ತಿರುಗುಬಾಣವಾದ ಮಹದಾಯಿ: ಗೋವಾ ಸರ್ಕಾರ ಗಡಗಡ..!!

Date:

`ಎಲ್ಲ ಸಮಯದಲ್ಲೂ ತಂತ್ರಗಾರಿಕೆಗಳು ಫಲಪ್ರದವಾಗುವುದಿಲ್ಲ ಎಂಬುದಕ್ಕೆ ಸಧ್ಯಕ್ಕೆ ಬಿಜೆಪಿಯನ್ನು ಉದಾಹರಿಸಬಹುದು. ರಣತಂತ್ರ ಹೆಣೆಯುವುದರಲ್ಲಿ ಪ್ರಚಂಡ ಎಂದು ಕರೆಸಿಕೊಳ್ಳುವ ಅಮಿತ್ ಶಾ, ಗುಜರಾತ್ ಚುನಾವಣೆಯಲ್ಲಿ ಪ್ರಯಾಸವಾಗಿ ಗೆಲ್ಲುತ್ತಿದ್ದಂತೆ ಕರ್ನಾಟಕದಲ್ಲಿ ಕಮಲ ಅರಳಿಸುವ ಉತ್ಸಾಹಕ್ಕೆ ಬಿದ್ದರು. ಇದಕ್ಕೂ ಮುನ್ನ ಹಿಂದುತ್ವ, ಟಿಯರ್ ಗ್ಯಾಸ್, ಗಲಾಟೆಯಂತಹ ಚಲನಾಶೀಲತೆಯ ಪ್ರಯೋಗ ಮಾಡಿ ವಿಫಲವಾದ ನಂತರ, ಕರ್ನಾಟಕದಲ್ಲಿ ಅಭಿವೃದ್ಧಿಯ ಪರಾಕಷ್ಠೆ ತಲುಪಿರುವ ಸರ್ಕಾರವನ್ನು ಸೋಲಿಸಲು ಕರ್ನಾಟಕದ ಸೂಕ್ಷ್ಮ ಸಮಸ್ಯೆಯ ಪ್ರಯೋಜನ ಪಡೆದುಕೊಳ್ಳುವ ತಂತ್ರ ಹೆಣೆದರು. ಅದರ ಪರಿಣಾಮ ಗೋವಾದಲ್ಲಿರುವ ಬಿಜೆಪಿ ಸರ್ಕಾರ ಉರುಳುವ ಪರಿಸ್ಥಿತಿಯ ಜೊತೆಗೆ, ಕಾಂಗ್ರೆಸ್‍ನಲ್ಲೂ ಲಾಭ ನಷ್ಟದ ಲೆಕ್ಕಾಚಾರಗಳು ಶುರುವಾಗಿದೆ’

ಮುಂದೆ ಓದಿ…

ಕಾವೇರಿ ನಮ್ಮ ನೆಲದಲ್ಲಿ ಹುಟ್ಟುತ್ತದೆ. ನಮ್ಮ ರೈತರ ದಾಹವನ್ನು ತಣಿಸುತ್ತದೆ. ಕಾವೇರಿ ಕರ್ನಾಟಕದ ಜೀವನದಿ. ಅದರ ನೀರಿಗಾಗಿ ರಚ್ಚೆ ಹಿಡಿಯುವ, ಕೋರ್ಟ್ ಮೆಟ್ಟಿಲೇರುವ, ರಾಜ್ಯಕ್ಕೆ ನೋವುಣ್ಣಿಸುವ ತಮಿಳುನಾಡಿನ ಪ್ರಯತ್ನಕ್ಕೆ, ಹಠಕ್ಕೆ ಅವಿರತ ಆಕ್ರೋಶವಿದೆ. ಅತ್ತ ಬೆಳೆಗೆ ಅಗತ್ಯವಾದ ನೀರನ್ನು ಸಾಂವಿಧಾನಿಕವಾಗಿ ಒದಗಿಸದ, ಹಕ್ಕಿಗೆ ಪ್ರತಿಸಾರಿಯೂ ಅಡ್ಡಿಪಡಿಸುವ ಕರ್ನಾಟಕದ ಮೇಲೂ ತಮಿಳುನಾಡಿಗೆ ಮುಗಿಯದ ಅಸಮಾಧಾನವಿದೆ. ಜಲಹಂಚಿಕೆ ವಿಚಾರದಲ್ಲಿ ದೇಶದೊಳಗೆ ರಾಜ್ಯಗಳ ನಡುವೆ ಇರುವ ಶತಮಾನಗಳ ಕದನವಿದು.

