ಮಡಿವಾಳ ಹಕ್ಕಿ-ಇದು ಆ ದಿನಗಳ ನೆನಪು

Date:

ನಮ್ಮ ಮನೆಯ ಸ್ವಲ್ಪವೇ ಹತ್ತಿರ ಇದ್ದ ಪಕ್ಕದ ಮನೆಯ  ಮುಂದೆ ದಾಸವಾಳದ ಗಿಡ ಇತ್ತು. ಅದನ್ನು ಗಿಡ ಎನ್ನುವುದಕ್ಕಿಂತ  ‘ದಾಸವಾಳದ ಮರ’ ಎಂದರೆ ಸೂಕ್ತ ಏಕೆಂದರೆ ಅದು ಅಷ್ಟು ದೊಡ್ಡದಾಗಿ ಬೆಳೆದಿತ್ತು. ಆ ಮರದ ಜೊತೆಗೆ ಗುಲಾಬಿ ಗಿಡವು  ತುಂಬ ಎತ್ತರಕ್ಕೆ ಬೆಳೆದು ದಾಸವಾಳದ ಮರದ ಕೊಂಬೆಗಳ
ಜೊತೆಗೆ ಹರಡಿಕೊಂಡು ತುಂಬ ಸೊಂಪಾಗಿ ಬೆಳೆದಿದ್ದವು. ಆ  ದಾಸವಾಳದ ಮರದ ಮಧ್ಯದ ಕೊಂಬೆಯಲ್ಲಿ ಒಂದು ಪುಟ್ಟ ಹಕ್ಕಿ ಗೂಡು ಕಟ್ಟಿತ್ತು. ಅದರ ಹೆಸರು “ಪಿಟ್ನಕ್ಕಿ’ (ಮಡಿವಾಳ), ಈ ಹಕ್ಕಿ ಗುಲಗಂಜಿ ಗಾತ್ರ ಇರುವುದರಿಂದ ಇದಕ್ಕೆ ಪಿಟ್ನಕ್ಕಿ ಅಂತ  ಕರೆಯುತ್ತಿದ್ದರೇನೋ? ಈ ಹಕ್ಕಿಯನ್ನು ಹಿಡಿದು ಸಾಕ ಬೇಕು  ಎಂದು ಆಸೆಪಟ್ಟು ಎಷ್ಟೋ ಬಾರಿ ಹಿಡಿಯಲು ಪ್ರಯತ್ನಿಸಿ ವಿಫಲನಾಗಿದ್ದೆ ನಮ್ಮ ಊರಿನಲ್ಲಿ ನಾವು ಚಿಕ್ಕವರಿದ್ದಾಗ ಹಂಚಿನ ಮನೆಗಳು  ಹೆಚ್ಚಾಗಿದ್ದವು. ಆ ಹಂಚಿನ ಮನೆಗಳ ಬಿದಿರಿನ ಗಳುಗಳ ಮಧ್ಯದ  ರಂಧ್ರದಲ್ಲಿ ಬಾವುಲಿಗಳು ಜೀವಿಸುತ್ತಿದ್ದವು. ನಮಗೆ ಶನಿವಾರ  ಭಾನುವಾರ ರಜೆ ಬಂದರೆ ಸಾಕು. ನಮ್ಮ ಸರ್ವ ಚೇಷ್ಟೆಗಳನ್ನು
ಆರಂಭಿಸುತ್ತಿದ್ದೆವು.

ಬಿದಿರಿನ ಗಳುಗಳ ಮಧ್ಯೆ ರಂಧ್ರದಲ್ಲಿ ಇರುವ ಪುಟ್ಟ ಪುಟ್ಟ  ಬಾವುಲಿಗಳನ್ನು ಹಿಡಿಯಲು ಪ್ಲಾಸ್ಟಿಕ್ ಕವರ್ಗಳನ್ನು ಬಳಸುತ್ತಿದ್ದೆವು. ಆ ಬಿದಿರಿನ ಗಳುಗಳ ರಂದ್ರಕ್ಕೆ ಕಡ್ಡಿಯನ್ನು ತೆಗೆದುಕೊಂಡು  ರಂಧ್ರದ ಒಳಕ್ಕೆ ತೂರಿಸಿ ಒಳಗೆ ನೆಮ್ಮದಿಯಿಂದ ಇದ್ದ ಬಾವಲಿ ಮರಿಗಳಿಗೆ ಕಡ್ಡಿಯಿಂದ ಚುಚ್ಚುತ್ತಿದ್ದೆವು. ಅದರೊಳಗೆ ಇದ್ದ  ಬಾವಲಿಗಳಿಗೆ ನಾನು ಕೊಟ್ಟ ಹಿಂಸೆ ತಾಳಲಾರದೆ ಹೊರಗೆ  ಹೋಗಲು ಬಂದೊಡನೆ ನಾವು ಮೊದಲೇ ಬಿದಿರಿನ ಗಳುಗಳಿಗೆ  ಕಟ್ಟಿರುತ್ತಿದ್ದ ಪ್ಲಾಸ್ಟಿಕ್ ಚೀಲದೊಳಕ್ಕೆ ಬಂದು ಬೀಳುತ್ತಿದ್ದವು. ನಾವು ಆ ಬಾವುಲಿ ಮರಿಗಳನ್ನೆಲ್ಲ ಹಿಡಿದು ಅವುಗಳ ಕಾಲಿಗೆ  ದಾರ ಕಟ್ಟಿ ಹಾರಲು ಬಿಡುತ್ತಿದ್ದೆವು. ಅವು ಹಾರಲು ಆಗದೆ ದೊಪ್ಪೆಂದು ನೆಲದ ಮೇಲೆ ಬೀಳತ್ತಿದ್ದವು. ಬಾವಲಿಗಳಿಗಿಂತ ಬೇರೆ
ಹಕ್ಕಿಗಳನ್ನು ಹಿಡಿದಾಗ ಅವುಗಳ ಕಾಲಿಗೆ ದಾರ ಕಟ್ಟಿ ಹಾರಲು  ಬಿಟ್ಟು ದಾರದ ಜೊತೆಗೆ ಅದರ ಹಿಂದೆಯೆ ಓಡುತ್ತಿದ್ದೆವು. ರಜೆಯ ದಿನಗಳಲ್ಲಿ ಎಲ್ಲ ಗೆಳೆಯರು ಚಾಟಿ ಬಿಲ್ಲನ್ನು ಹಿಡಿದುಕೊಂಡು  ಜೇಬಿಗೆ ಸಣ್ಣ ಕಲ್ಲುಗಳನ್ನು ತುಂಬಿಕೊಂಡು ಹಕ್ಕಿಗಳನ್ನು ಹೊಡೆಯಲು ಗುಡ್ಡಕ್ಕೆ ಹೋಗುತ್ತಿದ್ದೆವು. ಕೆಲವು ಪಕ್ಷಿಗಳನ್ನು ಹೊಡೆದು ತಿನ್ನುತ್ತಾರೆ. ಆದರೆ ನನ್ನನ್ನೊಳಗೊಂಡಂತೆ ನನ್ನ ಗೆಳೆಯರಿಗೆಲ್ಲ ಇಂತಹ ಆಸೆ ಏನು ಅಷ್ಟಾಗಿ ಇರಲಿಲ್ಲ. ಬದಲಿಗೆ ಹಕ್ಕಿಗಳನ್ನು ಹಿಡಿದು ಸಾಕಬೇಕೆಂಬ ಹಂಬಲವಿತ್ತು.ದಾಸವಾಳ ಮರದಲ್ಲಿ ಗೂಡು ಕಟ್ಟಿದ್ದ ಪಿಟ್ನಕ್ಕಿಯನ್ನು ಹಿಡಿಯಲು ರಾತ್ರಿ ಸಮಯವೇ ಸೂಕ್ತ ಎಂದು ಭಾವಿಸಿದ್ದೆ, ಕಾರಣ ನಾನು ಹಗಲಿನ ಸಮಯದಲ್ಲಿ ಹಕ್ಕಿಯನ್ನು ಹಿಡಿಯಲು  ಹೋದಾಗ ನಾನು ಗೂಡಿನ ಸಮೀಪ ಹೋದೊಡನೆ ‘ಪುರ್..’ ಎಂದು ಗೂಡಿನಿಂದ ಹಾರಿ ಹೋಗಿ ನನ್ನ ಕೈಯಿಂದ ಪಲಾಯನವಾಗುತ್ತಿದ್ದವು.

