10ನೇ ಬಾರಿ ಗರ್ಭಿಣಿಯಾದ ಮಹಿಳೆಯೊಬ್ಬರಿಗೆ ಹೆರಿಗೆ ಬಳಿಕ ಸಂತಾನ ನಿಯಂತ್ರಣ ಮಾಡಿಸಿಕೊಳ್ಳಿ ಎಂದಿದ್ದಕ್ಕೆ ಆಕೆ ಆಸ್ಪತ್ರೆಯಿಂದಲೇ ಎಸ್ಕೇಪ್ ಆಗಿರುವ ಘಟನೆ ತಮಿಳುನಾಡಿನ ಅರಂತಂಗಿ ಬಳಿಯ ವೆತ್ತಿಯಾಂಗುಡಿ ಎಂಬಲ್ಲಿ ನಡೆದಿದೆ.
52ವರ್ಷದ ಆರಾಯಿಯೇ ಆ ತಾಯಿ. ಆರಾಯಿ ಮತ್ತು 56 ವರ್ಷದ ಆನಂದನ್ ದಂಪತಿಗೆ 9 ಮಂದಿ ಮಕ್ಕಳು. ಆರಾಯಿ 13ವರ್ಷದ ಹಿಂದೆಯೇ 9ಮಕ್ಕಳಿಗೂ ಜನ್ಮ ನೀಡಿದ್ದಾರೆ. ಕಳೆದ ಕೆಲವು ದಿನಗಳಿಂದ ದಣಿದಿದ್ದ ಆಕೆಯನ್ನು ಕುಟುಂಬದವರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆಗ ಆಕೆ ಮತ್ತೆ ಗರ್ಭಿಣಿಯಾಗಿದ್ದಾಳೆ ಎಂದು ತಿಳಿದುಬಂದಿದೆ. ವಯಸೋ ಸಹಜ ಮುಟ್ಟು ನಿಂತಿದೆ ಎಂದುಕೊಂಡಿದ್ದ ಆಕೆಗೆ ತಾನು ಗರ್ಭಿಣಿ ಎಂಬುದು ತಿಳಿದೇ ಇರಲಿಲ್ಲ.
9 ಮಕ್ಕಳ ಹೆರಿಗೆಯೂ ಮನೆಯಲ್ಲೇ ಆಗಿತ್ತು . ವೆತ್ತಿಯಾಂಗುಡಿಯಲ್ಲಿ ಕಳೆದ 5 ವರ್ಷದಿಂದ ಇವರು ವಾಸ ಮಾಡುತ್ತಿದ್ದಾರೆ. ಈ ಕುಟುಂಬ ಒಂದೇ ಕಡೆ ಹೆಚ್ಚು ವರ್ಷಗಳ ಕಾಲ ಇರಲೇ ಇಲ್ಲ ಎಂಬುದು ಸ್ಥಳಿಯರ ಮಾತು.
ಆರಾಯಿಯ ನಾಲ್ವರು ಮಕ್ಕಳಿಗೆ ಮದುವೆಯಾಗಿ ಅವರ ಕುಟುಂಬದ ಜೊತೆ ಬಾಳುತ್ತಿರುವ ಹೊತ್ತಲ್ಲೇ ಆರಾಯಿ ಮತ್ತೆ ಗರ್ಭ ಧರಿಸಿದ್ದಾರೆ. ಆದರೆ ತಾನು ಗರ್ಭಿಣಿಯಾಗಿದ್ದೇನೆ ಎಂದು ಆಕೆಗೆ ಗೊತ್ತಿರಲೇ ಇಲ್ಲ.
ಆಗಸ್ಟ್ 18ರಂದು ಆಕೆಯ 10ನೇ ಮಗುವಿನ ಹೆರಿಗೆಗೆ ಡೇಟ್ ಹೇಳಿದ್ದು, ಎಲ್ಲಾ ಮಕ್ಕಳನ್ನು ಮನೆಯಲ್ಲೇ ಹೆತ್ತಿದ್ದರಿಂದ ಆಕೆ ಆಸ್ಪತ್ರೆಯಿಂದ ನಾಪತ್ತೆಯಾಗಿರಬೇಕು. ಅಲ್ಲದೇ ಪ್ರಾಥಮಿಕ ಚಿಕಿತ್ಸಾ ಕೇಂದ್ರದಲ್ಲಿ ಸಂತಾನ ನಿಯಂತ್ರಣ ಸರ್ಜರಿ ಬಗ್ಗೆ ಹೇಳಿದ್ದರಿಂದ ಆಕೆ ನಾಪತ್ತೆಯಾಗಿರಬೇಕು ಎನ್ನಲಾಗಿದೆ. 4 ತಿಂಗಳ ಹಿಂದೆ ಆರಾಯಿ ಆಸ್ಪತ್ರೆಗೆ ಬಂದಿದ್ದಾಗ ಆಕೆಯಲ್ಲಿ ಹಿಮೋಗ್ಲೋಬಿನ್ ಅಂಶ ಕಡಿಮೆ ಇರುವ ವಿಚಾರ ಬೆಳಕಿಗೆ ಬಂದಿತ್ತು. ಇದಾದ ಬಳಿಕ ಆಕೆಯನ್ನು ಪುದುಕೋಟೈ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ದಾಖಲಿಸಿ ಎರಡು ಯೂನಿಟ್ ರಕ್ತವನ್ನು ನೀಡಲಾಗಿತ್ತು. ಇದಾದ ಬಳಿಕ ಆಕೆ ಅಸ್ಪತ್ರೆಗೆ ಬಂದಿರಲಿಲ್ಲ ಎಂದು ಸಿಂಗಾವನಂ ಆಸ್ಪತ್ರೆಯ ಮೆಡಿಕಲ್ ಅಧಿಕಾರಿ ಎಂ.ಅಯ್ಯಪ್ಪನ್ ತಿಳಿಸಿದ್ದಾರೆ.
ಇದಾದ ಬಳಿಕ ಇಲ್ಲಿಂದ ಹೊರಟ ಆಕೆ ಕಳೆದ 10 ದಿನಗಳವರೆಗೆ ಆಸ್ಪತ್ರೆಗೆ ಬಂದಿರಲಿಲ್ಲ. ನಮ್ಮ ಆಸ್ಪತ್ರೆಗೆ ಬಂದಾಗ ಆಕೆಗೆ ಹೈ ಬಿಪಿ ಇತ್ತು. ಹೀಗಾಗಿ ಅವರನ್ನು ಪುದುಕೋಟೈ ಆಸ್ಪತ್ರೆಗೆ ದಾಖಲಿಸಲು ಹೇಳಿದ್ದೆವು. ಆದರೆ ಈ ಸೂಚನೆ ನೀಡಿದ ಬೆನ್ನಲ್ಲೇ ಆಕೆ ಇಲ್ಲಿಂದ ನಾಪತ್ತೆಯಾಗಿದ್ದಾರೆ ಎಂದು ಅಯ್ಯಪ್ಪನ್ ತಿಳಿಸಿದ್ದಾರೆ.