ನಡೆದು ಬಂದಿರೋ ದಾರಿ ‘ಮಧು’ರ… ಇನ್ನೂ ದೂರ ಸಾಗಬೇಕೆನ್ನುವ ಹಂಬಲ ಅಪಾರ…!

Date:

ಇವರು ಕನ್ನಡ ಸುದ್ದಿ ಮಾಧ್ಯಮದ ಹೊಸ ಮಿಂಚು. ಇವರು ನಡೆದು ಬಂದಿರೋ ದಾರಿ ‘ಮಧು’ರ. ನಾನಿನ್ನೂ ದೂರಸಾಗಬೇಕೆನ್ನುವ ಹಂಬಲ ಅಪಾರ.

ಇವರು ಬೇರ್ಯಾರು ಅಲ್ಲಅತ್ಯಂತ ಚಿಕ್ಕವಯಸ್ಸಲ್ಲಿಯೇ ಮಾಧ್ಯಮ ಕ್ಷೇತ್ರಕ್ಕೆ ಪಾದಾರ್ಪಣೆ ಮಾಡಿ ತನ್ನದೇಯಾದ ಛಾಪು ಮೂಡಿಸಿದ ನಿರೂಪಕಿ ಮಧು ಕೃಷ್ಣ.


ಚೆಂದುಳ್ಳಿ ಚೆಲುವೆ. ಇವರ ದನಿ ನೋಟಕ್ಕಿಂತ ಚೆನ್ನ. ಮಾತಿನ ಬಗ್ಗೆಯಂತೂ ಹೇಳೋದೇ ಬೇಡ. ಎಲ್ಲರಿಗೂ ಇಷ್ಟವಾಗುವಂತೆ ಮಾತಾಡ್ತಾರೆ…! ಸಿನಿಮಾರಂಗದಿಂದ ಆಮಂತ್ರಣ ಬರಲು ಸದ್ಯಕ್ಕೆ ಇಷ್ಟು ಸಾಕಲ್ವಾ…? ಟಿವಿ ಪರದೆಯಲ್ಲಿ ಮಿಂಚುತ್ತಿರುವ ಮಧು ಅವರಿಗೆ ಈಗಾಗಲೇ ಸಿನಿಲೋಕದ ಕರೆಯೋಲೆಗಳು ಬರುತ್ತಿವೆ. ಧಾರವಾಹಿಗಳಲ್ಲಿ ನಟಿಸುವಂತೆಯೂ ಹತ್ತಾರು ಕರೆಗಳು ಬರುತ್ತಿವೆ.


ಹಾಗಂತ ಸುದ್ದಿಮಾಧ್ಯಮ ಬಿಟ್ಟು ಸಿನಿಮಾಧ್ಯಮಕ್ಕೆ ಹೋಗ್ತಾರೆ ಅಂದ್ಕೊಂಡ್ರ…? ಇಲ್ಲ, ಈಗಂತೂ ಸಿನಿಯಾನ ಆರಂಭಿಸುವ ಮನಸ್ಸು ಅವರಿಗಿಲ್ಲ…! ಹೋಗುವ ಆಸೆಯೂ ಇಲ್ಲವಂತೆ…! ಆದ್ರೆ, ಮುಂದೆ ಏನಾಗುತ್ತೆ ಅನ್ನೋದು ಗೊತ್ತಿಲ್ಲ…! ಯಾಕಂದ್ರೆ, ಇವರೇ ಹೇಳುವಂತೆ ಮಾಧ್ಯಮ ಲೋಕಕ್ಕೆ ಬಂದಿದ್ದೇ ಅನಿರೀಕ್ಷಿತ…!