ನಾನು ಪಕ್ಷಿಗಳನ್ನು ಹಿಡಿದು ಸಾಕಬೇಕೆಂಬ ಹಂಬಲ ಎಷ್ಟಿತೆ ್ತಂದರೆ ಶನಿವಾರ ಮತ್ತು ಭಾನುವಾರ ಪೊದೆಗಳಲ್ಲಿ ಅಥವಾ ಮರಗಳಲ್ಲಿ ಪಕ್ಷಿಗಳು ಕಟ್ಟಿದ್ದ ಗೂಡುಗಳನ್ನು ಹುಡುಕುವುದು. ಪಕ್ಷಿಗಳನ್ನು ಹಿಡಿಯಲು ಯತ್ನಿಸುವುದು, ಇದೇ ನನ್ನ ರಜೆಯ ದಿನಗಳ ದಿನಚರಿಯಾಗಿತ್ತು. ನನ್ನ ಈ ಹುಚ್ಚಾಟಕ್ಕೆ ಎಷ್ಟೊ ಪಕ್ಷಿಗಳ ಗೂಡುಗಳನ್ನು ಹಾಳು ಗೆಡವಿದೆ ್ದೀನೆ ಮತ್ತು ನನ್ನಿಂದಾಗಿ ಆ ಪಕ್ಷಿಗಳು ತೊಂದರೆಯನುಭವಿಸಿವೆ.ಒಂದು ದಿನ ಎಂದಿನಂತೆ ಹಕ್ಕಿಯನ್ನು ಹಿಡಿಯೋಣ ಎಂದು ತೀರ್ಮಾನಿಸಿ ಹಕ್ಕಿಯ ಗೂಡಿನತ್ತ ಹೆಜ್ಜೆ ಹಾಕಿದೆ.

ಅಂದು ಹುಣಿ ್ಣಮೆಯ ರಾತ್ರಿಯಾಗಿದ್ದರಿಂದ ಹೊರಗೆ ಚೆನ್ನಾಗಿಯೆ ಬೆಳಕಿತ್ತು. ಊರಿನ ಮzs À್ಯದಲೆ ್ಲ ಆ ದಾಸವಾಳದ ಮರ ಇರವುದರಿಂದ ನಾನು ರಾತ್ರಿ ಹೊತ್ತು ಆ ಹಕ್ಕಿಗಳನ್ನು ಹಿಡಿಯುವ ಸಾಹಸಕ್ಕೆ ಕೈ ಹಾಕಿದ್ದೆ. ಆ ಗೂಡೇನಾದರು ಊರ ಹೊರಗಿದ್ದಿದ್ದರೆ,
ಆ ಗೂಡಿನ ತಂಟೆಗೆ ಹೋಗುತ್ತಿರಲಿಲ್ಲ. ಕಳ್ಳ ಹೆಜ್ಜೆಗಳನ್ನಿಡುತ್ತ ನಿಧಾನವಾಗಿ ಶಬ್ದವಾಗದಂತೆ ಗೂಡಿನ ಬಳಿ ಹೋದೆ.ಒಳಗೆ ಹಕ್ಕಿಗಳು ಮಲಗಿದ್ದವೇನೋ? ಅವುಗಳಿಗೆ ನಾನು ಹಿಡಿಯಲು  ಬಂದಿರುವ ಸೂಚನೆ ಸಿಕ್ಕಿರಲಿಲ್ಲ. ಪಾಪ ಹಿಡಿಯಲು ಬರುತ್ತಾನೆ  ಎಂದು ಊಹಿಸಿಯು ಇರಲಿಲ್ಲವೇನೋ? ನಾನು ನಿಧಾನವಾಗಿ ಗೂಡಿಗೆ ಕೈ ಹಾಕಿದೆ, ತಕ ್ಷಣ
ಹಕ್ಕಿಗಳನ್ನು ಹಿಡಿದುಕೊಳ್ಳಲು ನೋಡಿದೆ ಆದರೆ ಒಂದು ಹಕ್ಕಿ ನನ್ನ  ಕೈ ತಪ್ಪಿಸಿಕೊಂಡು ಹಾರಿ ಹೋಯಿತು. ಇನ್ನೊಂದು ನನ್ನ ಕೈಯಲ್ಲಿ  ಬಂಧಿಯಾಯಿತು. ಅದು ನನ್ನ ಕೈಯಿಂದ ತಪ್ಪಿಸಿಕೊಳ್ಳಲು ಅವಿರತ À್ರಯತ್ನ ನಡೆಸಿದರೂ ನನ್ನ ಕಪಿ ಮುಷ್ಟಿಯಿಂದ ಅದಕ್ಕೆ ತಪ್ಪಿಸಿಕೊಳ್ಳಲು ಸಾಧ್ಯವಾಗದೇ ಹೋಯಿತು.

