ಕಾನೂನು ಸಚಿವ ಟಿ.ಬಿ ಜಯಚಂದ್ರ ಅವರ ತವರು ಕ್ಷೇತ್ರ ಸಿರಾದಲ್ಲಿ ನಡೆದ ಸಾಧನ ಸಮಾವೇಶ ಯಶಸ್ವಿಯಾದ ಬೆನ್ನಲ್ಲೇ ಪತ್ರಕರ್ತರಿಗೆ ಮೊಬೈಲ್ ಭಾಗ್ಯ ಕರುಣಿಸಲಾಗಿತ್ತು.
ಸಿರಾ-ತುಮಕೂರು ರಾಷ್ಟ್ರೀಯ ಹೆದ್ದಾರಿ 48ರಲ್ಲಿರೋ ಕಂಟ್ರಿಕ್ಲಬ್‍ನಲ್ಲಿ ಡಿಸೆಂಬರ್ 31, 2017ರಂದು ಪತ್ರಕರ್ತರಿಗೆ ಔತಣಕೂಟ ಏರ್ಪಡಿಸಿ 15 ಸಾವಿರ ರೂ ಮೌಲ್ಯದ ಜಿ7 ಪ್ರೈಮ್ ಸ್ಯಾಮ್‍ಸಂಗ್ ಮೊಬೈಲ್ ಅನ್ನು ಉಡುಗೊರೆ ರೂಪದಲ್ಲಿ ನೀಡಲಾಗಿತ್ತು. ಜಯಚಂದ್ರ ಅವರ ಆಪ್ತ, ಜಿಪಂ ಮಾಜಿ ಸದಸ್ಯ ಪಿ.ಎನ್ ಕೃಷ್ಣಮೂರ್ತಿ ನೇತೃತ್ವದಲ್ಲಿ ಈ ಪತ್ರಕರ್ತರ ಕೊಳ್ಳುವಿಕೆಯ ಸಂತೆ ನಡೆದಿತ್ತು…! ಕೃಷ್ಣ ಮೂರ್ತಿ ಬೆಂಬಲಿಗರು 65 ಮಂದಿ ಫಲಾನುಭವಿ ಪತ್ರಕರ್ತರಿಗೆ ಮೊಬೈಲ್ ವಿತರಣೆ ಮಾಡಿದ್ದರು…!
ವಿಜಯವಾಣಿ ದಿನಪತ್ರಿಕೆಯಲ್ಲಿ ಜನವರಿ 1ರಂದು ಸುದ್ದಿ ಪ್ರಕಟವಾಗಿತ್ತು. ಅದಾದ ಬಳಿಕ ನಿಮ್ಮ ದಿ ನ್ಯೂ ಇಂಡಿಯನ್ ಟೈಮ್ಸ್ ‘ಚುನಾವಣೆಗೆ ಮುನ್ನವೇ ಸೇಲಾದ ಪತ್ರಕರ್ತರು’ ಎಂಬ ಶೀರ್ಷಿಕೆಯಲ್ಲಿ ಈ ಬಗ್ಗೆ ವಿವರವಾಗಿ ಲೇಖನ ಪ್ರಕಟಿಸಿತ್ತು.
ಪತ್ರಕರ್ತರೆಂದು ಹೇಳಿಕೊಂಡು ಭ್ರಷ್ಟಚಾರದಲ್ಲಿ ಪಾಲ್ಗೊಳ್ಳುವ, ಮಾರಾಟವಾಗುವ ಪತ್ರಕರ್ತರ ಬಗ್ಗೆ ದಿ ನ್ಯೂ ಇಂಡಿಯನ್ ಟೈಮ್ಸ್ ಕಟುವಾಗಿ ಟೀಕಿಸಿತ್ತು. ಇದನ್ನು ಓದುಗ ಮಿತ್ರರು ವೈರಲ್ ಮಾಡಿದ್ದರು. ನಮ್ಮ ವೆಬ್ ನ ಯುಆರ್‍ಎಲ್ ಲಿಂಕ್ ಶೇರ್ ಮಾಡಿದ್ದಕ್ಕಿಂತ ಹೆಚ್ಚಾಗಿ ಕೆಲವರು ಸುದ್ದಿಯನ್ನು ನೇರವಾಗಿ ಕಾಪಿ ಮಾಡಿ ವಾಟ್ಸಪ್ ನಲ್ಲಿ ಹರಿಬಿಟಿಟ್ಟಿದ್ದರು.
