ದೇವರನಾಡಿಗೂ ದೆವ್ವದ ನಾಡಿಗೂ ಎಲ್ಲಿಯ ಸಂಬಂಧ..!? ನರೇಂದ್ರ ಮೋದಿ ಎಡವುತ್ತಿರುವುದೆಲ್ಲಿ..!?

Date:

 

raaa
ಕೇರಳವನ್ನು ದೇವರ ನಾಡು ಎಂದು ಕರೆಯಲಾಗುತ್ತದೆ. ಸೊಮಾಲಿಯಾವನ್ನು ದೆವ್ವದ ನಾಡು ಅರ್ಥಾತ್ ಘೋಸ್ಟ್ ಸಿಟಿ ಎಂದು ಕರೆಯಲಾಗುತ್ತದೆ. ಇವೆರಡಕ್ಕೂ ಹೋಲಿಕೆ ಮಾಡಿ ತಮಾಷೆಯಾಗಿದ್ದು ನಮ್ಮ ಪ್ರಧಾನಿ ನರೇಂದ್ರಮೋದಿ. ತಮ್ಮ ಮಾತಿನಿಂದಲೇ ಮಹಲ್ ಕಟ್ಟುತ್ತಿದ್ದ ಮೋದಿ ಈಗ, ಅದೇ ಮಾತಿನ ವರಸೆಯಿಂದ ಕಟ್ಟುತ್ತಿದ್ದ ಮಹಲನ್ನು ನೆಲಕ್ಕೆ ಕೆಡವಿಕೊಂಡಿದ್ದಾರೆ. ವಾಕ್ಚಾತುರ್ಯದಿಂದ ಜನರಿಂದ ಶಬ್ಬಾಸ್ ಎನಿಸಿಕೊಳ್ಳುತ್ತಿದ್ದ ಅವರು ಅದೇ ವಾಕ್ಚಾತುರ್ಯ ಪ್ರದರ್ಶಿಸಲು ಹೋಗಿ ಗೆಟ್ಔಟ್ ಎನಿಸಿಕೊಳ್ಳುತ್ತಿದ್ದಾರೆ. ದೇವರನಾಡು ಕೇರಳವನ್ನು ಗೋಸ್ಟ್ ಸಿಟಿ ಸೊಮಾಲಿಯಾಕ್ಕೆ ಹೋಲಿಸಿ `ಪೋ ಮೋನೆ ಮೋದಿ’ ಎನಿಸಿಕೊಂಡಿದ್ದಾರೆ. ಇದನ್ನು ಮಾತಿನ ಮೋದಿಗೆ ಮರ್ಮಘಾತ ಎಂದರೇ ತಪ್ಪಾಗುವುದಿಲ್ಲ ಬಿಡಿ. ನೇರವಾಗಿ ಹೇಳುವುದಾದರೇ ಮೋದಿ ಮಾತನ್ನೇ ಅಸ್ತ್ರ ಮಾಡಿಕೊಂಡು ಪ್ರಧಾನಿಯಾದವರು. ಭರವಸೆಗಳನ್ನು ಅವರಷ್ಟು ಸೊಗಸಾಗಿ ಕಟ್ಟಿಕೊಡುವ ಇನ್ನೊಬ್ಬ ಪ್ರಧಾನಿಯಿಲ್ಲ. ಮೋದಿಗೆ ಮಾಡಿದ ಕೆಲಸಕ್ಕಿಂತ ಅದನ್ನು ಜನರ ಮನಸ್ಸಿನಲ್ಲಿ ಸ್ಥಾಪಿಸುವ ಕಲೆ ಗೊತ್ತಿದೆ. ಆದರೆ ಅತಿಯಾದರೇ ಎಲ್ಲವೂ ವಾಂತಿಯಾಗುತ್ತೆ ಎನ್ನುವುದಕ್ಕೆ ಈಗ ದೃಷ್ಟಾಂತವಾಗಿ ನಿಂತಿದ್ದಾರೆ.