ಆ ಹಕ್ಕಿಯನ್ನು ಹಿಡಿದುಕೊಂಡು ಮನೆಗೆ ಹೋದೆ. ಅಮ್ಮನಿಗೆ ನಾನು ಹಿಡಿದಿರುವ ಹಕ್ಕಿಯನ್ನು ತೋರಿಸಲು  ಅಡುಗೆ ಮನೆಗೆ ಹೋದೆ. ಅಮ್ಮ ಬೆಂಕಿಯ ಒಲೆಯ ಮುಂದೆ  ಕುಳಿತು ಅಡುಗೆ ಮಾಡುತ್ತಿದ್ದಳು. ನಾನು ಹಿಡಿದಿರುವ ಹಕ್ಕಿ
ತೋರಿಸಿದೆ.“ಈ ಹಕ್ಕಿ ಮರಿನ ಯಾಕೋ ಹಿಡ್ಕೊಂಡು ಬಂದೆ” ಎಂದು  ಅಮ್ಮ ಪ್ರಶ್ನಿಸಿದಳು. “ ಈ ಹಕ್ಕಿನ ನಾನು ಸಾಕ್ತೀನಿ” ಎಂದು ಉತ್ತರಿಸಿದೆ. “ನಿನಗೂ ಮಾಡೋಕೆ ಬೇರೆ ಕೆಲಸ ಇಲ್ಲ. ಪಾಪ ಆ ಹಕ್ಕಿ  ಮರಿನ ಯಾಕೋ ಹಿಡಿದು ಹಿಂಸೆ ಕೊಡ್ತೀಯ? ಸುಮ್ಮನೆ ಅದರ ಪಾಡಿಗೆ ಅದನ್ನು ಹಾರಿ ಬಿಡೋ” ಎಂದು ಬುದ್ಧಿವಾದ ಹೇಳಿದಳು.
“ಸುಮ್ಮನೆ ಹಾರಿ ಬಿಡೋದಕ್ಕಲ್ಲ ಕಷ ್ಟಪಟ್ಟು ಹಿಡಿದು ತಂದಿರೋದು, ಇದನ್ನ ಸಾಕೆ ಸಾಕ್ತೀನಿ” ಎಂದು ಅಮ್ಮನಿಗೆ
ನಿರ್ಧಾರದ ಧ್ವನಿಯಲ್ಲಿಯೇ ಹೇಳಿದೆ. “ಏನಾದರೂ ಮಾಡ್ಕೋ. ನಿನಗೆ ಬುದ್ಧಿ ಹೇಳೋಕೆ ಹೋದ್ರೆ
ನಾವೆ ಸಣ್ಣವರಾಗ್ತೀವಿ” ಎಂದು ಹೇಳಿ ಅಮ್ಮ ಸುಮ್ಮನಾದಳು. ನಾನು ಹಿಡಿದು ತಂದಿದ್ದ ಹಕ್ಕಿಯನ್ನು ನೋಡಲು ಬರೆಯುತ್ತ ಕುಳಿತಿದ್ದ ನಮ್ಮ ಅಕ್ಕನು ಎದ್ದು ಬಂದಳು, ನನ್ನ ಕೈಯಿಂದ ಆ ಹಕ್ಕಿಯನ್ನು ತೆಗೆದುಕೊಂಡು ತನ್ನ ಕೈಲಿ
ಹಿಡಿದುಕೊಂಡು ಅದರ ಬೆನ್ನು ಸವರಿದಳು. ತುಂಬ ಪುಟ್ಟದಾಗಿ  ಇದ್ದ ಆ ಹಕ್ಕಿಗೆ ಕಪ್ಪು ಬಣ್ಣ ಪ್ರಧಾನವಾಗಿತ್ತು. ಕತ್ತಿನ ಭಾಗದಿಂದ  ಕೆಳಗೆ ಎದೆಯ ಭಾಗವೆಲ್ಲ ಬಿಳಿಬಣ್ಣದಿಂದ ಆವೃತವಾಗಿತ್ತು. ಆ ಹಕ್ಕಿ ಪಾಪ ಗಾಬರಿಯಿಂದ ನಲುಗುತ್ತಿತ್ತು. ನಾನು ಆ ಹಕ್ಕಿಯನ್ನು  ಎಲ್ಲಿ ಸಾಕೋದು ಎಂದು ಯೋಚಿಸಿದೆ, ತಕ ್ಷಣ ಉಪಾಯವೊಂದು ತಲೆಗೆ ಬಂತು ಸೀದ ಅಡುಗೆ ಮನೆಗೆ ಹೋದೆ.


ಈರುಳi್ಳ ಬುಟ್ಟಿಯನ್ನು ತಂದೆ, ಅದು ತೇಟ್ ಹಕ್ಕಿಯ ಪಂಜರದಂತೆ ಇತ್ತು. ಆದರೆ ಇಲಿಗಳು ಅದನ್ನು ಕಡಿದು ತುಂಡು
ಮಾಡಿ ಹಕ್ಕಿ ಹಾರಿಹೋಗುವಷ್ಟು ಜಾಗ ಮಾಡಿದ್ದವು. ಆದರೂ ನಾನು ಆ ಬುಟ್ಟಿಯೊಳಗೆ ಹಕ್ಕಿಯನ್ನು ಬಿಟ್ಟು ಇಲಿಗಳು ಮಾಡಿದ್ದ ರಂದ್ರವನ್ನು ಕೈಯಿಂದ ಮುಚ್ಚಿ ಹಿಡಿಯಲು ನಮ್ಮ ಅಕ್ಕಳಿಗೆ  ಹೇಳಿದೆ. “ನಾನು ಹಕ್ಕಿಗೂಡನ್ನು ತಗೊಂಡು ಬರ್ತೀನಿ. ನೀನು  ಜೋಪಾನವಾಗಿ ಹಕ್ಕಿನೋಡ್ಕೋ ಆ ತೂತವಾಗಿರೊ ಜಾಗದಲ್ಲಿ  ಹಕ್ಕಿ ನುಸುಳಿ ಹಾರೋಗಿ ಬಿಡುತ್ತೆ ಜೋಪಾನ ಸರಿಯಾಗಿ  ನೋಡ್ಕೋ ಇಲ್ಲಾ ಅಂದ್ರೆ” ಎಂದು ಎಚ್ಚರಿಸಿ ಗೂಡನ್ನು ತರಲು  ಮನೆಯಿಂದ ಹೊರನಡೆದೆ. ನಾನು ಹಿಡಿದು ತಂದಿರೋದು  ಒಂದೇ ಒಂದು ಹಕ್ಕಿ, ಅಲ್ಲಿ ಇನ್ನೊಂದು ಹಕ್ಕಿ ಬಾಕಿ ಉಳಿದಿದೆ.  ಅದನ್ನು ಹಿಡಿದು ಈ ಮೊದಲೆ ಹಿಡಿದಿದ್ದ ಹಕ್ಕಿಯ ಜೊತೆಗೆ  ಸಾಕೋಣ ಎಂದು ಯೋಚಿಸಿ, ಆ ಗೂಡನ್ನು ತರುವ ಯೋಜನೆ  ಬಿಟ್ಟು ಬೇರೆ ಗೂಡನ್ನು ತರಲು ನಿರ್ಧರಿಸಿದೆ. ನಮ್ಮ ಊರಿಗೆ ಹೊಂದಿಕೊಂಡಂತೆ ಒಂದು ಕೆರೆ ಇತ್ತು.  ಅದನ್ನು ಎಲ್ಲರೂ ಕೆರೆಗಂಡಿ ಎಂದು ಕರೆಯುತ್ತಿದ್ದರು. ಆ  ಕೆರೆಗಂಡಿಯಲ್ಲಿ ಕಾಡನ್ನು ನುಂಗಿ ಲಂಟಾನದ ಜಿಗ್ಗು ಕಣ್ಣು  ಹಾಸಿದಲ್ಲ್ಲೆಲ್ಲ ಬೆಳೆದಿತ್ತು. ಆ ಜಿಗ್ಗಿನೊಳಗೆ ಕಾಡು ಕೋಳಿಗಳು,  ಉಂಡೆಗೋಳಿಗಳು ಸೇರಿದಂತೆ ಹಲವು ಪಕ್ಷಿಗಳು ಜೀವಿಸುತ್ತಿದ್ದವು.  ಮುಳ್ಳಿನ ಬೇಲಿಯೊಂದರ ಕೊಂಬೆಯಲ್ಲಿ ಒಂದು ಹಕ್ಕಿ ಗೂಡು  ಕಟ್ಟಿತ್ತು. ಜೇಡರ ಬಲೆಗಳನ್ನು, ಹುಲ್ಲುಗಳನ್ನು ತಂದು ಗೂಡು ಕಟ್ಟಿತ್ತೇನೋ.

