ಅಂದು ಕಿರಣ್ ಹುಟ್ಟಿದ ದಿನ. ಅವನ ಅಮ್ಮ ಶಾಂತಮ್ಮಳಿಗಂತೂ ಸಂಭ್ರಮವೋ ಸಂಭ್ರಮ. ಎರಡು ದಿನ ಮುಂಚೆಯೇ ಮಗನಿಗಾಗಿ ಅವನಿಷ್ಟ ಪಡುವ ನೀಲಿ ಬಣ್ಣದ ಅಂಗಿಯನ್ನು, ಕಪ್ಪು ಚಡ್ಡಿಯನ್ನು, ಕಷ್ಟದಿಂದ ಬೆವರು ಹರಿಸಿ ಕೂಡಿಟ್ಟಿದ್ದ ಸ್ವಲ್ಪ ದುಡ್ಡಿನಿಂದ ತಂದಿಟ್ಟಿದ್ದಳು. ಪಕ್ಕದ ಮನೆಯ ಮಾಲಾ ಹಾಗೂ ಅವಳ ಮಗಳನ್ನು ದಿನ ಮುಂಚೆಯೇ ಹೋಗಿ ಹುಟ್ಟು ಹಬ್ಬದ ಸಿಹಿಯೂಟಕ್ಕೆ ಕರೆದು ಬಂದಿದ್ದಳು. ಕಿರಣ್ ಹುಟ್ಟಿ ಎರಡು ವರ್ಷಕ್ಕೆ ಶಾಂತಮ್ಮ ತನ್ನ ಗಂಡನನ್ನು ಕಳೆದುಕೊಂಡಿದ್ದಳು. ಆತ ಕುಡುಕನಾಗಿದ್ದ, ಪ್ರತಿ ದಿನವೂ ಕುಡಿದು ಬಂದು ಗಲಾಟೆ ಮಾಡುತ್ತಿದ್ದ. ಅವನಿದ್ದಾಗಲೂ ಶಾಂತಮ್ಮ ಸಂತೋಷದಿಂದ ಇರಲಿಲ್ಲ. ಆ ಕುಡಿತದಿಂದಾಗಿಯೇ ಆತ ಪ್ರಾಣ ಬಿಟ್ಟಿದ್ದ. ಆ ದಿನವೇ ತಾನೂ ಆತ್ಮಹತ್ಯೆ ಮಾಡಿಕೊಳ್ಳಲು ಹೊರಟ ಶಾಂತಮ್ಮ ಕಿರಣ್ ಅನಾಥನಾಗುವನು ಎಂಬ ಭಯಕ್ಕೆ ಹಿಂದೆ ಸರಿದಳು, ಮಗನಿಗಾಗಿ ಬದುಕಿದಳು. ಬಡತನದ ಕಷ್ಟದ ನಡುವೆಯೂ ಮಗನಿಗೇನೂ ಕಡಿಮೆಯಾಗದ ರೀತಿ ಸಾಕಿದ್ದಳು ಶಾಂತಮ್ಮ, ಅಪ್ಪನಿಲ್ಲ ಅನ್ನೋ ಕೊರತೆ ಇಲ್ಲದಂತೆ, ಕಷ್ಟಗಳನ್ನು ಮರೆಸಿ, ಅವನ ನಗುವಲ್ಲೇ ತನ್ನ ಖುಷಿ ಕಾಣುತ್ತಿದ್ದಳು. ಕಿರಣ್ ಓದಿನಲ್ಲಿ ಮಾತ್ರವಲ್ಲ, ಆಟೋಟಗಳಲ್ಲೂ ಮುಂದಿದ್ದ. ಚೆನ್ನಾಗಿ ಓದಿ, ಮುಂದೆ ದೊಡ್ಡ ಕೆಲಸ ಸೇರಿ ಅಮ್ಮನನ್ನು ಚೆನ್ನಾಗಿ ನೋಡಿಕೊಳ್ಳುವ ಕನಸು ಕಾಣುತ್ತಿದ್ದ. ಒಂದು ಕ್ಷಣವೂ ಅಮ್ಮನನ್ನು ಬಿಟ್ಟಿರುತ್ತಿರಲಿಲ್ಲ. ಕಿರಣನ ಹುಟ್ಟುಹಬ್ಬದ ದಿನಕ್ಕಾಗಿ ತಿಂಗಳ ಮುಂಚೆಯೇ ಕಾದಿರುತ್ತಿದ್ದಳು ಶಾಂತಮ್ಮ.
