
ಮಾಧ್ಯಮ ಪ್ರಕರವಾಗುತ್ತಿರುವ ಈ ಹೊತ್ತಿನಲ್ಲಿ, ಪ್ರಶ್ನೆಗೀಡಾಗುತ್ತಿರುವುದು ಆತಂಕದ ವಿಚಾರವಾಗಿದೆ. ಎಲ್ಲದಕ್ಕಿಂತ ಮೊದಲು ಮಾಧ್ಯಮಗಳ ಜವಬ್ಧಾರಿಯೇನು..? ಸಾಮಾಜಿಕವಾಗಿ ಮಾಧ್ಯಮಗಳು ಹೇಗೆ ವರ್ತಿಸಬೇಕು..?. ಆ ಕುರಿತು ಆತ್ಮವಿಮರ್ಶೆ ಮಾಡಿಕೊಳ್ಳಬೇಕಿರುವುದು ಪತ್ರಕರ್ತರೇ ಹೊರತು ಬೇರೇ ಯಾರು ಅಲ್ಲ. ಇಂತಹ ಪತ್ರಿಕೆ, ಇಂತಹ ಟೀವಿಯವರು ರಾಜಕೀಯವಾಗಿ ಬಿಜೆಪಿಯನ್ನು ಬೆಂಬಲಿಸುತ್ತಾರೆ. ಹಿಂದೂಗಳ ಪರವಾಗಿ ಸುದ್ದಿ ಮಾಡುತ್ತಾರೆ. ಅವರು ಮುಸಲ್ಮಾನರನ್ನು ಟಾರ್ಗೆಟ್ ಮಾಡುತ್ತಾರೆ ಎಂಬ ಆರೋಪಗಳ ಜೊತೆಗೆ, ಇಂತಹ ಪತ್ರಿಕೆ, ಇಂತಹ ಟೀವಿಯವರು ರಾಜಕೀಯವಾಗಿ ಕಾಂಗ್ರೆಸ್ ಅನ್ನು ಬೆಂಬಲಿಸುತ್ತವೆ. ಮುಸಲ್ಮಾನರ ಪರವಾಗಿ ಸುದ್ದಿ ಮಾಡುತ್ತವೆ. ಕಮ್ಯುನಿಸ್ಟ್ ಸಿದ್ಧಾಂತಗಳನ್ನು ಹೊಂದಿವೆ ಎಂಬ ಟೀಕೆಗಳು ಕೇಳಿ ಬರುತ್ತವೆ.

ನಿಜ ಮಾಧ್ಯಮಗಳಲ್ಲೂ ಬಿಸಿನೆಸ್ ಲೆಕ್ಕಾಚಾರಗಳಿವೆ. ಟೆಲಿವಿಶನ್ ರೇಟಿಂಗ್ ಪಾಯಿಂಟ್ ಉದ್ದೇಶಗಳಿವೆ. ನೂರಾರು ಮಾಧ್ಯಮಗಳ ನಡುವೆ ಬದುಕಲೇಬೇಕಾದ ಅನಿವಾರ್ಯತೆಯಿದೆ. ಎಲ್ಲರೂ ಒಂದೇ ರೀತಿಯಾಗಿ ಸುದ್ದಿ ಮಾಡಿದರೇ ಹಳಸನ್ನವನ್ನು ಸವಿಯಲು ವೀಕ್ಷಕರೇ ತಯಾರಿರುವುದಿಲ್ಲ. ಹಾಗಾಗಿ ಹೊಸತನ್ನು ಕೊಡಬೇಕು. ಸುಮ್ಮನಾದರೂ ಪ್ರಳಯ ಸೃಷ್ಟಿಸಬೇಕು.