ಆ ಕೊಂಬೆ ಕೆರೆಯ ನೀರಿನ ಕಡೆಗೆ ಬಾಗಿಕೊಂಡು  ಬೆಳೆದಿತ್ತು. ಯಾವುದೇ ರೀತಿಯ ಅಪಾಯ ಬಂದೋದಗ  ಬಾರದು ಎಂದು ಮುಂದಾಲೋಚಿಸಿ ಆ ಗೂಡನ್ನು ಕಟ್ಟಿರಬೇಕು ಆದರೆ ಬೇಸಿಗೆ ಕಾಲದಲ್ಲಿ ಕೆರೆಯ ನೀರು ಇಂಗಿ ಹೋಗಿ, ಗೂಡು ಕಟ್ಟಿದ ಜಾಗದಲ್ಲಿ ನಡೆದಾಡುವಷ್ಟು ನೀರು ಬರಿದಾದಾಗ ಒಮ್ಮೆ ನಾನು ದನಗಳಿಗೆ ನೀರು ಕುಡಿಸಲು ಎಂದು ಆ ಕೆರೆಯ ಬಳಿಗೆ ಹೋದಾಗ ಆ ಹಕ್ಕಿಯ ಗೂಡನ್ನು ನೋಡಿದೆ. ಆ ಗೂಡಿನಲ್ಲಿ ಏನಿರಬಹುದು, ಮೊಟ್ಟೆಗಳಿವೆಯೋ ಅಥವಾ ಮರಿಗಳಿವೆಯೋ ಎಂದು ನಿರೀಕ್ಷಿಸಿ ಆ ಗೂಡನ್ನು ಇಣುಕಿದೆ. ಅದರೊಳಗೆ ನಾನು ನಿರೀಕ್ಷಿಸಿದಂತೆ ಮೂರು ಮೊಟ್ಟೆಗಳಿದ್ದವು. ಆ ಮೊಟ್ಟೆಗಳನ್ನು ತೆಗೆದು ಕೈಯಲ್ಲಿ ಹಿಡಿದು ನೋಡಿದೆ, ಬೆಚ್ಚಗಿದ್ದವು. “ ಬಹುಷಃ ಹಕ್ಕಿ ಮೊಟ್ಟೆಗಳಿಗೆ ಕಾವು ಕೊಡುತ್ತಿದೆಯೇನೋ, ಈಗ ಆಹಾರ ಹುಡುಕಿ ಹೊರಗೆ ಹೋಗಿದೆ ಏನೋ?” ಎಂದು ಊಹಿಸಿ, ಮತ್ತೇ ಆ ಮೊಟ್ಟೆಗಳನ್ನು ತಮ್ಮ ಸ್ವಸ್ಥಾನವಾದ ಗೂಡಿನಲ್ಲಿಯೇ ಇಟ್ಟೆ. ಆ ಹಕ್ಕಿಯನ್ನು ಹಿಡಿಯೋಣ ಎಂದು ನಿರ್ಧರಿಸಿ ಮಾರನೆ ದಿನ ಗೂಡಿನ ಬಳಿ ಬಂದೆ. ನಿಧಾನವಾಗಿ ಗೂಡಿನ ಬಳಿ ಹೋಗಿ ಹಕ್ಕಿ ಇದೆಯೇ ಎಂದು ಇಣುಕಿ ನೋಡಿದೆ, ಹಕ್ಕಿ ಇರಲಿಲ್ಲ.