ಅದನ್ನು ಟ್ವಿಟ್ಟರ್ ಸಮರ ಎನ್ನುವುದಕ್ಕಿಂತ, ಜನರ ಮನಸ್ಸಿನಲ್ಲಿ ಮೋದಿಗಿರುವ ನಿಜವಾದ ಸ್ಥಾನಮಾನವನ್ನು ಸೂಚಿಸುತ್ತದೆ. ಪೋ ಮೋನೆ ಮೊದಿ ಎಂಬುದು ಮಲಯಾಳಂ ಶಬ್ಧ. `ಹೋಗು ಮಗನೇ ಮೋದಿ’ ಅದರ ಕನ್ನಡದ ಭಾವಾರ್ಥ. ಜನಪ್ರಿಯ ಎನ್ನಲಾಗುತ್ತಿದ್ದ ಪ್ರಧಾನಿಯೊಬ್ಬರನ್ನು ಜನಸಾಮಾನ್ಯರು ಮಗನೇ ಎನ್ನುವಷ್ಟರ ಮಟ್ಟಿಗೆ ರೊಚ್ಚಿಗೆದ್ದಿದ್ದಾರೆಂದರೇ ಅಚ್ಛೇದಿನ್ ಕಥೆಯೇನಾಗುತ್ತಿದೆ ಎಂಬುದು ಸ್ಪಷ್ಟವಾಗುತ್ತದೆ. ಅಷ್ಟಕ್ಕೂ ಒಬ್ಬ ಪ್ರಧಾನಿಯಾಗಿ ಮೋದಿಗೆ ಸುಭಿಕ್ಷ ಕೇರಳಕ್ಕೂ, ಬರಪೀಡಿತ, ಉಗ್ರರ ಹಾವಳಿಯಿಂದ ಕಂಗೆಟ್ಟು ಕನಲಿಕುಂತಿರುವ ಸೊಮಾಲಿಯಾಕ್ಕೂ ಇರುವ ವ್ಯತ್ಯಾಸ ಗೊತ್ತಿಲ್ಲ. ಇತಿಹಾಸ ಕೇರಳವನ್ನು ದೇವರನಾಡು ಎಂದು ಕರೆಯುತ್ತದೆ. ಜಗತ್ತು ಸೊಮಾಲಿಯಾವನ್ನು ಗೋಸ್ಟ್ ಸಿಟಿ ಅರ್ಥಾತ್ ದೆವ್ವದ ನಾಡೆಂದು ಕರೆಯುತ್ತದೆ. ಇವೆರಡಕ್ಕೂ ಹೋಲಿಕೆ ಮಾಡಿ ಇಂಗು ತಿಂದವರಂತಾಗಿರುವುದು ನರೇಂದ್ರ ದಾಮೋದರ ದಾಸ್ ಮೋದಿ.

ಕೇರಳ ಪ್ರವಾಸೋಧ್ಯಮವಾಗಿ, ಶೈಕ್ಷಣಿಕವಾಗಿ, ರಾಜಕೀಯವಾಗಿ, ವೈಚಾರಿಕವಾಗಿ ಇಡೀ ದೇಶಕ್ಕೆ ಮಾದರಿಯಾಗಿರುವ ರಾಜ್ಯ. ಅಲ್ಲಿ ಬುದ್ದಿಜೀವಿಗಳ ಸಂಖ್ಯೆ ಹೆಚ್ಚಿದೆ. ಎಡಪಂಥೀಯವಾದ ಹೆಚ್ಚಾಗಿ ಕೇಳಿಬರುತ್ತದೆ. ಸುಶಿಕ್ಷಿತರು ರಾಜಕೀಯವಾಗಿ ಸರ್ವಧರ್ಮಪ್ರಿಯರಿಗೆ ಮಣಿ ಹಾಕಿದ್ದಾರೆ. ಸಂಘ ಅಡಿಗಲ್ಲಾಗಿರುವವರನ್ನು ಹತ್ತಿರಕ್ಕೂ ಬಿಟ್ಟುಕೊಂಡಿಲ್ಲ. ಅಲ್ಲಿ ಕಾಂಗ್ರೆಸ್ ಒಕ್ಕೂಟದ ಕೈ ಮೇಲಾಗುತ್ತದೆ. ಪ್ಲಾಸ್ಟಿಕ್ ನಿಷೇಧ, ಮಧ್ಯ ನಿಷೇಧದಂತಹ ನ್ಯಾಯಸಮ್ಮತ ನಿರ್ಧಾರಗಳನ್ನು ಅಲ್ಲಿನ ಜನರು ಬೆಂಬಲಿಸಿದ್ದಾರೆ. ಒಟ್ಟಾರೆಯಾಗಿ ಕೆರಳ ಶುದ್ಧ ದೇವರನಾಡು. ಅಲ್ಲಿನ ಜನರು ಒಳ್ಳೆಯದನ್ನೇ ಯೋಚಿಸುತ್ತಾರೆ. ಒಳ್ಳೆಯದನ್ನೇ ವಿಶ್ಲೇಷಿಸುತ್ತಾರೆ. ಈಗ ಅಲ್ಲಿ ಚುನಾವಣ ಸಮಯ. ಯಥಾಪ್ರಕಾರ ಕೈ ಒಕ್ಕೂಟಗಳ ಕಡೆ ಜನರು ವಾಲಿದ್ದಾರೆ. ಅದನ್ನು ಕೊಂಚಮಟ್ಟಿಗಾದರೂ ಅಲ್ಲೋಲಕಲ್ಲೋಲಗೊಳಿಸಲು ಮಿಕ್ಕವರು ಪ್ರಯತ್ನಿಸುತ್ತಿದ್ದಾರೆ. ಅವರಲ್ಲಿ ನರೇಂದ್ರಮೋದಿ ಕೂಡ ಒಬ್ಬರು.