ಮೂರನೇ ಮಹಾಯುದ್ಧ ನಡೆಯುತ್ತದೆ ಎನ್ನಬೇಕು. ಮೂಢನಂಬಿಕೆಯನ್ನು ಬಿತ್ತಬೇಕು. ಇವೆಲ್ಲ ತಪ್ಪು ಎನ್ನುವುದಾದರೇ, ಅಂತಹ ಕಾರ್ಯಕ್ರಮಗಳನ್ನು ತಿರಸ್ಕರಿಸಬೇಕಾದವರು ತಪ್ಪೆನ್ನುವ ವೀಕ್ಷಕರೇ ಅಲ್ಲವೇ..?. ಜ್ಯೋತಿಷ್ಯ ಹಾಳೂಮೂಳು ಅಂತ ಜನರೊಳಗೆ ಮೌಢ್ಯವನ್ನು ಬಿತ್ತುತ್ತಾರೆ ಎನ್ನುವವರಿಗೆ ಆ ಕಾರ್ಯಕ್ರಮದ ಭರಪೂರ್ತಿ ರೇಟಿಂಗ್ ಬಗ್ಗೆ ಅರಿವಿರುವುದಿಲ್ಲ.

ರೈತರ ಬಗ್ಗೆ ಕಾರ್ಯಕ್ರಮ ಮಾಡ್ರೀ ಅಂತ ಮಾಧ್ಯಮಕ್ಕೆ ಬುದ್ದಿ ಹೇಳುವವರಿಗೆ, ಅಂತಹ ಕಾರ್ಯಕ್ರಮವನ್ನು ಜನರು ಪ್ರೋತ್ಸಾಹಿಸುವುದಿಲ್ಲ ಎಂಬ ಸಂಗತಿಯು ಗೊತ್ತಿರಬೇಕು. ರೈತರ ಕಾರ್ಯಕ್ರಮಗಳಿಗೆ ಯಕಃಶ್ಚಿತ್ ಜ್ಯೋತಿಷ್ಯ ಕಾರ್ಯಕ್ರಮವನ್ನು ನೋಡುವಷ್ಟು ವೀಕ್ಷಕರು ಸಿಕ್ಕಿಬಿಟ್ಟರೇ- ಎಲ್ಲಾ ಮಾಧ್ಯಮಗಳಲ್ಲೂ ರೈತ ನಳನಳಿಸುತ್ತಾನೆ. ಜನರು ಇಷ್ಟಪಡುವುದನ್ನು ಉಣಬಡಿಸಲೇಬೇಕು. ಅದೇ ಮಾಧ್ಯಮಗಳಿಗೆ ಆದಾಯ. ಎಲ್ಲವೂ ಆಸಕ್ತಿಯ ಮೇಲೆ ಅವಲಂಬಿತವಾಗಿರುತ್ತದೆ. ಆದರೆ ವೀಕ್ಷಕರು ಬಯಸುವುದು ಇದನ್ನಲ್ಲ. ಹಲವರಿಗೆ ರೈತರ ಆತ್ಮಹತ್ಯೆಗಿಂತ, ಸನ್ನಿಲಿಯೋನ್ ಮೈಮಾಟ ಹೆಚ್ಚು ಆಕರ್ಷವಾಗಿರುತ್ತದೆ. ಹಾಗಾಗಿ ಪೆನ್ನು, ಕ್ಯಾಮೆರಾ ಅತ್ತ ಹೆಚ್ಚು ಫೋಕಸ್ ಆಗುತ್ತದೆ. ಬದುಕಬೇಕಲ್ಲವೇ..?