ಹೀಗೆ ಒಂದೆರಡು ದಿನ ಆ ಹಕ್ಕಿಯನ್ನು ಗೂಡಿನ ಬಳಿ ನಾನು ನೋಡಲೇ ಇಲ್ಲ. ಮತ್ತೆ ತೆಗೆದು ಮೊಟ್ಟೆಗಳನ್ನು ಕೈಯಲ್ಲಿ ಹಿಡಿದುಕೊಂಡೆ, ಮೊಟ್ಟೆಗಳು ಈ ಬಾರಿತಣ್ಣಗೆ ಇದ್ದವು. ನಾನು ಮೊಟ್ಟೆಗಳನ್ನು ಸ್ಪರ್ಶಿಸಿದ್ದರಿಂದ ಆ ಹಕ್ಕಿ ಗೂಡನ್ನು ಮತ್ತು ತನ್ನ ಮೊಟ್ಟೆಗಳನ್ನು ತ್ಯಜಿಸಿ ಹೋಗಿತ್ತು. ನನ್ನಿಂದಾಗಿ ಈ ಹಕ್ಕಿಯು ತನ್ನ ಗೂಡು ಮೊಟ್ಟೆಗಳನ್ನು ಕಳೆದು ಕೊಂಡಿತ್ತು.ಇತ್ತೀಚೆಗೆ ಪಕ್ಷಿಗಳಿಗೆ ಸಂಬಂಧಿಸಿದ ಪುಸ್ತಕಗಳನ್ನು ಓದಲು ಪ್ರಾರಂಭಿಸಿದೆ. ಓದುತ್ತಾ, ಓದುತ್ತ ನನಗೂ ಪಕ್ಷಿಗಳ ಬಗ್ಗೆ ಆಸಕ್ತಿ ಬಂದು ಬಿಟ್ಟಿದೆ. ಎಲ್ಲಿ ಪಕ್ಷಿಗಳು ಕಂಡರೂ ಅವುಗಳ ಚಲನವಲನಗಳನ್ನು ಗಮನಿಸುತ್ತ ಇರುತ್ತೇನೆ. ಪಕ್ಷಿಗಳನ್ನು ನೋಡಿ ಅವುಗಳ ಬಣ್ಣಗಳನ್ನು ಕಂಡು ಖುಷಿ ಪಡುತ್ತೇನೆ ಹೊರತು ಅವುಗಳ ಹೆಸರು, ಆಹಾರ ಪದ್ಧತಿ, ಜೀವನ ಶೈಲಿ ಇತ್ಯಾದಿಗಳನ್ನೆಲ್ಲ ತಿಳಿಯಲು, ಅಭ್ಯಾಸಿಸುವ ಗೋಜಿಗೆ ಹೋಗುವುದಿಲ್ಲ. ಕಾರಣ ಮಲೆನಾಡಿನ ಸುತ ್ತ ಮುತ ್ತ ಅನೇಕ ಪಕ್ಷಿಗಳಿಗೆ, ಅವುಗಳೆಲ್ಲದರ ಹೆಸರು ಕುಲ ಗೋತ್ರಗಳನ್ನೆಲ್ಲ ಅಭ್ಯಾಸಿಸುವುದು ಪ್ರಯಾಸಕರ ಕೆಲಸ ಎನ್ನುವುದು ನನ್ನ ಅಭಿಪ್ರಾಯ, ಜೊತೆಗೆ ನನ್ನ ಸೋಮಾರಿತನ.ಒಮ್ಮೆ ಗೆಳೆಯರೊಡನೆ ನಡೆದುಕೊಂಡು ಹೋಗುವಾಗ
ದಾರಿಯ ಪಕ್ಕದಲ್ಲೆ ಹಕ್ಕಿಗಳು ಕೂಗುತ್ತ ಬೊಬ್ಬೆ ಹೊಡೆಯುತ್ತಿದ್ದವು. ಅದೇನಂತ ಪಕ್ಕಕ್ಕೆ ಹೋದೆ ಪಿಕಳಾರ ಹಕ್ಕಿಯ ಮೂರು ಮರಿಗಳು ಬಾಯಿ ಬಿಡುತ್ತ ನೆಲದ ಮೇಲೆ ಹೊರಳಾಡುತ್ತಿದ್ದವು. ಗೂಡು ಪಕ್ಕದಲ್ಲೆ ಬಿದ್ದು ಹೋಗಿತ್ತು. ಗಾಳಿಗೆ ಬಿತ್ತೋ? ಅಥವಾ ಯಾರೋ ದುಷ್ಕರ್ಮಿಗಳು ಆ ಹಕ್ಕಿಯ ಗೂಡನ್ನು ಹಾಳುಗೆಡವಿದರೋ? ಗೊತ್ತಿಲ್ಲ. ಪಾಪ ಚಿಕ್ಕ ಮರಿಗಳನ್ನು ಕೈಯಲ್ಲಿ ಹಿಡಿದು ನಿಂತೆ ಪೂರ್ಣಚಂದ್ರ ತೇಜಸ್ವಿಯವರ ‘ಹೆಜ್ಜೆ ಮೂಡದ ಹಾದಿ ಕೃತಿಯಲ್ಲಿ ಈ ಪಿಕಳಾರ ಹಕ್ಕಿಗಳ ಬಗ್ಗೆ ಓದಿ ತಿಳಿದಿದ್ದೆ. ಆ ಮರಿಗಳನ್ನು ಗಮನಿಸುತ್ತಿರುವಾಗಲೇ ಆ ಮರಿಗಳ ತಾಯಿ ಹಕ್ಕಿ ಬಂದು ನನ್ನ ಎದುರಿಗಿದ್ದ ಬೇಲಿಯ ಮೇಲೆ ಕುಳಿತು ಗಾಬರಿಯಾದಂತೆ ಅತ್ತಿಂದಿತ ್ತ ಹಾರಾಡುತ್ತಿತ್ತು. ನನ ್ನ ಕೈಯಲ್ಲಿ ತನ ್ನ ಮರಿಗಳಿರುವುದನ್ನು ನೋಡಿ ಸ್ವಲ್ಪ ಹತ್ತಿರ ನನ್ನ ಬಳಿಬರುತ್ತಿತ್ತು ಮತ್ತೆ ಪ್ರಾಣಭಯದಿಂದ ದೂರಕ್ಕೆ ಹಾರುತ್ತಿತ್ತು. ಅದಕ್ಕೆ ಈಗ ಪೇಚಿಗೆ ಸಿಲುಕಿತ್ತು. ಇತ್ತ ನಾನು ಅದನ್ನು ಹಿಡಿದುಸಾಯಿಸುತ್ತೇನೆ ಎಂಬ ಪ್ರಾಣ ಭಯ ಅದಕ್ಕೆ, ನನ್ನ ಬಳಿ ಬರಲು ಭಯದಿಂದ ದೂರ ದೂರ ಸರಿಯುತ್ತಿತ್ತು. ಇನ್ನೊಂದು ಮರಿಗಳನ್ನು ಬಿಟ್ಟು ಹೋಗಲು ತನ್ನ ಆತ್ಮಸಾಕ್ಷಿ ಒಪ್ಪುತ್ತಿಲ್ಲ, ಸುಮಾರು ಗಂಟೆಗಳ ಕಾಲ ನಿಂತು ಆ ಹಕ್ಕಿ ಏನು ಮಾಡುತ್ತೆ ಎಂದು ಪರೀಕ್ಷಿಸಿದೆ. ನಂತರ ಬಿದ್ದಿದ್ದ ಗೂಡು ತೆಗೆದುಅದರೊಳಕ್ಕೆ ಮೂರು ಪಿಕಳಾರ ಮರಿಗಳನ್ನು ಬಿಟ್ಟು ಬೇಲಿ ಮೇಲೆ ಇಟ್ಟು ಬಂದಿದ್ದೆ.


