ಪತ್ನಿಯಿಂದ ವಿಚ್ಛೇದನ ಪಡೆಯಲು ಮುಂದಾದ ಫರ್ಹಾನ್
ಬಾಲಿವುಡ್ ನ ಮತ್ತೊಂದು ಜೋಡಿ ವಿಚ್ಛೇದನಗೊಳ್ಳುತ್ತಿದೆ. ಖ್ಯಾತ ನಟ, ನಿರ್ದೇಶಕ ಫರ್ಹಾನ್ ಅಖ್ತರ್ ಮತ್ತು ಅವರ ಪತ್ನಿ ಕೇಶ ವಿನ್ಯಾಸಕಿ ಅಧುನಾ ತಮ್ಮ 16 ವರ್ಷಗಳ ದಾಂಪತ್ಯ ಜೀವನಕ್ಕೆ ಕೊನೆ ಹಾಡಿದ್ದಾರೆ. ತಮ್ಮ ಪ್ರಚಾರಕರ ಮೂಲಕ ಹೇಳಿಕೆ ನೀಡಿರುವ ಅವರು, ತಾವಿಬ್ಬರೂ ಸೌಹಾರ್ದತೆಯಿಂದ ಮತ್ತು ಪರಸ್ಪರ ಒಪ್ಪಿಗೆ ಮೇರೆಗೆ ಈ ನಿಧರ್ಾರಕ್ಕೆ ಬಂದಿರುವುದಾಗಿ ಹೇಳಿದ್ದಾರೆ.
ಫ್ರಾನ್ಸ್ ಅಧ್ಯಕ್ಷರ ಭೇಟಿ: ದೇಶಾದ್ಯಂತ 14 ಶಂಕಿತ ಉಗ್ರರ ಬಂಧನ
ಗಣರಾಜ್ಯೋತ್ಸವದ ಮುಖ್ಯ ಅತಿಥಿಯಾಗಿ ಫ್ರಾನ್ಸ್ ಅಧ್ಯಕ್ಷ ಫ್ರಾಂಕೋಯಿಸ್ ಹೊಲಾಂಡೆಯವರು ಭಾರತಕ್ಕೆ ಆಗಮಿಸುವ ಹಿನ್ನೆಲೆಯಲ್ಲಿ ದೇಶಾದ್ಯಂತ ವಿದ್ವಂಸಕ ಕೃತ್ಯ ನಡೆಸುವ ಸಂಚು ರೂಪಿಸಲು ಮುಂದಾಗಿದ್ದ ಶಂಕಿತ ಉಗ್ರರನ್ನು ಭಯೋತ್ಪಾದಕ ನಿಗ್ರಹ ದಳದ ಅಧಿಕಾರಿಗಳು ಬಂಧಿಸಿದ್ದಾರೆ. ರಾಷ್ಟ್ರೀಯ ತನಿಖಾ ದಳ ಹಾಗೂ ಗುಪ್ತಚರ ಇಲಾಖೆಯ ಮಾರ್ಗದರ್ಶನ ಮೇರೆಗೆ ದೇಶಾದ್ಯಂತ ಕಾರ್ಯಾಚರಣೆ ನಡೆಸಿದ ಎಟಿಎಸ್ ಅಧಿಕಾರಿಗಳು 14 ಶಂಕಿತ ಉಗ್ರರನ್ನು ಬಂಧಿಸಿದ್ದಾರೆ.
ತುಮಕೂರಿನಲ್ಲಿ ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ಬಂಧಿಸಿದ ಶಂಕಿತ ಉಗ್ರ ಹುಸೇನ್ ಮುಜಾಹಿದ್ ಅವರ ತಂದೆ ಸೈಯದ್ ಹುಸೇನ್ ತುಮಕೂರಿನಲ್ಲಿ
ಉಪತಹಶೀಲ್ದಾರ್ ಆಗಿ ನಿವೃತ್ತರಾದ ಸೈಯದ್ ಹುಸೇನ್ ರವರ ವೀಡಿಯೋ..
Video :
https://www.youtube.com/watch?v=2IqKAQsU4p0
ಪಠಾಣ್ ಕೋಟ್ ಕಾರು ನಾಪತ್ತೆ, ಚಾಲಕ ಸಾವು, ದೆಹಲಿಯಲ್ಲಿ ಕಟ್ಟೆಚ್ಚರ
ಪಠಾಣ್ ಕೋಟ್ ನಿಂದ ಬಾಡಿಗೆಗೆ ಒಯ್ಯಲಾಗಿದ್ದ ಟ್ಯಾಕ್ಸಿ ನಾಪತ್ತೆಯಾಗಿದ್ದು, ಕಾರಿನ ಚಾಲಕ ನಿಗೂಢವಾಗಿ ಸಾವನ್ನಪ್ಪದ್ದಾನೆ. ಕಾರು ಕಾಣೆಯಾದ ಹಿನ್ನೆಲೆಯಲ್ಲಿ ದೆಹಲಿ ಪೊಲೀಸರು ರಾಜಧಾನಿಯಲ್ಲಿ ಕಟ್ಟೆಚ್ಚರ ಘೊಷಿಸಿದ್ದಾರೆ. ಮೂವರು ಅಪರಿಚಿತ ವ್ಯಕ್ತಿಗಳು ಪಠಾಣ್ ಕೋಟ್ ನಿಂದ ಬಿಳಿ ಆಲ್ಟೋ ಟ್ಯಾಕ್ಸಿಯನ್ನು ಬಾಡಿಗೆಗೆ ಪಡೆದಿದ್ದರು ಎನ್ನಲಾಗಿದೆ. ಪಠಾಣ್ಕೋಟ್ ವಾಯುನೆಲೆಯ ಮೇಲೆ ಉಗ್ರ ದಾಳಿಯ ಬಳಿಕ ಐಟಿಬಿಪಿ ಪೊಲೀಸ್ ಒಬ್ಬರ ಕಾರು ನಾಪತ್ತೆಯಾಗಿತ್ತು. ಇದೀಗ ಇನ್ನೊಂದು ಕಾರು ನಿಗೂಢವಾಗಿ ನಾಪತ್ತೆಯಾಗಿರುವುದು ಭದ್ರತಾ ಸಿಬಂದಿಗಳಿಗೆ ತಲೆನೋವಾಗಿ ಪರಿಣಮಿಸಿದೆ. ಗಣರಾಜ್ಯೋತ್ಸವ ಸಂದರ್ಭದಲ್ಲಿ ಉಗ್ರರು ದಾಳಿ ನಡೆಸುವ ಸಾಧ್ಯತೆಗಳಿರುವ ಹಿನ್ನಲೆಯಲ್ಲಿ ಕಾರು ನಾಪತ್ತೆಯಾಗಿರುವುದು ಇದೀಗ ಹಲವು ಸಂಶಯಗಳಿಗೆ ಎಡೆಮಾಡಿಕೊಟ್ಟಿದೆ.
ಮಲಗಿದ್ದವರ ಮೇಲೆ ಹರಿದ ಕಾರು: ಐವರಿಗೆ ಗಾಯ
ರಸ್ತೆ ಬದಿ ಪಾದಚಾರಿ ಮಾರ್ಗದಲ್ಲಿ ಮಲಗಿದ್ದವರ ಮೇಲೆ ವೇಗವಾಗಿ ಕಾರು ಹರಿದು ಐವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ದಕ್ಷಿಣ ಮುಂಬೈನ ಕ್ರಾಫರ್ಡ್ ಮಾರುಕಟ್ಟೆ ಸಮೀಪ ಕಳೆದ ಮಧ್ಯರಾತ್ರಿ ನಡೆದಿದೆ. ಮರ್ಸಿಡೀಸ್ ಬೆಂಜ್ ಕಾರು ವೇಗವಾಗಿ ಬರುತ್ತಿದ್ದಾಗ ನಿಯಂತ್ರಣ ತಪ್ಪಿ ಟೊಯೊಟಾ ಕಾರಿಗೆ ಹೋಗಿ ಡಿಕ್ಕಿ ಹೊಡೆದಿದೆ. ನಂತರ ಪಾದಚಾರಿ ಮಾರ್ಗದಲ್ಲಿ ಮಲಗಿದ್ದವರ ಮೇಲೆ ಕಾರು ಹರಿದಿದೆ. ನಾಲ್ವರು ಮಹಿಳೆಯರು ಮತ್ತು ಒಂದು ಮಗು ಗಾಯಗೊಂಡಿದೆ. ಕಾರು ಮುಂಬೈ ಮಹಾನಗರ ಪಾಲಿಕೆ ಗುತ್ತಿಗೆದಾರ ಅಮೀನ್ ಯೂಸಫ್ ಖಾನ್ ಗೆ ಸೇರಿದ್ದಾಗಿದೆ. ಚಾಲಕ ಮದ್ಯಪಾನ ಮಾಡಿರಬಹುದು ಎಂದು ಶಂಕಿಸಲಾಗಿದೆ. ಘಟನೆ ನಡೆದ ಕೂಡಲೇ ಕಾರು ಚಾಲಕ ಅಲ್ಲಿಂದ ಪರಾರಿಯಾಗಿದ್ದಾರೆ.