ಮಹಾದಾಯಿ ವಿಚಾರದಲ್ಲೂ ಕರ್ನಾಟಕ ತಮಿಳುನಾಡಿನ ಜಾಗದಲ್ಲಿ ನಿಂತರೇ, ಗೋವಾ ಕರ್ನಾಟಕದ ಜಾಗದಲ್ಲಿ ನಿಲ್ಲುತ್ತದೆ. ಮೂರು ರಾಜ್ಯಗಳ ನಡುವೆ ಇರುವ ಭಿನ್ನಾಭಿಪ್ರಾಯಗಳಲ್ಲಿ ಯಾವುದೇ ವ್ಯತ್ಯಾಸವಿಲ್ಲ. ಬದುಕಿಗಾಗಿ ಕಾವೇರಿ ನೀರನ್ನು ಬಯಸುವ ತಮಿಳುನಾಡು, ಬದುಕಿಗಾಗಿ ಮಹದಾಯಿ ನೀರನ್ನು ನಿರೀಕ್ಷಿಸುತ್ತಿರುವ ಕರ್ನಾಟಕದ ಹೋರಾಟ, ಪ್ರತಿಭಟನೆಗಳಲ್ಲಿ ಸಾಮ್ಯತೆಯಿದೆ. ಕಾವೇರಿ ವಿಚಾರದಲ್ಲಿ ಕರ್ನಾಟಕ ಮಂಡಿಸುತ್ತಿರುವ ವಾದಕ್ಕೂ, ಮಹದಾಯಿ ಸಂಗತಿಯಲ್ಲಿ ಗೋವಾಕ್ಕಿರುವ ಆತಂಕಕ್ಕೂ ಭಿನ್ನತೆಯಿಲ್ಲ.

ಕುಡಿಯುವ ನೀರನ್ನು ಒದಗಿಸುವುದಕ್ಕೆ ತಕರಾರಿಲ್ಲ. ಇನ್ನಿತರ ವಿಚಾರಗಳಿಗೆ ಕಾವೇರಿ, ಮಹದಾಯಿ ನದಿಯ ನೀರನ್ನು ಒದಗಿಸಲು ತಕರಾರಿದೆ. ಆದರೆ ನ್ಯಾಯಾಂಗದಲ್ಲಿ ಕಾವೇರಿ ಸಂಗತಿಯಲ್ಲಿ ತಮಿಳುನಾಡಿನ ವಾದ ಗೆಲ್ಲುತ್ತದೆ. ಆದರೆ ಮಹದಾಯಿ ಸಂಗತಿಯಲ್ಲಿ ಕರ್ನಾಟಕದ ವಾದ ಸೋಲುತ್ತದೆ. ಸಮಸ್ಯೆ ಇರುವುದು ಇಲ್ಲೇ..! ಕಾವೇರಿ ಹಾಗೂ ಮಹದಾಯಿ ಜಲಹಂಚಿಕೆ ಸಮಸ್ಯೆಗೆ ಶಾಶ್ವತ ಪರಿಹಾರವೇ ಇಲ್ಲವೆಂಬಂತಾಗಿದೆ. ಅದೇನೇ ಹೋರಾಟಗಳು ನಡೆದರೂ- ಅಂತಿಮ ನಿರ್ಣಯಕ್ಕೆ ಬರುವುದರಲ್ಲಿ ಸರ್ಕಾರಗಳು ಸೋಲುತ್ತಿವೆ. ನ್ಯಾಯಾಧೀಕರಣದ ಮುಂದೆ ಮಂಡನೆಯಾಗುವ ವಾದಗಳ ಆಳದ ಆಧಾರದಲ್ಲಿ ತೀರ್ಪುಗಳು ಹೊರಬೀಳುತ್ತವೆ.

ಮಹದಾಯಿ ವಿವಾದವನ್ನು ತಾತ್ಕಾಲಿಕವಾಗಿ ಬಗೆಹರಿಸಿದ್ದು ಅಂದಿನ ಪ್ರಧಾನಿ ಇಂದಿರಾಗಾಂಧಿ. ಅವರಿಂದಲೂ ಶಾಶ್ವತ ಪರಿಹಾರ ನೀಡಲಾಗಲಿಲ್ಲ. ಶಾಶ್ವತ ಪರಿಹಾರವೆಂದರೇ, ಕಳಸಾ ಬಂಡೂರಿ ನಾಲೆ ನಿರ್ಮಿಸಿ ಮಹದಾಯಿಯಿಂದ ನಿರಂತರ ನೀರು ಹರಿಸಬೇಕು. ಈ ಪ್ರಕ್ರಿಯೆ ಅವೈಜ್ಞಾನಿಕವೆಂದು ನ್ಯಾಯಾಂಗವೇ ಹೇಳುವಾಗ, ಭವಿಷ್ಯದಲ್ಲಿ ಮಹದಾಯಿ ಎರಡೂ ರಾಜ್ಯಗಳಿಗೂ ಒದಗಿಬರುವುದಿಲ್ಲ ಎಂಬ ವರದಿಗಳಿರುವಾಗ- ರಿಸ್ಕ್ ತೆಗೆದುಕೊಳ್ಳಲು ನದಿ ಮೂಲವಿರುವ ರಾಜ್ಯಗಳು ಒಪ್ಪುವುದಕ್ಕೆ ಸಾಧ್ಯವೇ ಇಲ್ಲ. ಶಕ್ತಿಕೇಂದ್ರವನ್ನು ನಡೆಸುವವರಿಗೆ ಎರಡೂ ರಾಜ್ಯಗಳ ಹಿತ ಮುಖ್ಯವಾಗಿರುವುದರಿಂದ ಮಧ್ಯಪ್ರವೇಶ ಅಷ್ಟು ಸುಲಭವಲ್ಲ. ದೇಶವನ್ನಾಳುವವರು ತಾರತಮ್ಯದ ಆಚೆ ನಿಂತೇ ಯೋಚಿಸಬೇಕಾಗುತ್ತದೆ.