ಇನ್ನೊಂದು ಘಟನೆಯು ಹೀಗೇ ಆಯ್ತು.ಕೆಲವು ದಿನಗಳ ಹಿಂದೆ ನಮ್ಮ ಮನೆಯ ಹಿಂಭಾಗ ಇದ್ದ
ನೇರಳೇ ಮರದ ಕೊಂಬೆಯೊಂದರಲ್ಲಿ ಒಂದು ಹಕ್ಕಿ ಗೂಡು ಕಟ್ಟಿತ್ತು. ಶೌಚಾಲಯ ಕಟ್ಟಿಸಲು ಪಿಟ್ ಗುಂಡಿಯನ್ನುತೆಗೆದಿದ್ದೆವು, ಆ ಹಕ್ಕಿ ಗುಂಡಿಗೆ ಬಾಗಿಕೊಂಡ ಕೊಂಬೆಯಲ್ಲಿಯೆ ಗೂಡು ಕಟ್ಟಿತ್ತು. ಯಾವ ಹಕ್ಕಿ ಎಂದು ತುಂಬ ಹೊತ್ತು ಕಾಯ್ದು ನೋಡಿದೆ. ಹಿಂದೊಮ್ಮೆ ನಾನು ಹಿಡಿದಿದ್ದ ‘ಪಿಟ್ನಕ್ಕಿಯೇ’. ದಿನವು ಬಂದು ಹಕ್ಕಿ ಗೂಡನ್ನು ನೋಡುತ್ತಿದ್ದೆ. ಆ ಹಕ್ಕಿಗೆ ನಾನು ಮರಹತ್ತಿ ತನ್ನನ್ನು ಹಿಡಿಯುತ್ತಾನೆಂಬ ಭಯವಿರಲಿಲ್ಲ ಕಾರಣ ನೇರಳೆ ಮರದ ರೆಂಬೆ ಕೊಂಬೆಗಳೆಲ್ಲ ಟೊಳ್ಳು ಅದೂ ಅಲ್ಲದೆ ಆ ಹಕ್ಕಿ ಗುಂಡಿಗೆ ಬಾಗಿಕೊಂಡ ಕೊಂಬೆಯಲ್ಲಿ ಗೂಡು ಕಟ್ಟಿದ್ದರಿಂದ ಅದಕ್ಕೆ ನನ್ನ
ಮೇಲೆ ¨s Àಯ ಇರಲಿಲ್ಲ. ನಾನು ಅದನ್ನು ಹಿಡಿಯಲು ಸಾಧ್ಯವಿರಲಿಲ್ಲವೆಂದು.ಇತ್ತೀಚೆಗೆ ಅಪ್ಪ “ಆ ನೇರಳೆ ಮರವನ್ನು ಕಡಿದು ಹಾಕೋಣ. ಜೋರಾಗಿ ಗಾಳಿ ಮಳೆ ಬಂದರೆ ಮರ ಮುರಿದು ಮನೆಯ ಮೇಲೆ ಬೀಳುತ್ತೆ” ಎಂದು ಹೇಳಿದರು. ನನಗೆ ಆ ನೇರಳೆಮರವನ್ನು ಕಡಿಯಲು ಇಷ್ಟ ಇಲ್ಲ. ಚಿಕ್ಕವರಿದ್ದಾಗ ನಮ್ಮ ಶಾಲೆಯಲ್ಲಿ ಶಿಕ್ಷಕರೊಬ್ಬರು ಮನೆಯಲ್ಲಿ ಒಂದೊಂದು ಗಿಡ ನೆಟ್ಟು ಬೆಳಸಿ ಎಂದಾಗ ಆ ಮಾತೇ ವೇದ ವಾಕ್ಯ ಎಂದು ಮನೆಯ ಹಿಂದೆ ನೆಟ್ಟು ನೀರು ಗೊಬ್ಬರ ಹಾಕಿ ಬೆಳೆಸಿದ್ದೆವು. ನಾನು ಹಾಕಿದ ಮರ ಬಹುಬೇಗ ದೊಡ್ಡದಾಗುತ್ತಾ ಹೋಯ್ತು. ಅಕ್ಕ ಹಾಕಿದ್ದ ಮರ ನಾನು ಹಾಕಿದ್ದ ಮರದ ಪಕ್ಕದಲ್ಲಿ ಹೊಂದಿಕೊಂಡಂತೆ ಬೆಳೆದಿದೆ. ನಾನು ನೆಟ್ಟು ಬೆಳೆಸಿದ ಮರವಲ್ಲವೇ ಎಂಬ ಆತ್ಮೀಯತೆ ಬೆಳೆದು
ಬಿಟ್ಟಿದೆ. ಅದೂ ಅಲ್ಲದೆ ಈಗ ಹಕ್ಕಿಯು ಗೂಡು ಕಟ್ಟಿರುವುದರಿಂದ ಆ ಮರ ಕಡಿಯುವುದನ್ನು ತಡೆ ಹಿಡಿದಿದ್ದೇನೆ.ನನಗೆ ಕಾಲೇಜು ಪ್ರಾರಂಭವಾಯ್ತು ಎಂದು ಹಾಸ್ಟೆಲ್ಗೆ ಬಂದೆ ಎರಡು ವಾರದ ನಂತರ ಮನೆಗೆ ಹೋಗೆ ನೇರಳೆ ಮರ ನೋಡಿದರೆ ಅದರಲ್ಲಿ ಪಿಟ್ನಕ್ಕಿಯ ಗೂಡು ಮಾಯವಾಗಿದೆ. ಸುತ್ತೆಲ್ಲ ಹುಡುಕಿದೆ ಗಾಳಿಗೇನಾದರೂ ಗೂಡು ಬಿದ್ದಿರಬಹುದೇ
ಎಂದು ನಾನು ನಿರೀಕ್ಷಿಸಿದಂತೆ ಗೂಡು ನೇರಳೆ ಮರದ ಬುಡದಲ್ಲಿಯೇ ಇತ್ತು. ಆದರೆ ಹಕ್ಕಿ ಗೂಡು ಗಾಳಿಗೆ ಬಿದ್ದಿರಲಿಲ್ಲ,
ನಮ್ಮ ಚಿಕ್ಕಪ್ಪನ ಮಕ್ಕಳು ಸೇರಿಕೊಂಡು ಹಕ್ಕಿ ಗೂಡನ್ನು ಹೊಡೆದು ಕೆಡವಿದ್ದರಂತೆ.“ಯಾಕ್ರಲ್ಲ, ಹಕ್ಕಿಗೂಡು ಕೆಡವಿದಿರಿ, ಆ ಹಕ್ಕಿ ನಿಮಗೇನು ಮಾಡೋಕೆ ಬಂದಿತ್ರಲ್ಲ?” ಎಂದು ದಬಾಯಿಸಿ ನನ್ನ ತಮ್ಮನನ್ನು
ಕೇಳಿದೆ.“ನಾನಲ್ಲ ಅಣ್ಣಯ್ಯ, ಆ ಅಶ್ವತ್ತೇಯ ಹೇಳಿದ್ದು, ಗೂಡೊಳಗೆ ಮೊಟ್ಟೆ ಇರ್ತಾವೆ ಕೆಡಗೋಣ ಅಂತ” ಎಂದು ಹೇಳಿದ.ಅವರಿಬ್ಬರಿಗೂ ನಾಲ್ಕು ಬಿಗಿಯಬೇಕು ಅನ್ನಿಸಿದರು. ಬೈದು  ಬುದ್ಧಿ ಹೇಳಿ ಬಂದೆ. ಕೆರಗಂಡಿಯಲ್ಲಿ ಇದ್ದ ಹಕ್ಕಿಯ ಗೂಡು ಈಗ ಖಾಲಿ ಇತ್ತು.  ಅದನ್ನೆ ತರಲು ನಿರ್ಧರಿಸಿ ಮನೆಯಲ್ಲಿದ್ದ ಟಾರ್ಚನ್ನು ಹಿಡಿದು  ಕತ್ತಲಲ್ಲೆ ಆ ಗೂಡಿನ ಬಳಿಗೆ ಹೋಗಿ ಗೂಡುಯಿದ್ದ ಕೊಂಬೆಯನ್ನೆ  ಮುರಿದು ಗೂಡನ್ನು ತಂದೆ. ಮೊಟ್ಟೆಗಳು ಹಾಗೆ ಇದ್ದವು, ಈ  ಪಿಟ್ನಕ್ಕಿ ಹಕ್ಕಿಯನ್ನು ಕಾವಿಗೆ ಕೂರಿಸಿ ಮೊಟ್ಟೆಗಳನ್ನು ಮರಿ  ಮಾಡಿಸೋಣ ಎಂದು ಯೋಜನೆ ಹಾಕಿಕೊಂಡು ಮನೆ ದಾರಿ ಹಿಡಿದೆ. ಅದಾಗಲೇ ರಾತ್ರಿ 8 ಗಂಟೆಯಾದ್ದರಿಂದ ಮಸೀದಿಯಲ್ಲಿ  ನಮಾಜು ಕೂಗುತ್ತಿದ್ದರು. ದಾರಿಯಲ್ಲಿ ಬರುವಾಗ, ಬೀದಿ
ನಾಯಿಗಳು ನನ್ನನ್ನು ಕಳ್ಳನೆಂದು ತಿಳಿದವೋ ಏನೋ ಬೊಗಳಲು  ಪ್ರಾರಂಭಿಸಿದವು, ನನಗೂ ಸಿಟ್ಟು ಬಂದು ಕಲ್ಲು ತೆಗೆದುಕೊಂಡು  ನಾಯಿಗಳಿಗೆಲ್ಲ ಬೀಸಿ ಹೊಡೆದ ನಂತರ ‘ಕುಂಯ್ಯೋ’ ಎಂದು  ನರಳುತ್ತ ನನಗೆ ಬೆನ್ನು ತೋರಿಸಿ ಅಲ್ಲಿಂದ ಕಾಲ್ಕಿತ್ತವು. ಈ ಪಿಟ್ನಕ್ಕಿಗೆ ಯಾವ ಊಟ ಹಾಕಲಿ, ಇದು ಏನನ್ನು ತಿನ್ನುತ್ತದೆ ಎಂದು ಯೋಚಿಸುತ್ತಿರುವಾಗಲೇ ಮನೆ ಬಂತು. ಮನೆÀಯ ಒಳಗೆ ಹೋಗಿ ನೋಡುತ್ತೇನೆ ಬುಟ್ಟಿ ಖಾಲಿ ಅದರಲ್ಲಿ ಹಕ್ಕಿಯೇ ಇರಲಿಲ್ಲ.ಅಕ್ಕ ಕೈ, ಕೈ ಹಿಸುಕಿಕೊಂಡು ತಪ್ಪು ಮಾಡಿರುವಂತೆ ನನ್ನನ್ನೇ
ನೋಡುತ್ತಿದ್ದಳು.“ಎಲ್ಲೆ ಹಕ್ಕಿ? ಎಂದು ಜೋರಾಗಿ ಗದರಿಸುವಂತೆ ಪ್ರಶ್ನಿಸಿದೆ.“ನಾನು ಹಕ್ಕಿಗೆ ತಿನ್ನಲಿ ಅಂತ ಟಮೋಟೋ ಹಣ್ಣನ್ನು ಬುಟ್ಟಿಯೊಳಗೆ ಹಾಕೋಣ ಅಂತ ಬುಟ್ಟಿಯ ಮುಚ್ಚುಳ ತೆಗೆದೆ ಅದು ಪಟ್ಟಂತ ನನ್ನ ಕೈಯಿಂದ ತಪ್ಪಿಸಿಕೊಂಡು ಹಾರಿ ಹೋಯ್ತು” ಎಂದು ಹೆದರುತ್ತಲೇ ನಡೆದ ಸಂಗತಿ ಹೇಳಿದಳು.ನನಗೆ ನಮ್ಮ ಅಕ್ಕ ಮಾಡಿದ ಎಡವಟ್ಟು ನೋಡಿ ತುಂಬ ಕೋಪ ಬಂತು, ಅವಳನ್ನೇ ಸಿಟ್ಟಿನಿಂದ ದುರುಗುಟ್ಟುತ್ತ ನೋಡಿದೆ.