ಆಲ್ಪ್ರಾಕ್ಸ್ ಓವರ್ ಡೋಸ್ ನಿಂದಾಗಿ ಸುನಂದಾ ಪುಷ್ಕರ್ ಸಾವು
ದೇಶದಾದ್ಯಂತ ತೀವ್ರ ಸಂಚಲನ ಮೂಡಿಸಿದ್ದ ಸುನಂದಾ ಪುಷ್ಕರ್ ಸಾವಿನ ರಹಸ್ಯ ಬಹಿರಂಗವಾಗಿದ್ದು, ವಿಷ ಪ್ರಾಶನದಿಂದ ಪುಷ್ಕರ್ ಮೃತಪಟ್ಟಿದ್ದಾರೆ ಎಂದು ಏಮ್ಸ್ ವೈದ್ಯರು ವರದಿ ನೀಡಿದ್ದಾರೆ. ಆಲ್ರ್ಪಾಕ್ಸ್ ಓವರ್ ಡೋಸ್ ನಿಂದಾಗಿ ಸುನಂದಾ ಪುಷ್ಕರ್ ಸಾವನ್ನಪ್ಪಿದ್ದಾರೆ ಎಂದು ಏಮ್ಸ್ ವೈದ್ಯರು ಸರ್ವಾನುಮತದಿಂದ ನಿರ್ಧಾರಕ್ಕೆ ಬಂದಿದ್ದಾರೆ. ಎಫ್ ಬಿಐ ವರದಿ ಆಧಾರಿಸಿ ಈ ವರದಿಯನ್ನು ವೈದ್ಯರು ತಯಾರಿಸಿದ್ದಾರೆ.
ಪಶ್ಚಿಮ ಬಂಗಾಳದಲ್ಲಿ ಬಾಂಬ್ ಸ್ಫೋಟ, ಇಬ್ಬರು ಸಾವು
ಪಶ್ಚಿಮ ಬಂಗಾಳದ ಬೀರಭೂಮ್ ಜಿಲ್ಲೆಯಲ್ಲಿ ಕಚ್ಚಾ ಬಾಂಬುಗಳನ್ನು ತಯಾರಿಸುತ್ತಿದ್ದ ವೇಳೆ ಉಂಟಾದ ಸ್ಪೋಟದಲ್ಲಿ ಇಬ್ಬರು ವ್ಯಕ್ತಿಗಳು ಮೃತಪಟ್ಟಿದ್ದಾರೆ. ಬೀರಭೂಮ್ ಜಿಲ್ಲೆಯ ದುಬ್ರಜಪುರದಲ್ಲಿ ಸಂಭವಿಸಿದ ಸ್ಫೋಟ ಸ್ಥಳದಲ್ಲಿ ಪೊಲೀಸರು ಭಾರೀ ಪ್ರಮಾಣದ ಸ್ಫೋಟಕಗಳನ್ನು ವಶಪಡಿಸಿಕೊಂಡಿದ್ದಾರೆ. ಕಳೆದೊಂದು ವರ್ಷದಿಂದ ಪಶ್ಚಿಮ ಬಂಗಾಳವು ಭದ್ರತಾ ಪಡೆಗಳ ತೀವ್ರ ನಿಗಾಕ್ಕೆ ಒಳಪಟ್ಟಿದೆ. ಪಶ್ಚಿಮ ಬಂಗಾಳವು ಪಾಕಿಸ್ತಾನದ ಐಎಸ್ಐ ನ ಏಜೆಂಟ್ಗಳ ಸುರಕ್ಷಿತ ಅಡಗುದಾಣವಾಗಿದೆ ಎಂಬ ಶಂಕೆಯೇ ಇದಕ್ಕೆ ಕಾರಣ.