ಭಾವನಾತ್ಮಕ ಆತಂಕದ ವಿಚಾರದಲ್ಲಿ ಕರ್ನಾಟಕ- ಗೋವಾ ಎರಡೂ ಒಂದು ತಕ್ಕಡಿಯಲ್ಲಿ ತೂಗುತ್ತವೆ. ಅವಶ್ಯಕತೆಯ ತಕ್ಕಡಿಯಲ್ಲಿ ಕರ್ನಾಟಕ- ತಮಿಳುನಾಡು ಎರಡೂ ನಿಲ್ಲುತ್ತವೆ. ಹೀಗಿರುವಾಗ ಅತ್ಯಂತ ಸೂಕ್ಷ್ಮ ಸಮಸ್ಯೆಯನ್ನು ಬಗೆಹರಿಸುವ ದಾರಿಯೇ ಕಾಣದಾಗಿದೆ. ಕಾವೇರಿ ಸಂಗತಿಯಲ್ಲಿ ಕರ್ನಾಟಕದಂತೆ ತಮಿಳುನಾಡಿನಲ್ಲೂ ರೈತರು ಬೀದಿಗಿಳಿಯುತ್ತಾರೆ. ಮಹದಾಯಿ ಸಂಗತಿಯಲ್ಲೂ ಗೋವಾ- ಕರ್ನಾಟಕ ಎರಡೂ ಬದಿಯಲ್ಲೂ ಹೋರಾಟಗಳು ನಡೆಯುತ್ತವೆ. ಹೀಗಿರುವಾಗ, ವಾಸ್ತವದ ಅರಿವಿರುವಾಗ ರಾಜಕಾರಣದ ಅಪಸವ್ಯಗಳು ನಡೆದರೇ ಹೇಗಿರಬೇಡ..? ಸಧ್ಯ ಬಿಜೆಪಿ ಮಾಡಿಕೊಂಡಿರುವ ಎಡವಟ್ಟು ಅದೇ. ಪರಿಣಾಮ ಕೆಟ್ಟದಾಗಿದ್ದರೂ, ರಾಜಕೀಯವಾಗಿ ಕಾಂಗ್ರೆಸ್‍ಗೆ ಅನುಕೂಲದ ಜೊತೆಗೆ ಅನಾನುಕೂಲದ ವಾತಾವರಣ ನಿರ್ಮಿಸಿದೆ.

ಗುಜರಾತ್‍ನಲ್ಲಿ ಬಿಜೆಪಿ ಗೆದ್ದಿದ್ದು ಐಸಿಯೂನಿಂದ ರೋಗಿ ಬದುಕಿಬಂದಂತಹ ಸ್ಥಿತಿಯನ್ನು ಹೇಳುತ್ತದೆ. ನೂರೈವತ್ತು ಸ್ಥಾನದ ಉದ್ದೇಶ ಮೂರಂಕಿಯ ಒಳಗೆ ಬಂದು ನಿಂತಮೇಲೆ- ಕೇವಲ ಒನ್‍ಲೈನ್ ಅಜೆಂಡಾದಿಂದ ಕರ್ನಾಟಕದಲ್ಲಿ ಬೇಳೆ ಬೇಯಿಸುವುದು ಸಾಧ್ಯವಿಲ್ಲ ಎಂದು ಮನದಟ್ಟಾಗಿದೆ. ಹೀಗಾಗಿ ಮನೋಹರ್ ಪಾರಿಕ್ಕರ್ ಎಂಬ ಅಸ್ತ್ರವನ್ನು ನಂಬಿ ಮಹಾಶಪಥ ಮಾಡಿಬಿಟ್ಟಿತ್ತು. ಸಮಸ್ಯೆ ಕುತ್ತಿಗೆಗೆ ಬಂದಿದೆ. ಕೈ ಪಾಳೆಯದಲ್ಲಿ ಆಶಾವಾದ ಮೂಡಿಸಿದರೂ ತುಮುಲಗಳು ಹೆಚ್ಚಿವೆ.

