ನೂತನ ಪಿಂಚಣಿ ಯೋಜನೆಯಿಂದ ಬಾಧಿತರಾಗಿರೋ ನೌಕರರ ಸಮಸ್ಯೆ ಪರಿಹರಿಸೋ ನಿಟ್ಟಿನಲ್ಲಿ ಹಳೆ ಪಿಂಚಣಿ ಯೋಜನೆಯನ್ನೇ ಜಾರಿಗೊಳಿಸ ಬೇಕು ಎಂದು ಒತ್ತಾಯಿಸಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ನೇತೃತ್ವದಲ್ಲಿ ನೌಕರರು ಇಂದು ಪ್ರತಿಭಟನೆ ನಡೆಸಿದರು.
ವಿಧಾನ ಸೌಧದ ಬಳಿ ಇರುವ ಮಹಾತ್ಮ ಗಾಂಧಿ ಪ್ರತಿಮೆ ಬಳಿ ಮಧ್ಯಾಹ್ನ 1.30ರಿಂದ 2.30ರವರೆಗೆ ಪ್ರತಿಭಟನೆ ನಡೆಸಿದರು. ಸುಮಾರು 2000 ಮಂದಿ ನೌಕರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ಕೇಂದ್ರ ಸರ್ಕಾರ 2004ರಲ್ಲಿ ಅವೈಜ್ಞಾನಿಕ ಸಿದ್ದಾಂತ ಹಾಗೂ ಅಭದ್ರತೆಯಿಂದ ಕೂಡಿದ ಎನ್.ಪಿಎಸ್ ಯೋಜನೆಯನ್ನು ಜಾರಿಗೊಳಿಸಿದ ತರುವಾಯ ಈ ಯೋಜನೆಯನ್ನು ರಾಷ್ಟ್ರದ ಪಶ್ಚಿಮ ಬಂಗಾಳ ಮತ್ತು ತ್ರಿಪುರ ರಾಜ್ಯಗಳನ್ನು ಹೊರತುಪಡಿಸಿ ಉಳಿದೆಲ್ಲಾ ರಾಜ್ಯ ಸರ್ಕಾರಗಳು ನೂತನ ಪಿಂಚಣಿ ಯೋಜನೆಯನ್ನು ಅಳವಡಿಸಿಕೊಂಡಿವೆ.
ಅದರಂತೆ ಕರ್ನಾಟಕ ಸರ್ಕಾರ 2006ರಲ್ಲಿ ಈ ಯೋಜನೆಯನ್ನು ಅಳವಂಡಿಸಿಕೊಂಡಿದೆ. ಆದರೆ, 2006ರ ನಂತರ ರಾಜ್ಯದಲ್ಲಿ ನೇಮಕಗೊಂಡ ಸರ್ಕಾರಿ ನೌಕರರಿಗೆ ಪಿಂಚಣಿ ಸೌಲಭ್ಯದಲ್ಲಿ ಹಲವು ತೊಂದರೆಗಳು ಉಂಟಾಗಿದೆ. ಅಲ್ಲದೆ ಟ್ರಸ್ಟ್ ಮ್ಯಾನೇಜ್ಮೆಂಟಿನವರು ನಿರ್ವಹಿಸುವ ಇದರ ಆರ್ಥಿಕ ಕಾರ್ಯ ನಿರ್ವಹಣೆಯಲ್ಲಿ ಯಾವುದೇ ಬದ್ಧತೆಗಳಿಲ್ಲ, ಇದೊಂದು ಅನಿಶ್ಚಿತ ಪಿಂಚಣಿ ಯೋಜನೆಯಾಗಿದೆ. ಇದರಿಂದ ರಾಜ್ಯದಲ್ಲಿ ಕರ್ತವ್ಯ ನಿರ್ವಹಿಸುತ್ತಿರೋ ಸುಮಾರು 1.80 ಲಕ್ಷ ಸರ್ಕಾರಿ ನೌಕರರು ಸೇವಾ ನಿವೃತ್ತಿ ಸಂದರ್ಭದಲ್ಲಿ ಪಿಂಚಣಿ ಮತ್ತು ಇನ್ನಿತರ ಸವಲತ್ತುಗಳಿಂದ ವಂಚಿತರಾಗಿ ಸಾಮಾಜಿಕ ಅನ್ಯಾಯಕ್ಕೆ ತುತ್ತಾಗಲಿದ್ದಾರೆ.
ಆದ್ದರಿಂದ ನೂತನ ಪಿಂಚಣಿ ಯೋಜನೆಯನ್ನು ರದ್ದುಪಡಿಸಿ, ಹಳೆ ಪಿಂಚಣಿ ಯೋಜನೆಯನ್ನೇ ಜಾರಿಗೊಳಿಸಬೇಕೆಂದು ಪ್ರತಿಭಟನಾಕಾರರು ಒತ್ತಾಯಿಸಿದ್ದಾರೆ.
ಹಳೆಯ ಪಿಂಚಣಿ ಯೋಜನೆಯನ್ನೇ ಅಳವಡಿಸಲು ಶಿಫಾರಸ್ಸು ಮಾಡುವಂತೆ ಕರ್ನಾಟ ರಾಜ್ಯ 6ನೇ ವೇತನ ಆಯೋಗಕ್ಕೆ ಪ್ರಸ್ತಾವನೆ ಸಲ್ಲಿಸಿ ಅನುಕೂಲ ಕಲ್ಪಿಸುವ ಮೂಲಕ ನೌಕರರಿಗೆ ಸಾಮಾಜಿಕ ನ್ಯಾಯP ಕಲ್ಪಿಸಿ ಕೊಡಬೇಕು ಎಂದು ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ಮನವಿ ಮಾಡಿದ್ದಾರೆ.