ಖಂಡಿತಾ ಆಶ್ಚರ್ಯ ಆಗುತ್ತೆ, ಇವರು ಪಿಯುಸಿಯಲ್ಲಿರುವಾಗಲೇ ಟಿವಿ ಪರದೆ ಮೇಲೆ ಕಾಣಿಸಿಕೊಂಡವರು. ಆ ಟೈಮಲ್ಲಿ ನ್ಯೂಸ್ ಮೀಡಿಯಾದಲ್ಲಿ ವರ್ಕ್ ಮಾಡೋದಿರ್ಲಿ, ನ್ಯೂಸ್ ನೋಡೋ ಮಂದಿಯೇ ಕಮ್ಮಿ. ಹೀಗಿರುವಾಗ ಮಧು ಅವರಿಗೇಕೆ ಈ ನ್ಯೂಸ್ ಚಾನಲ್ ಕಡೆ ಆಸಕ್ತಿ ಮೂಡ್ತು ಎನ್ನೋ ಪ್ರಶ್ನೆ ಕಾಡೋದು ಸಹಜ.


ಇವರ ಜರ್ನಿ ಬಗ್ಗೆ ಕೇಳ್ತಾ ಇದ್ರೆ ಏನೋ ಒಂಥರಾ ಖುಷಿ ಆಗುತ್ತೆ. ಚಿಕ್ಕವಯಸ್ಸಲ್ಲೇ ದೊಡ್ಡ ಸಾಧನೆ ಮಾಡಿದ್ದಾರೆ ಅಂತನೂ ಅನಿಸುತ್ತೆ…! ಇಷ್ಟೇಅಲ್ಲ, ಇವರಿಗೆ ಇನ್ನೂ ಬೆಳೆಯೋಕೆ ತುಂಬಾ ಟೈಮ್ ಕೂಡ ಇದೆ. ಎತ್ತರೆತ್ತರಕ್ಕೆ ಬೆಳೀತೀನಿ ಎಂಬ ಭರವಸೆಯನ್ನು ಈಗಾಗಲೇ ಮೂಡಿಸಿದ್ದಾರೆ.

ಮಧು ಕೃಷ್ಣ ಅವರು ಹುಟ್ಟಿದ್ದು, ಬೆಳೆದಿದ್ದೆಲ್ಲಾ ಬೆಂಗಳೂರಲ್ಲಿ. ತಂದೆ ಕೃಷ್ಣ, ತಾಯಿ ಲತಾ, ತಂಗಿ ಸಿಂಧು ಹಾಗೂ ತಮ್ಮ ನಿತಿನ್. ಚಿಕ್ಕಂದಿನಿಂದಲೂ ಮಧು ಅವರಿಗೆ ಓದೋ ಕಡೆ ಆಸಕ್ತಿ. ಇಂಜಿನಿಯರಿಂಗ್ ಮಾಡ್ಬೇಕು, ಉದ್ಯಮಿ ಆಗ್ಬೇಕು ಎಂಬುದೇ ಗುರಿ, ಕನಸು…! ಹಾಗಾಗಿ ಪಿಯುಸಿಯಲ್ಲಿ ಇಷ್ಟದ ವಿಜ್ಞಾನ ವಿಷ್ಯವನ್ನು ಆಯ್ಕೆ ಮಾಡಿಕೊಂಡಿದ್ರು.


ಆಗತಾನೆ ಎಸ್‍ಎಸ್‍ಎಲ್‍ಸಿ ಮುಗಿಸಿ ಕಾಲೇಜು ಮೆಟ್ಟಿಲೇರಿದ್ರು. ಕಾಲೇಜು, ಫ್ರೆಂಡ್ಸ್, ಓದು ಅಂತ ಖುಷಿ ಖುಷಿಲೀ ಕಾಲ ಕಳೀತಿದ್ರು. ಒಂದ್ ದಿನ ಅದೇನ್ ಅನಿಸ್ತೋ ಗೊತ್ತಿಲ್ಲ, ನಾನ್ಯಾಕೆ ವಿಜೆ (ವೀಡಿಯೋ ಜಾಕಿ) ಆಗಬಾರ್ದು? ಎಂದು ತಮ್ಮನ್ನು ತಾವೇ ಪ್ರಶ್ನಿಸಿಕೊಂಡ್ರು. ಸೆಕೆಂಡ್ ಈಯರ್ ಪಿಯುಸಿಯಲ್ಲಿರುವಾಗ ಲೋಕಲ್ ಚಾನಲ್ ಒಂದರಲ್ಲಿ ಪಾರ್ಟ್‍ಟೈಮ್ ಕೆಲಸ ಮಾಡೋ ಸದಾವಕಾಶ ಸಿಕ್ತು. ಆರು ತಿಂಗಳು ಅಲ್ಲಿ ಕೆಲಸ ಮಾಡಿದ್ರು. ಅಷ್ಟೊತ್ತಿಗೆ ಪಿಯುಸಿ ಮುಗಿಯಿತು.


