ಜಪಾನ್ ಅವತ್ತಿನಮಟ್ಟಿಗೆ ಸಣ್ಣ ಕಿರಿಕಿರಿಯ ದೇಶವಾಗಿರಲಿಲ್ಲ. ಅದಕ್ಕೆ ಸಿಕ್ಕಾಪಟ್ಟೆ ಯುದ್ಧದಾಹ. ಎರಡನೇ ಮಹಾಯುದ್ದಕ್ಕೆ ಕಾರಣವಾಗಿದ್ದೇ ಜಪಾನ್. ಇನ್ನೇನು ಜಪಾನ್ ರಾಕ್ಷಸತ್ವಕ್ಕೆ ಕೊನೆಹಾಕಲು ಸಾಧ್ಯವೇ ಇಲ್ಲ ಎಂದಾಗ ಅಮೆರಿಕಾ ಜಪಾನ್‍ನ ಪ್ರಮುಖ ನಗರಗಳಾದ ಹಿರೋಶಿಮಾ, ನಾಗಸಾಕಿಯ ಮೇಲೆ ಅನಾಮತ್ತಾಗಿ ಎರಡು ಅಣುಬಾಂಬ್‍ಗಳನ್ನು ಉದುರಿಸಿತ್ತು. ಅವತ್ತಿನ ದಾಳಿಯಲ್ಲಿ ಲಕ್ಷಾಂತರ ಜನರು ಸತ್ತರು. ಹಲವು ವರ್ಷಗಳ ಕಾಲ ಸಾಯುತ್ತಲೇ ಇದ್ದರು. ರಿಪೇರಿ ಮಾಡಲಿಕ್ಕಾಗದಿರುವ ಹಿರೋಶಿಮಾವನ್ನು ಜಪಾನ್ ಕಾಲಾಂತರದಲ್ಲಿ ಕಷ್ಟಪಟ್ಟು ಕಟ್ಟಿತ್ತು. ಸ್ಮಶಾನಸದೃಶ್ಯವಾಗಿದ್ದ ಹಿರೋಶಿಮಾ-ನಾಗಸಾಕಿ ಇವತ್ತು ಚಂದದ ನಗರಗಳಾಗಿವೆ. ಆದರೆ ಅಣುವಿನ ಎಫೆಕ್ಟ್ ಮಾತ್ರ ಆ ನೆಲವನ್ನು ಹಿಂಸಿಸುತ್ತಲೇ ಇದೆ. ಬಹುಶಃ ಆ ಕಾರಣಕ್ಕೆ ಅಣ್ವಸ್ತ್ರ ಎಂದರೇ ಜಗತ್ತು ಬೆಚ್ಚಿಬೀಳುತ್ತದೆ.
ಇದೀಗ ಅಮೆರಿಕಾದ ಅಧ್ಯಕ್ಷ ಬರಾಕ್ ಒಬಾಮ ಈ ದುರ್ಘಟನೆ ಸಂಭವಿಸಿದ ಎಪ್ಪತ್ತೊಂದು ವರ್ಷಗಳ ಬಳಿಕ ಜಪಾನ್‍ಗೆ ಭೇಟಿ ನೀಡಿದ್ದಾರೆ. ಇದೇ ವೇಳೆ ಜಪಾನ್ ಅಧ್ಯಕ್ಷ ಶಿಂಜೋ ಅಬೆ ಅವರ ಜೊತೆ ಹಿರೋಶಿಮಾಕ್ಕೂ ಕಾಲಿಟ್ಟಿದ್ದಾರೆ. ತಾನು ಪ್ರತಿನಿಧಿಸುತ್ತಿರುವ ದೇಶವೇ ಬಾಂಬಿಟ್ಟ ನೆಲದಲ್ಲಿ ಓಡಾಡಿದ್ದಾರೆ. ಇಡೀ ಜಗತ್ತನ್ನು ನಡುಗಿಸಿದ ಭಯಾನಕ ದಾಳಿಯ ನಂತರ ಇಲ್ಲಿಯವರೆಗೆ ಅಮೆರಿಕಾದ ಅಧ್ಯಕ್ಷರ್ಯಾರು ಜಪಾನ್ ನೆಲವನ್ನು ತುಳಿದಿರಲಿಲ್ಲ. ಹಾಗಾಗಿ ಒಬಾಮ ಭೇಟಿ ವಿಶೇಷವೆನಿಸಿದೆ. ಕುತೂಹಲವನ್ನು ಸೃಷ್ಟಿಸಿದೆ.
ಆದರೆ ಎಲ್ಲರೂ ಭೂತಕಾಲದ ಚಿಂತನೆಯಲ್ಲಿದ್ದಾರೆ. ಅವತ್ತು ಬಾಂಬಿಟ್ಟು ಲಕ್ಷಾಂತರ ಜಪಾನಿಯರ ಮಾರಣಹೋಮಕ್ಕೆ ಕಾರಣವಾಗಿದ್ದ ಅಮೆರಿಕಾ ಇವತ್ತು ಜಪಾನ್‍ಗೆ ಕಾಲಿಡುತ್ತಿದೆ. ಸತ್ತವರ ಆತ್ಮ ಒಬಾಮರನ್ನು ಸುಮ್ಮನೇ ಬಿಡುತ್ತಾ..? ಎಂದು ಪ್ರಾಕ್ಟಿಕಲ್ ಆಚೆಗೆ ನಿಂತು ಮಾತನಾಡುತ್ತಿದ್ದಾರೆ. ಆದರೆ ಜಪಾನ್ ಭೇಟಿ ಅಮೆರಿಕಾಕ್ಕೆ ಎಷ್ಟು ಮುಖ್ಯವೋ. ಜಪಾನ್‍ಗೂ ಅಷ್ಟೇ ಮುಖ್ಯವಾಗಿದೆ. ಏಕೆಂದರೇ ಜಪಾನ್ ಆ ಕಾಲದಲ್ಲಿ ಚೀನಾ, ಉತ್ತರ ಕೊರಿಯಾ ಇಬ್ಬರಿಗೂ ಬೇಜಾನ್ ಕಾಟ ಕೊಟ್ಟಿತ್ತು. ಈಗ ಅದೇ ಚೀನಾ, ಉತ್ತರ ಕೊರಿಯಾ ಅಮೆರಿಕಾಕ್ಕೆ ಸವಾಲಾಗಿದೆ.