ಇತ್ತೀಚೆಗೆ ಪ್ರಜಾವಾಣಿ, ಬಿಗ್ ಬಾಸ್ ವಾಣಿ ಎಂದು ಮಾರುಕಟ್ಟೆಗೆ ಬಂದಾಗ, ದೊಡ್ಡಮಟ್ಟದಲ್ಲಿ ಆ ಪತ್ರಿಕೆಗೆ ಖಂಡನೆ ವ್ಯಕ್ತವಾಯಿತು. ಅದು ಜಾಹೀರಾತು. ಪತ್ರಿಕೆಗಳಿಗೆ, ಟೀವಿಯವರಿಗೆ ಹೊಟ್ಟೆ ತುಂಬಿಸುತ್ತಿರುವುದು ಕೂಡ ಜಾಹೀರಾತುಗಳೇ ಎಂಬ ಅರಿವು ಓದುಗನಿಗೆ, ವೀಕ್ಷಕರಿಗಿರಬೇಕು. ಸುದ್ದಿಯನ್ನು ಟೀಕಿಸುವವನಿಗೆ, ಆಸ್ವಾಧಿಸುವವನಿಗೆ ಅಲ್ಲಿನ ಸಾವಿರಾರು ಜನರ ಶ್ರಮಕ್ಕೂ ಹಣವನ್ನು ತೆತ್ತಬೇಕು. ಸಮಾಜಸೇವೆ ಎಂದು ಹೊರಟರೇ ಹಸಿವಿನಿಂದ ಮಲಗಬೇಕೆಂಬ ಸಂದಿಗ್ಧತೆಗಳು ಅರ್ಥವಾಗಬೇಕು. ಸೋಶಿಯಲ್ ಮೀಡಿಯಾದಲ್ಲಿ ಅಭಿವ್ಯಕ್ತಿ ಸ್ವಾತಂತ್ರದ ಹೆಸರಿನಲ್ಲಿ ಮನಸಿಗೆ ಬಂದಂತೆ ಬರೆದರೇ ಅದು ನಿಜವಾಗುವುದಿಲ್ಲ. ಹಾಗಂತ ಅದು ಸುಳ್ಳೂ ಎನಿಸುವುದಿಲ್ಲ.

ಇವಿಷ್ಟು ಟೀವಿ, ಪತ್ರಿಕೆಗಳು ಬದುಕಿನ ವಿವರಣೆಯಾದರೇ, ಈಗಿನ ಮಾಧ್ಯಮಗಳಲ್ಲಿ ಸೇರಿಕೊಂಡಿರುವ ಸಿದ್ಧಾಂತಗಳು ಆತಂಕ ತರಿಸುತ್ತವೆ. ರಾಜಕೀಯವಾಗಿ ಲಾಭ ಪಡೆದುಕೊಳ್ಳದ ಮಾಧ್ಯಮವಿಲ್ಲ. ಮಾಧ್ಯಮಗಳನ್ನು ಕಟ್ಟುವವರು, ನಿಭಾಯಿಸುವವರ ಮೇಲೆ ಅದು ಪ್ರಕಟಿಸುವ, ಬಿತ್ತರಿಸುವ ಸುದ್ದಿಗಳ ಅಂಶಗಳು ಅಡಗಿರುತ್ತವೆ. ನಮ್ಮ ಪಕ್ಷದ ಪರವಾಗಿ ಸುದ್ದಿ ಬಿತ್ತರಿಸಬೇಕು ಎಂದು ಪ್ಯಾಕೇಜ್ ನೀಡುವ ಸಂಸ್ಕೃತಿ ಒಂದು ಕಡೆಯಾದರೇ, ಆಯಾ ಮಾಧ್ಯಮಗಳಲ್ಲಿ ಕೆಲಸ ನಿರ್ವಹಿಸುವವರು ಆಯಾ ಪಕ್ಷದ ರಾಯಬಾರಿಯಂತೆ ವರ್ತಿಸುತ್ತಾರೆ. ಸಿದ್ಧಾಂತಗಳಿಗೆ ಕಟ್ಟುಬಿದ್ದಿರುತ್ತಾರೆ. ಇವರ ಕೆಲಸ ಪ್ಯಾಕೆಜ್ ಕೊಡದ, ಸಿದ್ಧಾಂತಗಳಿಗೆ ವಿರುದ್ಧವಿರುವವರನ್ನು ಸುಮ್ಮನಾದರೂ ಟೀಕಿಸುವುದಾಗಿರುತ್ತದೆ. ಕೆಲವು ಪತ್ರಕರ್ತರಿಗೆ ಈ ಸಿದ್ಧಾಂತಗಳ ಉಸಾಬರಿ ಬೇಕಿರುವುದಿಲ್ಲ. ಆದರೆ ತಮಗಿಂತ ಮೇಲಿನ ಸ್ಥಾನದಲ್ಲಿರುವವರು ಆದೇಶಿಸಿದಂತೆ ನಡೆದುಕೊಳ್ಳಬೇಕು. ಮಾತಾಡಬೇಕು. ಎಥಿಕ್ಸು, ಹಾಳೂಮೂಳೂ ಎಲ್ಲವೂ ಮಾರಾಟಕ್ಕಿಟ್ಟು ಕೀಲುಗೊಂಬೆಯಂತೆ ಕೆಲಸ ನಿರ್ವಹಿಸುತ್ತಾರೆ. ವೈಯುಕ್ತಿಕವಾಗಿ ಜನರಿಂದ ನಿಂದನೆಗೊಳಗಾಗುತ್ತಾರೆ. ಬೆದರಿಕೆಗಳು ಬರತೊಡಗುತ್ತವೆ. ಆದರೆ ಇವೆಲ್ಲದರ ಹಿಂದಿರುವವರು ಮುಖ್ಯ ಭೂಮಿಕೆಯಲ್ಲಿ ಕಾಣಿಸುವುದೇ ಇಲ್ಲ.

ಈ ಸಂದರ್ಭದಲ್ಲಿ ಕರ್ನಾಟಕದ ಟೀವಿ ಚಾನೆಲ್ ಒಂದರ ಹಿರಿಯ ಪತ್ರಕರ್ತರು ನಡೆದುಕೊಂಡ ತಮಾಷೆಯ ಪ್ರಸಂಗ ನೆನಪಾಗುತ್ತದೆ. ಕರ್ನಾಟಕ ಸರ್ಕಾರ, ಖಾಸಗಿ ಆಸ್ಪತ್ರೆಗಳ ಸುಲಿಗೆಗೆ ಕಡಿವಾಣ ಹಾಕಲು ಮುಂದಾದಾಗ, ಆ ಪತ್ರಕರ್ತ ಕಾಂಗ್ರೆಸ್ ಸರ್ಕಾರವನ್ನು ಇನ್ನಿಲ್ಲದಂತೆ ಬೆಂಡೆತ್ತಿದ್ದರು.

`ನೀವು ಹೀಗೆ ಮಾಡಿದರೇ, ಕೋಟ್ಯಾಂತರ ರೂಪಾಯಿಯನ್ನು ಹೂಡಿಕೆ ಮಾಡಿ, ಆಸ್ಪತ್ರೆ ಕಟ್ಟಿದವರು ತಿರುಪೆ ಎತ್ತಬೇಕಾ..?’ ಎಂದು ಪ್ರಶ್ನಿಸಿದರು.
ಇದಾಗಿ ಕೆಲ ತಿಂಗಳಿಗೆ ಕೇಂದ್ರ ಸರ್ಕಾರ, ಖಾಸಗಿ ಆಸ್ಪತ್ರೆಗಳ ಸುಲಿಗೆಯ ವಿರುದ್ಧ ಧ್ವನಿಯೆತ್ತಿದಾಗ ಇದೇ ಪತ್ರಕರ್ತ, `ಕೆಲಸ ಅಂದ್ರೇ ಇದು, ಬಡವರು ಎಲ್ಲಿಗೆ ಹೋಗಬೇಕು ಪಾಪ’ ಎಂದಿದ್ದರು.