ನಮ್ಮ ದೇಶದಲ್ಲಿ ಮೋದಿ ಮ್ಯಾಜಿಕ್ ಬಹುಶಃ ಶೇಕಡಾ ಐವತ್ತು ಭಾಗಗಳಲ್ಲಿ ನಡೆಯುತ್ತದೆ. ಉಳಿದ ಐವತ್ತು ಭಾಗಗಳಲ್ಲಿ ಮೋದಿ ಅದೇನೇ ಲಾಗಾಪಲ್ಟಿ ಹೊಡೆದರೂ ಹತ್ತುಭಾಗಗಳಲ್ಲಿ ಕಷ್ಟಪಟ್ಟು ಅಲೆ ಸೃಷ್ಟಿಸಬಹುದು. ಆದರೆ ಮಿಕ್ಕ ನಲವತ್ತು ಭಾಗಗಳಲ್ಲಿ ಮೋದಿ ಪರಿಸ್ಥಿತಿ- `ಪೋ ಮೋನೆ ಮೋದಿ’ ಅಷ್ಟೆ..! ಅವುಗಳ ಪೈಕಿ ಕೇರಳ, ತಮಿಳುನಾಡು ರಾಜ್ಯಗಳಲ್ಲಿ ಎನ್ಡಿಎ ಅಥವಾ ಮೋದಿ ತಲೆಯುತ್ತುವಂತೆಯೇ ಇಲ್ಲ. ಆದರೂ ನಾಮಕಾವಸ್ಥೆ ಅಥವಾ ಏನಾದರೂ ಅದ್ಭುತ ಸೃಷ್ಟಿಯಾಗಲಿ ಎಂದು ಇವೆರಡು ರಾಜ್ಯಗಳಲ್ಲಿ ಮೋದಿ ತಿರುಗಾಡುತ್ತಿದ್ದಾರೆ. ವಾಚಮಗೋಚರವಾಗಿ ಭಾಷಣ ಮಾಡುತ್ತಿದ್ದಾರೆ. ತಮಿಳುನಾಡಿನಲ್ಲಿ ಜಯಲಲಿತಾ ಅಮ್ಮನ ಹೆಸರಿನಲ್ಲಿ ಎಲ್ಲರ ಮನೆಗೆ ಮಾವಿನ ಹಣ್ಣಿನ ಪೊಟ್ಟಣ ತಲುಪಿಸಿದರೇ, ಅದಕ್ಕೆ ಮೋದಿ, `ಕೊಡಬೇಕಾಗಿದ್ದು ಮಾವಿನ ಹಣ್ಣಲ್ಲ, ಮಾವಿನ ಸಸಿ’ ಎಂದು ಮಾತಿನಲ್ಲಿ ಮಾವಿನ ಮರ ಬೆಳೆಸಿ ಬಂದಿದ್ದರು. ಹಾಗೆಯೇ `ಕೇರಳದಲ್ಲೂ ಪರಿಸ್ಥಿತಿ ಹದಗೆಟ್ಟಿದೆ, ಕೇರಳಕ್ಕೂ ಸೊಮಾಲಿಯಾಕ್ಕೂ ವ್ಯತ್ಯಾಸವಿಲ್ಲ’ ಎಂದರು.

ಅಮೆರಿಕಾ, ಜರ್ಮನ್, ರಷ್ಯಾ, ಚೀನಾ, ಸೌದಿ ಮುಂತಾದ ಶ್ರೀಮಂತ ರಾಷ್ಟ್ರಗಳಿಗೆ ಹೋಗಿಬಂದಿರುವ ಮೋದಿ ತಮ್ಮ ವಿದೇಶ ಪ್ರವಾಸದ ಅವಧಿಯಲ್ಲಿ ಸೊಮಾಲಿಯಾ, ಇಥಿಯೋಪಿಯಾ, ನೈಜೀರಿಯಾದಂತ ಇತರೆ ದೇಶಗಳಿಗೆ ಹೋಗಿಬಂದಿದ್ದರೇ ಬಹುಶಃ ಸೊಮಾಲಿಯಾ ಅಂದರೇನು..? ಆ ದೇಶದ ಪರಿಸ್ಥಿತಿ ಹೇಗಿದೆ..? ಅಲ್ಲಿನ ಬರದ ಪರಿಸ್ಥಿತಿ ಹೇಗಿದೆ..? ಅಪೌಷ್ಠಿಕತೆಯಿಂದ ಮುಕ್ಕಾಲು ದೇಶವೇ ನರಳುತ್ತಿರುವುದು ಏಕೆ..? ಅಲ್ಲಿನ ಕಡಲ್ಗಳ್ಳರ ಕ್ರೂರತೆಯ ಪರಮಾವಧಿಯೇನು..? ಉಗ್ರರ ಉಪಟಳಕ್ಕೆ ಕಾರಣವೇನು..? ಒಂದು ಕಾಲದಲ್ಲಿ ಶ್ರೀಮಂತವಾಗಿದ್ದ, ವ್ಯಾಪಾರ ವಹಿವಾಟಿನ ಕೇಂದ್ರವಾಗಿದ್ದ ಸೊಮಾಲಿಯಾ ಕಾಲಕ್ರಮೇಣ ಯಾಕಿಂತ ಸ್ಥಿತಿಯನ್ನು ತಲುಪಿದೆ..? ಅಲ್ಲಿನ ಜನರ ಕಣ್ಣೀರಿನ ಕಥೆಯೇನು..? ಎಂಬುದೆಲ್ಲಾ ಅರ್ಥವಾಗುತ್ತಿತ್ತು. ಇರುವ ಸಮಸ್ಯೆಗಳಿಂದ ಶಿಕ್ಷಣವೇ ಅಲ್ಲಿ ಕಲ್ಪನೆಯಾಗಿರುವಾಗ, ವಿದ್ಯಾವಂತರ ನಾಡು, ಬರ ಕಾಣದ ನಾಡು, ಸುಂದರ ನಾಡು, ದೇವರ ನಾಡು- ಎಂದೆಲ್ಲಾ ಕರೆಸಿಕೊಳ್ಳುವ ಕೇರಳದ ಜೊತೆ ಸೊಮಾಲಿಯಾವನ್ನು ಹೋಲಿಸಿ ತಾವೆಷ್ಟು ಅರೆಬೆಂದವರು ಎಂದು ಮೋದಿ ತೋರಿಸಿಕೊಂಡಿದ್ದಾರೆ.

ಸೊಮಾಲಿಯಾ ಆಫ್ರಿಕಾದ ಈಶಾನ್ಯ ತುದಿ. `ಹಾರ್ನ್ ಆಫ್ ಆಫ್ರಿಕಾ ಅಥವಾ ಆಫ್ರಿಕಾದ ಕೋಡು ಎಂದು ಹೆಮ್ಮೆಯಿಂದ ಕರೆಸಿಕೊಳ್ಳುತ್ತಿದ್ದ ದೇಶ. ಆಂತರಿಕ ಕಾರಣಗಳಿಂದ ದಕ್ಷಿಣ ಸೊಮಾಲಿಯಾ ಮತ್ತು ಉತ್ತರ ಸೊಮಾಲಿಯಾ ಎಂದು ಬೇರ್ಪಟ್ಟಿತ್ತು. ಆಮೇಲೆ 1960ರಲ್ಲಿ ಒಂದಾಯಿತು. ಆದರೆ 1969ರಲ್ಲಿ ಅಂದಿನ ರಾಷ್ಟ್ರಾದ್ಯಕ್ಷರ ಹತ್ಯೆಯ ಬಳಿಕ ಖಾಲಿ ಉಳಿದಿದ್ದ ದೇಶದ ಮುಖಂಡನ ಸ್ಥಾನದಲ್ಲಿ ಸೈಯದ್ ಬಾರಿ ಎಂಬ ಮಿಲಿಟರಿ ಸರ್ವಾಧಿಕಾರಿ ಕುಳಿತುಕೊಂಡ. ತನ್ಮೂಲಕ ದೇಶದ ಆಡಳಿತ ಅವನಿಗೆ ಹಸ್ತಾಂತರವಾಯಿತು. ಸೈಯದ್ ಬಾರಿ ಪಕ್ಕಾ ಕಮ್ಯುನಿಸ್ಟ್. ದೇಶದಲ್ಲಿ ಜಾರಿಯಲ್ಲಿದ್ದ ವಂಶಾಧಾರಿತ ಆಡಳಿತ ವ್ಯವಸ್ಥೆಯನ್ನು ನಾಶಪಡಿಸಲು ಸೊಮಾಲಿಯಾ ನಾಗರಿಕ ಯುದ್ಧಗಳಿಗೆ ನಾಂದಿಹಾಡಿದ. ಶಾಲೆಗಳನ್ನೆಲ್ಲಾ ಮುಚ್ಚಿಸಿ ಅಲ್ಲಿ ಕಲಿಯುತ್ತಿದ್ದ ಮಕ್ಕಳ ಕೈಗೆ ಬಂದೂಕು ಕೊಟ್ಟ. 1991ರಲ್ಲಿ ತಾರಕಕ್ಕೇರಿದ ಕಲಹಗಳಿಂದ ಎಚ್ಚೆತ್ತುಕೊಂಡ ವಿಶ್ವಸಂಸ್ಥೆ ಡಿಸೆಂಬರ್ 3, 1992ರಲ್ಲಿ ಶಾಂತಿಮರುಸ್ಥಾಪನೆಗೆಂದು ತನ್ನ ಸದಸ್ಯ ರಾಷ್ಟ್ರಗಳ ಮಿಲಿಟರಿ ತುಕಡಿಯನ್ನ ಅಮೆರಿಕಾ ಮಿಲಿಟರಿಯ ನೇತೃತ್ವದಲ್ಲಿ ಕಳುಹಿಸಲು ತೀರ್ಮಾನಿಸಿತು. ಆದರೆ ಅಷ್ಟರಲ್ಲಾಗಲೇ ಸೈಯ್ಯದ್ ಬಾರಿಯನ್ನ ತನ್ನ ಕೈಗೊಂಬೆಯಾಗಿಸಿಕೊಂಡಿದ್ದ ಅಮೆರಿಕಾ, ಸೊಮಾಲಿಯಾದ ಪ್ರಮುಖ ತೈಲ ನಿಕ್ಷೇಪಗಳಲ್ಲಿ ತನ್ನ ದೇಶದ ಕಂಪೆನಿಗಳನ್ನ ಸ್ಥಾಪಿಸಿಕೊಂಡಿತ್ತು. ಅತ್ತ ಇಥಿಯೋಪಿಯಾ ತಾನು ಆಕ್ರಮಿಸಿದ್ದ ಸೊಮಾಲಿಯಾದ ಭೂಭಾಗವನ್ನು ಬಿಟ್ಟುಕೊಟ್ಟನಂತರ ಇಷ್ಟು ದಿನ ಅಜ್ಞಾತವಾಗಿದ್ದ ಇಸ್ಲಾಮಿಕ್ ಮೂಲಭೂತವಾದಿಗಳು ಸೊಮಾಲಿಯಾದಲ್ಲಿ ಪ್ರಭುತ್ವ ಸ್ಥಾಪಿಸುವ ಕಡೆಗೆ ದಾಪಗಾಲಿಟ್ಟಿವೆ.