ಪ್ರಶಸ್ತಿ ವಾಪಸ್ ಪಡೆಯಲು ಒಪ್ಪಿದ ನಯನತಾರಾ ಸೆಹಗಲ್
ಸುಮಾರು 1 ತಿಂಗಳ ನಂತರ ಲೇಖಕಿ ನಯನತಾರಾ ಸೆಹಗಲ್ ಅವರು ದಾದ್ರಿ ಹತ್ಯೆ, ಸಂಶೋಧಕ ಎಂ.ಎಂ. ಕಲಬುರ್ಗಿ ಹಾಗೂ ಮಹಾರಾಷ್ಟ್ರದ ವಿಚಾರವಾದಿಗಳಾದ ನರೇಂದ್ರ ದಾಭೋಲ್ಕರ್ ಮತ್ತು ಗೋವಿಂದ ಪಾನ್ಸರೆ ಹತ್ಯೆ ಖಂಡಿಸಿ ಸರ್ಕಾರಕ್ಕೆ ವಾಪಸ್ ಮಾಡಿದ್ದ ತಮ್ಮ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನು ಹಿಂಪಡೆಯಲು ಒಪ್ಪಿಕೊಂಡಿದ್ದಾರೆ. ದೇಶದ ಮೊದಲ ಪ್ರಧಾನಿ ದಿ.ಜವಾಹರಲಾಲ್ ನೆಹರೂ ಅವರ ಸೋದರ ಸೊಸೆಯಾಗಿರುವ ಸೆಹಗಲ್, ಪ್ರಶಸ್ತಿ ವಾಪಸಿ ಆಂದೋಲನದಕ್ಕೆ ಕೈಜೋಡಿಸಿದವರಲ್ಲಿ ಮೊದಲಿಗರು. ಆದರೆ ಪ್ರಶಸ್ತಿ ವಾಪಸ್ ನೀಡಲು ಅವಕಾಶ ಇಲ್ಲ ಎಂಬ ಕಾರಣಕ್ಕೆ ಇದೀಗ ಅದನ್ನು ಹಿಂಪಡೆಯಲು ಒಪ್ಪಿದ್ದಾರೆ.
ರೋಹಿತ್ ಆತ್ಮಹತ್ಯೆ ಪತ್ರ ವಿಧಿವಿಜ್ಞಾನ ಪರೀಕ್ಷೆಗೆ ರವಾನೆ
ಹೈದರಾಬಾದ್ ಕೇಂದ್ರೀಯ ವಿಶ್ವವಿದ್ಯಾಲಯದ ಸಂಶೋಧನಾ ವಿದ್ಯಾರ್ಥಿ ರೋಹಿತ್ ವೇಮುಲಾ ಆತ್ಮಹತ್ಯೆಗೂ ಮುನ್ನ ಬರೆದಿಟ್ಟ ಪತ್ರವನ್ನು ವಿಧಿವಿಜ್ಞಾನ ಪರೀಕ್ಷೆಗೆ ಕಳುಹಿಸಿಕೊಡಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ರೋಹಿತ್ ಆತ್ಮಹತ್ಯೆ ಪ್ರಕರಣ ತೀವ್ರ ಕೋಲಾಹಲವನ್ನುಂಟು ಮಾಡಿರುವುದರ ಮಧ್ಯೆಯೇ ಅವರು ಬರೆದ ಡೆತ್ ನೋಟ್ ನಲ್ಲಿ ಒಂದು ಪೂತರ್ಿ ಪ್ಯಾರಾವನ್ನು ಹೊಡೆದುಹಾಕಿರುವುದು ಕಂಡು ಬಂದಿದ್ದು, ಈ ಕೆಲಸವನ್ನು ಮಾಡಿದವರು ಯಾರು ಎಂದು ತಜ್ಞರು ಇದೀಗ ತನಿಖೆ ಆರಂಭಿಸಿದ್ದಾರೆ. ತನಿಖೆಯ ಭಾಗವಾಗಿ ಡೆತ್ ನೋಟ್ ಅನ್ನು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿಕೊಡಲಾಗಿದೆ.
ಮೊಗದಿಶುವಿನಲ್ಲಿ ಉಗ್ರರ ಆತ್ಮಾಹುತಿ ದಾಳಿ, 20 ಸಾವು
ಸೋಮಾಲಿಯಾದ ರಾಜಧಾನಿ ಮೊಗದಿಶುವಿನಲ್ಲಿ ಇಸ್ಲಾಮಿಸ್ಟ್ ಅಲ್-ಶಬಾಬ್ ಉಗ್ರರು ದಾಳಿ ನಡೆಸಿದ್ದು ಕನಿಷ್ಠ 20 ಮಂದಿ ಮೃತರಾಗಿದ್ದಾರೆ. ಮೊಗದಿಶು ಸಮುದ್ರ ತೀರದ ಪ್ರತಿಷ್ಠಿತ ರೆಸ್ಟೋರೆಂಟ್ ಗೆ ನುಗ್ಗಿದ ಆತ್ಮಾಹುತಿ ಬಾಂಬ್ ದಾಳಿಕೋರರು ಸ್ವಯಂ ಸ್ಪೋಟಿಸಿಕೊಂಡಿದ್ದಾರೆ. ರೆಸ್ಟೋರೆಂಟ್ ಒಂದಕ್ಕೆ ಆಗಮಿಸಿದ ಬಂಧೂಕುದಾರಿ ಉಗ್ರರು ತಮ್ಮನ್ನು ಸ್ಪೋಟಿಸಿಕೊಂಡು, ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ 20 ಮಂದಿಯನ್ನು ಹತ್ಯೆಗೈದಿದ್ದಾರೆ. ಇದು ಇಸ್ಲಾಮಿಸ್ಟ್ ಶಬಾಬ್ ಉಗ್ರರ ಕೃತ್ಯ ಎಂದು ಸೋಮಾಲಿಯಾದ ಪೊಲೀಸ್ ಅಧಿಕಾರಿ ಮೊಹಮ್ಮದ್ ಅಬ್ದಿರ್ ರೆಹಮಾನ್ ತಿಳಿಸಿದ್ದಾರೆ. ಮೃತರಲ್ಲಿ ನಾಲ್ವರು ಬಂದೂಕುಧಾರಿ ಉಗ್ರರು ಕೂಡ ಸೇರಿದ್ದಾರೆ. ಒಬ್ಬನನ್ನು ಸೆರೆ ಹಿಡಿಯಲಾಗಿದೆ. ಅಲ್ ಖೈದಾ ಜತೆ ನಂಟು ಹೊಂದಿರುವ ಶೆಬಾಬ್ ಉಗ್ರ ಸಂಘಟನೆ ಈ ದಾಳಿಯ ಹೊಣೆ ಹೊತ್ತುಕೊಂಡಿದೆ.
ಮಾಧ್ಯಮಗಳ ವರದಿ ಸುಳ್ಳು ಕೊಹ್ಲಿ ಬ್ಯಾಟಿಂಗ್ ಗ್ರೇಟ್: ಮ್ಯಾಕ್ಸ್ ವೆಲ್
ಕೊಹ್ಲಿ ತಮ್ಮ ಅಬ್ಬರದ ಬ್ಯಾಟಿಂಗ್ ನಡುವೆ ಶತಕ ಗಳಿಸಲು ಸ್ಲೋ ಬ್ಯಾಟಿಂಗ್ ಮಾಡಿದರು ಎಂದು ಆಸ್ಟ್ರೇಲಿಯಾದ ಪ್ರಮುಖ ಬ್ಯಾಟ್ಸ್ ಮನ್ ಗ್ಲೆನ್ ಮ್ಯಾಕ್ಸ್ ವೆಲ್ ಹೇಳಿದ್ದಾರೆ ಎಂದು ಬಂದಿದ್ದ ವರದಿ ಬಗ್ಗೆ ಮ್ಯಾಕ್ಸ್ ವೆಲ್ ಶುಕ್ರವಾರ ಸ್ಪಷ್ಟನೆ ನೀಡಿದ್ದಾರೆ. ಮಾಧ್ಯಮ ವರದಿಗಳೆಲ್ಲ ಸುಳ್ಳು, ಕೊಹ್ಲಿ ಬ್ಯಾಟಿಂಗ್ ಚೆನ್ನಾಗಿದೆ ಎಂದಿದ್ದಾರೆ. ಸರಣಿಯಲ್ಲಿ ಯಾರು ಅತಿ ಹೆಚ್ಚು ಸಮರ್ಥವಾಗಿ ಬ್ಯಾಟಿಂಗ್ ಪ್ರದರ್ಶಿಸುತ್ತಿದ್ದಾರೆ ಎಂದು ಕೇಳಲಾಯಿತು. ಇದಕ್ಕೆ ನಾನು ಕೊಹ್ಲಿ ಅವರು ಉತ್ತಮ ಆಟವಾಡುತ್ತಿದ್ದಾರೆ ಎಂದಷ್ಟೇ ಹೇಳಿದ್ದೀನಿ, ಕೊಹ್ಲಿ ವಿರುದ್ಧ ನಾನೇಕೆ ಏನಾದರೂ ಹೇಳಲಿ, ಅವರ ಬ್ಯಾಟಿಂಗ್ ಎಲ್ಲವನ್ನು ಹೇಳುತ್ತದೆ ಎಂದು ಕ್ರಿಕೆಟ್ ಆಸ್ಟ್ರೇಲಿಯಾಗೆ ನೀಡಿದ ಸಂದರ್ಶನದಲ್ಲಿ ಸ್ಪಷ್ಟಪಡಿಸಿದ್ದಾರೆ.