ಕಾಂಗ್ರೆಸ್ ಸರ್ಕಾರದ ಕ್ರಮ ಖಾಸಗಿ ಆಸ್ಪತ್ರೆ ಕಟ್ಟಿದವರ ಕಣ್ಣೀರು ತರಿಸುತ್ತದೆ, ಬಿಜೆಪಿ ಸರ್ಕಾರದ ಕ್ರಮ ಬಡವರ ಕಣ್ಣೀರು ಒರೆಸುತ್ತದೆ ಎಂಬ ವಾದವನ್ನು ಕೇಳಿ ನಗಬೇಕೋ..? ಅವರ ಒಳಗಿರುವ ಬಿಜೆಪಿ ಕಾರ್ಯಕರ್ತನನ್ನು ಟೀಕಿಸಬೇಕೋ ನೀವೇ ಹೇಳಿ..? ಅನ್ನಭಾಗ್ಯದಲ್ಲಿ ಕಲ್ಲು ಹುಡುಕಿದ ಇಂತಹ ಮನಃಸ್ಥಿತಿಯ ಪತ್ರಕರ್ತರು, ಹಸಿವು ಸೂಚ್ಯಂಕದಲ್ಲಿ ಭಾರತ ನೂರನೇ ಸ್ಥಾನಕ್ಕೆ ಕುಸಿದು, ಭಾರತದ ಹಸಿವು ಜಾಗತೀಕವಾಗಿ ಸದ್ದು ಮಾಡಿದರೂ ಅದನ್ನು ಸುದ್ದಿಯೆಂದೇ ಭಾವಿಸಲಿಲ್ಲ. ಮೇಟಿದವರನ್ನು ಹಗಲು ರಾತ್ರಿ ಕುಟ್ಟಿದವರು, ಬಿಗ್ಬಾಸ್ ಕೋಣೆಯೊಳಗಿನ ಜುಮ್ಮಚುಕ್ಕಗಳನ್ನು ನೋಡಿಯೂ ನೋಡದಂತಿದ್ದುಬಿಟ್ಟರು. ಅವರ ವೃತ್ತಿನಿಷ್ಠೆ ಆಯಾ ಪಕ್ಷ, ವ್ಯಕ್ತಿತ್ವಗಳ ಮೇಲಷ್ಟೇ ಸೀಮಿತವಾಗಿರುತ್ತದೆ. ಗೌರಿ ಲಂಕೇಶ್ ಹತ್ಯೆಯನ್ನು ಸಂಭ್ರಮಿಸಿದ ಮಾಧ್ಯಮವೂ ಇದಕ್ಕೆ ಹೊರತೇನಲ್ಲ..!

ರಾಜಕೀಯ ಕೆಸರೆರಚಾಟಗಳು ಬಿಡಿ.
ಮೋದಿಯನ್ನು ಉದ್ದೇಶಪೂರ್ವಕವಾಗಿ ಅಥವಾ ದುರುದ್ದೇಶಪೂರ್ವಕವಾಗಿ ಟೀಕಿಸಲೇಬೇಕೆಂದುಕೊಂಡವರು ಟೀಕಿಸುತ್ತಲೇ ಇರುತ್ತಾರೆ. ಕಾಂಗ್ರೆಸ್ ಅನ್ನು ಹಳಿಯಲೇಬೇಕೆಂದುಕೊಂಡವರು ಹಳಿಯುತ್ತಲೇ ಇರುತ್ತಾರೆ. ರಾಜಕಾರಣವೇ ಹಾಗಿರುವುದರಿಂದ ಅಲ್ಲಿ ಮಾಧ್ಯಮಗಳನ್ನು ದೂರುವುದರಲ್ಲಿ ಅರ್ಥವಿಲ್ಲ. ಜನರೂ ದಡ್ಡರಲ್ಲ. ನಂಬುವವರು ನಂಬುತ್ತಾರೆ. ನಂಬದವರು ನಂಬುವುದಿಲ್ಲ. ಆದರೆ ಧಾರ್ಮಿಕ ವಿಚಾರದಲ್ಲಿ ಕೆಲ ಮಾಧ್ಯಮಗಳು ತಳೆಯುತ್ತಿರುವ ನಿಲುವಿದೆಯಲ್ಲ. ಅದು ದೇಶದೊಳಗೆ ಬೂದಿಮುಚ್ಚಿದ ಕೆಂಡದಂತಿರುವ ಅಸಹಿಷ್ಣುತೆಯನ್ನು ಬಡಿದೆಬ್ಬಿಸುತ್ತದೆ. ಇತ್ತೀಚೆಗೆ ಕರ್ನಾಟಕದ ಎರಡು ಟೀವಿ ಚಾನೆಲ್ಗಳು ದೊಡ್ಡಮಟ್ಟದಲ್ಲಿ ಸಾಮಾಜಿಕ ಜಾಲತಾಣ ಹಾಗೂ ಬಹಿರಂಗ ಸಮಾವೇಶಗಳಲ್ಲಿ ನಿಂದನೆಗೊಳಗಾಗುತ್ತಿವೆ. ಕೋಮುವಾದಿಗಳು ಎಂದು ಕರೆಸಿಕೊಂಡಿವೆ.

