹಿಡಿದು ಉಳುಮೆ ಮಾಡ್ತಿದ್ದ ರೈತನ ಕೈಯಲ್ಲಿಂದು ಪೆನ್ನಿದೆ..! ಅನ್ನ ನೀಡುವ ಕೈಗಳಲ್ಲಿಂದು ಸಮಾಜವನ್ನು ಬದಲಾಯಿಸಬಲ್ಲ, ನ್ಯಾಯವನ್ನು ಎತ್ತಿ ಹಿಡಿಯಬಲ್ಲ ಅಸ್ತ್ರವಿದೆ…! ಅಂದು ರೈತ, ಇಂದು ಯಶಸ್ವಿ ಪತ್ರಕರ್ತ…!
ಇವರು ಅತ್ಯಂತ ವಿಶ್ವಾಸಾರ್ಹ ಕನ್ನಡ ದಿನಪತ್ರಿಕೆ ‘ಪ್ರಜಾವಾಣಿ’ ಬಳಗದ ಸದಸ್ಯ ಪ್ರಶಾಂತ್ ಡಿ.ಎಂ ಕುರ್ಕೆ. ಹಾಸನ ಜಿಲ್ಲೆಯ ಅರಸೀಕೆರೆ ತಾಲೂಕಿನ ದೊಡ್ಡಮೇಟಿ ಕುರ್ಕೆ (ಡಿಎಂ ಕುರ್ಕೆ) ಎಂಬ ಹಳ್ಳಿಯ ಮಧ್ಯಮ ವರ್ಗದ ರೈತ ಕುಟುಂಬದಲ್ಲಿ ಹುಟ್ಟಿದ ಪ್ರಶಾಂತ್ ಆರಂಭದಲ್ಲಿ ರೈತರೇ…!


ಮರಳು ಸಿದ್ಧಪ್ಪ ಮತ್ತು ವಿಜಯಮ್ಮ ದಂಪತಿ ಪುತ್ರ ಪ್ರಶಾಂತ್. ಇವರ ಪತ್ನಿ ಭಾರತಿ. ಮೊದಲೇ ಹೇಳಿದಂತೆ ರೈತ ಕುಟುಂಬದಲ್ಲಿ ಹುಟ್ಟಿದ ಪ್ರಶಾಂತ್ ತನ್ನ ವಿದ್ಯಾಭ್ಯಾಸ ಮುಗಿಯುತ್ತಿದ್ದಂತೆ ಆಯ್ದುಕೊಂಡಿದ್ದು ಕೃಷಿಯನ್ನೇ…! ಕೃಷಿ ಆಯ್ಕೆ ಮಾಡಿಕೊಂಡು ಬದುಕು ಕಟ್ಟಿಕೊಳ್ತಾ ಇದ್ದ ಪ್ರಶಾಂತ್ ಇದ್ದಕ್ಕಿದ್ದಂತೆ ಪತ್ರಿಕಾ ರಂಗಕ್ಕೆ ಬಂದ್ರು…!


ಡಿಎಂ ಕುರ್ಕೆಯಲ್ಲಿಯೇ ಪ್ರಾಥಮಿಕ, ಪ್ರೌಢ ಹಾಗೂ ಎರಡು ವರ್ಷದ ಪಿಯು ಶಿಕ್ಷಣವನ್ನು ಪಡೆದ ಇವರು ಪದವಿ ಶಿಕ್ಷಣಕ್ಕೆ ಶೈಕ್ಷಣಿಕ ನಗರಿ, ಕಲ್ಪತರು ನಾಡು ತುಮಕೂರು ಜಿಲ್ಲೆಯ ತಿಪಟೂರು ತಾಲೂಕು ಕೇಂದ್ರಕ್ಕೆ ಬರ್ತಾರೆ. ತಿಪಟೂರಿನ ಕಾಲೇಜುವೊಂದರಲ್ಲಿ ಐಚ್ಛಿಕ ಕನ್ನಡ ವಿಷಯದಲ್ಲಿ ಕಲಾವಿಭಾಗದಲ್ಲಿ ಪದವೀಧರನಾದ ಪ್ರಶಾಂತ್ ನಂತರ ಚಿಕ್ಕಾಬಳ್ಳಾಪುರದಲ್ಲಿ ಬಿ.ಇಡಿ ಶಿಕ್ಷಣ ಪಡೀತಾರೆ. ಸರ್ಕಾರಿ ಕೆಲಸ ಸಿಗಲ್ಲ. ಖಾಸಗಿ ಶಾಲೆಗಳಲ್ಲಿ ಕೆಲಸ ಮಾಡಲು ಒಂದಿಷ್ಟು ಅವಕಾಶಗಳು ಸಿಕ್ಕಿತ್ತಾದರೂ ಅದ್ಯಾಕೋ ಬೇಡ ಎಂದೆನಿಸಿತು. ಅಪ್ಪನ ಜೊತೆ ಹೊಲದಲ್ಲಿ ದುಡಿದರೆ ಹೇಗೆ..? ಎಂಬ ಪ್ರಶ್ನೆ ಮನಸ್ಸಿನಲ್ಲಿ ಮೂಡಿತು. ತಡಮಾಡಲಿಲ್ಲ. ಕೂಡಲೇ ಹುಟ್ಟೂರು ಡಿಎಂ ಕುರ್ಕೆಗೆ ಬಸ್ ಹತ್ತಿದ್ರು.