ಕ್ರಿಸ್ತಶಕ 918ರಿಂದ ಕ್ರಿಸ್ತಶಕ 1910ರವರೆಗೆ ಸರಿ ಸುಮಾರು ಸಾವಿರ ವರ್ಷಗಳ ಕಾಲ ಒಂದಾಗಿದ್ದ ಕೊರಿಯಾ 1910ರಲ್ಲಿ ಅಂದಿನ ವಸಾಹತುಶಾಹಿ ಜಪಾನಿನ ಕೈವಶವಾಗಿತ್ತು. ಅಲ್ಲಿಂದ ನಿರಂತರವಾಗಿ ಕೊರಿಯಾ ದೇಶವನ್ನು ಸಂಪೂರ್ಣವಾಗಿ ಸಾಂಸ್ಕೃತಿಕವಾಗಿ ಮತ್ತು ರಾಜಕೀಯವಾಗಿ ಜಪಾನಿನೊಂದಿಗೆ ವಿಲೀನಗೊಳಿಸಲು ಜಪಾನ್ ಪ್ರಯತ್ನಿಸಿತ್ತು. ಫಲವತ್ತಾದ ಕೊರಿಯಾ ದೇಶಕ್ಕೆ ಜಪಾನಿ ರೈತರನ್ನು ದೊಡ್ಡ ಸಂಖ್ಯೆಯಲ್ಲಿ ವಲಸೆ ಮಾಡಿಸಿ, ಅವರಿಗೆ ಭೂಮಿಯ ಒಡೆತನ ಕೊಡಿಸಿ, ಕೊರಿಯನ್ನರನ್ನು ಅವರ ಆಳುಗಳನ್ನಾಗಿಸಿಕೊಂಡು ಅವರ ದುಡಿಮೆಯ ಫಲವನ್ನು ಲೂಟಿ ಮಾಡತೊಡಗಿತ್ತು. ಆನಂತರ ಅವರ ಇತಿಹಾಸವನ್ನು ಜಪಾನಿ ಇತಿಹಾಸದ ಭಾಗವೇ ಎಂಬಂತೆ ತೋರಿಸಲು ಜಪಾನಿನಲ್ಲಿ ಸಿಕ್ಕ ಕಲ್ಲಿನ ಸ್ಮಾರಕವೊಂದನ್ನು ಕದ್ದುಸಾಗಿಸಿ ಕೊರಿಯಾ ಮೊದಲಿನಿಂದಲೂ ಜಪಾನಿನ ಭಾಗವಾಗಿತ್ತು ಎಂಬಂತೆ ತೋರಿಸುವ ಹುನ್ನಾರ ಮಾಡಿತ್ತು. 1945ರಲ್ಲಿ ಜಪಾನ್ ಎರಡನೇ ಮಹಾಯುದ್ಧದಲ್ಲಿ ಸೋತು ನೆಲಕ್ಕಚ್ಚಿದಾಗ ಅಮೆರಿಕಾ, ರಷ್ಯಾ ಕೊರಿಯಾವನ್ನು ಉತ್ತರ-ದಕ್ಷಿಣವೆಂಬ ಎರಡು ಭಾಗ ಮಾಡಿತ್ತು. ಹೀಗಾಗಿ ಉತ್ತರದಲ್ಲಿ ಸೋವಿಯತ್ ನೇತೃತ್ವದ ಕಮ್ಯುನಿಸ್ಟ್ ಸರ್ಕಾರ ಜಾರಿಗೆ ಬಂದರೆ, ದಕ್ಷಿಣದಲ್ಲಿ ಅಮೇರಿಕ ಸರ್ಕಾರ ಜಾರಿಗೆ ಬಂದಿತ್ತು. ಎರಡೂ ಸರ್ಕಾರಗಳು ತಾನೇ ಕೊರಿಯಾದ ನಿಜವಾದ ಪ್ರತಿನಿಧಿ ಎಂದು ವಾದಿಸುತ್ತವೆ. ಆದರೆ ಅವರೊಳಗಿನ ಬಿಕ್ಕಟ್ಟು ಬಗೆಹರಿಯದೇ ಇದ್ದಾಗ ಮಧ್ಯಸ್ಥಿಕೆ ವಹಿಸುವ ಅಮೇರಿಕ ವಿವಾದವನ್ನು ವಿಶ್ವಸಂಸ್ಥೆಗೆ ಎಳೆದು ಕೊನೆಯಲ್ಲಿ 1948ರಲ್ಲಿ ಉತ್ತರ ಕೊರಿಯಾ ಮತ್ತು ದಕ್ಷಿಣ ಕೊರಿಯಾ ಎಂಬ ಎರಡು ಪ್ರತ್ಯೇಕ ದೇಶಗಳಾಗುವಂತೆ ಮಾಡುತ್ತವೆ. ಇವತ್ತಿಗೂ ಜಪಾನಿನ ಮೇಲೆ ಉತ್ತರ ಕೊರಿಯಾಗೆ ರಿವೇಂಜಿದೆ. ದಕ್ಷಿಣ ಕೊರಿಯಾಕ್ಕೆ ಯುದ್ಧ ಬೇಕಾಗಿಲ್ಲ. ಹಾಗಾಗಿ ಅದು ತಟಸ್ಥವಾಗಿದೆ.