ಕರ್ನಾಟಕದಲ್ಲಿ ಬಿಜೆಪಿಗೆ ಗೆಲ್ಲಲೇಬೇಕೆಂಬ ಹಠವಿದೆ. ಕರ್ನಾಟಕದಲ್ಲಿ ಕಮಲ ಅರಳಿಸಲೇಬೇಕೆಂದು ಅಮಿತ್ ಶಾ, ಪ್ರಧಾನಿ ಮೋದಿ ಇದ್ದಬಿದ್ದ ತಂತ್ರಗಳನ್ನೆಲ್ಲಾ ನಡೆಸುತ್ತಿದ್ದಾರೆ. ಆದರೆ ಬಿಜೆಪಿಗೆ ಈ ಭಾರಿ ಕರ್ನಾಟಕದಲ್ಲಿ ದೊಡ್ಡ ತಡೆಯಾಗಿರುವುದು ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರದ ಉತ್ತಮ ಆಡಳಿತ. ವೈಫಲ್ಯದ ಒಂದೇ ಒಂದು ಅಂಶವಿಲ್ಲದೇ ಜನರ ಮುಂದೆ ಹೋಗಿ ನಿಲ್ಲಲಾರದಂತಹ ಪರಿಸ್ಥಿತಿಯಿದೆ. ಭ್ರಷ್ಟಚಾರದ ಆಚೆನಿಂತು, ಬಡವರತ್ತ ಹೆಚ್ಚು ಚಿತ್ತ ನೆಟ್ಟ ಸರ್ಕಾರದ ಬಗ್ಗೆ ಜನವಿರೋಧಾಭಿಪ್ರಾಯ ಮೂಡಿಸುವ ಒಂದೊಂದೇ ಪ್ರಯೋಗಗಳನ್ನು ಮಾಡಲಾರಂಭಿಸಿತ್ತು.

ಅದರಲ್ಲಿ ಮೊದಲ ಪ್ರಯೋಗ- ಹಿಂದುತ್ವ. ಕಹಳೆ ಮೊಳಗಿದರೂ ಬಿಜೆಪಿಗೆ ವಿರುದ್ಧವಾದ ಅಲೆ ಬೀಸತೊಡಗಿತು. ಧರ್ಮ ಘರ್ಷಣೆಯಿಂದ ಕನ್ನಡಿಗರ ಮನಸ್ಸನ್ನು ಸೆಳೆಯಲು ಸಾಧ್ಯವಿಲ್ಲ ಎಂಬುದು ಖಾತ್ರಿಯಾಗಿತ್ತು. ಇಂತಹ ಒಂದೆರಡು ಪ್ರಯತ್ನಗಳನ್ನು ಮೇಲಿಂದ ಮೇಲೆ ಮಾಡಿದರೂ ಏನೂ ಪ್ರಯೋಜನವಿಲ್ಲದಂತಾಯಿತು. ಅತ್ತ ಗುಜರಾತ್‍ನಲ್ಲೂ ಹೀನಾಯ ಗೆಲುವಿನಿಂದ ಪಾಠ ಕಲಿತಂತಾಗಿರುವ ಅಮಿತ್ ಶಾ ತಂಡ, ಗೋವಾ ಮುಖ್ಯಮಂತ್ರಿ ಮನೋಹರ್ ಪಾರಿಕ್ಕರ್ ಅವರನ್ನು ಬಲವಾಗಿ ನಂಬಿ ಕೂತಿತ್ತು. ಒಂದು ಕ್ಷಣ ಮೆಜಾರಿಟಿ ಪಡೆದ ಕಾಂಗ್ರೆಸ್ ಪಕ್ಷವನ್ನು ಬದಿಗೊತ್ತಿ, ಅವರಿವರ ಬೆಂಬಲದಿಂದ ಸರ್ಕಾರ ರಚಿಸಿದ್ದೇವೆಂಬುದನ್ನು ಮರೆತರು. ಅದೀಗ ಅಲ್ಲೂ ಇಲ್ಲ, ಇಲ್ಲೂ ಇಲ್ಲ ಎಂಬ ಪರಿಸ್ಥಿತಿಯನ್ನು ಸೃಷ್ಟಿಸಿದೆ.

ಮನೋಹರ್ ಪಾರಿಕ್ಕರ್ ಹಾಗೂ ಯಡಿಯೂರಪ್ಪನವರನ್ನು ಕೂರಿಸಿಕೊಂಡು ಅಮಿತ್ ಶಾ ಸಂಧಾನದ ಸೂತ್ರ ಹೆಣೆದರು. ಮೊದಲನೆಯದಾಗಿ ದಶಕಗಳ ವಿವಾದದ ಚರ್ಚೆ ನಡೆಯಬೇಕಿದ್ದಿದ್ದು ಎರಡೂ ರಾಜ್ಯಗಳ ಮುಖ್ಯಮಂತ್ರಿಗಳ ನಡುವೆ- ಅಂದರೇ ಸಿದ್ದರಾಮಯ್ಯ ಹಾಗೂ ಮನೋಹರ್ ಪಾರಿಕ್ಕರ್ ಕುಂತು ಚರ್ಚಿಸಬೇಕು. ಅಗತ್ಯಬಿದ್ದರೇ ಇಬ್ಬರನ್ನೂ ಕೂರಿಸಿ ಸಂಧಾನವೋ, ಸಮಜಾಯಿಷಿಯೋ ಕೊಡಬೇಕಾದವರು ಪ್ರಧಾನಿ ನರೇಂದ್ರ ಮೋದಿ. ಆದರೆ ಅಮಿತ್ ಶಾ ಸಾಂವಿಧಾನಿಕ ನಿಯಮವನ್ನು ಮೀರಿ ಯಡಿಯೂರಪ್ಪ- ಮನೋಹರ ಪಾರಿಕ್ಕರ್ ಜೊತೆ ಮಾತನಾಡಿದರು. ಒಂದು ವೇಳೆ ಅವರ ಮಾತುಕತೆ ಯಶಸ್ವಿಯಾಗಿ ಮಹಾದಾಯಿ ವಿವಾದ ಬಗೆಹರಿಯಿತು ಎಂದುಕೊಂಡರೂ- ಅದಕ್ಕೂ ಸಾಂವಿಧಾನಿಕ ಮಾನ್ಯತೆ ಸಿಗುವುದಿಲ್ಲ. ಕರ್ನಾಟಕ ಸರ್ಕಾರದ ಪ್ರತಿನಿಧಿಯೇ ಇಲ್ಲದೇ ಒಪ್ಪಂದವಾಗುವ ಸಂಗತಿಯಲ್ಲ ಅದು.