ನಾವು ಪಡೋ ಕಷ್ಟ ನಮ್ಮ ಮಕ್ಕಳು ಪಡೋದು ಬೇಡ ಅಂತ ರೈತರು ಆಸೆ ಪಟ್ಟಿರ್ತಾರೆ. ಅಂತೆಯೇ ‘ಚೆನ್ನಾಗಿ ವಿದ್ಯಾಭ್ಯಾಸ ಮಾಡಿರೋ ಮಗ ಉದ್ಯೋಗ ಮಾಡಲಿ ಎಂಬ ಆಸೆ ಪ್ರಶಾಂತ್ ಅವರ ಅಪ್ಪ-ಅಮ್ಮನಿಗೂ ಬಂದಿರಬಹುದು..! ಆದರೆ, ಅವರು ಕೃಷಿಯಲ್ಲಿ ತೊಡಗಿಸಿ ಕೊಳ್ತೀನಿ ಎಂದು ಮನೆಗೆ ಬಂದ ಮಗನ ಆಸೆಗೆ ತಣ್ಣೀರು ಎರಚಲಿಲ್ಲ..! ಅಲ್ಲಿಯೂ ಮಗನಿಗೆ ಪ್ರೋತ್ಸಾಹ ಕೊಟ್ರು.


ಹಗಲಿರುಳು ತಮ್ಮ ಹೊಲದಲ್ಲಿ ದುಡೀತಾ ಇದ್ದ ಪ್ರಶಾಂತ್ ಅವರಿಗೆ ಇದ್ದಕ್ಕಿದ್ದಂತೆ ನಾನೇಕೆ ಪತ್ರಕರ್ತನಾಗಬಾರದು? ಎಂಬ ಯೋಚನೆ ಬರುತ್ತೆ..! ಆಗ ಅವರು ಪಯಣ ಬೆಳೆಸಿದ್ದೇ ಮೈಸೂರು ಮುಕ್ತ ವಿವಿ ಕಡೆಗೆ. ಅಲ್ಲಿ ಪತ್ರಿಕೋದ್ಯಮ ಸ್ನಾತಕೋತ್ತರ ಪದವಿಗೆ ಅಪ್ಲಿಕೇಶನ್ ಹಾಕಿಯೇ ಬಿಟ್ರು…! ಊರಿನಲ್ಲಿ ರೈತಾಪಿ ಕೆಲಸಗಳಲ್ಲಿ ತೊಡಗಿಸಿಕೊಂಡೇ ಪತ್ರಿಕೋದ್ಯಮವನ್ನೂ ಓದಿದರು. ದೂರಶಿಕ್ಷಣದಲ್ಲಿ ಎರಡು ವರ್ಷದ ಸ್ನಾತಕೋತ್ತರ ಪದವಿ ಪಡೆದ ಪ್ರಶಾಂತ್ ಅವರಿಗೆ ಪತ್ರಕರ್ತನಾಗಿ ವೃತ್ತಿ ಬದುಕು ಆರಂಭಿಸಲು ಸಿದ್ಧವೇದಿಕೆ ಏನೂ ಇರಲಿಲ್ಲ..! ಒಂದಿಷ್ಟು ಕಡೆ ಕೆಲಸಕ್ಕೆ ಅಲೆದರೂ ಪ್ರಯೋಜನವಾಗಿರಲಿಲ್ಲ. ಅಂದು ಇಂದಿನಂತೆ ಹೆಚ್ಚಿನ ಸಂಖ್ಯೆಯ ಮಾಧ್ಯಮ ಸಂಸ್ಥೆಗಳು ಇರಲಿಲ್ಲವಲ್ಲ…!
ಸರಿ, ಹೇಗಿದ್ರೂ ಜರ್ನಲಿಸಂ ಪಿಜಿ ಮಾಡಿದ್ದೀನಿ. ಮುಂದೊಂದು ದಿನ ಅವಕಾಶ ಸಿಕ್ಕರೆ ಕನ್ನಡ ಪತ್ರಿಕೆಗಳಲ್ಲಿ ಬದುಕು ಕಟ್ಟಿಕೊಳ್ಳೋಣ. ಸದ್ಯ ಕೃಷಿಯಲ್ಲೇ ಮುಂದುವರೆಯುವುದು ಅಂತ ಡಿಸೈಡ್ ಮಾಡಿ, ಕೃಷಿಯಲ್ಲಿಯೇ ತನ್ನನ್ನು ತಾನು ತೊಡಗಿಸಿಕೊಂಡ್ರು.
ಹೀಗಿರುವಾಗ ಒಂದು ‘ಸಂಯುಕ್ತ ಕರ್ನಾಟಕ’ ದಿನಪತ್ರಿಕೆಯಲ್ಲಿ ಸಬ್‍ಎಡಿಟರ್ (ಉಪಸಂಪಾದಕ) ಹುದ್ದೆಗೆ ಅರ್ಜಿಗಳನ್ನು ಆಹ್ವಾನಿಸಿದ್ರು. ಪತ್ರಿಕೆಯಲ್ಲಿ ಆ ಪ್ರಕಟಣೆಯನ್ನು ನೋಡಿ ಪ್ರಶಾಂತ್ ಅರ್ಜಿಯನ್ನು ಹಾಕಿದ್ರು. ಕೆಲವು ದಿನಗಳಲ್ಲಿ ಸಂದರ್ಶನಕ್ಕೆ ಆಹ್ವಾನ ಬಂತು..! ಡಿಎಂ ಕುರ್ಕೆಯ ರೈತ ಪ್ರಶಾಂತ್ ರಾಜಧಾನಿ ಬೆಂಗಳೂರು ಬಸ್ ಹತ್ತಿದ್ರು…!


