ಮಾನ್ಯ ಶಿಕ್ಷಣ ಸಚಿವರೇ… ನಾನು ನಿಮ್ಮ ಪರಿಸ್ಥಿತಿ ಅರ್ಥ ಮಾಡ್ಕೋತೀನಿ. ಕೇವಲ ೭೦ ಅಂಕಗಳ ರಾಸಾಯನ ಶಾಸ್ತ್ರ ಪರೀಕ್ಷೆಯನ್ನು ಸರಿಯಾಗಿ ನಡೆಸೋಕೆ ಸಾಧ್ಯ ಆಗದೇ ಒದ್ದಾಡ್ತಾ ಇರೋ ನಿಮ್ಮನ್ನು ನೋಡಿದ್ರೆ ಅಯ್ಯೋ ಅನ್ಸುತ್ತೆ. ನೀವು ಮನಸಲ್ಲೇ ಅಂದುಕೊಳ್ಳಬಹುದು, ಅಲ್ಲೆಲ್ಲೋ ಪ್ರಶ್ನೆಪತ್ರಿಕೆ ಸೋರಿಕೆ ಆದ್ರೆ ನಾನಾದ್ರೂ ಏನು ಮಾಡೋಕಾಗುತ್ತೆ ಅಂತ..! ಸ್ವಾಮಿ, ನೀವೇ ಹೋಗಿ ರಾಜ್ಯದ ಅಷ್ಟೂ ಪರೀಕ್ಷಾ ಕೇಂದ್ರಗಳಿಗೆ ಹೋಗಿ ಪ್ರಶ್ನೆಪತ್ರಿಕೆ ಕೊಟ್ಟು ಬರೋಕಾಗಲ್ಲ ನಿಜ, ಆದ್ರೆ ಅದಕ್ಕೆ ಅಂತ ನೀವು ನಿಯೋಜಿಸಿರೋರ ಯೋಗ್ಯತೆ ನಿಮಗಲ್ಲದೇ ಇನ್ಯಾರಿಗೆ ಗೊತ್ತಿರಬೇಕು..? ನೀವು ಖಡಕ್ ಆಗಿ ಇದ್ದಿದ್ರೆ ನಿಮ್ಮ ಭಯದಲ್ಲಾದ್ರೂ ಇಂತಹ ಕೆಲಸಗಳು ಆಗ್ತಿರಲಿಲ್ವೇನೋ..! ಅಯ್ಯೋ ಹೆಚ್ಚಂದ್ರೆ ಇನ್ನೊಂದು ಸಲ ಪರೀಕ್ಷೆ ಮುಂದೆ ಹಾಕ್ತಾರೆ ಅನ್ನೋದು ಬಿಟ್ಟು ಬೇರೆ ಯಾವ ಭಯವೂ ಅವರಿಗೆ ಇದ್ದಂತಿಲ್ಲ..! ಒಂದು ಸಲ ಒಂದು ಪ್ರಶ್ನೆ ಪತ್ರಿಕೆ ಸೋರಿಕೆಯಾಗುತ್ತೆ, ಅದನ್ನು ಮರು ಪರೀಕ್ಷೆ ಮಾಡ್ತೀವಿ ಅಂತ ಒಂದು ಅವೈಜ್ನಾನಿಕ ದಿನಾಂಕ ನಿಗದಿ ಮಾಡ್ತೀರಿ. ಪರೀಕ್ಷೆ ಬರೆಯೋ ಮಕ್ಕಳೇ ಪಿಯು ಬೋರ್ಡ್ ಎದುರಿಗೆ ಬಂದು ಪರೀಕ್ಷೆ ಮುಂದೂಡಿ ಅಂತ ಪ್ರತಿಭಟನೆ ಮಾಡಿದ ಮೇಲೆ ನೀವೇ ಕ್ಷಮೆ ಕೇಳಿ ಪರೀಕ್ಷೆ ಮುಂದೂಡ್ತೀರಿ..! ಪರೀಕ್ಷೆ ನಡೆಯೋ ದಿನ ಬೆಳಗಿನ ಜಾವ ಅದೇ ಪರೀಕ್ಷೆಯ ಪ್ರಶ್ನೆಪತ್ರಿಕೆ ಮತ್ತೆ ಸೋರಿಕೆ ಆಗುತ್ತೆ. ಬೆಳಗ್ಗೆ ಬೇಗ ಎದ್ದು ಪರೀಕ್ಷೆಗೆ ಅಂತ ಹೊರಡೋ ಮಕ್ಕಳಿಗೆ ಮತ್ತೆ ಪರೀಕ್ಷೆ ಮುಂದೂದಲಾಗಿದೆ ಅಂತ ಶಾಕ್ ಕೊಡ್ತೀರಿ..! ಬೇರೆ ಏನೂ ಹೇಳಲ್ಲ, ಅದೇ ಪಿಯು ಮಕ್ಕಳ ಜಾಗದಲ್ಲಿ ನೀವಿದ್ದಿದ್ರೆ, ಅಥವಾ ನಿಮ್ಮ ಮಗನಿಗೋ, ಮಗಳಿಗೋ ಇದೇ ಪರಿಸ್ಥಿತಿ ಆಗಿದ್ರೆ ಸರ್ಕಾರವನ್ನು ನೀವದೆಷ್ಟು ಬಯ್ತಾ ಇದ್ರೋ, ಅಷ್ಟೇ ಬೈಗುಳ ನಿಮಗೆ ಇವತ್ತು ಸಿಗ್ತಿದೆ..! ಮುಂದೆ ನಾನು ಡಾಕ್ಟರ್ ಆಗ್ಬೇಕು, ಇಂಜಿನಿಯರ್ ಆಗ್ಬೇಕು ಅಂತ ಕನಸು ಕಟ್ಕೊಂಡು ಪರೀಕ್ಷೆ ಬರೆದ ಮಕ್ಕಳ ಭವಿಷ್ಯದ ಜೊತೆಗೆ ನಿಮ್ಮ ಪಿಯು ಬೋರ್ಡ್ ಹೀಗೆಲ್ಲಾ ಆಟ ಆಡಿದ್ರೆ ಯಾವ ವಿದ್ಯಾರ್ಥಿ ತಾನೇ ನಿಮಗೆ ಹಿಡಿಹಿಡಿ ಶಾಪ ಹಾಕಲ್ಲ ನೀವೇ ಹೇಳಿ..!
ನೀವು ಮತ್ತು ಪಿಯು ಬೋರ್ಡ್ ಮಾಡ್ತಾ ಇರೋದು ಹೇಗಿದೆ ಅಂದ್ರೆ, ಇವತ್ತಲ್ಲ ಅಂದ್ರೆ ನಾಳೆ ಮಾಡೋಣ, ನಾಳೇ ಆಗಿಲ್ಲ ಅಂದ್ರೆ ನಾಡಿದ್ದು..! ನಾಡಿದ್ದು ಮತ್ತೆ ಸೋರಿಕೆಯಾದ್ರೆ `ವೈ ಟೆನ್ಷನ್..?’ ಮತ್ತೊಂದು ದಿನ ಫಿಕ್ಸ್ ಮಾಡೋಣ ಅನ್ನೋ ತರ ಇದೆ..! ಒಂದೇ ಒಂದು ಪತ್ರಿಕೆಯ ಮರುಪರೀಕ್ಷೆ ನಡೆಸೋಕೆ ಒದ್ದಾಡ್ತಾ ಇರೋ ನಿಮ್ಮನ್ನ ನೋಡಿದ್ರೆ ಒಂದು ಕಡೆ ನಖಶಿಖಾಂತ ಕೋಪ ಬರುತ್ತೆ, ಮತ್ತೊಂದು ಕಡೆ ಅಯ್ಯೋ ಪಾಪ ಅನ್ಸುತ್ತೆ..! ನಿಮಗೆ ಇನ್ನೂ ನಿಮ್ಮ ಪಿಯು ಬೋರ್ಡ್ ಬಗ್ಗೆ ನಂಬಿಕೆ ಇದೆ ಅಂತಾದ್ರೆ ನಿಮ್ಮ `ಒಳ್ಳೆತನ’ಕ್ಕೆ ಇದಕ್ಕಿಂತ ಅದ್ಭುತ ಉದಾಹರಣೆ ಇಲ್ಲ ಬಿಡಿ. ಇನ್ನೇನು ಕೆಲದಿನಗಳಲ್ಲಿ ಇದೇ ಮಕ್ಕಳು ಅವರ ಭವಿಷ್ಯ ರೂಪಿಸೋ ಸಿಇಟಿ ಬರೀಬೇಕು, ಆದ್ರೆ ನೀವುಗಳು ಇನ್ನೂ ಪಿಯುಸಿ ಪರೀಕ್ಷೆ ಮುಗಿಸೋಕೇ ಸಾಧ್ಯ ಆಗ್ತಿಲ್ಲ..! ನೀವು ವಿರೋಧ ಪಕ್ಷದಲ್ಲಿದ್ದು, ಆಡಳಿತ ಪಕ್ಷ ಇಂತ ವೈಫಲ್ಯಕ್ಕೆ ಸಿಲುಕಿದ್ರೆ ನೀವಾದ್ರೂ ಸುಮ್ಮನೇ ಇರ್ತಿದ್ರಾ..? ನಿಜ ಹೇಳಿ..!
ನನಗೆ ಇನ್ನೂ ವಿಚಿತ್ರ ಅನಿಸೋದು ಏನು ಗೊತ್ತಾ..? ಅವತ್ತು ಪಿಯು ಬೋರ್ಡ್ ಎದುರು ಮಕ್ಕಳು ಪ್ರತಿಭಟನೆ ಮಾಡೋಕೆ ಬಂದ ದಿನ ಪಿಯು ಬೋರ್ಡ್ ಕಾಂಪೌಂಡ್ ಒಳಗೆ ವಿದ್ಯಾರ್ಥಿಗಳಿಗಿಂತ ಹೆಚ್ಚು ಪೊಲೀಸ್ ಫೋರ್ಸ್ ಹಾಕಿಸಿದ್ರಿ..! ಅದನ್ನು ನೋಡಿ ಇವರನ್ನು ವಿದ್ಯಾರ್ಥಿಗಳು ಅನ್ಕೊಂಡಿದ್ದಾರಾ, ಉಗ್ರಗಾಮಿಗಳು ಅನ್ಕೊಂಡಿದ್ದಾರ ಅಂತ ಅನುಮಾನ ಶುರು ಆಯ್ತು..! ಮಕ್ಕಳು ಪೊಲೀಸರನ್ನು ನೋಡಿ ಹೆದರಿ ಹೆದರಿ ಘೋಷಣೆ ಕೂಗೋರು. ಅವರಿಗಾದ ಅನ್ಯಾಯವನ್ನು ಧ್ವನಿಯೆತ್ತಿ ಕೇಳುವ ಅವರ ಕೂಗಿಗೆ ಕುತ್ತಿಗೆ ಹಿಚುಕೋ ನಿಮ್ಮ ಪ್ರಯತ್ನಕ್ಕೆ ನನ್ನ ಧಿಕ್ಕಾರ..! ಪಾಪ, ಪಿಯು ಬೋರ್ಡಿಗೆ ಸೆಕ್ಯೂರಿಟಿ ಬೇಕುಬಿಡಿ. ವಿದ್ಯಾರ್ಥಿಗಳ ಭವಿಷ್ಯಕ್ಕೆ ಸೆಕ್ಯೂರಿಟಿ ಯಾವನ್ ಕೇಳ್ತಾನೆ, ಅಲ್ವಾ ಸಾರ್..!
ಸಚಿವರೇ, ನಾನು ನಿಮ್ಮ ಜಿಲ್ಲೆಯವನೇ ಆಗಿ, ಒಬ್ಬ ಪತ್ರಕರ್ತನಾಗಿ ಕೆಲವು ಸಲಹೆಗಳನ್ನು ಕೊಡ್ತೀನಿ. ಏನನ್ಸುತ್ತೋ ಹೇಳಿ..!
1. ಈ ಪ್ರಶ್ನೆಪತ್ರಿಕೆ ವಿಚಾರದಲ್ಲಿ ಯಾಕೆ ನೀವು ತಂತ್ರಜ್ನಾನವನ್ನು ಅಳವಡಿಸೊಕೊಳ್ಳಬಾರದು..? ಪ್ರಶ್ನೆಪತ್ರಿಕೆ ಲಕೋಟೆ ಅಷ್ಟು ಸುಲಭವಾಗಿ ತೆಗೆದು ಅದರ ಫೋಟೋ ಹೊಡೆದುಕೊಳ್ತಾರೆ ಅಂದ್ರೆ, ಅದೆಷ್ಟು ಸಾಮಾನ್ಯ ಲಕೋಟೆ ಇರಬೇಕು..? ಯಾವುದೇ ಕಾರಣಕ್ಕೂ ಪ್ರಶ್ನೆಪತ್ರಿಕೆ ಲಕೋಟೆ ತೆಗೆದರೆ ಮತ್ತೆ ಮರು ಸೀಲ್ ಮಾಡಲಾಗದ ರೀತಿಯಲ್ಲಿ ಲಕೋಟೆ ಸಿದ್ಧಪಡಿಸಲು ಏಕೆ ಸಾಧ್ಯವಾಗಲ್ಲ..!
2. ಪ್ರತಿ ತಾಲ್ಲೂಕು ಅಥವಾ ಜಿಲ್ಲಾ ಕೇಂದ್ರಗಳಲ್ಲಿ ಪರೀಕ್ಷಾ ಮುಖ್ಯಸ್ಥರನ್ನು ನೇಮಿಸಿ, ಅವರಿಗೆ ಪ್ರಶ್ನೆಪತ್ರಿಕೆ ಇಟ್ಟಿರೋ ಜಾಗಕ್ಕೆ ಫಿಂಗರ್ ಪ್ರಿಂಟ್ ಅಥವಾ ನಂಬರ್ ಲಾಕ್ ಸಿಸ್ಟಂ ಎಂಟ್ರಿ ಅನ್ನೋ ತರ ಮಾಡಿ, ಬೆಳಗ್ಗೆ ಆಯಾ ಪರೀಕ್ಷಾ ಕೇಂದ್ರಗಳಿಗೆ ಪ್ರಶ್ನೆ ಪತ್ರಿಕೆಗಳನ್ನು ತಲುಪಿಸೋ ವ್ಯವಸ್ಥೆ ಮಾಡಬಾರದು.
3. ಪರೀಕ್ಷಾ ಕೇಂದ್ರಗಳಿಗೆ ಪ್ರಿಂಟರ್ ಗಳ ವ್ಯವಸ್ಥೆ ಮಾಡಿಸಿ, ರಾಜ್ಯದ ಎಲ್ಲಾ ಪರೀಕ್ಷಾ ಕೇಂದ್ರದ ಮುಖ್ಯಸ್ಥರಿಗೆ ಪಿಯು ಬೋರ್ಡ್ ವೆಬ್ ಸೈಟ್ ಲಾಗಿನ್ ವ್ಯವಸ್ಥೆ ಕೊಟ್ಟು, ಒಂದು ಗಂಟೆಗೆ ಮುಂಚೆ ಪ್ರಶ್ನೆಪತ್ರಿಕೆಯನ್ನು ಪಿಯು ಬೋರ್ಡ್ ವೆಬ್ ಸೈಟಿನಲ್ಲಿ ಅಪ್ ಲೋಡ್ ಮಾಡಿ ಅದನ್ನು ಪರೀಕ್ಷಾ ಕೇಂದ್ರಗಳಲ್ಲಿ ಡೌನ್ ಲೋಡ್ ಮಾಡಿಕೊಂಡು ಪ್ರಿಂಟ್ ಹಾಕುವಂತೆ ಮಾಡಬಹುದು. ಇದು ಸಾಕಷ್ಟು ವಿಶ್ವವಿದ್ಯಾನಿಲಯಗಳಲ್ಲಿ ಜಾರಿಯಲ್ಲಿರೋ ಮಾದರಿ.