ಆದರೆ ಮಾತುಕತೆಯಲ್ಲಿ ಮನೋಹರ್ ಪಾರಿಕ್ಕರ್, ಕುಡಿಯುವ ನೀರಿಗೆ ಬೇಕಾದರೇ ವ್ಯವಸ್ಥೆ ಮಾಡೋಣ. ಎಷ್ಟು ಪ್ರಮಾಣದಲ್ಲಿ ನೀರು ಬಿಡುತ್ತೇವೆ ಎಂದು ಈಗ ಹೇಳಲಿಕ್ಕಾಗುವುದಿಲ್ಲ ಎಂದರು. ಈ ಸಂಬಂಧ ಯಡಿಯೂರಪ್ಪನವರಿಗೆ ಪತ್ರ ಬರೆದರು. ಮನೋಹರ್ ಪಾರಿಕ್ಕರ್ ಇಲ್ಲಿ ಎರಡು ತಪ್ಪನ್ನು ಮಾಡಿದ್ದರು. ಮೊದಲನೆಯದ್ದು ಮಹದಾಯಿ ವಿವಾದದ ಬಗ್ಗೆ ಚರ್ಚೆಗೂ ಮುನ್ನ ತಮ್ಮ ಸಂಪುಟ ಸದಸ್ಯರಿಗೆ ಈ ಬಗ್ಗೆ ಸುಳಿವು ನೀಡಲಿಲ್ಲ. ಎರಡನೆಯದ್ದು ಯಡಿಯೂರಪ್ಪನವರಿಗೆ ವಿವಾದದ ಬಗ್ಗೆ ಪತ್ರ ಬರೆಯುವಂತಿಲ್ಲ. ಪತ್ರ ವ್ಯವಹಾರ ಎರಡು ರಾಜ್ಯಗಳ ಮುಖ್ಯಮಂತ್ರಿಗಳ ನಡುವೆ ನಡೆಯಬೇಕು. ಆದರೆ ಅಮಿತ್ ಶಾ ಸರ್ವಾಧಿಕಾರದ ಧೋರಣೆಯ ಮುಂದೆ ಸಂವಿಧಾನದ ನೀತಿ ನಿಯಮಗಳು ಇವರಿಗೆ ಲೆಕ್ಕಕ್ಕೆ ಬರಲಿಲ್ಲ.

:ಪ್ರೇಮಪತ್ರಕ್ಕಿಂತ ಸ್ವಲ್ಪ ತೂಕವಾಗಿದ್ದ ಪತ್ರ ಹಿಡಿದುಕೊಂಡ ಯಡಿಯೂರಪ್ಪ, ಹುಬ್ಬಳ್ಳಿ ಪರಿವರ್ತನಾ ಯಾತ್ರೆಯ ಕಾರ್ಯಕ್ರಮದಲ್ಲಿ ಮಹದಾಯಿ ವಿವಾದ ಅಂತ್ಯವಾಯಿತು ಎಂದು ಘೋಷಿಸುತ್ತೇನೆ ಎಂದರು. ಅದನ್ನು ಉತ್ತರ, ಮಧ್ಯ ಕರ್ನಾಟಕದ ಅಮಾಯಕ ರೈತರು ನಂಬಿದರು. ಆದರೆ ಪರಿವರ್ತನಾ ಯಾತ್ರೆ ತೀರ್ಥಯಾತ್ರೆಯ ಸ್ವರೂಪ ಪಡೆದುಕೊಂಡಿತ್ತು. ಯಡಿಯೂರಪ್ಪ, ಬೂದಿ ಮುಚ್ಚಿದ ಕೆಂಡದಂತಿದ್ದ ವಿವಾದಕ್ಕೆ ಪೆಟ್ರೋಲ್ ಸುರಿದಿದ್ದರು. ಸಮಸ್ಯೆ ಬಗೆಹರಿಸುತ್ತೇನೆ ಎಂದು ಕಾಗೆ ಹಾರಿಸಿದ್ದು ಸ್ಪಷ್ಟವಾಗಿತ್ತು. ರೈತರು ಬೀದಿಗಿಳಿದಿದ್ದಾರೆ. ಬಿಜೆಪಿ ಕಚೇರಿಯ ಮುಂದೆ ಪ್ರತಿಭಟನೆ ನಡೆಸುತ್ತಿದ್ದಾರೆ.