ಸೊಮಾಳಿಯಾ ಜಗತ್ತಿನ ಅತಿ ಅರಾಜಕ ದೇಶ. ಅತ್ಯಂತ ಬಡ ದೇಶ. ಮುಕ್ಕಾಲು ಜನ ಅಪೌಷ್ಟಿಕತೆಯಿಂದ ನರಳುತ್ತಿದ್ದಾರೆ. ಅಲ್ಲಿ ಬಂದೂಕು ಹಿಡಿದವರೇ ಹೆಚ್ಚಾಗಿ ಕಾಣಿಸುತ್ತಾರೆ. ವಿಶ್ವಸಂಸ್ಥೆ ದಕ್ಷಿಣ ಸೊಮಾಲಿಯಾವನ್ನು ಬರಪೀಡಿತ ಪ್ರದೇಶ ಎಂದು ಘೋಷಿಸಿದೆ. ಇದಕ್ಕಿಂತ ಕ್ರೂರವೇನೆಂದರೇ ಅಲ್ಲಿ ಅಪೌಷ್ಠಿಕತೆಯಿಂದ ಜನರು ನರಳುತ್ತಿದ್ದಾರೆ. ಮಕ್ಕಳ ಪರಿಸ್ಥಿತಿಯಂತೂ ಸಾಕ್ಷಾತ್ ಆ ಭಗವಂತನಿಗೆ ಪ್ರೀತಿ. ಎಲುಬಿನ ಹಂದರವಾದ ಮಕ್ಕಳು, ಚಿಕ್ಕ ದೇಹ, ದೊಡ್ಡ ತಲೆ, ದೊಡ್ಡ ಕಣ್ಣುಗಳನ್ನು ಹೊತ್ತು ಬದುಕಲು ಪ್ರಯತ್ನಿಸುತ್ತಿರುವ ಮಕ್ಕಳು. ಸೊಳ್ಳೆ, ನೊಣಗಳ ಹಾವಳಿ, ಅಲ್ಲಿನ ಆಸ್ಪತ್ರೆಗಳ ಅವ್ಯವಸ್ಥೆಯ ನಡುವೆಯೂ ರೋಗಿಗಳು ಜೀವ ಉಳಿಸಿಕೊಳ್ಳಲು ಔಷಧಿಗಾಗಿ ಕ್ಯೂ ನಿಲ್ಲುತ್ತಾರೆ. ಕ್ಯೂನಲ್ಲೇ ನಿಂತು ಸಾಯುತ್ತಿದ್ದಾರೆ. ಒಂದುಕಾಲದಲ್ಲಿ ಶ್ರೀಮಂತ ವರ್ತಕರಿದ್ದ ನಾಡೆಂದೇ ಕರೆಯಲಾದ ಸೊಮಾಲಿಯಾದ ದುಃಸ್ಥಿತಿಗೆ ಹಲವು ಕಾರಣಗಳಿವೆ. ಸೊಮಾಲಿಯಾ ಬರದಿಂದ ನರಳಿದೆ. ನರಳುತ್ತಿದೆ. ವರ್ಷಗಟ್ಟಲೇ ಬೀಳದ ಮಳೆ, ಅಗತ್ಯ ವಸ್ತುಗಳ ಬೆಲೆಯೇರಿಕೆಯಿಂದಾಗಿ ಜನ ತತ್ತರಿಸಿದ್ದಾರೆ. ಅದರಲ್ಲೂ ಅಲ್-ಶಬಾಬ್ ಇಸ್ಲಾಮಿಕ್ ಬಂಡುಕೋರರ ಹಿಡಿತದಲ್ಲಿರುವ ದಕ್ಷಿಣ ಸೊಮಾಲಿಯಾದಲ್ಲಿ ಬರದ ಭೀಕರ ಪರಿಣಾಮ ಕಾಣುತ್ತಿದೆ. ಅಂತಾರಾಷ್ಟ್ರೀಯ ಸೇವಾ ಸಂಸ್ಥೆಗಳು, ನೆರವು ಸಂಸ್ಥೆಗಳು ಸಹಾಯಕ್ಕೆ ಧಾವಿಸಿದರೇ ಅವರನ್ನು ಉಗ್ರರು ಗುಂಡಿಕ್ಕಿ ಕೊಲ್ಲುತ್ತಾರೆ. ಸಾವು ಬದುಕಿನ ನಡುವೆ ಹೋರಾಡುತ್ತಿರುವವರಿಗೆ ರೋಗನಿರೋಧಕ ಚುಚ್ಚುಮದ್ದು ನೀಡಲು ಯಾರಾದರೂ ಮುಂದೆ ಬಂದರೇ, ಸೊಮಾಲಿಯಾದ ಮಕ್ಕಳನ್ನು ಕೊಲ್ಲಲು ಪಾಶ್ಚಿಮಾತ್ಯ ಶಕ್ತಿಗಳು ಮಾಡುತ್ತಿರುವ ಹುನ್ನಾರ ಎಂದು ಉಗ್ರರು ಅರ್ಥವಿಲ್ಲದ ವಾದಗಳನ್ನು ಮಾಡಿ ಜನರ ಹೆಣದ ಮೇಲೆ ಅಟ್ಟಹಾಸಗೈಯ್ಯುತ್ತಿದ್ದಾರೆ.

ಇವಿಷ್ಟು ಮಾತ್ರವಲ್ಲ. ಈ ಉಗ್ರರು ದಕ್ಷಿಣ ಸೊಮಾಲಿಯದಲ್ಲಿ ಬಡ ಹಳ್ಳಿಗಳ ಜನ ನದಿ ನೀರನ್ನು ಬಳಸದಂತೆ ನಿರ್ಬಂಧವೊಡ್ಡುತ್ತಿದ್ದಾರೆ. ತಮಗೆ ತೆರಿಗೆ ನೀಡುವ ಸಿರಿವಂತ ರೈತರ ಹೊಲಗಳಿಗೆ ನದಿ ನೀರು ಹಾಯಿಸುತ್ತಿದ್ದಾರೆ. ಈ ಉಗ್ರರ ಸಹವಾಸವೇ ಬೇಡ ಎಂದು ಅಲ್ಲಿನ ಜನರು ಊರುಬಿಟ್ಟು ಹೊರಡುವಂತೆಯೂ ಇಲ್ಲ. ಅವರನ್ನು ಉಗ್ರರು ಗುಂಡಿಕ್ಕಿ ಕೊಂದುಬಿಡುತ್ತಾರೆ. ಅಲ್ಲಿನ ದುರ್ಬಲ ಸರ್ಕಾರ ಕೈಚೆಲ್ಲಿ ಕುಂತಿದೆ. ದೊಡ್ಡಣ್ಣ, ಚಿಕ್ಕಣ್ಣಂದಿರು ಸೊಮಾಲಿಯಾದತ್ತ ತಲೆ ಹಾಕಿಯೂ ಮಲಗುವುದಿಲ್ಲ. ನರಕಕ್ಕೆ ಸೊಮಾಲಿಯಾ ಜ್ವಲಂತ ದೃಷ್ಟಾಂತವಾಗಿದೆ. ಅಂತಹ ಸೊಮಾಲಿಯವನ್ನು ಮೋದಿ ಕೇರಳಕ್ಕೆ ಹೋಲಿಸಿದ್ದು ಅವರ ಅಜ್ಞಾನವನ್ನು ತೋರಿಸುತ್ತದೆ. ಸೊಮಾಲಿಯಾದಲ್ಲಿರುವುದು ಒಂದೆರಡು ಸಮಸ್ಯೆಗಳಲ್ಲ. ಹಲವು ಸಮಸ್ಯೆಗಳಿಂದ ಬಳಲಿ ಬೆಂಡಾಗುತ್ತಿರುವ ಆಫ್ರಿಕಾದ ಕೋಡನ್ನು ಕೇರಳದಲ್ಲಿ ತಿವಿಯುವ ಕೆಲಸ ಮಾಡಿ- ಜನರಿಂದ ಉಗಿಸಿಕೊಳ್ಳುವ ತಪ್ಪನ್ನು ಮೋದಿ ಮಾಡಿಬಿಟ್ಟಿದ್ದಾರೆ. ವಿಚಿತ್ರವೆಂದರೇ ಯಾವ ಸೋಷಿಯಲ್ ನೆಟ್ವರ್ಕ್ ಮೂಲಕ ಮೋದಿ ಚಾರ್ಮ್ ಶುರುವಾಗಿತ್ತೋ, ಅದೇ ಸೋಷಿಯಲ್ ನೆಟ್ ವರ್ಕ್ ನಲ್ಲಿ `ಪೋ ಮೋನೆ ಮೋದಿ’ ಪರ್ವ ಶುರುವಾಗಿದೆ. ಇಲ್ಲಿ ರಾಜಕಾರಣದ ಕೈಚಳಕವಿದೆ ಎನ್ನಬಹುದಾದರೂ ಅಲ್ಲಿನ ಜನರ ವಿವೇಕ ಹೀಗೊಂದು ಬದಲಾವಣೆಗೆ ನಿರ್ಧರಿಸಿರಬಹುದು.