ಈ ದೇಶದಲ್ಲಿ ಹಿಂದೂ ಹಾಗೂ ಮುಸಲ್ಮಾನರ ನಡುವೆ ಕಂಡೂ ಕಾಣದಂತಿರುವ ಅಸಮಾನತೆಯಿದೆ. ಬಹುತೇಕರು ಇವೆಲ್ಲಾ ಆಯಾಮಗಳನ್ನು ಮೀರಿ ನಿಂತರೂ, ಕೆಲವರು ಧಾರ್ಮಿಕ ದ್ವೇಷದಿಂದ ಹೊತ್ತಿ ಉರಿಯುತ್ತಿದ್ದಾರೆ. ಇವೆರಡು ಧರ್ಮಗಳಿಗೂ ಪ್ರಬಲವಾದ ಸಂಘಟನೆಗಳಿವೆ. ಕ್ರಿಯೆಗೆ ಪ್ರತಿಕ್ರಿಯೆಗಳಾಗುತ್ತಿವೆ. ಅಶಾಂತಿಗೆ ಅಶಾಂತಿಯೇ ಉತ್ತರವಲ್ಲ. ಶಾಂತಿಯೇ ದೇಶದ ಶಕ್ತಿ. ಹಾಗಂತ ಅದನ್ನು ಬಿಂಬಿಸುವ ಕೆಲಸವನ್ನು ಮಾಡಬೇಕಿರುವುದು ಮಾಧ್ಯಮವಲ್ಲವೇ..?

ಧರ್ಮ; ಅತ್ಯಂತ ಸೂಕ್ಷ್ಮವಾದ ವಿಚಾರವಾಗಿದೆ. ಇಲ್ಲಿ ಸಣ್ಣ ವ್ಯತ್ಯಾಸವಾದರೂ ಬೆಂಕಿ ಹೊತ್ತಿಕೊಂಡಿತ್ತೆಂದೇ ಅರ್ಥ. ಆದರೆ ಸಮಾಜದಲ್ಲಿರುವ ಅಸಹಿಷ್ಣುತೆಯನ್ನು ಗುರುತಿಸಿ, ಸಹಬಾಳ್ವೆಯ ಪಾಠಗಳನ್ನು ಹೇಳಬೇಕಾಗಿದ್ದು ಮಾಧ್ಯಮಗಳ ಬಹುದೊಡ್ಡ ಕರ್ತವ್ಯವಾಗಿದೆ. ನಾವೆಲ್ಲರೂ ಒಂದು ಎಂದು ಎಲ್ಲಾ ಸಮುದಾಯಗಳನ್ನು ಒಂದೇ ಅಳತೆಯಲ್ಲಿ ನೋಡಬೇಕಾದ ಜವಬ್ಧಾರಿಗಳಿವೆ. ಏಕೆಂದರೇ ಮಾಧ್ಯಮಗಳಿಗೆ ಬೆಂಕಿ ಹಾಕುವುದೂ ಗೊತ್ತಿದೆ, ಆರಿಸುವ ಕಲೆಯೂ ಸಿದ್ಧಿಸಿದೆ. ಹಾಗಂತ ಬೆಂಕಿ ಹಾಕುವ ಕೆಲಸವಾಗಬಾರದಲ್ಲವೇ..?.