ಹ್ಞಾಂ, ಇನ್ನೇನು ಇಂಜಿನಿಯರಿಂಗ್ ಗೆ ಸೇರ್ಬೇಕಿತ್ತು. ಜೊತೆಗೆ ಪಾರ್ಟ್‍ಟೈಮ್ ವಿಜೆ ಆಗಿಯೂ ಕೆಲಸ ಮಾಡೋಣ ಅನ್ನೋ ಆಸೆ ಇತ್ತು. ಉದಯ ಮ್ಯೂಸಿಕ್‍ಗೆ ಇಂಟರ್ ವ್ಯೂ ಗೆ ಅಂತ ಹೊರಟರು. ಆಗ ಯಾರೋ ಒಬ್ರು ಫ್ರೆಂಡ್, ಉದಯ ಮ್ಯೂಸಿಕ್ ಗಿಂತ ‘ಪ್ರಜಾ ಟಿವಿ’ ಆಫೀಸ್ ಹತ್ತಿರ ಇದೆ. ಮೊದ್ಲು ಅಲ್ಲಿಗೆ ಹೋಗಿ, ಆಮೇಲೆ ಉದಯ ಚಾನಲ್ ಕಡೆ ಹೋಗು ಅಂತ ಹೇಳ್ತಾರೆ.


ಆಗಿನ್ನೂ ಪ್ರಜಾ ಟಿವಿ ಲಾಂಚ್ ಆಗಿರ್ಲಿಲ್ಲ. ಹೊಸಮುಖಗಳ ಅನ್ವೇಷಣೆ ನಡೀತಾ ಇತ್ತು. ಮಧು ಪ್ರಜಾ ಟಿವಿಗೆ ಇಂಟರ್ ವ್ಯೂ ಗೆ ಹೋದ್ರು. ಅಲ್ಲಿ ಇಂಟರ್ ವ್ಯೂ ಮುಗಿಯೋದು ತಡವಾಯಿತು. ಹಾಗಾಗಿ ಉದಯ ಮ್ಯೂಸಿಕ್ ಕಡೆ ಹೋಗೋಕೆ ಆಗ್ಲಿಲ್ಲ. ಅವತ್ತು ಶುಕ್ರವಾರ ಆದ್ದರಿಂದ ಶನಿವಾರ, ಭಾನುವಾರ ಬಿಟ್ಟು, ಸೋಮವಾರ-ಮಂಗಳವಾರದಂಗೆ ಉದಯ ಮ್ಯೂಸಿಕ್ ಗೆ ಹೋಗೋಣ ಅಂತ ಅನ್ಕೊಂಡಿದ್ರು. ಇವರು ಅಲ್ಲಿಗೆ ಹೋಗೋಕೆ ಸಾಧ್ಯವೇ ಆಗ್ಲಿಲ್ಲ…! ಅಷ್ಟೊತ್ತಿಗಾಗಲೇ, ಪ್ರಜಾಟಿವಿಯಿಂದ ನೀವು ಸೆಲೆಕ್ಟ್ ಆಗಿದ್ದೀರಿ ಎಂಬ ಸಿಹಿ ಸುದ್ದಿ ಮಧು ಅವರಿಗೆ ಬಂದಿತ್ತು…!


ಮನೆಯಲ್ಲಿ ಯಾವಾಗ್ಲೂ ಮ್ಯೂಸಿಕ್ ಚಾನಲ್‍ಗಳನ್ನು ನೋಡ್ತಾ ಇದ್ದ, ಶಾಲೆ-ಕಾಲೇಜಿಗೆ ರಜೆ ಇದೆ ಎಂಬ ಸುದ್ದಿಗಾಗಿ ಮಾತ್ರ ನ್ಯೂಸ್ ಚಾನಲ್ ನೋಡ್ತಿದ್ದ ಮಧು ಹೀಗೆ 2015ರಲ್ಲಿ ಮಾಧ್ಯಮರಂಗಕ್ಕೆ ಎಂಟ್ರಿಕೊಟ್ರು. ಈಗ ವೃತ್ತಿ ಮತ್ತು ವಿದ್ಯಾಭ್ಯಾಸ ಎರಡನ್ನೂ ನಿಭಾಯಿಸಿಕೊಂಡು ಹೋಗುತ್ತಿದ್ದಾರೆ.


ಆಗ ಪ್ರಜಾ ಟಿವಿಯಲ್ಲಿ ತುಂಬಾ ಚಿಕ್ಕವರು ಎಂದ್ರೆ ಮಧು. ಆದ್ರೆ, ಈಕೆಯಲ್ಲಿ ಏನೋ ಇದೆ. ಮೀಡಿಯಾಕ್ಕೆ ಹೇಳಿಮಾಡಿಸಿದಂತಿದ್ದಾಳೆ ಎನ್ನುವ ಯೋಚನೆ ಅಲ್ಲಿನ ಹಿರಿಯರಿಗೆ ಬಂದಿರಬೇಕು. ಅವರು ಮಧು ಅವರಿಗೆ ಸಮಾಧಾನದಿಂದ ಮಾಧ್ಯಮ ಪಾಠ ಹೇಳಿಕೊಟ್ರು.
ಪಿಯುಸಿ ಕೆಮಿಸ್ಟ್ರಿ ಪ್ರಶ್ನೆಪತ್ರಿಕೆ ಲೀಕ್ ಆದ ಬ್ರೇಕಿಂಗ್ ನ್ಯೂಸ್ ಬರುವಾಗ ಮಧು ಆನ್ ಸ್ಕ್ರೀನ್‍ನಲ್ಲಿದ್ದರು…! ಆ ಬಿಸಿ ಬಿಸಿ ಸುದ್ದಿಯನ್ನು ಓದಿದ್ದು ಇವರೇ…! ವಿಶೇಷವೆಂದರೆ ಕೇವಲ ಎರಡು ವರ್ಷದ ಹಿಂದೆ ಇವರು ಪಿಯುಸಿ ಎಕ್ಸಾಮ್ ಬರೆದಿದ್ರು…! ಪಿಯುಸಿ ಮುಗಿದ ಎರಡನೇ ವರ್ಷದಲ್ಲಿಯೇ ರಾಜ್ಯಮಟ್ಟದ ಸುದ್ದಿವಾಹಿನಿಯಲ್ಲಿ ಕುಳಿತು ಪ್ರಶ್ನೆಪತ್ರಿಕೆ ಸೋರಿಕೆ ಸುದ್ದಿಯನ್ನು ಓದುವಂತಾಗಿತ್ತು…! ಈ ಕ್ಷಣವನ್ನು ಇವರೆಂದು ಮರೆಯಲು ಸಾಧ್ಯವಿಲ್ಲ. ವಾರ್ತೆ ಓದುವುದಲ್ಲದೆ, ಸಿನಿಮಾ ಡಿಸ್ಕಷನ್‍ಗಳನ್ನು ನಡೆಸಿಕೊಟ್ಟಿದ್ದಾರೆ. ‘ಸಖಿ-ಸುಖಿ’ ಎಂಬ ಲೈಫ್ ಸ್ಟೈಲ್ ಪ್ರೋಗ್ರಾಂ ನಡೆಸಿಕೊಟ್ಟಿದ್ದರು. ಇದು ಸ್ವತಃ ಇವರಿಗೂ ಖುಷಿಕೊಟ್ಟ ಕಾರ್ಯಕ್ರಮ.