ಅವಳು ಅಪರಾದಿಯಂತೆ ಕಂಡಳು.“ನೀನೆ ಆ ಹಕ್ಕಿ ಹಾರಿ ಹೋಗ್ಲಿ ಅಂತ, ಹಾರಿ ಬಿಟ್ಟು ಈಗ ಕಥೆ ಹೇಳ್ತಿಯ” ಎನ್ನುತ್ತ ಕೈಯಲ್ಲಿದ್ದ ಗೂಡನ್ನು ಬಿಸಾಕಿ ಅವಳ ಬೆನ್ನಿಗೆ ನಾಲ್ಕೈದು ಏಟು ಬಿಗಿದು, ಅವಳ ಜುಟ್ಟು ಹಿಡಿದು ಎಳೆದಾಡಲು ಶುರು ಮಾಡಿದೆ, ಅವಳು ಜೋರಾಗಿ ಅಳಲು
ಪ್ರಾರಂಭಿಸಿದಳು.“ಏನ್ರೋ ಆಯ್ತು” ಎಂದು ಅಮ್ಮ ಅಡುಗೆ ಮನೆಯಿಂದ ನಡು ಮನೆಗೆ ಬಂದು, ನಾನು ಅಕ್ಕ ಜಗಳವಾಡುತ್ತಿರುವುದನ್ನ ನೋಡಿ, ಕೋಪದಿಂದ ತಾನು ಹಿಡಿದಿದ್ದ ಸೌಟಿನಿಂದಲೇ ಹೊಡೆಯಲು ಪ್ರಾರಂಭಿಸಿದಳು.
“ನನಗ್ಯಾಕೆ ಹೊಡಿತಿಯಮ್ಮ, ಮೊದ್ಲು ಅವಳಿಗೆ ಹೋಡಿ, ನನ್ನ ಹಕ್ಕಿ ಹಾರಿ ಬಿಟ್ಟಿದ್ದಾಳೆ”, ಎಂದು ಅಮ್ಮನ ಬಳಿ ದೂರಿಟ್ಟೆ. “ಏನಾಯ್ತೇ? ಎಂದು ಅಕ್ಕಳನ್ನು ಅಮ್ಮ ಪ್ರಶ್ನಿಸಿದಳು.“ನಾನೇನು ಬೇಕು ಅಂತ ಆ ಹಕ್ಕಿನ ಹಾರಿ ಬಿಡ್ಲಿಲ್ಲಮ್ಮ, ಅದೇ
ಕೆ ೈ ತಪ್ಪಿಸಿಕೊಂಡು ಹಾರಿ ಹೋಯ್ತು” ಎಂದು ಸಮರ್ಥಿಸಿಕೊಂಡಳು.“ನಿಮ್ಮದು ಯಾವಾಗಲೂ ಇದ್ದಿದ್ದೇ ಕಥೆ, ಎಲ್ಲದಕ್ಕೂ ಜಗಳವಾಡ್ತೀರಾ? ಎನ್ನುತ್ತಾ ಅಮ್ಮ ನಮ್ಮಿಬ್ಬರಿಗೂ ಹೊಡೆಯಲು ಪ್ರಾರಂಭಿಸಿದರು. “ನಂದೇನು ತಪ್ಪಿಲ್ಲ” ಎಂದು ನಾನು ಪ್ರತಿಭಟಿಸಿದರು ಕೇಳದೆ ನಾಲ್ಕೈದು ಬಾರಿಸಿದರು. ನಾನು, ಅಕ್ಕ ಇಬ್ಬರು ದನಿಗೂಡಿಸಿ, “ಸುಮ್ನೆ ತೆಪ್ಪಗೆ ಓದ್ಕೊಂಡು ಕುತ್ಕೊಳ್ಳಿ” ಅಂತ ಹೇಳಿ ಅಡುಗೆ ಮನೆಯೊಳಗೆ ಹೋದ ತಕ್ಷಣ “ಎಲ್ಲ ನಿನ್ನಿಂದಲೇ ಆಗಿದ್ದು” ಎನ್ನುತ್ತ ಮತ್ತೆ ಅಕ್ಕಳಿಗೆ ಹೊಡೆಯಲು ಮುಂದಾದೆ, ಅಷ್ಟರಲ್ಲಿ ಅಮ್ಮ “ಏನೋ ಅದು ಮತ್ತೇ ಬೇಕಾ ಒದೆ” ಎಂದು ಕೋಪದಿಂದ ಕೇಳಿದರು. ನಾನು ನನ್ನ ಅಸಹಾಯಕತೆಗೆ ಮಮ್ಮಲ ಮರುಗುತ್ತ, ಇನ್ನೂ ಅಳುವುದನ್ನು ಜೋರು ಮಾಡಿದೆ.
ಅದಾದನಂತರ ನಮ್ಮ ಅಜ್ಜಿಯ ಮನೆಯ ಹಿಂದಿನ ಬೇಲಿಯ ಮೇಲೆ ಪಿಕಳಾರ ಹಕ್ಕಿ ಗೂಡು ಕಟ್ಟಿತ್ತು. ಅದನ್ನಾದರೂ ಹಿಡಿದು ಸಾಕೋಣ ಎಂದು ಕೊಂಡು ಸಮಾಧಾನ ತಾಳಿದೆ.