ಕೇರಳದಲ್ಲಿ ಆರ್ ಎಸ್ ಎಸ್ ಕಾರ್ಯಕರ್ತರ ಕೊಲೆಯಾಗುತ್ತಿದೆ, ಅಲ್ಲಿ ಪಿಎಫ್ಐ ಸಂಘಟನೆ ಭಯೋತ್ಪಾಧಕ ಕೃತ್ಯಗಳಲ್ಲಿ ತೊಡಗಿವೆ, ಲವ್ ಜಿಹಾದ್ ನಡೆಸುತ್ತಿದೆ ಎಂದು ಪೇಪರ್ ತುಂಡಿಟ್ಟುಕೊಂಡು ವಾರಗಟ್ಟಳೇ ಚರ್ಚೆ ಮಾಡುವ ಟೀವಿ ಚಾನೆಲ್ಗಳು, ಅಪ್ಪಿತಪ್ಪಿಯೂ ಅಲ್ಲಿ ನಡೆದ ಕಮ್ಯುನಿಸ್ಟ್ ಕಾರ್ಯಕರ್ತರ ಹತ್ಯೆಯ ಚರ್ಚೆ ಮಾಡುವುದಿಲ್ಲ. ಕಚೇರಿಯಲ್ಲಿ ಬಾಂಬಿಟ್ಟುಕೊಂಡವರ ಬಗ್ಗೆ ಸುದ್ದಿ ಮಾಡುವುದಿಲ್ಲ. ಮಂಗಳೂರು, ಬೆಂಗಳೂರಿನಲ್ಲಿ ನಡೆದ ಹಿಂದೂಗಳ ಹತ್ಯೆಯನ್ನು ಕಂಡಿಸುವ ಭರದಲ್ಲಿ ಎಂಟೈರ್ ಮುಸಲ್ಮಾನರನ್ನು ಭಯೋತ್ಪಾದಕರು ಎಂದು ಕರೆಯುವ ಇವರು, ಇಂಥದ್ದೇ ಧಾರ್ಮಿಕ ದ್ವೇಷಕ್ಕೆ ಬಲಿಯಾದ ಮುಸಲ್ಮಾನರ ಬಗ್ಗೆ ಚರ್ಚಿಸುವುದಿಲ್ಲ. ಅವುಗಳ ಪಟ್ಟಿಯೇ ಅವರ ಕೈಲಿರುವುದಿಲ್ಲ. ಮುಖವಾಡಕ್ಕೆ ಕನ್ನಡಿ ಬೇಕೇ..?. ಇಲ್ಲಿ ಯಾವ ಸತ್ಯ ನಿಷ್ಠ ಉಳಿದುಕೊಂಡಿದೆ. ಇವರಿಗೆ ಮುಸ್ಲೀಮರ ಜೊತೆ ಹಿಂದೂ ಧರ್ಮದ ಪ್ರಗತಿಪರರು ಸೇರಿದರೂ ತಪ್ಪಾಗಿ ಕಾಣಿಸುವುದೇಕೆ..? ಮುಸಲ್ಮಾನರ ಜೊತೆ ಪ್ರಗತಿಪರರು ಕಾಣಿಸಿಕೊಳ್ಳಬಾರದೇ..? ಸಮಾಜದಿಂದ ಅವರನ್ನು ಒಂಟಿಯಾಗಿಸಬೇಕೆಂಬ ಪ್ರಯತ್ನವೇ..?. ಹಾಗಾದರೇ ದೇಶಕ್ಕೆ ಎದುರಾಗುವ ಅಪಾಯದ ಅರಿವು ಇವರಿಗಿರಬೇಕಲ್ಲವೇ..?