ಬಿಜೆಪಿ ಕರ್ನಾಟಕದಲ್ಲಿ ಅಧಿಕಾರ ಪಡೆಯುವ ಉದ್ದೇಶದಿಂದ ಇಂತಹದ್ದೊಂದು ಮೂರ್ಖತನದ ಹುನ್ನಾರ ಮಾಡಿತ್ತು. ಕೂಸು ಹುಟ್ಟುವ ಮುನ್ನವೇ ಕುಲಾವಿ ಹೊಲಿಸಿತ್ತು. ಆ ತಪ್ಪಿಗೆ ಬಿಜೆಪಿ ಅಧಿಕಾರಕ್ಕಾಗಿ ಜನರ ದಾಹದ ಜೊತೆ ಆಟವಾಡುತ್ತಿದೆ ಎಂಬ ಸಂದೇಶ ರವಾನೆಯಾಗಿದೆ. ಉತ್ತರ, ಮಧ್ಯ ಕರ್ನಾಟಕವನ್ನು ನೆಚ್ಚಿಕೊಂಡಿದ್ದ ಬಿಜೆಪಿ ಈ ಹಿಂದೆ ಹಾಕಿದ್ದ ಲೆಕ್ಕಾಚಾರಗಳೇ ಉಲ್ಟಾ ಹೊಡೆಯುವ ಪರಿಸ್ಥಿತಿ ಬಂದಿದೆ. ಇದು ಕಾಂಗ್ರೆಸ್‍ಗೆ ವರದಾನವಾಗುವ ಎಲ್ಲಾ ಸಾಧ್ಯತೆಗಳಿವೆ. ಆದರೆ ಅತ್ತ ಗೋವಾದಲ್ಲಿ ಮನೋಹರ್ ಪಾರಿಕ್ಕರ್ ನಿಲುವನ್ನು ಖಂಡತುಂಡವಾಗಿ ಖಂಡಿಸುತ್ತಿರುವ ಮಿತ್ರ ಪಕ್ಷಗಳು, ಸಂಘಟನೆಗಳು ರೊಚ್ಚಿಗೆದ್ದಿವೆ. ಪರಿಣಾಮ ಗೋವಾ ಸರ್ಕಾರದ ಬುಡ ಅಲ್ಲಾಡುತ್ತಿದೆ. ಒಂದು ವೇಳೆ ಅಲ್ಲಿ ಮೆಜಾರಿಟಿ ಇರುವ ಕಾಂಗ್ರೆಸ್‍ಗೆ ಬಿಜೆಪಿ ಬೆಂಬಲಿತ ಪಕ್ಷಗಳು ಬೆಂಬಲ ಘೋಷಿಸಿದರೇ ಬಿಜೆಪಿ ಸರ್ಕಾರ ಉರುಳುತ್ತದೆ. ಕಾಂಗ್ರೆಸ್ ಅಧಿಕಾರಕ್ಕೇರುತ್ತದೆ. ಆಗ ಈಗಿರುವುದಕ್ಕಿಂತಲೂ ದೊಡ್ಡ ಸಮಸ್ಯೆ ಹುಟ್ಟಿಕೊಳ್ಳುತ್ತದೆ. ಅದು ರಾಜ್ಯ ಕಾಂಗ್ರೆಸ್‍ಗೆ ಅಪಾಯವಾಗಬಹುದು..!?

ಸೂಕ್ಷ್ಮ ಸಂಗತಿಗಳು ಸರ್ಕಾರಗಳನ್ನೇ ಉರುಳಿಸಿರುವ ಸಾಕಷ್ಟು ನಿದರ್ಶನಗಳಿವೆ. ಕರ್ನಾಟಕದ ಮನೆ ಮಗಳೇ ಆದರೂ ಜಯಲಲಿತಾ, ತಮಿಳುನಾಡಿನ ಜನರ ಹಿತವನ್ನೇ ಬಯಸಿದ್ದರು. ಮನೋಹರ್ ಪಾರಿಕ್ಕರ್ ಬಿಜೆಪಿಯವರೇ ಆದರೂ, ಕರ್ನಾಟಕದ ಅಧಿಕಾರದ ಗೇಮ್‍ಪ್ಲಾನ್‍ಗಾಗಿ ಶಾಶ್ವತವಾಗಿ ಗೋವಾವನ್ನು ಎದುರುಹಾಕಿಕೊಳ್ಳಲಾರರು. ಅಮಿತ್ ಶಾ ಸಭೆಗೆ ಹೋಗಿದ್ದು ತಪ್ಪಾಗಿದೆ. ಮಹದಾಯಿ ವಿಚಾರದಲ್ಲಿ ಗೋವಾದ ಕ್ಷೇಮವೇ ನನಗೆ ಮುಖ್ಯ ಎಂದು ಸಾರೀ ಕೇಳಿ ಬಿಟ್ಟರೇ ಅಲ್ಲಿಗೆ ಗೋವಾ ಆಟದಿಂದ ಹೊರಗುಳಿಯುತ್ತದೆ. ಕರ್ನಾಟಕದಲ್ಲಿ ಬಿಜೆಪಿ ಇಕ್ಕಟ್ಟಿಗೆ ಸಿಲುಕುತ್ತದೆ.