ಈ ಲೇಖನ ವೈರಲ್ ಆಗುತ್ತಿದ್ದಂತೆ ಪತ್ರಿಕಾರಂಗದಲ್ಲಿ ತೀವ್ರ ಸಂಚಲನ ಉಂಟಾಗಿದೆ. ಸೇಲಾದ ಪತ್ರಕರ್ತರ ಸ್ಟೋರಿಗೆ ಹೊಸ ಟ್ವಿಸ್ಟ್ ಸಿಕ್ಕಿದೆ. ಇದರ ಕಂಪ್ಲೀಟ್ ಡೀಟೆಲ್ಸ್ ಇಲ್ಲಿದೆ.
ವಾಟ್ಸಪ್ ನಲ್ಲಿ ‘ಚುನಾವಣೆಗೆ ಮುನ್ನವೇ ಸೇಲಾದ ಪತ್ರಕರ್ತರು’ ಎಂಬ ಬರಹ ವೈರಲ್ ಆಗುತ್ತಿದ್ದಂತೆ ಪ್ರಮುಖ ಸುದ್ದಿವಾಹಿನಿಗಳ, ದಿನಪತ್ರಿಕೆಗಳ ಮೇಲಾಧಿಕಾರಿಗಳು ತುಮಕೂರು ಜಿಲ್ಲಾ ವರದಿಗಾರರ ಅಥವಾ ಸಂಬಂಧಪಟ್ಟವರ ಬೆಂಡೆತ್ತಿ ಪತ್ರಿಕಾ ಧರ್ಮ ಮೆರೆದಿದ್ದಾರೆ. ಮೇಲಿನರು ತರಾಟೆಗೆ ತೆಗೆದುಕೊಂಡ ಬಳಿಕ ಕೆಲವರು ತೇಪೆ ಹಚ್ಚಿ ಸುದ್ದಿ ಮಾಡಿದ್ದಾರೆ ಎಂದು ತಿಳಿದು ಬಂದಿದೆ.
ಇದು ಇಲ್ಲಿಗೆ ಕೊನೆಯಾಗುವ ಲಕ್ಷಣವಿಲ್ಲ. ನಿಮಗೆ ಈಗಾಗಲೇ ಗೊತ್ತಿರುವಂತೆ, ಮೊಬೈಲ್ ಪಡೆಯಲು ತಾ ಮುಂದು ನಾ ಮುಂದು ಅಂತ ಪತ್ರಕರ್ತರು ನೂಕು ನುಗ್ಗಲು ಉಂಟುಮಾಡಿದ್ದರು. ಅದೇ ರೀತಿ ಬಣ್ಣದ ವಿಚಾರದಲ್ಲೂ ಕ್ಯಾತೆ ತೆರೆದಿದ್ದರು ಎನ್ನಲಾಗಿದೆ.
ಈ ನಡುವೆ ಕೆಲವು ಪತ್ರಕರ್ತರು ಸರತಿಯ ಬದಲು ದೂರದಲ್ಲಿ, ತಮ್ಮ ವಾಹನದ ಬಳಿಯಲ್ಲಿ ನಿಂತು ಭಾರಿ ಸಾಚರಂತೆ ಕಂಡು, ಇನ್ನೊಬ್ಬರಿಂದ ಮೊಬೈಲ್ ತರಿಸಿಕೊಂಡು ಜೇಬಿಗೆ ಇಳಿಸಿಕೊಂಡಿದ್ದೂ ಇದೆ ಎಂದು ಕೆಲವರು ಹೇಳುತ್ತಿದ್ದಾರೆ. ನಾನಾ ವಾಟ್ಸಪ್ ಗ್ರೂಪ್ ಗಳಲ್ಲಿ ಈ ಬಗ್ಗೆ ಚರ್ಚೆಯಾಗುತ್ತಿದೆ.