ನಂತರ ಹೊಸದಾಗಿ ಆರಂಭಾದ ಟಿವಿ5ನಲ್ಲಿ ಅವಕಾಶ ಸಿಕ್ಕಿತು. ವೃತ್ತಿ ಬದುಕಿನ ಅನಿವಾರ್ಯ ಬದಲಾವಣೆ ಬಯಸಿ ಟಿವಿ5 ಕುಟಂಬಕ್ಕೆ ಪ್ರವೇಶಿಸಿದ್ದಾರೆ.  ಟಿವಿ5 ಸಂಸ್ಥೆ ಪ್ರತಿವರ್ಷ ನಡೆಸುವ ‘ಶಿವಪಾರ್ವತಿ ಕಲ್ಯಾಣೋತ್ಸವ’ ಕಾರ್ಯಕ್ರಮವನ್ನು ಹೈದರಾಬಾದ್‍ನಿಂದ ಟಿವಿ5 ಕನ್ನಡವಾಹಿನಿ ಮೂಲಕ ಕನ್ನಡಿಗರಿಗೆ ತಲುಪಿಸುವ ಹೊಣೆ ನಿಭಾಯಿಸಿದ್ದು ಇದೇ ಮಧು.


‘` ಪ್ರಜಾ ಟಿವಿಯಲ್ಲಿರುವಾಗ ಎಡಿಟರ್ ಇನ್ ಚೀಫ್ ಎಂ.ಆರ್ ಸುರೇಶ್ ಸರ್ ಮತ್ತು ಮನೋಜ್ ಸರ್, ಗಜಾನನ ಹೆಗ್ಡೆ ಸರ್, ಆನಂದ್ ಸರ್  ತುಂಬಾ ಪ್ರೋತ್ಸಾಹ ನೀಡಿದ್ರು. ಹಾಗೆ ಮಾಡ್ಬೇಕು, ಹೀಗೆ ಮಾಡ್ಬೇಕು ಅಂತ ಹೇಳಿಕೊಟ್ರು. ತಪ್ಪುಗಳನ್ನು ತಿದ್ದಿದ್ರು. ಪಿಯುಸಿಯಲ್ಲಿ ಇಂಗ್ಲಿಷ್ ಜೊತೆಗೆ ಆಯ್ಕೆಮಾಡಿಕೊಂಡ ಭಾಷಾ ವಿಷಯ ಹಿಂದಿ ಆಗಿತ್ತು. ಕನ್ನಡ ಸ್ಪಷ್ಟವಾಗಿ ಮಾತಾಡ್ತಾ ಇದ್ದೆನಾದ್ರೂ ಕನ್ನಡದಲ್ಲಿ ಇಂಗ್ಲಿಷ್ ಆ್ಯಕ್ಸೆಂಟ್ ಇತ್ತು. ಇದನ್ನು ಸರಿಪಡಿಸಿದ್ದೇ ಗಜಾನನ ಸರ್. ಆ್ಯಂಕರ್ ಲಿಖಿತ ಮೇಡಂ ಅವರಿಂದ ಸಾಕಷ್ಟು ಕಲಿತೆ. ಮುಖ್ಯವಾಗಿ ವಾಯ್ಸ್ ಓವರ್ ಕೊಡೋದನ್ನು ಕಲಿಸಿಕೊಟ್ಟವರು ಅವರೇ. ಜೊತೆಗೆ ರಾಮಕೃಷ್ಣ ರೆಡ್ಡಿ ಸರ್ (ಇಂದು ಟಿವಿ9ನಲ್ಲಿದ್ದಾರೆ) ಕೂಡ ಮಾರ್ಗದರ್ಶನ ನೀಡಿದ್ದಾರೆ.

ಇದೀಗ ಟಿವಿ5ನಲ್ಲಿಯೂ ಕೆಲಸ ಮಾಡ್ತಿರೋದಕ್ಕೆ ಖುಷಿ ಇದೆ. ದಿನೇಶ್ ಸರ್, ಸತೀಶ್ ಸರ್ ಮೊದಲಾದ ಸೀನಿಯರ್ ಗಳ ಪ್ರೋತ್ಸಾಹ, ಮಾರ್ಗದರ್ಶನ ಸಿಗ್ತಿದೆ. ಇಲ್ಲಿತನಕ ನನಗೆ ಕಲಿಸಿದ, ಕಲಿಸುತ್ತಿರುವ, ಪ್ರೋತ್ಸಾಹಿಸಿ, ಪ್ರೋತ್ಸಾಹಿಸುತ್ತಿರುವ ಎಲ್ಲರಿಗೂ ನಾನು ಅಭಾರಿ ಎನ್ನುತ್ತಾರೆ ಮಧು.


ಬಾಳಪಯಣದಲಿ ಜೊತೆಯಾಗಿ ಸಾಗಲಿರುವ ಸಂಗಾತಿ ನೀಡಿದ, ನೀಡುತ್ತಿರುವ ಪ್ರೋತ್ಸಾಹವನ್ನು ಪದಗಳಲಿ ವರ್ಣಿಸಲಾದೀತೆ. ನಾನು ಏನಾದರೂ ಸಾಧನೆ ಮಾಡಿದ್ದರೆ ಅದರ ಶ್ರೇಯ ಅವರಿಗೇ ಸಲ್ಲಬೇಕು ಎಂದು ಹೇಳುವುದನ್ನೂ ಸಹ ಮಧು ಮರೆತಿಲ್ಲ.
ಮಾಧ್ಯಮದಲ್ಲಿ ನಿರಂತರ ಕಲಿಕೆ ಇರುತ್ತೆ. ವ್ಯಕ್ತಿತ್ವ ವಿಕಸನಕ್ಕೆ ಈ ಕ್ಷೇತ್ರ ಸಹಕಾರಿ. ಹೊಸ ಹೊಸ ಸಾಧ್ಯತೆಗಳು ಇಲ್ಲಿವೆ ಎನ್ನುವ ಮಧು, ಮಾಧ್ಯಮಕ್ಕೆ ಬಂದಿದ್ದು ಅನಿರೀಕ್ಷತವಾಗಿತ್ತಾದರೂ ಈಗ ತುಂಬಾ ಎಂಜಾಯ್ ಮಾಡ್ತಿದ್ದೇನೆ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ.


ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗ್ತಿದ್ದ ‘ಮಜಾಟಾಕೀಸ್’ ಫಿನಾಲೆಯ ಒಂದು ಶೋನ ನಿರೂಪಣೆ ಸಹ ನಡೆಸಿಕೊಟ್ಟಿದ್ದು ಇವರಿಗೆ ಖುಷಿಕೊಟ್ಟ ಕ್ಷಣ.

ಪಿಯುಸಿ ಮುಗಿಯುತ್ತಿದ್ದಂತೆ ಮೀಡಿಯಾಕ್ಕೆ ಸೇರಿದಾಗ, ಓದೋದು ಕಡೆ ಗಮನಕೊಡು. ಎಂದು ಬೈದಿದ್ದ ತಂದೆ ಕೃಷ್ಣ ಅವರೇ ಇವತ್ತು ಮಗಳ ಬಗ್ಗೆ ಹೆಮ್ಮೆಪಡ್ತಿದ್ದಾರೆ. ಪ್ರಪಂಚ ಸುತ್ತುಬೇಕೆಂಬುದು ಇವರ ಆಸೆ. ಸಮಾಜಕ್ಕೆ ತನ್ನಿಂದ ಏನಾದರು ಒಳ್ಳೆಯದನ್ನು ಮಾಡ್ಬೇಕು ಎನ್ನುವ ತುಡಿತವಿರೋ ಮಧು ಅವರಿನ್ನೂ ಎತ್ತರಕ್ಕೆ ಬೆಳೆಯಲಿ. ಕನ್ನಡಿಗರೆಲ್ಲಾ ಹೆಮ್ಮೆಪಡುವಂತಹ ಸಾಧನೆ ಮಧು ಅವರಿಂದ ಸಾಧ್ಯವಾಗಲೆಂದು ಆಶಿಸುತ್ತಾ…, ಹಾರೈಸುತ್ತಾ…