ಪ್ರಮೋದ್ ಬೆಳಗೋಡು

 

 

Share post:

Subscribe

spot_imgspot_img

Popular

More like this
Related

ಅಪಾರ್ಟ್ಮೆಂಟ್‌ ಮಹಡಿಯಿಂದ ಬಿದ್ದು ವ್ಯಕ್ತಿ ಸೂಸೈಡ್!

ಅಪಾರ್ಟ್ಮೆಂಟ್‌ ಮಹಡಿಯಿಂದ ಬಿದ್ದು ವ್ಯಕ್ತಿ ಸೂಸೈಡ್! ನೆಲಮಂಗಲ: ನೆಲಮಂಗಲದ ಅಪಾರ್ಟ್ಮೆಂಟ್‌ವೊಂದರಲ್ಲಿ 24ನೇ ಮಹಡಿಯಿಂದ...

ಬಾನು ಮುಷ್ತಾಕ್‌ ಆಯ್ಕೆ ಪ್ರಶ್ನಿಸಿ ಸಲ್ಲಿಸಿದ್ದ PIL ವಜಾ ಮಾಡಿದ ಹೈಕೋರ್ಟ್‌

ಬಾನು ಮುಷ್ತಾಕ್‌ ಆಯ್ಕೆ ಪ್ರಶ್ನಿಸಿ ಸಲ್ಲಿಸಿದ್ದ PIL ವಜಾ ಮಾಡಿದ ಹೈಕೋರ್ಟ್‌ ಬೆಂಗಳೂರು:...

ಆರೋಗ್ಯಕರ ಅಡುಗೆಗೆ ಹಿತ್ತಾಳೆ ಪಾತ್ರೆಗಳು ಸೂಕ್ತವೇ? ತಿಳಿದುಕೊಳ್ಳಿ  ಪ್ರಯೋಜನಗಳು

ಆರೋಗ್ಯಕರ ಅಡುಗೆಗೆ ಹಿತ್ತಾಳೆ ಪಾತ್ರೆಗಳು ಸೂಕ್ತವೇ? ತಿಳಿದುಕೊಳ್ಳಿ  ಪ್ರಯೋಜನಗಳು ಉತ್ತಮ ಆರೋಗ್ಯಕ್ಕಾಗಿ ಪೌಷ್ಟಿಕ...

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು ಕಳ್ಳತನ

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು...