ವಿಜಯವಾಣಿ ಎಡಿಟರ್ ಇನ್ ಚೀಫ್ ಆಗಿದ್ದ ಹರಿಪ್ರಕಾಶ್ ಕೋಣೆಮನೆ ಮಾಜಿ ಪತ್ರಕರ್ತ, ಹಾಲಿ ಸಂಸದ ಪ್ರತಾಪ್ ಸಿಂಹ ಅವರ ಹಾದಿ ಹಿಡಿಯಲಿದ್ದಾರೆ ಎಂಬ ಸುದ್ದಿ ಕೇಳಿಬರುತ್ತಿದೆ.
ಈ ಸುದ್ದಿಗೆ ಮತ್ತಷ್ಟು ಬಲ ನೀಡುವಂತೆ ಹರಿಪ್ರಕಾಶ್ ಕೋಣೆಮನೆಯವರು ನಿನ್ನೆ ವಿಜಯವಾಣಿಗೆ ಗುಡ್ ಬೈ ಹೇಳಿ ಹೊರಬಂದಿದ್ದಾರೆ.
ವಿಜಯ ಕರ್ನಾಟಕ ದಿನಪತ್ರಿಕೆಯಲ್ಲಿ ‘ಬೆತ್ತಲೆ ಜಗತ್ತು’ ಅಂಕಣದ ಮೂಲಕ ಜನಪ್ರಿಯತೆಯನ್ನು ಪಡೆದಿದ್ದ ಪ್ರತಾಪ್ ಸಿಂಹ, ನಂತರ ಕನ್ನಡ ಪ್ರಭ ದಿನಪತ್ರಿಕೆಯಲ್ಲಿ ‘ಬೆತ್ತಲೆ ಪ್ರಪಂಚ’ ಅಂಕಣ ಬರೆಯುತ್ತಿದ್ದರು. 2014ರಲ್ಲಿ ಕನ್ನಡ ಪ್ರಭಕ್ಕೆ ರಾಜೀನಾಮೆ ನೀಡಿ, ರಾಜಕೀಯಕ್ಕೆ ಎಂಟ್ರಿ ಕೊಟ್ರು. ಮೈಸೂರು ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಗೆಲುವಿನ ನಗೆ ಬೀರಿದ್ರು.
ಇದೀಗ ಹರಿಪ್ರಕಾಶ್ ಕೋಣೆಮನೆ ಅವರೂ ಕೂಡ ಇದೇ ಹಾದಿ ಹಿಡಿಯುತ್ತಾರೆ ಎಂದು ಹೇಳಲಾಗ್ತಿದೆ. ಉತ್ತರಕನ್ನಡದ ಯಲ್ಲಾಪುರ ತಾಲೂಕಿನ ನಂದೊಳ್ಳಿ ಗ್ರಾಮದಲ್ಲಿ ಹುಟ್ಟಿ ಬೆಳೆದ ಹರಿಪ್ರಕಾಶ್ ಕೋಣೆಮನೆಯವರು ಯಲ್ಲಾಪುರದಿಂದ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರೆ ಎಂಬ ಸುದ್ದಿ ಇದೆ. ಬಿಜೆಪಿ ಅಭ್ಯರ್ಥಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಅವರನ್ನು ಹರಿಪ್ರಕಾಶ್ ಕೋಣೆಮನೆ ಭೇಟಿ ಮಾಡಿದ್ದಾರೆ ಎನ್ನಲಾಗಿದ್ದು, ಎಲ್ಲಾ ಅಂತೆ-ಕಂತೆಗಳಿಗೆ ಶೀಘ್ರದಲ್ಲೇ ಉತ್ತರ ಸಿಗುವ ನಿರೀಕ್ಷೆಯಿದೆ.