ಇದು ಒಂದು ಕಥೆಯಾದರೇ, ಅತ್ತ ಚೀನಿಯರನ್ನು ಕಂಡರೆ ಜಪಾನ್‍ಗೆ ಆಗುವುದೇ ಇಲ್ಲ. ಅವರು ಶಾಶ್ವತ ಶತ್ರುಗಳಾಗಿದ್ದಾರೆ. ಲೆಕ್ಕಾಚಾರದಲ್ಲಿ ಚೀನಾ ಬಲಿಷ್ಠವೆನಿಸಿದರೂ ಸಡ್ಡುಹೊಡೆಯುವ ಚಾತಿ ಜಪಾನಿಗಿದೆ. ಇದರ ಹಿಂದೆಯೂ ಮತ್ತೊಂದು ಕಥೆಯಿದೆ. 1939ರ ಜುಲೈ 7ನೇ ತಾರೀಖು ಜಪಾನ್ ಚೀನಾದ ಮೇಲೆ ದಾಳಿ ಮಾಡಿತ್ತು. ಚೀನಾ ಸೇರಿದಂತೆ ಪೂರ್ವ ಮತ್ತು ಆಗ್ನೇಯ ಏಷ್ಯಾದ ಒಂದೊಂದೇ ರಾಷ್ಟ್ರವನ್ನು ಗೆಲ್ಲುತ್ತಾ ಹೋಗುವುದು ಜಪಾನಿನ ಉದ್ದೇಶವಾಗಿತ್ತು. ಚೀನಾದ ಮೇಲಿನ ದಾಳಿಯಲ್ಲಿ ಯಶಸ್ಸು ಸಿಕ್ಕಿದ ನಂತರ ಜಪಾನ್ 1941ರ ಡಿಸೆಂಬರ್ 7ರಂದು ಅನೇಕ ರಾಷ್ಟ್ರಗಳ ಮೇಲೆ ಏಕಾಏಕಿ ದಾಳಿ ಮಾಡಿತು. ಅದೇ ದಿನ ಪರ್ಲ್‍ಹಾರ್ಬರ್ ಎಂಬಲ್ಲಿ ಅಮೇರಿಕಾದ ನೌಕಾದಳದ ಮೇಲೆ ಬಾಂಬ್ ದಾಳಿ ಮಾಡಿತು. ಇದಕ್ಕೆ ಪ್ರತ್ಯುತ್ತರವಾಗಿ ಅಮೇರಿಕಾವು ಯುದ್ಧದಲ್ಲಿ ಧುಮುಕಲು ನಿರ್ಧರಿಸಿತು. ಮುಂದಿನ ಆರು ತಿಂಗಳು ಜಪಾನಿಗೆ ಒಂದಾದ ಮೇಲೆ ಒಂದರಂತೆ ಯಶಸ್ಸು ಸಿಕ್ಕಿದರೂ, ಕೋರಲ್ ಸಮುದ್ರದ ಯುದ್ಧದಲ್ಲಿ ಅಮೆರಿಕನ್ ನೌಕಾದಳವು ಜಪಾನಿನ ಮೇಲೆ ಸೇಡು ತೀರಿಸಿಕೊಂಡದ್ದಲ್ಲದೆ, ಮಿಡ್ ವೇ ಯುದ್ಧದಲ್ಲಿಯೂ ಜಪಾನನ್ನು ಸೋಲಿಸಿತು. ಈ ಯುದ್ಧದಲ್ಲಿ ಜಪಾನಿನ ನಾಲ್ಕು ವಿಮಾನ ವಾಹಕ ಹಡಗುಗಳನ್ನು ಮುಳುಗಿಸಿ ಅಮೆರಿಕಾ, ಜಪಾನಿನ ನೌಕಸೇನೆಗೆ ದೊಡ್ಡ ನಷ್ಟವನ್ನುಂಟುಮಾಡಿತ್ತು. ಇಲ್ಲಿಂದ ಮುಂದೆ ಮಿತ್ರ ರಾಷ್ಟ್ರಗಳು ಜಪಾನಿನ ಮೇಲೆ ಪ್ರತಿ ಹಲ್ಲೆ ಮುಂದುವರಿಸಿ ಮಿಲ್ನೆ ಬೇ ಮತ್ತು ಗ್ವಾದಾಲ್ ಕನಾಲ್ ಯುದ್ಧಗಳಲ್ಲಿ ವಿಜಯ ಸಾಧಿಸಿದವು. ಅಮೇರಿಕದ ಸಬ್‍ಮರಿನ್‍ಗಳು ಜಪಾನಿನ ಸರಕು ಸಾಗಣೆಯನ್ನು ಭಗ್ನಗೊಳಿಸುವುದರಲ್ಲಿ ಯಶಸ್ವಿಯಾದವು. ಇದರಿಂದ ಜಪಾನಿನ ಆರ್ಥಿಕ ಪರಿಸ್ಥಿತಿ ಬಿಗಡಾಯಿಸತೊಡಗಿತು. ಜಪಾನಿನ ನಗರಗಳು ಮತ್ತು ಕಾರ್ಖಾನೆಗಳ ಮೇಲೆ ಮುಖ್ಯವಾಗಿ ನಡೆದ ಈ ಹಲ್ಲೆಗಳಿಂದ ಜಪಾನಿನ ಜನಜೀವನ ಅಸ್ತ್ಯವ್ಯಸ್ಥವಾಗಿ, ಯುದ್ಧ ಮುಂದುವರಿಸುವ ಶಕ್ತಿ ಕುಂಠಿತವಾಯಿತು. ಕೊನೆಗೆ 1945ರ ಆಗಸ್ಟ್ 6ರಂದು ಅಮೆರಿಕ ಜಪಾನಿನ ಹಿರೋಶಿಮಾದ ಮೇಲೆ ಪರಮಾಣು ಬಾಂಬ್ ಹಾಕಿತು. ಆಗಸ್ಟ್ 9ರಂದು ನಾಗಸಾಕಿ ಮೇಲೆ ಮತ್ತೊಂದು ಪರಮಾಣು ಬಾಂಬ್ ಹಾಕಿತ್ತು. ಪೊಲೆಂಡಿನ ಮೇಲೆ ಜರ್ಮನಿಯ ಆಕ್ರಮಣ ಹಾಗೂ ಚೀನಾ, ಅಮೆರಿಕಾ ಮತ್ತು ಬ್ರಿಟಿಷ್ ಮತ್ತು ಡಚ್ ವಸಾಹುತುಗಳ ಮೇಲೆ ಜಪಾನಿನ ಆಕ್ರಮಣ ಎರಡನೆ ಮಹಾಯುದ್ಧ ಪ್ರಾರಂಭವಾಗಲಿಕ್ಕೆ ಕಾರಣವಾಗಿತ್ತು.
ಚೀನಾ- ಜಪಾನ್ ಮೇಲೆ ಶಾಶ್ವತ ಶತೃತ್ವವನ್ನಿಟ್ಟುಕೊಂಡಿದೆ. ಆದರೆ ಅಮೆರಿಕಾ ಜಪಾನ್ ಒಂದಾಗಿದ್ದು ವ್ಯವಹಾರ ನಡೆಸುತ್ತಿದೆ. ಅತ್ತ ಜಪಾನ್‍ಗೆ ಯಾವಾಗಬೇಕಾದರೂ ತಲೆ ನೋವಾಗಬಹುದಾದ ಚೀನಾವನ್ನು ಎದುರಿಸಲು ಅಮೆರಿಕಾದ ಬೆಂಬಲ ಬೇಕು. ಇತ್ತ ಅಮೆರಿಕಾಕ್ಕೆ ಚೀನಾದ ಜೊತೆ ಆಂತರಿಕ ಸಮರವನ್ನು ಎದುರಿಸಲು, ಕೊರಿಯಾ ಜೊತೆ ಯುದ್ಧದ ಸನ್ನಿವೇಶ ನಿರ್ಮಾಣವಾದರೇ ಜಪಾನ್ ಬೆಂಬಲ ಬೇಕು. ಶತೃಗಳ ಶತ್ರು ಮಿತ್ರ ಎನ್ನುತ್ತಾರಲ್ಲ ಹಾಗೆ..!
ಇನ್ನು ಅಮೆರಿಕಾ. ಉತ್ತರ ಕೊರಿಯಾ, ಚೀನಾ ಇವೆರಡು ಕಮ್ಯುನಿಸ್ಟ್ ರಾಷ್ಟ್ರಗಳು. ಇವೆರಡು ರಾಷ್ಟ್ರಗಳ ಸಂಬಂಧ ಸೊಗಸಾಗಿದೆ. ಇತ್ತ ಉತ್ತರ ಕೊರಿಯಾ ಅಮೆರಿಕಾವನ್ನು ಯುದ್ಧಕ್ಕೆ ಆಹ್ವಾನಿಸುತ್ತಿದೆ. ಮೇಲಿಂದ ಮೇಲೆ ಅಣ್ವಸ್ತ್ರ ಪ್ರಯೋಗ ಮಾಡುತ್ತಿದೆ. ಅತ್ತ ಚೀನಾ ಅಮೆರಿಕಾ ತಲೆ ಮೇಲಿರುವ ಸೂಪರ್ ಪವರ್ ಕಿರೀಟವನ್ನು ದಕ್ಕಿಸಿಕೊಳ್ಳುವ ಇರಾದೆಯಲ್ಲಿದೆ. ಅಮೆರಿಕಾಕ್ಕೆ ಸಡ್ಡು ಹೊಡೆಯುವ ಛಾತಿ ಉತ್ತರ ಕೊರಿಯಾಕ್ಕಿದೆಯೇ ಎಂಬ ಪ್ರಶ್ನೆ ಎತ್ತುವಂತೆಯೇ ಇಲ್ಲ. ಏಕೆಂದರೇ ಅಮೆರಿಕಾ ಇರಾಕ್, ಅಫ್ಘಾನಿಸ್ತಾನದ ಮೇಲೆ ದಾಳಿ ಮಾಡಿದಷ್ಟು ಈಸಿಯಾಗಿ ಉತ್ತರ ಕೊರಿಯಾವನ್ನು ಮಣಿಸಲಾಗುವುದಿಲ್ಲ. ಹೈಡ್ರೋಜನ್‍ನಂತ ಅಸ್ತ್ರಗಳನ್ನು ರಾಶಿ ಹಾಕಿಕೊಂಡಿರುವ ಉತ್ತರ ಕೊರಿಯಾ ಅದನ್ನು ಪ್ರಯೋಗಿಸುವುದಕ್ಕೆ ಹಿಂದೆಮುಂದೆ ನೋಡುವುದಿಲ್ಲ. ಅದಕ್ಕೆ ಕಾರಣ ಕಿಮ್ ಜಾಂಗ್ ಉನ್. ಅವನಂತ ತಲೆಕೆಟ್ಟ ಸರ್ವಾಧಿಕಾರಿ ಜಗತ್ತಿನಲ್ಲೇ ಇಲ್ಲ. ಒಂದು ಹಂತದಲ್ಲಿ ಹಿಟ್ಲರ್‍ನನ್ನೇ ಮೀರಿಸುವಂತ ಕ್ರೂರ ಮನಃಸ್ಥಿತಿಯವನು ಕಿಮ್ ಜಾಂಗ್ ಉನ್.
ಈಗಾಗಲೇ ತನ್ನ ಅಣ್ವಸ್ತ್ರ ಕ್ಷಿಪಣಿಗಳ ಪ್ರಯೋಗ ನಡೆಸಿ ವಿಶ್ವದ ಕೆಂಗಣ್ಣಿಗೆ ಗುರಿಯಾಗಿರುವ ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಇದೀಗ ದಕ್ಷಿಣ ಕೊರಿಯಾ ಮೇಲೆ ದಾಳಿ ನಡೆಸಲು ಸಿದ್ಧತೆ ಆರಂಭಿಸಿರುವುದು ವಿಶ್ವ ಸಮುದಾಯದ ಆತಂಕಕ್ಕೆ ಕಾರಣವಾಗಿದೆ. ಉತ್ತರ ಕೊರಿಯಾದ ಕ್ಷಿಪಣಿ ಪರೀಕ್ಷೆಯ ನಂತರ ಎರಡೂ ದೇಶಗಳ ಮಧ್ಯೆ ಬಿಗುವಿನ ಪರಿಸ್ಥಿತಿ ನಿರ್ಮಾಣವಾಗಿದ್ದು, ಸೇನಾಪಡೆಗಳಿಗೆ ಯುದ್ಧಕ್ಕೆ ಸಿದ್ಧತೆ ನಡೆಸುವಂತೆ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ವೀಳ್ಯ ಕೊಟ್ಟಿದ್ದಾರೆ. ಕೆಲ ತಿಂಗಳ ಹಿಂದೆ ಉತ್ತರ ಕೊರಿಯಾ ಅಣ್ವಸ್ತ್ರ ಪರೀಕ್ಷೆ ಯಶಸ್ವಿಯಾಗಿ ನಡೆಸಿದ ಸುದ್ದಿ ಇಡೀ ವಿಶ್ವವನ್ನೇ ಬೆಚ್ಚುವಂತೆ ಮಾಡಿತ್ತು. ಹೈಡ್ರೋಜನ್ ಬಾಂಬ್ ಪರೀಕ್ಷೆ ಬೆನ್ನಲ್ಲೇ 5.1ರಷ್ಟು ತೀವ್ರತೆಯ ಭೂಕಂಪವೂ ಸಂಭವಿಸಿತ್ತು. ಈ ಬೆಳವಣಿಗೆ ಜಾಗತಿಕ ತಾಪಮಾನದಿಂದ ಕಂಗೆಟ್ಟಿರುವ ಅಮೆರಿಕ ಸೇರಿದಂತೆ ಅನೇಕ ದೇಶಗಳಿಗೆ ಈಗ ಅಣ್ವಸ್ತ್ರ ಪ್ರಯೋಗದ ಭೀತಿ, ಅತಂಕ ಎದುರಾಗಿದೆ. ಉತ್ತರ ಕೊರಿಯ ಪುಯೊಂಗ್‍ಯಾಂಗ್‍ನ ಪುಂಗಿಯೆರಿಯಲ್ಲಿ ಹೈಡ್ರೋಜನ್ ಬಾಂಬ್ ಪರೀಕ್ಷೆ ನಡೆಸಿತ್ತು. ಉತ್ತರ ಕೊರಿಯಾದ ಹೈಡ್ರೋಜನ್ ಬಾಂಬ್ ಪರೀಕ್ಷೆಗೆ ದಕ್ಷಿಣ ಕೊರಿಯಾ, ಜಪಾನ್, ಯುಎಸ್‍ಎ ವಿರೋಧ ವ್ಯಕ್ತಪಡಿಸಿತ್ತು. ಅಮೆರಿಕ, ಚೀನಾ, ರಷ್ಯಾ, ಜಪಾನ್, ಫ್ರಾನ್ಸ್ ದೇಶಗಳ ಪ್ರತಿನಿಧಿಗಳು ನ್ಯೂಯಾರ್ಕ್‍ನಲ್ಲಿ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ತುರ್ತು ಸಭೆಯಲ್ಲಿ ಪಾಲ್ಗೊಂಡು ಈ ಕುರಿತು ಚರ್ಚಿಸಿದ್ದರು. ಅಂತಾರಾಷ್ಟ್ರೀಯ ಪರಮಾಣು ಮೇಲ್ವೀಚಾರಣಾ ಸಮಿತಿಗೆ ಮಾಹಿತಿ ನೀಡದೆ ಪರಮಾಣು ಪರೀಕ್ಷೆ ನಡೆಸಿದ ಉತ್ತರ ಕೊರಿಯಾದ ವಿರುದ್ಧ ಅಮೆರಿಕಾ ಅಧ್ಯಕ್ಷ ಬರಾಕ್ ಒಬಾಮ ತೀವ್ರ ಅಸಮಾಧಾನವ್ಯಕ್ತಪಡಿಸಿದ್ದರು. ಸಾಮೂಹಿಕ ವಿನಾಶದ ಶಸ್ತ್ರಾಸ್ತ್ರಗಳನ್ನು ಹೊಂದುವ ಮೂಲಕ ಉತ್ತರ ಕೊರಿಯಾ ವಿಶ್ವ ಶಾಂತಿಗೆ ಬೆದರಿಕೆ ಹಾಕಿದೆ. ವಿಶ್ವ ಸಂಸ್ಥೆಯ ಭದ್ರತಾ ಮಂಡಳಿಯ ನಿರ್ಣಯವನ್ನು ಉಲ್ಲಂಘಿಸಿ, ಪರಮಾಣು ಪ್ರಯೋಗ ನಡೆಸಿರುವ ಉತ್ತರ ಕೊರಿಯಾ ಪ್ರಬಲ ಆರ್ಥಿಕ ಶಕ್ತಿಯಾಗಿ ಬೆಳೆಯಬೇಕಾಗಿತ್ತು. ಆದರೆ, ಪರಮಾಣು ಅಸ್ತ್ರ ಹೊಂದುವ ಮೂಲಕ ಮೈತ್ರಿಕೂಟ ಮತ್ತು ಅಂತಾರಾಷ್ಟ್ರೀಯ ಶಾಂತಿ ಭದ್ರತೆಗೆ ಸವಾಲು ಹಾಕಿದೆ ಎಂದು ಒಬಾಮ ಹೇಳಿದ್ದರು.
ಹೀಗಿರುವಾಗ ಕಿಮ್ ಜಾಂಗ್ ಉನ್, ಅಮೆರಿಕಾವನ್ನು ಯುದ್ಧಕ್ಕೆ ಆಹ್ವಾನಿಸಿದ್ದ. ನಾನು ಸಾಯಲು ಸಿದ್ದ ನೀವು ರೆಡೀನಾ ಎಂದು ಸವಾಲು ಹಾಕಿದ್ದ. ಒಂದು ವೇಳೆ ಅಮೆರಿಕಾ ಉತ್ತರ ಕೊರಿಯಾದ ಮೇಲೆ ಯುದ್ದಕ್ಕೆ ನಿಂತರೇ ಚೀನಾ ಉತ್ತರಕೊರಿಯಾವನ್ನು ಬೆಂಬಲಿಸುತ್ತದೆ. ಆಗ ಜಪಾನ್ ಸೇರಿದಂತೆ ಕೆಲವು ರಾಷ್ಟ್ರಗಳು ಅಮೆರಿಕಾ ಬೆಂಬಲಕ್ಕೆ ನಿಲ್ಲುತ್ತದೆ. ಇದು ಮೂರನೇ ವಲ್ರ್ಡ್‍ವಾರ್‍ಗೂ ಕಾರಣವಾದರೇ ಎಂಬ ಆತಂಕ ವಿಶ್ವ ಸಮುದಾಯಕ್ಕಿದೆ. ಅದರಲ್ಲೂ ವಿಶ್ವ ಆರ್ಥಿಕತೆಯಲ್ಲಿ ಬಲಾಢ್ಯ ಶಕ್ತಿಯಾಗಿ ನುಗ್ಗುತ್ತಿರುವ ಚೀನಾಕ್ಕೆ ಅಮೆರಿಕಾ ಕೈಲಿರುವ ದೊಡ್ಡಣ್ಣನ ಪಟ್ಟವನ್ನು ಕಸಿದುಕೊಳ್ಳುವ ಹುನ್ನಾರವಿದೆ. ಎಲ್ಲಿಸೂಪರ್ ಪವರ್ ಕೈ ತಪ್ಪುತ್ತೋ ಎಂಬ ಆತಂಕ ಅಮೆರಿಕಾಕ್ಕಿದೆ. ಚೀನಾದ ಉದ್ದೇಶ ಗೊತ್ತಿರುವುದರಿಂದಲೇ ಏಷ್ಯಾದಲ್ಲಿ ಪ್ರಾಬಲ್ಯ ಸಾಧಿಸಲು ಅಮೆರಿಕಾ ಭಾರತ ಸೇರಿದಂತೆ ಕೆಲವು ರಾಷ್ಟ್ರಗಳ ಜೊತೆ ಉತ್ತಮ ಸಂಬಂಧ ಹೊಂದುತ್ತಿದೆ. ಇವೆಲ್ಲವನ್ನೂ ಮೀರಿ ಒಂದು ವೇಳೆ ಏನಾದರೂ ಅನಾಹುತ ಘಟಿಸಿದರೇ ಆಮಂತ್ರಣವಿಲ್ಲದೆ ಅಮೆರಿಕಾಕ್ಕೆ ಜಪಾನ್ ಸಹಾಯ ಮಾಡುತ್ತದೆ. ಜಪಾನ್ ಬೆಂಬಲಕ್ಕೆ ಅಮೆರಿಕಾ ನಿಲ್ಲುತ್ತದೆ. ಹೀಗೊಂದು ಸೀಕ್ರೆಟ್ ಉದ್ದೇಶವಿರುವುದರಿಂದಲೇ ಒಬಾಮ- ಅಂಬೆ ಭೇಟಿ ಮಹತ್ವ ಪಡೆದುಕೊಂಡಿದೆ. ಮೊದಲೇ ಹೇಳಿದಂತೆ ಶತ್ರುಗಳ ಶತ್ರು- ಮಿತ್ರರು. ದಶಕಗಳ ಹಿಂದಿನ ಕರಾಳ ನೆನಪಿಗಿಂತ ಭವಿಷ್ಯದಲ್ಲಿ ಎದುರಾಗುವ ಒಂದೇ ತೆರನಾದ ಆತಂಕವನ್ನು ನಿವಾರಿಸಿಲು ಒಟ್ಟಾಗಬೇಕಾದ ಜರೂರತ್ತಿದೆ. ಹಿಂದೆ ಹಿರೋಶಿಮಾ- ನಾಗಸಾಕಿ ಮೇಲೆ ಅಮೆರಿಕಾ ಅಣ್ವಸ್ತ್ರ ದಾಳಿ ಮಾಡಲು ಕಾರಣ; ಜಪಾನ್ ಯುದ್ಧದಾಹವಲ್ಲದೇ ಬೇರೇನು ಕಾರಣವಿರಲಿಲ್ಲ. ಈಗ ಅಮೆರಿಕಾ ಜಪಾನ್ ಮುಲಾಕಾತ್‍ಗೆ ಸ್ಪಷ್ಟ ಉದ್ದೇಶವಿರುವುದರಿಂದ ಅಣು ಎಫೆಕ್ಟ್ ದೊಡ್ಡ ವಿಚಾರವೆನಿಸುತ್ತಿಲ್ಲ.
ಇದೀಗ ಹಿರೋಶಿಮಾಕ್ಕೆ ಕಾಲಿಡುತ್ತಿರುವ ಒಬಾಮಗೆ ಅವತ್ತಿನ ಹಕೀಕತ್ತಿನ ಸಂಪೂರ್ಣ ಅರಿವಿದೆ. ಹಿರೋಶಿಮಾದ ಮೇಲೆ “ಲಿಟ್ಲ್ ಬಾಯ್” ಪರಮಾಣು ಬಾಂಬನ್ನು ಬೀಳಿಸಿದ್ದು ಎನೊಲಾ ಗಾಯ್ ಮತ್ತು ಅದರ ತಂಡ. ಕೈಗಾರಿಕಾ ಮತ್ತು ಸೇನಾ ಪ್ರಾಮುಖ್ಯತೆಯ ನಗರವಾಗಿದ್ದ ಹಿರೋಶಿಮಾ, ದಕ್ಷಿಣ ಜಪಾನ್‍ನ ಸಂಪೂರ್ಣ ರಕ್ಷಣೆಯ ಅಡ್ಡೆಯಾಗಿತ್ತು. ಹಾಗಾಗಿ ಹಿರೋಶಿಮಾವನ್ನೇ ಟಾರ್ಗೆಟ್ ಮಾಡಿ ಅಮೆರಿಕಾ ಅಣುಬಾಂಬ್ ಎಸೆದಿತ್ತು. ಜಪಾನಿನ ಸೇನೆಗೆ ಸಂಬಂಧಿಸಿದಂತೆ, ಹಿರೋಶಿಮಾ ಪೂರೈಕೆ ಮತ್ತು ಸೈನ್ಯ ವ್ಯವಸ್ಥಾಪನಾ ತಂತ್ರದ ಕಿರುನೆಲೆಯಾಗಿತ್ತು. ಸಂವಹನ ಕೇಂದ್ರ, ಶೇಖರಣಾ ತಾಣ ಮತ್ತು ಜೋಡಣಾ ಪ್ರದೇಶವಾಗಿತ್ತು. ಹಲವಾರು ಬಲವರ್ಧಿತ ಕಾಂಕ್ರಿಟ್ ಕಟ್ಟಡಗಳು ಹಗುರವಾದ ರಚನೆಗಳನ್ನು ಒಳಗೊಂಡಿತ್ತು. ಮನೆಗಳನ್ನು ಮರದಿಂದ ನಿರ್ಮಿಸಲಾಗಿತ್ತು. ಅವು ಹಂಚಿನ ಛಾವಣಿಗಳನ್ನು ಹೊಂದಿದ್ದವು. ಅನೇಕ ಕೈಗಾರಿಕಾ ಕಟ್ಟಡಗಳನ್ನು ಮರದ ಚೌಕಟ್ಟುಗಳ ಸುತ್ತ ನಿರ್ಮಿಸಲಾಗಿತ್ತು. ಒಟ್ಟಾರೆಯಾಗಿ ಹೇಳುವುದಾದರೆ, ಈ ನಗರವು ಬೆಂಕಿಯ ಹಾನಿಗೆ ಸುಲಭವಾಗಿ ಈಡಾಗಬಲ್ಲ ರೀತಿಯಲ್ಲಿತ್ತು. ಎರಡನೇ ಮಹಾಯುದ್ಧದ ಮುಂಚಿನ ಅವಧಿಯಲ್ಲಿ ಹಿರೋಶಿಮಾದ ಜನಸಂಖ್ಯೆ 3.81,000ಕ್ಕೂ ಹೆಚ್ಚಿತ್ತು. ಆದರೆ ಜಪಾನ್ ಸರ್ಕಾರದಿಂದ ಆದೇಶಿಸಲ್ಪಟ್ಟ ವ್ಯವಸ್ಥಿತವಾದ ಸ್ಥಳಾಂತರಿಸುವಿಕೆಯ ಕಾರಣದಿಂದಾಗಿ, ಪರಮಾಣು ಬಾಂಬ್ ದಾಳಿಗೆ ಮುಂಚಿತವಾಗಿ ಜನಸಂಖ್ಯೆ ಕಡಿಮೆಯಾಗಿತ್ತು. ದಾಳಿಯ ಸಮಯದಲ್ಲಿ ಜನಸಂಖ್ಯೆ 340,000ದಷ್ಟಿತ್ತು.
