ಮನೆ ಖಾಲಿ ಮಾಡದ ಕ್ಷುಲ್ಲಕ ಕಾರಣಕ್ಕೆ ಯುವಕನೊಬ್ಬನನ್ನು ಚಾಕುವಿನಿಂದ ಇರಿದು ಕೊಲೆ ಮಾಡಿರುವ ಘಟನೆ ಕಲಬುರಗಿಯಲ್ಲಿ ನಡೆದಿದೆ.
25ವರ್ಷದ ಶಿವಕುಮಾರ್ ಎಂಬ ಯುವಕ ಮೃತ ದುರ್ದೈವಿ.
ನಿನ್ನೆ (ಭಾನುವಾರ) ರಾತ್ರಿ ಶಿವಕುಮಾರ್ ತನ್ನ ಸ್ನೇಹಿತ ಪ್ರಭಾಕರ್ ಎಂಬುವವರ ಜೊತೆ ಗಣೇಶ ನಗರದ ಬಳಿ ಹೋಗುತ್ತಿರುವಾಗ ಮನೆಯ ಮಾಲೀಕ ಅವಿನಾಶ್ ಇಬ್ಬರ ಮೇಲೂ ಚಾಕುವಿನಿಂದ ಹಲ್ಲೆ ನಡೆಸಿದ್ದಾನೆ. ಘಟನೆಯಲ್ಲಿ ಶಿವಕುಮಾರ್ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಗಾಯಗೊಂಡಿರುವ ಪ್ರಭಾಕರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಎರಡು ತಿಂಗಳಿಂದ ಮನೆ ಖಾಲಿ ಮಾಡಲು ಶಿವಕುಮಾರ್ ಗೆ ಹೇಳುತ್ತಿದ್ದರೂ ಖಾಲಿ ಮಾಡಿರಲಿಲ್ಲವಂತೆ. ಇದರಿಂದ ಸಿಟ್ಟಿಗೆದ್ದ ಅವಿನಾಶ್ ಕೊಲೆಗೆ ಮುಂದಾಗಿದ್ದಾನೆ ಎನ್ನಲಾಗಿದೆ. ಆರೋಪಿ ಪರಾರಿಯಾಗಿದ್ದಾನೆ.