ಮೋದಿಗೆ ವಿಚಿತ್ರವಾದ ಆಲೋಚನೆಗಳಿವೆ. ಅವರು ದೇಶದ ಯಾವುದೇ ರಾಜ್ಯಗಳಿಗೂ ಹೋದರೂ, `ಇಲ್ಲಿನ ವ್ಯವಸ್ಥೆ ಸರಿಯಿಲ್ಲ. ಸಮಸ್ಯೆಗಳು ತಾಂಡವವಾಡುತ್ತಿದೆ. ನನ್ನ ಪಕ್ಷವನ್ನು ಗೆಲ್ಲಿಸಿನೋಡಿ- ನಿಮ್ಮ ರಾಜ್ಯವನ್ನು ಸ್ವರ್ಗ ಮಾಡುತ್ತೇನೆ’ ಎನ್ನುತ್ತಾರೆ. ಪ್ರಧಾನಿ ಯಾಕಿಷ್ಟು ಸುಳ್ಳುಗಳನ್ನು ಹೇಳುತ್ತಾರೋ..? ಗೊತ್ತಿಲ್ಲ. ಆದರೆ ಎಲ್ಲಾ ರಾಜ್ಯದ ಜನರು ಗುಜರಾತಿಗರಲ್ಲ. ಬಿಹಾರದಲ್ಲಿ ಸಾವಿರಾರು ಕೋಟಿಗಳ ಕಥೆ ಹೇಳಿದರೂ ಅಲ್ಲಿನ ಜನರು ಮೋದಿಯನ್ನು ಸೋಲಿಸಿದ್ದಾರೆ. ಆದರೂ ನಮ್ಮ ಪ್ರಧಾನಿಗೆ ಬುದ್ದಿ ಬಂದಿಲ್ಲ. ತಮಿಳುನಾಡಿನಂತೆ ಕೇರಳದಲ್ಲೂ ಇರುವುದು ಎರಡು ಪಕ್ಷಗಳ ಒಕ್ಕೂಟಗಳ ನಡುವಿನ ಸಮರ. ಕಾಂಗ್ರೆಸ್ ನೇತೃತ್ವದ ಯುಡಿಎಫ್, ಎಡಪಂಥೀಯ ನಿಲುವಿರುವವರ ಒಕ್ಕೂಟ ಎಲ್ಡಿಎಫ್ ನಡುವೆ ನೇರಾ ಹಣಾಹಣಿಯಿದೆ. ಉಮ್ಮನ್ ಚಾಂಡಿ ಸಿಎಂ ಆಗುವ ಮುನ್ನ ಕೇರಳದಲ್ಲಿ ಎಲ್ಡಿಎಫ್ ಆಡಳಿತ ನಡೆಸಿತ್ತು. ಅದಕ್ಕೂ ಮುನ್ನ ಉಮ್ಮನ್ ಚಾಂಡಿಯವರೇ ಮುಖ್ಯಮಂತ್ರಿಯಾಗಿದ್ದರು. ಈ ಬಾರಿ ಎರಡನೇ ಬಾರಿ ಸಿಎಂ ಆಗಿ ಉಮ್ಮನ್ ಚಾಂಡಿ ಆಡಳಿತ ನಡೆಸುತ್ತಿದ್ದಾರೆ. ಇನ್ನು ಇವರಿಬ್ಬರಿಗೆ ಸ್ವಲ್ಪಮಟ್ಟಿಗೆ ಕಮ್ಯುನಿಸ್ಟ್ ಪಾರ್ಟಿ ಪೈಪೋಟಿ ನೀಡುತ್ತದೆ. ಇವರನ್ನು ಹೊರತುಪಡಿಸಿ- ಮಿಕ್ಕವರು ಇಲ್ಲಿ ಉಸಿರಾಡುವುದು ಕೂಡ ಕಷ್ಟ. ಅವರಲ್ಲಿ ಮೋದಿ ನಾಯಕತ್ವದ ಬಿಜೆಪಿಯೂ ಒಂದು.