ಸಂಯುಕ್ತ ಕರ್ನಾಟಕ ಕಚೇರಿಗೆ ಹೋದಾಗ ‘ನೀವು ಕರ್ಮವೀರ ನಿಯತಕಾಲಿಕೆಗೆ ಪ್ರೋಫ್‍ರೀಡರ್ ಹುದ್ದೆಗೆ ಇಂಟರ್‍ವ್ಯೂ ಅಟೆಂಡ್ ಮಾಡಿ; ಅಂದ್ರು…! ಸರಿ, ಎಂದು ಆ ಸಂದರ್ಶನವನ್ನು ಅಟೆಂಡ್ ಮಾಡಿದ ಪ್ರಶಾಂತ್ ಸಂದರ್ಶನದಲ್ಲಿ ಸೋತ್ರು…! ತುಂಬಾ ಬೇಸರದಿಂದ ಮನೆಕಡೆಗೆ ಬಂದ್ರು. ಆದರೆ, ಮತ್ತೆ ಅವಕಾಶ ಸಿಕ್ಕೇ ಸಿಗುತ್ತೆ ನಾನು ಪತ್ರಿಕೆಯಲ್ಲಿ ಕೆಲಸ ಪಡೆದೇ ಪಡೀತೀನಿ ಎಂಬ ಹಠ ಅವರಿಲ್ಲಿತ್ತು.
ಮತ್ತೆ ಕೆಲವು ದಿನಗಳ ನಂತರ ಮತ್ತೊಮ್ಮೆ ಸಂಯುಕ್ತ ಕರ್ನಾಟಕ ದಿನಪತ್ರಿಕೆ ಉಪಸಂಪಾದಕ ಹುದ್ದೆಗೆ ಅರ್ಜಿ ಆಹ್ವಾನಿಸಿತು. ಪ್ರಶಾಂತ್ ಮತ್ತೆ ಅರ್ಜಿಸಲ್ಲಿಸಿದ್ರು. ಆಗ ಇಂಟರ್ ವ್ಯೂಗೆ ಹೋದಗಲೂ ಹಿಂದಿನದ್ದೇ ಅನುಭವ..! ಕರ್ಮವೀರಕ್ಕಾಗಿ ಸಂದರ್ಶನ ಅಟೆಂಡ್ ಮಾಡಿದ್ರು. ಆಗಲೂ ಕೆಲಸ ಸಿಗಲಿಲ್ಲ..! ಬೇಸರದಿಂದ ಊರಿಗೆ ವಾಪಾಸ್ಸಾದ್ರು.