ಮೊಬೈಲ್ ವಾಪಾಸ್ಸಾತಿ : ಪತ್ರಕರ್ತರ ಮಾರಾಟವಾದ ಸುದ್ದಿ ಮಾಧ್ಯಮ ಸಂಸ್ಥೆಗಳ ಪ್ರಮುಖರ ಕಿವಿಗೆ ಬೀಳುತ್ತಿದ್ದಂತೆ ಕೆಲವು ಫಲಾನುಭವಿ ಪತ್ರಕರ್ತರಲ್ಲಿ ನಡುಕ ಉಂಟಾಗಿದೆ. ಪರಿಣಾಮ ಅವರು ತಣ್ಣಗೆ ಹೋಗಿ ಮೊಬೈಲ್ ವಾಪಸ್ಸು ಕೊಟ್ಟು ಬಂದಿದ್ದಾರೆ. ಸ್ಥಳಿಯ ಚಾನಲ್ ಒಂದರ ಮುಖ್ಯಸ್ಥರೇ ತಮ್ಮ ಪತ್ರಕರ್ತರಿಂದ ವಾಪಸ್ಸು ಕೊಡಿಸಿ ಸುದ್ದಿಮಾಡಿದ್ದಾರೆ.
ಸಿಕ್ಕಿದೆಯಂತೆ ಸಿಸಿ ಟಿವಿ ಫೂಟೇಜ್ : ಪತ್ರಕರ್ತರ ಸಂತೆಗೆ ಸಾಕ್ಷಿಯಾಗಿದ್ದ ಕಂಟ್ರಿ ಕ್ಲಬ್ ನಿಂದ ಸಿಸಿಟಿವಿ ಫೂಟೇಜನ್ನು ಪಾರ್ಟಿಯಲ್ಲಿ ಭಾಗವಹಿಸಿ ಮೊಬೈಲ್ ಸಿಗದೇ ‘ನೊಂದ ಪತ್ರಕರ್ತರು’ ಪಡೆದಿದ್ದಾರಂತೆ. ಆ ಪತ್ರಕರ್ತರು ಈ ಫೋಟೇಜನ್ನು ಪ್ರಮುಖ ಮಾಧ್ಯಮ ಸಂಸ್ಥೆಗಳಿಗೆ ತಲುಪಿಸುತ್ತಿದ್ದಾರೆ ಎಂದು ತಿಳಿದುಬಂದಿದ್ದು, ಈಗಾಗಲೇ ಕೆಲವು ಸಂಸ್ಥೆಗಳ ಮುಖ್ಯಸ್ಥರಿಗೆ ಆ ಫೂಟೇಜ್ ತಲುಪಿದೆ ಎನ್ನಲಾಗುತ್ತಿದೆ.
ಟಿಬಿಜೆ ಕೊಟ್ಟಿದ್ದಲ್ಲ…? : ಈ ನಡುವೆ ಸಚಿವ ಟಿ.ಬಿ ಜಯಚಂದ್ರ ಅವರು ಮೊಬೈಲ್ ಭಾಗ್ಯ ಕರುಣಿಸಿದ್ದಲ್ಲ ಎಂದು ಕೆಲವರು ವಿತಂಡವಾದ ಮಾಡುತ್ತಿದ್ದಾರೆ. ಸರಿ, ಟಿಬಿಜೆ ಕೊಡಲಿಲ್ಲ ಅಂತಾದ್ರೆ, ಪಿ.ಎನ್ ಕೃಷ್ಣಮೂರ್ತಿ ಕೊಟ್ಟಿದ್ದೇಕೆ…? ಅವರಿಗೆ ದುಡ್ಡು ಹೆಚ್ಚಾಗಿದೆಯಾ…? ಅಥವಾ ಈ ಸಲ ಜಯಚಂದ್ರ ಅವರ ಬದಲು ಕಣಕ್ಕಿಳಿಯೋದು ಅವರೇನಾ…? ಇನ್ನು ಕೆಲವು ಮಾಹಾನ್ ಜ್ಞಾನಿಗಳು ಟಿಬಿಜೆ ಕೊಟ್ಟಿದ್ದೂ ಅಲ್ಲ, ಕೃಷ್ಣಮೂರ್ತಿ ಕೊಟ್ಟಿದ್ದೂ ಅಲ್ಲ ಕೃಷ್ಣ ಮೂರ್ತಿ ಬೆಂಬಲಿಗರು ನೀಡಿದ್ದು ಅಂತಾರೆ…! ಅಲ್ಲ ಸ್ವಾಮಿ, ಅವರ ಬೆಂಬಲಿಗರಿಗೇನು ಮೊಬೈಲ್ ನೀಡೋ ಹುಚ್ಚ…? ಅಥವಾ ಅವರಿಗೆ ಏನ್ ಲಾಭ..?