ಅದೇ ಒಂದು ವೇಳೆ ಮನೋಹರ್ ಪಾರಿಕ್ಕರ್ ಡಬ್ಬಲ್ ಸ್ಟ್ಯಾಂಡರ್ಡ್ ತೋರಿಸಿದರೇ, ಗೋವಾ ಬಿಜೆಪಿ ಸರ್ಕಾರ ರಚನೆಗೆ ಬೆಂಬಲಿಸಿದ ಮಹಾರಾಷ್ಟ್ರವಾದಿ ಗೋಮಾಂತಕ ಪಾರ್ಟಿ, ಗೋವಾ ಫಾರ್ವರ್ಡ್ ಪಾರ್ಟಿ, ಪಕ್ಷೇತರರು ಹಾಗೂ ಎನ್‍ಸಿಪಿ ಬೆಂಬಲವನ್ನು ಹಿಂತೆಗೆದುಕೊಳ್ಳಬಹುದು. ಕಾಂಗ್ರೆಸ್ ಅನ್ನು ಬೆಂಬಲಿಸಬಹುದು. ಆಗ ಬಿಜೆಪಿ ಬಳಿ ಹದಿಮೂರು ಸ್ಥಾನವಷ್ಟೇ ಉಳಿಯುತ್ತದೆ. ಕಾಂಗ್ರೆಸ್ ಬಳಿ ಈಗಿರುವ ಹದಿನೇಳು ಸ್ಥಾನಕ್ಕೆ ಉಳಿದ ಹತ್ತು ಸ್ಥಾನಗಳು ಸೇರಿ ಇಪ್ಪತ್ತೇಳು ಸ್ಥಾನಗಳ ಮೆಜಾರಿಟಿಯೊಂದಿಗೆ ಸರ್ಕಾರ ರಚಿಸಬಹುದು. ಆದರೆ ಇಲ್ಲಿ ಕಾಂಗ್ರೆಸ್ ಅನ್ನು ಮಿಕ್ಕವರು ಬೆಂಬಲಿಸುವಾಗ ಮಹದಾಯಿ ಸಂಗತಿಗೆ ಮಹತ್ವ ಕೊಟ್ಟಿರುತ್ತಾರೆ ಎನ್ನುವುದು ಗಮನಾರ್ಹ. ಅಲ್ಲದೇ ಗೋವಾ ಕಾಂಗ್ರೆಸ್ ಕೂಡ ಮಹದಾಯಿ ಸಂಗತಿಯಲ್ಲಿ ಮನೋಹರ್ ಪಾರಿಕ್ಕರ್ ರಹಸ್ಯ ಸಭೆಯನ್ನು ಟೀಕಿಸಿದೆ. ಹೀಗಿರುವಾಗ ಅಕಸ್ಮಾತ್ ಗೋವಾದಲ್ಲಿ ಕಾಂಗ್ರೆಸ್ ನೇತೃತ್ವದ ಸರ್ಕಾರ ರಚನೆಯಾದರೇ ಅದು ಕರ್ನಾಟಕದ ಮುಂದಿನ ಚುನಾವಣೆಯಲ್ಲಿ ಮತ್ತೆ ಅಧಿಕಾರಕ್ಕೇರುವ ಉಮ್ಮೇದಿಯಲ್ಲಿರುವ ಕಾಂಗ್ರೆಸ್‍ಗೆ ಹಿನ್ನಡೆಯಾಗಬಹುದು.