ನಮಗೂ ಹೇಳಲಿಕ್ಕಿದೆ. ನಮ್ಮಲ್ಲೂ ಕೆಲವರು ತಪ್ಪು ಮಾಡಿದ್ದಾರೆ. ಹಾಗಂತ ನಾವೆಲ್ಲರೂ ಅಪರಾಧಿಗಳೇ..?. ನಮ್ಮ ವಿರುದ್ಧವಾಗಿರುವ ಸಂಘಟನೆ ಈ ದೇಶಕ್ಕೆ ಬಾಂಬಿಟ್ಟಿಲ್ಲವೇ..? ಮಹಾತ್ಮನನ್ನು ಕೊಂದಿಲ್ಲವೇ..? ಅವರಿಗಿಲ್ಲದ ನಿಷೇಧ ನಮಗೇಕೆ..? ನಮ್ಮ ಧ್ವನಿಯನ್ನು ಅಡಗಿಸುವ ಪ್ರಯತ್ನವೇಕೆ ಎಂಬ ಆರ್ತನಾದದಲ್ಲಿ ತಪ್ಪೇನಿದೆ..?. ಅಮಾಯಕ ಶರತ್ ಸತ್ತಿದ್ದಕ್ಕೆ ಮನಃ ಮಿಡಿಯುವುದಾದರೇ ಅಶ್ರಫ್ ಕಲಾಯಿ ಹತ್ಯೆಗೂ ಮನಃಕರಗಬೇಕಲ್ಲವೇ..?. ಗೋಮೂತ್ರ ಕುಡಿಯುವವರನ್ನು ಉಚ್ಛಸ್ಥಾನದಲ್ಲಿ ಕೂರಿಸುವುದಾದರೇ, ಗೋಮಾಂಸ ಭಕ್ಷಕರನ್ನು ಟೀಕಿಸುವುದು ತಪ್ಪಲ್ಲವೇ..?

ಮಾಧ್ಯಮ ಪ್ರಜಾಪ್ರಭುತ್ವದ ನಾಲ್ಕನೇ ಅಂಗ. ದೇಶವನ್ನು ಸಮಾನತೆಯಿಂದ ನೋಡಬೇಕಿರುವುದು ಸಾಮಾಜಿಕ ಜವಾಬ್ಧಾರಿಯಾಗಿದೆ. ಪತ್ರಕರ್ತರು ಸಿದ್ಧಾಂತಗಳಿಗೆ ಕಟ್ಟುಬಿದ್ದವರಾದರೇ, ನಾನು ಹಿಂದೂ ಪರ, ನಾನು ಮುಸ್ಲಿಂ ಪರ, ನಾನು ಕ್ರಿಶ್ಚಿಯನ್ ಪರವೆಂದು – ಪತ್ರಿಕಾ ಧರ್ಮವನ್ನು ಆ ಆಧಾರದಲ್ಲಿ ಪಾಲಿಸುವುದಾದರೇ, ಅವರು ಪತ್ರಕರ್ತರಾಗುವುದಕ್ಕೆ ಯೋಗ್ಯರಲ್ಲ. ಬಹಿರಂಗವಾಗಿ ಆಯಾ ಸಮುದಾಯದ ಸಂಘಟನೆಯನ್ನು ಸೇರಿಕೊಳ್ಳಬೇಕು. ಅವರ ಮನಃಸ್ಥಿತಿಗೆ ತಕ್ಕಂತೆ ರಾಜಕೀಯ ಪಕ್ಷವನ್ನು ಸೇರಿಕೊಳ್ಳಲಿ. ಮಾಧ್ಯಮವನ್ನು ದುರ್ಬಳಕೆ ಮಾಡಿಕೊಂಡು ಅಮಾಯಕರ ಬದುಕಿನ ಜೊತೆ ಆಟವಾಡುವ ಅಂತಹವರ ಪತ್ರಿಕಾ ಧರ್ಮ’ ದೇಶಕ್ಕೆ ಮಾರಕ. ನಾನ್ಸೆನ್ಸ್..!