4. ಇದೆಲ್ಲಕ್ಕಿಂತ ಬೆಸ್ಟ್ ಅಂದ್ರೆ, ನಿಮಗೆ ಪರೀಕ್ಷೆಗಳನ್ನು ನಡೆಸೋದು ಇಷ್ಟು ಕಷ್ಟ ಅನಿಸಿಬಿಟ್ರೆ, ಸರ್ಕಾರ ನಡೆಸುವ, ಹಾಗೆಯೇ ನಡೆಸಲು ಒದ್ದಾಡುತ್ತಿರುವ ಎಲ್ಲಾ ಪರೀಕ್ಷೆಗಳನ್ನು ಯಾವುದಾದರೂ ಖಾಸಗಿ ಸಂಸ್ಥೆಗೆ ವಹಿಸಿಕೊಟ್ಟರೆ ಹೇಗೆ..? ಅವರೇ ಪ್ರಶ್ನೆಪತ್ರಿಕೆ ತಯಾರಿಸಿ, ಪ್ರಿಂಟ್ ಮಾಡಿಸಿ, ಪರೀಕ್ಷಾ ಕೇಂದ್ರಗಳಿಗೆ ತಲುಪಿಸಿ, ಪರೀಕ್ಷೆ ಬರೆಸಿ, ಉತ್ತರ ಪತ್ರಿಕೆ ಸಂಗ್ರಹಿಸಿ, ಮೌಲ್ಯ ಮಾಪನವನ್ನೂ ಅವರೇ ಮಾಡಿಸಿ, ನಿಮಗೆ ತಂದು ಅಂಕಗಳನ್ನು ಹಸ್ತಾಂತರಿಸೋದು..! ನಿಮಗೂ ನೆಮ್ಮದಿ, ಆ ವಿದ್ಯಾರ್ಥಿಗಳಿಗೂ ನೆಮ್ಮದಿ..!
ಮಾನ್ಯ ಶಿಕ್ಷಣ ಸಚಿವರೇ, ನಿಮ್ಮ ಸರ್ಕಾರ ಮತ್ತು ಪಿಯು ಬೋರ್ಡ್ ಮಕ್ಕಳ ಭವಿಷ್ಯದ ಜೊತೆ ಆಟ ಆಡ್ತಿರೋದಂತೂ ಸುಳ್ಳಲ್ಲ. ಹಿಂದಿನ ಯಾವ ಸರ್ಕಾರಗಳೂ ಪರೀಕ್ಷೆ ನಡೆಸೋ ವಿಚಾರದಲ್ಲಿ ಇಷ್ಟು ದೊಡ್ಡ ಮಟ್ಟದ ವೈಫಲ್ಯ ಕಾಣಲಿಲ್ಲ..! ಆದ್ರೆ ಇಲ್ಲೀ ತನಕ ನಿಮಗೆ ಪಿಯು ಬೋರ್ಡ್ ವಿರುದ್ಧ ಕ್ರಮ ತೊಗಳೋ ಮನಸ್ಸಾಗಿಲ್ಲ. ಅದಕ್ಕೊಂದು ಪರ್ಯಾಯ ವ್ಯವಸ್ಥೆ ಮಾಡೋ ಯೋಚನೇನೂ ಮಾಡ್ತಿಲ್ಲ..! ನಿಮಗೆ ಕೊನೆಯಲ್ಲೊಂದು ಉಚಿತ ಸಲಹೆ. ಸುಮ್ಮನೆ ಈ ಹಿಂದೆ ಬರೆದ ರಾಸಾಯನ ಶಾಸ್ತ್ರ ಪರೀಕ್ಷೆಯನ್ನೇ ಅಧಿಕೃತ ಅಂತ ಪರಿಗಣಿಸಿ, ಅವರಿಗೆ ಬಂದಷ್ಟು ಅಂಕಗಳನ್ನು ಕೊಟ್ಟುಬಿಡಿ..! ನೀವೂ ಒದ್ದಾಡಬೇಡಿ, ಮಕ್ಕಳನ್ನೂ ಒದ್ದಾಡಿಸಬೇಡಿ. ಅವರೆಲ್ಲಾ ಸಿಇಟಿ ಕಡೆಗಾದ್ರೂ ಸ್ವಲ್ಪ ಗಮನಹರಿಸಿ ಒಳ್ಳೆಯ ರ್ಯಾಂಕಿಂಗ್ ತಗೊಳ್ಳಿ.. ಏನಂತೀರಿ..?