ಹ್ಞಾಂ, ಇನ್ನೊಂದು ವಿಷ್ಯ ಹೇಳಲೇ ಬೇಕು, ಟಿ.ಬಿ ಜಯಚಂದ್ರ ಅವರಿಗೂ ಈ ಮೊಬೈಲ್ ಭಾಗ್ಯಕ್ಕೂ ಸಂಬಂಧವಿಲ್ಲ ಅಂತಾದ್ರೆ ಆ ಕೂಟದಲ್ಲಿ ಟಿಬಿಜೆ ಪಾಲ್ಗೊಂಡಿದ್ದೇಕೆ…?
ಸರಿ ಟಿಬಿಜೆ ಮೊಬೈಲ್ ಕೊಟ್ರೋ. ಕೃಷ್ಣಮೂರ್ತಿ ಕೊಟ್ರೋ…? ಯಾರ್ ಕೊಟ್ಟರೇನು…? ಕೊಟ್ಟಿದ್ದು, ಇಸ್ಕೊಂಡಿದ್ದು ನಿಜ ಅಂತಾದ್ರೆ..?
ಭ್ರಷ್ಟಚಾರವನ್ನು ಹೋಗಲಾಡಿಸಿ ಸ್ವಸ್ಥ ಸಮಾಜವನ್ನು ನಿರ್ಮಾಣ ಮಾಡಬೇಕಾದಲ್ಲಿ ಪತ್ರಕರ್ತರ ಪಾತ್ರ ಬಹುಮುಖ್ಯ. ಬೇರೆಯವರ ಬಗ್ಗೆ ಬೆರಳು ಮಾಡಿ ತೋರಿಸುವ ಮೊದಲು, ನಾವು ನಮ್ ಕಾಲ್ಬುಡ ನೋಡಿಕೊಳ್ಬೇಕು ಹಾಗಾಗಿ ಇದನ್ನು ಬರೆದಿದ್ದೇವೆ. ಕೆಲವೇ ಕೆಲವು ಪತ್ರಕರ್ತರಿಂದ ಇಡೀ ಪತ್ರಿಕೋದ್ಯಮಕ್ಕೆ ಕಳಂಕ ಸಹ್ಯವಲ್ಲ. ಆದ್ದರಿಂದ ಮಾಧ್ಯಮ ಸಂಸ್ಥೆಗಳ ಅನುಭವಿಗಳು, ಹಿರಿಯರು, ಮುಖ್ಯಸ್ಥರು ಪ್ರಾಮಾಣಿಕ ಪತ್ರಕರ್ತರು, ವೃತ್ತಿನಿಷ್ಠರು ತಮ್ಮ ಸಂಸ್ಥೆಯಲ್ಲಿನ ಭ್ರಷ್ಟರನ್ನು ಕಿತ್ತೆಸೆದು ತಮ್ಮ ಸಂಸ್ಥೆಯ ಹಾಗೂ ಇಡೀ ಪತ್ರಿಕೋದ್ಯಮದ ಘನತೆ, ಗೌರವವವನ್ನು ಎತ್ತಿ ಹಿಡಿಯಬೇಕು ಎಂಬ ಕಳಕಳಿ, ಆಶಯ ನಮ್ಮದು.