-ಶಶಿಧರ್ ಎಸ್ ದೋಣಿಹಕ್ಲು

ಓದುಗರ ಗಮನಕ್ಕೆ :ಮಾರ್ಚ್-ಏಪ್ರಿಲ್‍ನಲ್ಲಿ ದಿ ನ್ಯೂ ಇಂಡಿಯನ್ ಟೈಮ್ಸ್ ‘ಫೇವರೇಟ್ ಆ್ಯಂಕರ್’ ಸ್ಪರ್ಧೆಯನ್ನು ನಡೆಸುತ್ತಿದೆ. ಈ ಬಗ್ಗೆ ನಿಮಗೆ ಈಗಾಗಲೇ ಗೊತ್ತಿದೆ. ಕಳೆದ ವರ್ಷ ನೀವು ನಿಮ್ಮ ನೆಚ್ಚಿನ ನಿರೂಪಕರಿಗೆ ವೋಟ್ ಹಾಕಿದ್ದೀರಿ. ಈ ವರ್ಷವೂ ನಿಮ್ಮ ನೆಚ್ಚಿನ ನಿರೂಪಕರನ್ನು ಆಯ್ಕೆ ಮಾಡುವ ಜವಬ್ದಾರಿಯೂ ನಿಮ್ಮದೇ…! ಇದಕ್ಕೆ ಪೂರಕವಾಗಿ ನಾವೀಗ ‘ಈ ದಿನದ ನಿರೂಪಕ’ ಎಂದು 10 ನವೆಂಬರ್ 2017ರಿಂದ ದಿನಕ್ಕೊಬ್ಬರಂತೆ ಕನ್ನಡದ ನಿರೂಪಕರ ಕಿರುಪರಿಚಯವನ್ನುಮಾಡಿಕೊಡುತ್ತಿದ್ದೇವೆ.