ಆಗಸ್ಟ್ 6ರಂದು ನಡೆದ ಮೊದಲ ಪರಮಾಣು ಬಾಂಬ್ ದಾಳಿಯ ಕಾರ್ಯಾಚರಣೆಯಲ್ಲಿ ಹಿರೋಶಿಮಾ ಪ್ರಧಾನ ಗುರಿಯಾಗಿತ್ತು. ಕೊಕುರಾ ಮತ್ತು ನಾಗಸಾಕಿ ಪರ್ಯಾಯ ಗುರಿಗಳಾಗಿದ್ದವು. ಇದಕ್ಕೂ ಮುಂಚೆ ಮೋಡಗಳು ಗುರಿಯನ್ನು ಮಸುಕುಗೊಳಿಸಿದ್ದ ಕಾರಣದಿಂದಾಗಿ ಆಗಸ್ಟ್ 6ರ ದಿನವನ್ನು ಆಯ್ದುಕೊಳ್ಳಲಾಗಿತ್ತು. ಕರ್ನಲ್ ಪಾಲ್ ಟಿಬೆಟ್ಸ್ ಎಂಬಾತನ ವಿಮಾನ ಚಾಲಕತ್ವ ಮತ್ತು ಅಧಿಪತ್ಯವನ್ನು ಹೊಂದಿದ್ದ 29 ಎನೊಲಾ ಗಾಯ್ ಅನ್ನು, ಜಪಾನ್‍ನಿಂದ ಸುಮಾರು ಆರು ಗಂಟೆಗಳ ಹಾರಾಟದ ಕಾಲದಷ್ಟು ದೂರದಲ್ಲಿರುವ, ಪಶ್ಚಿಮ ಪೆಸಿಫಿಕ್‍ನಲ್ಲಿನ ಟಿನಿಯಾನ್‍ನಿಂದ ಉಡಾವಣೆ ಮಾಡಲಾಗಿತ್ತು. ಮೇಜರ್ ಚಾಲ್ರ್ಸ್ ಸ್ವೀನಿ ಎಂಬಾತನ ನಿಯಂತ್ರಣದಲ್ಲಿದ್ದ ದಿ ಗ್ರೇಟ್ ಆರ್ಟಿಸ್ಟ್ ಎಂಬ ವಿಮಾನವು ಹತ್ಯಾರಗಳನ್ನು ಹೊತ್ತೊಯ್ದಿತ್ತು. ಟಿನಿಯಾನ್ ನೆಲೆಯನ್ನು ಬಿಟ್ಟ ನಂತರ, ವಿಮಾನಗಳು ತಮ್ಮ ಮಾರ್ಗವನ್ನು ಬದಲಿಸಿಕೊಂಡು ಪ್ರತ್ಯೇಕವಾಗಿ ಇವೊ ಜಿಮಾ ಎಂಬಲ್ಲಿಗೆ ಬಂದವು. ಅಲ್ಲಿ ರಹಸ್ಯವಾಗಿ ಸಂಧಿಸಿ, ಜಪಾನ್‍ಗೆ ಸಂಬಂಧಿಸಿದ ಮುನ್ನಡೆಯ ಪಥವನ್ನು ಸಜ್ಜುಗೊಳಿಸಿಕೊಂಡವು. ಪ್ರಯಾಣದ ಅವಧಿಯಲ್ಲಿ ನೌಕಾಪಡೆ ಕ್ಯಾಪ್ಟನ್ ವಿಲಿಯಂ ಪಾರ್ಸನ್ಸ್ ಎಂಬಾತ ಬಾಂಬನ್ನು ಸಜ್ಜುಗೊಳಿಸಿದ. ಬಾಂಬ್ ದಾಳಿಗೆ ಸುಮಾರು ಒಂದು ಗಂಟೆ ಮುಂಚಿತವಾಗಿ ರೇಡಾರ್ ಜಪಾನ್‍ನ ದಕ್ಷಿಣದ ಭಾಗದ ಕಡೆಗೆ ಸಾಗುತ್ತಿರುವ ಅಮೆರಿಕಾದ ವಿಮಾನವೊಂದನ್ನು ಪತ್ತೆಹಚ್ಚಿತ್ತು. ಅನೇಕ ನಗರಗಳಲ್ಲಿ ರೇಡಿಯೋ ಪ್ರಸಾರಕಾರ್ಯ ನಿಂತಿತು. ಆ ನಗರಗಳಲ್ಲಿ ಹಿರೋಷಿಮಾ ಸೇರಿತ್ತು. ಆದರೆ ಮೂರಕ್ಕಿಂತ ಹೆಚ್ಚು ವಿಮಾನವಿಲ್ಲ. ಹೆದರುವ ಅಗತ್ಯವಿಲ್ಲ ಅಂತ ಮತ್ತೆ ರೇಡಿಯೋ ಸಂದೇಶವನ್ನು ಹರಿಬಿಡಲಾಯಿತು. ಆದರೆ ಬರುತ್ತಿರುವುದು ದೊಡ್ಡ ಮೃತ್ಯು ಎಂಬ ಸಣ್ಣ ಸೂಚನೆಯೂ ಸಿಗಲಿಲ್ಲ.