ಪ್ರತೀ ವರ್ಷದಂತೆಯೇ ಅಂದೂ ಕೂಡ ಹುಟ್ಟಿದ ಹಬ್ಬಕ್ಕೆ ಸಂತೋಷದಿಂದಲೇ ತಯಾರಿ ನಡೆಸುತ್ತಿದ್ದಳು. ಊರಿಗೇ ಘಮ ಹರಡಿಸುವ ಹಲಸಿನ ಕಾಯಿ ಹಪ್ಪಳ, ತುಪ್ಪ, ತಂಬುಳಿ, ಎರಡು ಬಗೆಯ ಪಲ್ಯಗಳು, ಸಾರು, ಬೆಂಡೆಕಾಯಿ ಸಾಂಬಾರು, ಸ್ವಲ್ಪ ಹೆಚ್ಚೇ ದ್ರಾಕ್ಷಿ-ಗೋಡಂಬಿ ಹಾಕಿದ ಶಾವಿಗೆ ಪಾಯಸ, ಮೊಸರು ಎಲ್ಲವೂ ಕಿರಣ್ ಗೆ ಇಷ್ಟವಾದ ಅಡುಗೆಗಳೇ ಅಂದು. ಅಷ್ಟರಲ್ಲಿ ಮಾಲಾ ಮತ್ತು ಮಗಳು ಪ್ರೀತಿ ಬರುತ್ತಿರುವುದನ್ನು ಕಂಡು ಅವರನ್ನು ಶರಬತ್ತು ಕೊಟ್ಟು ಉಪಚರಿಸಿದಳು. ಪ್ರೀತಿ ಕಿರಣನಿಗಿಂತ ಎರಡು ವರ್ಷ ಚಿಕ್ಕವಳು. ಅವಳಿಗೂ ಕಿರಣ್ ಅಂದ್ರೆ ತುಂಬಾ ಇಷ್ಟ. ಆಕೆಗೆ ಓದಿನಲ್ಲೂ ಕಿರಣ್ ಸಹಾಯ ಮಾಡುತ್ತಿದ್ದ. ಅವರಿಬ್ಬರು ಅಕ್ಕ-ಪಕ್ಕದ ಮನೆಯವರಷ್ಟೇ ಅಲ್ಲದೆ ಒಳ್ಳೆಯ ಸ್ನೇಹಿತರೂ ಕೂಡ.
ಅಂದು ಪ್ರೀತಿ ಮೌನವಾಗಿದ್ದಳು. ಆಕೆಗೆ ಏನೂ ಬೇಡವಾಗಿತ್ತು. ಶಾಂತಮ್ಮ ಅವರಿಬ್ಬರನ್ನು ಕೂರಿಸಿ, ಮಾಡಿದೆಲ್ಲಾ ಅಡುಗೆಗಳನ್ನು ತಂದು ಬಡಿಸಿದಳು, ಕಿರಣ್ ಮಾಡುತ್ತಿದ್ದ ತುಂಟಾಟಗಳ ಹೇಳಿ ನಗುತ್ತಿದ್ದರು ಶಾಂತಮ್ಮ..
ಇದ್ದಕ್ಕಿದ್ದಂತೆಯೇ ಸುಮ್ಮನಾಗಿ ಅಲ್ಲೇ ಪಕ್ಕದ ಮೇಜಿನ ಮೇಲಿದ್ದ ಕಿರಣನ ಫೋಟೋವನ್ನು ನೋಡಿ ಬಿಕ್ಕಿ ಬಿಕ್ಕಿ ಅತ್ತಳು. ಅಲ್ಲೇ ಮುಂದೆ ಅವಳು ತಂದಿದ್ದ ಅಂಗಿ ಚಡ್ಡಿ, ಅವನಿಷ್ಟದ ಅಡುಗೆಗಳೆಲ್ಲಾ ಇತ್ತು. ನಾಲ್ಕು ವರ್ಷಗಳ ಹಿಂದೆ ನಡೆದ ಲಾರಿ ಅಪಘಾತದಿಂದ ಕಿರಣ್ ಜೀವ ಕಳೆದುಕೊಂಡಿದ್ದ. ಆದರೂ ಅವನ ಹುಟ್ಟು ಹಬ್ಬದ ಆಚರಣೆ ಇನ್ನೂ ನಡೆಯುತ್ತಲೇ ಇತ್ತು. ತಾಯಿ ಪ್ರೀತಿ ಅಂದ್ರೆ ಇದೇ ಅಲ್ವಾ..??
ಮನೆಯಲ್ಲಿ ಅವನಿಲ್ಲಾ… ಅವನ ಫೋಟೋ.. ಅದಕ್ಕೊಂದು ಹಾರ.. ಅದರೆದುರಿಗಿದ್ದ ದೀಪ ಉರಿಯುತ್ತಿತ್ತು….
- ಶೃತಿ ಭಟ್
Like us on Facebook The New India Times
POPULAR STORIES :
500ರೂ. ಹೊಸ ನೋಟಿನಲ್ಲಿ ತಪ್ಪು: ಆರ್‍ಬಿಐ ಸ್ಪಷ್ಟನೆ
ಮಲ್ಯರಂತೆ ನನ್ನ ಸಾಲ ಮನ್ನಾ ಮಾಡಿ: ಮಂಡ್ಯ ರೈತನ ಮನವಿ.
ಬಿಬಿಸಿ ಹೊರ ತಂದಿರುವ ವಿಶ್ವದ ಪ್ರಭಾವಿ 100 ಮಹಿಳೆಯರ ಪಟ್ಟಿಯಲ್ಲಿ ಸಾಲುಮರದ ತಿಮ್ಮಕ್ಕ
ಇನ್ಮುಂದೆ ಬಿಗ್ ಬಜಾರ್‍ನಲ್ಲೂ ಮನಿ ವಿತ್‍ಡ್ರಾ ಮಾಡ್ಕೊಳ್ಳಿ..!
ಅವನಿಗೆ ಅವಳು ಇಷ್ಟವಾಗಿದ್ದು ಪ್ರತಿಭಟನೆಯಲ್ಲಿ. ಅವಳು ಇವನ ಮುಖ ನೋಡಿದ್ದು ಸೆರಗು ಸಿಕ್ಕಿಬಿದ್ದಾಗ.!
50 ಲಕ್ಷ ಮಂದಿಗೆ ಸ್ಮಾರ್ಟ್ ಫೋನ್ & 1 ವರ್ಷ ಡೇಟಾ ಉಚಿತ
ರೈಲ್ವೇ ಆಫರ್: ಇನ್ಮುಂದೆ ಆನ್‍ಲೈನ್ ಬುಕಿಂಗ್‍ಗೆ ಹೆಚ್ಚುವರಿ ಶುಲ್ಕ ಇಲ್ಲ..!