10 ನವೆಂಬರ್ 2017 : ಈಶ್ವರ್ ದೈತೋಟ

11 ನವೆಂಬರ್ 2017 : ಭಾವನ

12  ನವೆಂಬರ್ 2017 : ಜಯಶ್ರೀ ಶೇಖರ್

13 ನವೆಂಬರ್ 2017 : ಶೇಷಕೃಷ್ಣ

14 ನವೆಂಬರ್ 2017 : ಶ್ರೀಧರ್ ಶರ್ಮಾ

15 ನವೆಂಬರ್ 2017 : ಶ್ವೇತಾ ಜಗದೀಶ್ ಮಠಪತಿ

16 ನವೆಂಬರ್ 2017 : ಅರವಿಂದ ಸೇತುರಾವ್

17 ನವೆಂಬರ್ 2017 : ಲಿಖಿತಶ್ರೀ

18 ನವೆಂಬರ್ 2017 : ರಾಘವೇಂದ್ರ ಗಂಗಾವತಿ

19 ನವೆಂಬರ್ 2017 : ಅಪರ್ಣಾ

20 ನವೆಂಬರ್ 2017 :  ಅಮರ್ ಪ್ರಸಾದ್

21 ನವೆಂಬರ್ 2017 :   ಸೌಮ್ಯ ಮಳಲಿ

22 ನವೆಂಬರ್ 2017 :  ಅರುಣ್ ಬಡಿಗೇರ್

23ನವೆಂಬರ್ 2017 :  ರಾಘವ ಸೂರ್ಯ

24ನವೆಂಬರ್ 2017 :  ಶ್ರೀಲಕ್ಷ್ಮಿ

25ನವೆಂಬರ್ 2017 :  ಶಿಲ್ಪ ಕಿರಣ್

26ನವೆಂಬರ್ 2017 :  ಸಮೀವುಲ್ಲಾ

27ನವೆಂಬರ್ 2017 :  ರಮಾಕಾಂತ್ ಆರ್ಯನ್

28ನವೆಂಬರ್ 2017 :  ಮಾಲ್ತೇಶ್

29/30ನವೆಂಬರ್ 2017 :  ಶ್ವೇತಾ ಆಚಾರ್ಯ  [ನಿನ್ನೆ (29ರಂದು ) ತಾಂತ್ರಿಕ ಸಮಸ್ಯೆಯಿಂದ ‘ಈ ದಿನದ ನಿರೂಪಕರು’- ನಿರೂಪಕರ ಪರಿಚಯ ಲೇಖನ ಪ್ರಕಟಿಸಿರಲಿಲ್ಲ. ಆದ್ದರಿಂದ ಇಂದು ಪ್ರಕಟಿಸಿದ್ದೀವಿ.  ಈ ದಿನದ (30 ನವೆಂಬರ್) ಲೇಖನ ಸಂಜೆ ಪ್ರಕಟಿಸಲಾಗುವುದು.) ]

30ನವೆಂಬರ್ 2017 :  ಸುರೇಶ್ ಬಾಬು 

01 ಡಿಸೆಂಬರ್ 2017 :  ಮಧು ಕೃಷ್ಣ (ಡಿಸೆಂಬರ್ ೨ ರಂದು ಬೆಳಗ್ಗೆ ಪ್ರಕಟ)

 

Share post:

Subscribe

spot_imgspot_img

Popular

More like this
Related

ಮಹಿಳೆಯರಿಗೆ ಗುಡ್‌ ನ್ಯೂಸ್: ವೇತನ ಸಹಿತ ಮುಟ್ಟಿನ ರಜೆಗೆ ಅನುಮೋದನೆ‌

ಮಹಿಳೆಯರಿಗೆ ಗುಡ್‌ ನ್ಯೂಸ್: ವೇತನ ಸಹಿತ ಮುಟ್ಟಿನ ರಜೆಗೆ ಅನುಮೋದನೆ‌ ಬೆಂಗಳೂರು: ಗ್ಯಾರಂಟಿ...

ಹಾಸನಾಂಬೆ ದೇವಾಲಯದ ಗರ್ಭಗುಡಿ ಬಾಗಿಲು ಓಪನ್

ಹಾಸನಾಂಬೆ ದೇವಾಲಯದ ಗರ್ಭಗುಡಿ ಬಾಗಿಲು ಓಪನ್ ಹಾಸನ: ಐತಿಹಾಸಿಕ ಪ್ರಸಿದ್ಧ ಹಾಸನಾಂಬೆ ದೇವಸ್ಥಾನದ...

ಬಂಗಾರದ ಬೆಲೆ ಏರಿಕೆ! ಬೆಳ್ಳಿಯೂ ದುಬಾರಿ, ಹೀಗಿದೆ ಇಂದಿನ ರೇಟ್!

ಬಂಗಾರದ ಬೆಲೆ ಏರಿಕೆ! ಬೆಳ್ಳಿಯೂ ದುಬಾರಿ, ಹೀಗಿದೆ ಇಂದಿನ ರೇಟ್! ಚಿನ್ನ ಖರೀದಿಗೆ...

ಕರ್ನಾಟಕದ 12 ಜಿಲ್ಲೆಗಳಲ್ಲಿ ವಿಪರೀತ ಮಳೆ: ಬೆಂಗಳೂರಿಗೆ ಯೆಲ್ಲೋ ಅಲರ್ಟ್ ಘೋಷಣೆ!

ಕರ್ನಾಟಕದ 12 ಜಿಲ್ಲೆಗಳಲ್ಲಿ ವಿಪರೀತ ಮಳೆ: ಬೆಂಗಳೂರಿಗೆ ಯೆಲ್ಲೋ ಅಲರ್ಟ್ ಘೋಷಣೆ! ಬೆಂಗಳೂರು:...