“ಲಿಟ್ಲ್ ಬಾಯ್” ಎಂದು ಕರೆಯಲ್ಪಡುತ್ತಿದ್ದ 60 ಕೆಜಿ ತೂಕದ ಯುರೇನಿಯಂ-235 ಬಂದೂಕು-ಮಾದರಿಯ ಅಣುಬಾಂಬನ್ನು ವಿಮಾನದಿಂದ ಡ್ರಾಪ್ ಮಾಡಲಾಗಿತ್ತು. ಐವತ್ತೇಳು ಸೆಕೆಂಡ್‍ನಲ್ಲಿ ಬಾಂಬ್ ಹಿರೋಶಿಮಾದ ನೆಲಕ್ಕಪ್ಪಳಿಸಿತ್ತು. ಅಲ್ಲಿನ ಜನಸಂಖ್ಯೆಯ ಸುಮಾರು 30ರಷ್ಟು ಮಂದಿ ತತ್‍ಕ್ಷಣವೇ ಸತ್ತರು. 70,000 ಮಂದಿ ಗಾಯಗೊಂಡರು. ಶೇಕಡಾ ತೊಂಭತ್ತಕ್ಕೂ ಹೆಚ್ಚು ವೈದ್ಯರು ಮತ್ತು 93ರಷ್ಟು ದಾದಿಯರು ಸತ್ತುಹೋಗಿದ್ದರು. ಹಾಗಾಗಿ ಗಾಯಗೊಂಡವರಿಗೆ ಚಿಕಿತ್ಸೆ ಕೊಡಲು ಯಾರೂ ಇರಲಿಲ್ಲ. ಸತ್ತವರಲ್ಲಿ ಬಹುಪಾಲು ಮಂದಿ ಮಹತ್ತರವಾದ ಪ್ರಮಾಣದಲ್ಲಿ ಹಾನಿಗೊಳಗಾದ ನಗರದ ಮಧ್ಯಭಾಗದ ಪ್ರದೇಶದಲ್ಲಿದ್ದರು. ಅಮೆರಿಕಾ ವಾಯು ಆಕ್ರಮಣಗಳ ಕುರಿತಾಗಿ ನಾಗರೀಕರನ್ನು ಎಚ್ಚರಿಸುವ ಕರಪತ್ರಗಳನ್ನು ಹಿರೋಶಿಮಾ ಮತ್ತು ನಾಗಸಾಕಿ ಸೇರಿದಂತೆ ಜಪಾನಿನ 35 ನಗರಗಳ ಮೇಲೆ ಮುಂಚಿತವಾಗಿ ಬೀಳಿಸಿತ್ತಾದರೂ, ಪರಮಾಣು ಬಾಂಬಿನ ಕುರಿತಾದ ಯಾವುದೇ ತಿಳುವಳಿಕೆ ಅಥವಾ ಸೂಚನೆಯನ್ನು ಅಲ್ಲಿನ ನಿವಾಸಿಗಳಿಗೆ ನೀಡಿರಲಿಲ್ಲ. 1945ರ ಅಂತ್ಯದ ವೇಳೆಗೆ, ಸುಟ್ಟಗಾಯಗಳು, ವಿಕಿರಣ ಮತ್ತು ವೈದ್ಯಕೀಯ ಸಂಪನ್ಮೂಲಗಳ ಕೊರತೆಯಿಂದ ಉಲ್ಬಣಗೊಂಡ ಸಂಬಂಧಿತ ಕಾಯಿಲೆಗಳ ಪ್ರಭಾವಗಳಿಂದ ಆದ ಒಟ್ಟು ಸಾವಿನ ಸಂಖ್ಯೆ ಅಂದಾಜು ತೊಂಭತ್ತು ಸಾವಿರದಿಂದ ಒಂದು ಲಕ್ಷದ ಅರವತ್ತಾರು ಸಾವಿರವನ್ನು ಮುಟ್ಟಿತ್ತು. ಕ್ಯಾನ್ಸರ್ ಮತ್ತು ಇತರ ದೀರ್ಘಾವಧಿ ಪರಿಣಾಮಗಳ ಕಾರಣದಿಂದಾಗಿ 1950ರ ಹೊತ್ತಿಗೆ ಎರಡು ಲಕ್ಷ ಜನರು ಸತ್ತಿದ್ದರು. ಆದರೆ ಈ ಘಟನೆಯಾಗಿ ಎಳು ದಶಕದಲ್ಲಿ ಭಾರಿ ಬದಲಾವಣೆಗಳಾಗಿವೆ. ಜಪಾನ್ ಅದ್ಭುತವಾಗಿ ಚೇತರಿಸಿಕೊಂಡಿವೆ. ಆದರೆ ವಿಕಿರಣದ ಎಫೆಕ್ಟ್ ಆ ನೆಲವನ್ನು ಸಂಪೂರ್ಣವಾಗಿ ಬಿಟ್ಟುಹೋಗಿಲ್ಲ. ಉಭಯ ರಾಷ್ಟ್ರಗಳ ನಾಯಕರ ಭೇಟಿಯ ಉದ್ದೇಶ ಬೇರೆಯದ್ದೇ ಆದರೂ, ತಮ್ಮ ದೇಶವೇ ಸ್ಮಶಾನ ಮಾಡಿಹಾಕಿದ್ದ ನೆಲಕ್ಕೆ ಒಬಾಮ ಕಾಲಿಟ್ಟಿರುವುದರಿಂದ, ಹಿರೋಶಿಮದ ಕರಾಳ ದಿನ ನೆನಪಾಗುತ್ತವೆ. ಆದರೆ ಅಸಲಿ ಸಂಗತಿ ಇದಲ್ಲವಾದ್ದರಿಂದ, ಜಪಾನಿಯರು ಒಬಾಮರನ್ನು ಗೆಟ್‍ಔಟ್ ಅಂದಿಲ್ಲ.
POPULAR STORIES :
ಕೋಮಾ ಕೋಮಾ ಕೋಮಾ… ಹೊಸ ಹುಡುಗರ ಹೊಸ ಹವಾ… ಇದೊಂಥರಾ ಬಣ್ಣಬಣ್ಣದಾ ಲೋಕ..!
ಯಾರಪ್ಪಾ ಹೇಳಿದ್ದು ಕನ್ನಡದಲ್ಲಿ ಒಳ್ಳೇ ಸಿನಿಮಾ ಬರಲ್ಲ ಅಂತ..? ಕರ್ವ ನೋಡ್ಕೊಂಡ್ ಬಂದು ಆ ಮಾತು ಹೇಳಿ ನೋಡೋಣ..!
ವೆಂಕಯ್ಯ ಕರ್ನಾಟಕಕ್ಕೆ ಸಾಕಯ್ಯ ಅಂದ್ರೆ.. `ವಚ್ಚೆ ವಸ್ತಾನು’ ಅಂತ ತೆಲುಗಿನಲ್ಲಿ ಅಂದ್ರು..!
ಪ್ರೀತಿಸಿದ ಹುಡುಗಿ ನಡು ನೀರಲ್ಲಿ ಬಿಟ್ಟಾಗ, ಈಜು ಕಲಿಸಿದ ಹುಡುಗಿ ಹೀಗೇಕೆ ಒಂಟಿ ಮಾಡಿ ಹೊರಟಳು?
ಸಿಸಿ ಟಿವಿಯಲ್ಲಿ ಸೆರೆಯಾದ ನಟ ರಿತೇಶ್ ದೇಶ್ ಮುಖ್ ಕಳ್ಳತನ..!
ವೆಸ್ಟ್ ಇಂಡೀಸ್ ಆಟಗಾರರಿಗೆ `ಸೆಕ್ಸ್’ ಅಂದ್ರೆ ಅಷ್ಟಿಷ್ಟಾನಾ..? ಕ್ರಿಸ್ ಗೇಲ್ ಬ್ಯಾಟು.. ಪತ್ರಕರ್ತೆಯ ಎರಡು ಕೈ..!!