ಈಗ ಬಿಜೆಪಿ ಮಾಡಿಕೊಂಡಿರುವ ಆತುರವನ್ನು ರಾಜ್ಯ ಸರ್ಕಾರ ಎನ್‍ಕ್ಯಾಶ್ ಮಾಡಿಕೊಳ್ಳುತ್ತಿದೆ. ಮಹದಾಯಿ ವಿವಾದದ ವಿಚಾರದಲ್ಲಿ ಜನರ ದಾಹದ ಜೊತೆ ಬಿಜೆಪಿ ಆಟವಾಡುತ್ತಿದೆ ಎಂದು ಟೀಕಿಸುತ್ತಿದೆ. ರಾಜಕೀಯ ಲಾಭಕ್ಕಾಗಿ ಪ್ರಯೋಗಶೀಲತೆಗೆ ತೆರೆದುಕೊಂಡು ಅಡ್ಡಕತ್ತರಿಯಲ್ಲಿ ಸಿಲುಕುತ್ತಿರುವ ಬಿಜೆಪಿಯ ಸಂಕಟ ಕರ್ನಾಟಕ ಕಾಂಗ್ರೆಸ್ ಸರ್ಕಾರಕ್ಕೆ ವರವಾಗಿದೆ. ಒಂದು ವೇಳೆ ಅದರ ಎಫೆಕ್ಟ್ ಗೋವಾದಲ್ಲಿ ವ್ಯಾಪಕವಾಗಿ ಬಿಜೆಪಿಯನ್ನು ಹೊರಗಿಟ್ಟು ಕಾಂಗ್ರೆಸ್ ನೇತೃತ್ವದ ಸರ್ಕಾರದ ಅಧಿಕಾರಕ್ಕೇರಿದರೇ, ಕರ್ನಾಟಕದ ರೈತರು ಸಿದ್ದರಾಮಯ್ಯನ ಅಂಗಿ ಜಗ್ಗಿ ಕೇಳುತ್ತಾರೆ, `ಅಲ್ಲಿ ನಿಮ್ಮದೇ ಸರ್ಕಾರವಿದೆ, ಮಾತನಾಡಿ ಮಹದಾಯಿ ವಿವಾದ ಬಗೆಹರಿಸಿ..!!’ ಆಗಿಹೋಗುವ ಮಾತೇ..! ಮಹದಾಯಿಯನ್ನೇ ಅಸ್ತ್ರ ಮಾಡಿಕೊಂಡು ಅಲ್ಲಿ ಕಾಂಗ್ರೆಸ್ ಅಧಿಕಾರ ಹಿಡಿದಿದೆ ಎಂದಮೇಲೆ, ಕರ್ನಾಟಕ ಸರ್ಕಾರದಿಂದ ವಿವಾದ ಬಗೆಹರಿಸಲು ಸಾಧ್ಯವೇ..?

ಈ ಬೆಳವಣಿಗೆಯಾದರೇ ರಾಜ್ಯದಲ್ಲಿ ಬಿಜೆಪಿಗೆ ದೊಡ್ಡ ಅಸ್ತ್ರ ಸಿಕ್ಕಂತಾಗುತ್ತದೆ. ಯಾವ ಮಹದಾಯಿಯಿಂದ ಗೋವಾ ಕಳೆದುಹೋಯಿತೋ, ಅದೇ ಮಹದಾಯಿ ಕರ್ನಾಟಕದಲ್ಲಿ ಅಧಿಕಾರ ಹಿಡಿಯಲು ಕಾರಣವಾಗಬಹುದು. ದೇಶಕ್ಕೆ ಹೆಚ್ಚು ಟ್ಯಾಕ್ಸ್ ಕಟ್ಟುವ ಕರ್ನಾಟಕ ಗೋವಾಕ್ಕಿಂತ ಅಮೂಲ್ಯವಾಗಿರುವುದರಿಂದ ತಟಸ್ಥ ಬೆಳವಣಿಗೆಯೊಂದೇ ಕಾಂಗ್ರೆಸ್‍ಗೆ ವರವಾಗಲಿದೆ. ಹಾಗಂತ ಗೋವಾದಲ್ಲಿ ಕಾಂಗ್ರೆಸ್ ಅಧಿಕಾರ ಹಿಡಿದರೇ ಇಲ್ಲಿ ಬಿಜೆಪಿ ಗೆಲ್ಲುತ್ತದೆ ಎಂಬುದು ಖಾತ್ರಿಯಿಲ್ಲ. ಪ್ರಯೋಜನ ಪಡೆದುಕೊಳ್ಳಬಹುದು ಎನ್ನಬಹುದಷ್ಟೇ..! ಇದ್ದ ರಾಜ್ಯವನ್ನು ಕಳೆದುಕೊಂಡು, ಕರ್ನಾಟಕದಲ್ಲೂ ಅಧಿಕಾರಕ್ಕೇರದ ಸಾಧ್ಯತೆಯನ್ನೂ ತಳ್ಳಿಹಾಕುವಂತಿಲ್ಲ. ಮಹಾದಾಯಿ ಮಾಯೆ ಏನೆಲ್ಲಾ ಆಡಿಸುತ್ತೋ…? ಕಾದುನೋಡಬೇಕು. ಮುಗಿಯದ ವಿಚಾರವಲ್ಲ.

Share post:

Subscribe

spot_imgspot_img

Popular

More like this
Related

ಆರೋಗ್ಯಕರ ಅಡುಗೆಗೆ ಹಿತ್ತಾಳೆ ಪಾತ್ರೆಗಳು ಸೂಕ್ತವೇ? ತಿಳಿದುಕೊಳ್ಳಿ  ಪ್ರಯೋಜನಗಳು

ಆರೋಗ್ಯಕರ ಅಡುಗೆಗೆ ಹಿತ್ತಾಳೆ ಪಾತ್ರೆಗಳು ಸೂಕ್ತವೇ? ತಿಳಿದುಕೊಳ್ಳಿ  ಪ್ರಯೋಜನಗಳು ಉತ್ತಮ ಆರೋಗ್ಯಕ್ಕಾಗಿ ಪೌಷ್ಟಿಕ...

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು ಕಳ್ಳತನ

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು...

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ – ಆರ್. ಅಶೋಕ್ ಆಗ್ರಹ

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ –...

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು!

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು! ಬೆಂಗಳೂರು: ಆಟೋ ಮತ್ತು...