ಕೆಲವು ದಿನಗಳ ನಂತರ ಮತ್ತೆ ಸಂಯುಕ್ತ ಕರ್ನಾಟದಿಂದ ಪ್ರಶಾಂತ್ ಅವರಿಗೆ ಕರೆ ಬಂತು. ದಾವಣಗೆರೆ ಬ್ಯೂರೋದಲ್ಲಿ ಉಪಸಂಪಾದಕ ಹುದ್ದೆ ಖಾಲಿ ಇದೆ. ನೀವು ಅಲ್ಲಿಗೆ ಹೋಗಿ ಒಮ್ಮೆ ಇಂಟರ್ ವ್ಯೂ ಆಟೆಂಡ್ ಮಾಡಿ ಎಂಬ ಕರೆ ಅದಾಗಿತ್ತು. ಪ್ರಶಾಂತ್ ದಾವಣಗೆರೆ ಬಸ್ ಹತ್ತಿದರು. ಅಲ್ಲಿ ಇಂಟರ್ ವ್ಯೂ ಅಟೆಂಡ್ ಮಾಡಿ ಸಂಯುಕ್ತ ಕರ್ನಾಟಕ ದಿನಪತ್ರಿಕೆಯಲ್ಲಿ ಕೆಲಸವನ್ನೂ ಗಿಟ್ಟಿಸಿಕೊಂಡರು…! ಅದು 2009ನೇ ಇಸವಿ.
ತನ್ನ ಬಹುದಿನಗಳ ಕನಸನ್ನು ನನಸುಮಾಡಿಕೊಂಡ ಪ್ರಶಾಂತ್ ಮತ್ತೆ ಹಿಂತಿರುಗಿ ನೋಡಲೇ ಇಲ್ಲ. ಸಂಯುಕ್ತ ಕರ್ನಾಟಕದಲ್ಲಿ ಸುಮಾರು 10 ತಿಂಗಳು ಕೆಲಸ ಮಾಡಿದ ಇವರು 2010ರಲ್ಲಿ ಪ್ರಜಾವಾಣಿ ಬಳಗದ ಸದಸ್ಯರಾದರು.
ಮೂರು ವರ್ಷ ಪ್ರಜಾವಾಣಿಯಲ್ಲಿ ವಿವಿಧ ವಿಭಾಗಗಳಲ್ಲಿ ಉಪಸಂಪಾದಕರಾಗಿ ಕೆಲಸ ಮಾಡಿದರು. ನಂತರ ಸಿನಿಮಾ ಮತ್ತು ಸಾಪ್ತಾಹಿಕ ವಿಭಾಗದಲ್ಲಿ ಕೆಲಸ ಮಾಡುವ ಅವಕಾಶ ಸಿಕ್ತು. ಆ ಅವಕಾಶವನ್ನು ಚೆನ್ನಾಗಿ ಬಳಸಿಕೊಂಡ ಪ್ರಶಾಂತ್ ತನ್ನ ಬರವಣಿಗೆ ಮೂಲಕ ತಮ್ಮದೇ ಓದುಗರನ್ನು ಗಳಿಸಿಕೊಂಡರು.


ಇದೀಗ ಸಿನಿಮಾ ಮತ್ತು ಸಾಪ್ತಾಹಿಕ ವಿಭಾಗದಲ್ಲಿ ಪ್ರಶಾಂತ್ ಇಲ್ಲ. ತುಮಕೂರು ಬ್ಯೂರೋದಲ್ಲಿ ಉಪಸಂಪಾದಕ/ವರದಿಗಾರರಾಗಿ ಸೇವೆಸಲ್ಲಿಸ್ತಾ ಇದ್ದಾರೆ.
ಸಾಮಾನ್ಯವಾಗಿ ಪ್ರಜಾವಾಣಿ ಓದುಗರು ಪ್ರಶಾಂತ್ ಡಿ.ಎಂ ಕುರ್ಕೆ ಅವರ ಬರಹಗಳನ್ನು ಓದಿರ್ತೀರಿ. ಟೆಲಿವಿಷನ್ ವಾಹಿನಿಗಳಲ್ಲಿ ತೆರೆಯ ಮೇಲೆ ರಾರಾಜಿಸೋ ಪತ್ರಕರ್ತರಂತೆ ಪ್ರಿಂಟ್ ಮೀಡಿಯಾದ ಪತ್ರಕರ್ತರು ತೆರೆಯ ಮೇಲೆ ಕಾಣಿಸಿಕೊಳ್ಳೊಲ್ಲ. ಅವರ ಬರವಣಿಗೆಗಳಿಂದ ಮನೆಮಾತಾಗ್ತಾರೆ ಇವರು ತೆರೆಮರೆಯ ಹೀರೋಗಳು. ಇಂತಹ ಮುದ್ರಣ ಮಾಧ್ಯಮದ ಯುವ ಸ್ಟಾರ್ ಪತ್ರಕರ್ತರ ಸಾಲಿನಲ್ಲಿ ಪ್ರಶಾಂತ್ ಡಿ.ಎಂ ಕುರ್ಕೆ ಸಹ ನಿಲ್ತಾರೆ…
ಪತ್ರಿಕೆ ಕೆಲಸದ ಜೊತೆ ಸಾಹಿತ್ಯ ಕೃಷಿಯಲ್ಲೂ ತೊಡಗಿಸಿಕೊಂಡಿದ್ದಾರೆ. ಇವರ ಹಸನಬ್ಬನ ರೇಡಿಯೋ ವಾರ್ತೆ ಎಂಬ ಕಥಾಸಂಕಲನಕ್ಕೆ ಬೇಂದ್ರೆ ಪುಸ್ತಕ ಬಹುಮಾನ, ವಸುದೇವಾ ಭೂಪಾಲಂ ದತ್ತಿ ನಿಧಿ ಬಹುಮಾನ ಲಭಿಸಿದೆ.
ಪ್ರಶಾಂತ್ ಡಿಎಂ ಕುರ್ಕೆ ಅವರಿಗೆ ಶುಭವಾಗಲಿ…

  • ಶಶಿಧರ್ ಎಸ್ ದೋಣಿಹಕ್ಲು

Share post:

Subscribe

spot_imgspot_img

Popular

More like this
Related

ಯೆಲ್ಲೋ ಮೆಟ್ರೋ ಪ್ರಯಾಣಿಕರಿಗೆ ಗುಡ್ ನ್ಯೂಸ್! ಐದನೇ ರೈಲಿನ ಟೆಸ್ಟಿಂಗ್ ಆರಂಭ!

ಯೆಲ್ಲೋ ಮೆಟ್ರೋ ಪ್ರಯಾಣಿಕರಿಗೆ ಗುಡ್ ನ್ಯೂಸ್! ಐದನೇ ರೈಲಿನ ಟೆಸ್ಟಿಂಗ್ ಆರಂಭ! ಬೆಂಗಳೂರು:...

ಪ್ರತಿದಿನ ಮೌತ್‌ವಾಶ್ ಬಳಸುವುದು ಒಳ್ಳೆಯದೋ ಕೆಟ್ಟದ್ದೋ? ಇಲ್ಲಿದೆ ಮಾಹಿತಿ

ಪ್ರತಿದಿನ ಮೌತ್‌ವಾಶ್ ಬಳಸುವುದು ಒಳ್ಳೆಯದೋ ಕೆಟ್ಟದ್ದೋ? ಇಲ್ಲಿದೆ ಮಾಹಿತಿ ಇತ್ತೀಚಿನ ದಿನಗಳಲ್ಲಿ ಮೌತ್‌ವಾಶ್...

ವೈಯಕ್ತಿಕ ಹಾಗೂ ಅನಗತ್ಯ ಪ್ರಶ್ನೆಗಳಿದ್ದರೆ ಈ ಪ್ರಶ್ನೆ ಉದ್ಭವಿಸುವುದಿಲ್ಲ ಎಂದು ಹೇಳಬಹುದು: ಡಿ.ಕೆ. ಶಿವಕುಮಾರ್

ವೈಯಕ್ತಿಕ ಹಾಗೂ ಅನಗತ್ಯ ಪ್ರಶ್ನೆಗಳಿದ್ದರೆ ಈ ಪ್ರಶ್ನೆ ಉದ್ಭವಿಸುವುದಿಲ್ಲ ಎಂದು ಹೇಳಬಹುದು:...

ರಶ್ಮಿಕಾ, ದೇವರಕೊಂಡ ಎಂಗೇಜ್‌ಮೆಂಟ್‌, ಫೆಬ್ರವರಿಯಲ್ಲಿ ಮದುವೆ?

ರಶ್ಮಿಕಾ, ದೇವರಕೊಂಡ ಎಂಗೇಜ್‌ಮೆಂಟ್‌, ಫೆಬ್ರವರಿಯಲ್ಲಿ ಮದುವೆ? ಜನಪ್ರಿಯ ಜೋಡಿ ರಶ್ಮಿಕಾ ಮಂದಣ್ಣ ಹಾಗೂ...