ಈ ಹಕೀಕತ್ತುಗಳು ಮೋದಿಗೆ ಗೊತ್ತಿಲ್ಲವೆಂದೇನಲ್ಲ. ಆದರೂ ಏನಾದ್ರು ವರ್ಕೌಟ್ ಆಗುತ್ತಾ..? ಎಂದು ಅಖಾಢಕ್ಕಿಳಿದು- ಸೊಮಾಲಿಯಾ, ಹಾಳೂಮೂಳು ಅಂತೆಲ್ಲಾ ಮಾತಾಡಿ ಅಭಾಸ ಮಾಡಿಕೊಂಡಿದ್ದಾರೆ. ಮೋದಿ ಹೀಗೆ ಹೇಳಿಕೆ ಕೊಟ್ಟಿರುವುದು ಕೇರಳದ ಜನರನ್ನು ರೊಚ್ಚಿಗೇಳಿಸಿದೆ. ಈ ಬಾರಿ ಬಿಜೆಪಿಗೆ ಅವರು ಪಾಠ ಕಲಿಸುತ್ತಾರೆ ಎಂದು ಹೇಳುವಂತಿಲ್ಲ. ಏಕೆಂದರೇ ಪಾಠ ಕಲಿಸಲು ಬಿಜೆಪಿ ಹೆಸರು ಕೇರಳದ ಸಿಲಬಸ್ ನಲ್ಲೇ ಇಲ್ಲ. ಸೋಷಿಯಲ್ ನೆಟ್ ವರ್ಕ್ ಮೂಲಕ ಟ್ರೆಂಡ್ ಸೃಷ್ಟಿಸಿ, ಆ ಜಗತ್ತಿನಲ್ಲಿ ಹೀರೋ ಆಗಿ ಮೆರೆದಿದ್ದ ನರೇಂದ್ರ ಮೋದಿಯವರಿಗೆ ಅದೇ ಸೋಷಿಯಲ್ ನೆಟ್ ವರ್ಕ್ ನಲ್ಲಿ ಮುಖಭಂಗವಾಗುತ್ತಿದೆ. `ಪೋ ಮೋನೆ ಮೋದಿ’ ಎನ್ನುವುದು ಸಣ್ಣ ಅವಮಾನವೇನಲ್ಲ. ದೇಶವೊಂದರ ಪ್ರಧಾನಿಗೆ ಇಂತಹ ಅವಮಾನಗಳು ಅರಗಿಸಿಕೊಳ್ಳುವುದು ಕಷ್ಟ. ಇನ್ನು ಮುಂದೆಯಾದರೂ ಮೋದಿ ಗುಜರಾತ್ ಭ್ರಮೆಯಿಂದ ಹೊರಬಂದು ಇದು ಭಾರತ ಎನ್ನುವುದನ್ನು ಅರ್ಥಮಾಡಿಕೊಳ್ಳಬೇಕು. ಭಾರತ ಅರ್ಥವಾದ ಬಳಿಕವಷ್ಟೇ- ಸೋಮಾಲಿಯಾ, ಮಂಗೋಲಿಯಾ, ಆಲಿಯಾ, ಕಾಲಿಯಾಗಳ ಬಗ್ಗೆ ಮಾತಾಡಬೇಕು. ಎಷ್ಟಾದರೂ ಅವರು ನಮ್ಮ ಪ್ರಧಾನಿ. ಅವರು ಸುಧಾರಣೆಯಾಗಲಿ ಎಂಬುದು ನಮ್ಮೆಲ್ಲರ ಆಶಯ.

POPULAR  STORIES :

ಹಾವು ಮನುಷ್ಯರಿಗೆ ಕಚ್ಚುತ್ತೆ ನಿಜ..! ಆದರೆ ಇವ್ನು ಹೆಬ್ಬಾವನ್ನೇ ಕಚ್ಚಿ ಪ್ರಜ್ಞೆ ತಪ್ಪಿಸಿದ್ದ..!?

ಮಂಚಕ್ಕೆ ಕರೆಯುವವರು ಎಲ್ಲಾ ಕಡೆಯೂ ಇದ್ದಾರೆ..! ಇದು ಸೋನ ಒಬ್ಬಳ ಕಥೆಯಲ್ಲ..!

ಮಾರ್ಕ್ ಜುಕರ್ ಬರ್ಗ್ ಫೇಸ್ ಬುಕ್ ಅಕೌಂಟ್ ನ ಬ್ಲಾಕ್ ಮಾಡೋಕೆ ಆಗಲ್ಲ ಯಾಕೆ..?

“ನಿನ್ನ ಪ್ರೀತಿ ಇಲ್ಲದೇ ನಾನು ಬದುಕಿರೋದಿಲ್ಲ.. ಬದುಕಿದ್ರೆ ನಿನ್ನ ಜೊತೆನೇ ನೆನಪಿರಲಿ ಚಾಂದಿನಿ”

ಅವ್ನಿಗೆ ಪ್ರೇಯಸಿಯನ್ನು ಬುಲ್ಲೆಟ್ನಲ್ಲಿ ಕೂರಿಸೋ ಆಸೆ..!? ಅದಕ್ಕಾಗಿ ಅವ್ನು ಏನ್ ಮಾಡ್ದ ಗೊತ್ತಾ..!?

Share post:

Subscribe

spot_imgspot_img

Popular

More like this
Related

ಆರೋಗ್ಯಕರ ಅಡುಗೆಗೆ ಹಿತ್ತಾಳೆ ಪಾತ್ರೆಗಳು ಸೂಕ್ತವೇ? ತಿಳಿದುಕೊಳ್ಳಿ  ಪ್ರಯೋಜನಗಳು

ಆರೋಗ್ಯಕರ ಅಡುಗೆಗೆ ಹಿತ್ತಾಳೆ ಪಾತ್ರೆಗಳು ಸೂಕ್ತವೇ? ತಿಳಿದುಕೊಳ್ಳಿ  ಪ್ರಯೋಜನಗಳು ಉತ್ತಮ ಆರೋಗ್ಯಕ್ಕಾಗಿ ಪೌಷ್ಟಿಕ...

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು ಕಳ್ಳತನ

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು...

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ – ಆರ್. ಅಶೋಕ್ ಆಗ್ರಹ

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ –...

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು!

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು! ಬೆಂಗಳೂರು: ಆಟೋ ಮತ್ತು...