ನಿಮ್ಮ ಸರ್ಕಾರ ಆಡಳಿತದಲ್ಲಿರೋ ಕರ್ನಾಟಕದ ಪ್ರಜೆ
- ಕೀರ್ತಿ ಶಂಕರಘಟ್ಟ.
POPULAR STORIES :
ಮಿಸ್ಡ್ ಕಾಲ್ ಗೆಳೆಯ..! ಅವನ ಸಾವಿನ ಜೊತೆ ಇವಳು ಒಂದಾದಳು..!?
ಪ್ರಭಾಕರ್ ಸಾವಿಗೆ ಕಾರಣವಾಗಿದ್ದು ಆ ವೈದ್ಯ..!? ಅಮ್ಮನ ಕೈ ತುತ್ತು ತಿನ್ನದೆ ಮಲಗುತ್ತಿರಲಿಲ್ಲ ಈ ಜೀವ..!
ಅಂಗವೈಕಲ್ಯ ಗೆದ್ದ ಮಹಾನ್ ಸಾಧಕ..! ಅವ್ನು ಆತ್ಮಹತ್ಯೆಗೂ ಯತ್ನಿಸಿದ್ದ..!!
ಗಂಡನನ್ನು ಕೊಂದು, ಅವನ ತಲೆಯನ್ನು ಸೂಪ್ ಮಾಡಿ ಕುಡಿದಳು, `ಹೆಣ್ಣು ಒಲಿದರೇ ನಾರಿ, ಮುನಿದರೇ ಮಾರಿ..!’
`ಚಾನೆಲ್ ಸಂಪಾದಕ ಜೈಲುಪಾಲು..!?’ ಯಾರು ಆ ಸಂಪಾದಕ..?
ಈ ವೀಡಿಯೋ ನೋಡಿದ್ರೆ ನಿಮ್ಮ ತಲೆ ಕೆಟ್ಟು ಹೋಗುತ್ತೆ..! ಇದು ರುಂಡ ಮುಂಡ ಬೇರೆಯಾದ ಜೀವಂತ ಮೀನಿನ ಕಥೆ…
ಉಗ್ರರಿಗೆ ಇಸ್ರೇಲ್, ಅಮೆರಿಕಾದಿಂದ ವೆಪನ್ಸ್ ಪೂರೈಕೆ..!? ಪುಟಿನ್ ಹೇಳಿದ ಬೆಚ್ಚಿಬೀಳಿಸುವ ಸತ್ಯ..!?
ಅಪಘಾತವನ್ನು ಮೊಬೈಲ್ನಲ್ಲಿ ವಿಡಿಯೋ ಮಾಡ್ತೀರಾ..? ಅಪಲೋಡ್ ಮಾಡಿದ್ರೇ ಜೈಲ್ ಗ್ಯಾರಂಟಿ..!?
ಗಂಡನನ್ನು ಕೊಂದು, ಅವನ ತಲೆಯನ್ನು ಸೂಪ್ ಮಾಡಿ ಕುಡಿದಳು, `ಹೆಣ್ಣು ಒಲಿದರೇ ನಾರಿ, ಮುನಿದರೇ ಮಾರಿ..!’
ಸಿಯಾಚಿನ್ ಎಂಬ ಸಾವಿನ ಕಣಿವೆ..! ರಣಚಳಿಗೆ ದೇಹ ಮರಗಟ್ಟಿ ಪುಡಿಯಾಗುತ್ತದೆ..!