ಬಿ ಎಸ್ ಯಡಿಯೂರಪ್ಪ ಅವರಿಗೆ ವಿಶ್ವಾಸಮತ ಸಾಬೀತುಪಡಿಸಲು ಅವಕಾಶ ಸಿಗಬಹುದು , ಸರ್ಕಾರ ರಚನೆ ಆಗಲಿದೆ ಎಂಬ ವಿಶ್ವಾಸವಿತ್ತು. ಅದು ಹುಸಿಯಾಯಿತು ಎಂದು ಸಂಸದ ಪ್ರತಾಪ್ ಸಿಂಹ ಭಾವುಕರಾದರು.
ಫೇಸ್ ಬುಕ್ ಲೈವ್ ನಲ್ಲಿ ಪ್ರತಾಪ್ ಸಿಂಹ ಸುಮಾರು 16 ನಿಮಿಷಗಳ ಕಾಲ ಭಾವುಕರಾಗಿ ಮಾತಾಡಿದರು.
ಯಡಿಯೂರಪ್ಪ ರೈತರ ಬಗ್ಗೆ ನಿಜವಾಗಿಯೂ ಕಾಳಜಿಯುಳ್ಳ ನಾಯಕ. ಅವರು ಅಧಿಕಾರಕ್ಕೆ ಆಸೆಪಟ್ಟವರಲ್ಲ. ಅಧಿಕಾರ ಕೈ ತಪ್ಪಿತು ಎಂದು ಅವರಿಗೆ ಬೇಸರವಿಲ್ಲ. ಆದರೆ,ರಾಜ್ಯವನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಕಟ್ಟಿಕೊಂಡಿದ್ದ ಕನಸು ಭಗ್ನವಾಯಿತೆಂಬ ನೋವು ಅವರಲ್ಲಿದೆ ಎಂದು ಪ್ರತಾಪ್ ಸಿಂಹ ಕಣ್ಣೀರಿಟ್ಟರು.
ವಿರೋಧ ಪಕ್ಷದ ಸೆನ್ಸಿಬಲ್ ಶಾಸಕರು ಜನಾದೇಶವನ್ನು ಅರ್ಥಮಾಡಿಕೊಂಡು ಬಿಜೆಪಿಯನ್ನು ಬೆಂಬಲಿಸಲಿದ್ದಾರೆ ಎಂಬ ಆಶಯ ಇತ್ತು.
1996ರಲ್ಲಿ ಕಾಲೇಜಿನಲ್ಲಿ ಓದುವಾಗ ವಾಜಪೇಯಿ ಪ್ರಧಾನಿಯಾಗಿ 13 ದಿನಕ್ಕೆ ರಾಜೀನಾಮೆ ನೀಡಬೇಕಾದಾಗ ಅತ್ತಿದ್ದೆ. 22ವರ್ಷಗಳ ಬಳಿಕ ಮತ್ತೆ ಅಳು ಬರುತ್ತಿದೆ ಎಂದು ಸಿಂಹ ಗದ್ಗದಿತರಾದರು.