ಖಾಸಗಿ ಆಸ್ಪತ್ರೆಗಳ ಮುಷ್ಕರದಿಂದ ರೋಗಿಗಳು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಚಿಕಿತ್ಸೆ ಸಿಗದೆ ಗರ್ಭಿಣಿ ನರಳಾಟ ಅನುಭವಿಸಿದ ಘಟನೆ ಬಾಗಲಕೋಟೆಯಲ್ಲಿ ನಡೆದಿದೆ.
ಕರ್ನಾಟಕ ಖಾಸಗಿ ಆಸ್ಪತ್ರೆ ನಿಯಂತ್ರಣ ಕಾಯ್ದೆಗೆ ತಿದ್ದುಪಡಿ ತರಲು ಉದ್ದೇಶಿಸಿರೋ ಸರ್ಕಾರದ ಕ್ರಮವನ್ನು ಖಂಡಿಸಿ ಖಾಸಗಿ ಆಸ್ಪತ್ರೆಗಳು ಮುಷ್ಕರ ನಡೆಸಿವೆ. ಹೊರರೋಗಿಗಳಿಗೆ ಚಿಕಿತ್ಸೆ ಸಿಗದೆ ಪರದಾಡ್ತಿದ್ದಾರೆ. ಬಾಗಲಕೋಟೆಯ ಹುನಗುಂದ ತಾಲೂಕಿನ ಇಳಕಲ್ಲು ಪಟ್ಟಣದಲ್ಲಿ ಗರ್ಭಿಣಿ ಹೆರಿಗಾಗಿ ಆಸ್ಪತ್ರೆತಯಿಂದ ಆಸ್ಪತ್ರೆಗೆ ಅಲೆದಾಡೋ ಪರಿಸ್ಥಿತಿ ನಿರ್ಮಾಣವಾಗಿತ್ತು.
ಚೈತ್ರಾ (25)ಎಂಬ ಮಹಿಳೆಗೆ ಹೆರಿಗೆ ನೋವು ಕಾಣಿಸಿಕೊಂಡಿತ್ತು. ಸ್ಥಳಿಯ ಸರ್ಕಾರಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲು ವೈದ್ಯರು ನಿರಾಕರಿಸಿದ್ದಾರೆ. ಇಳಕಲ್ ಸರ್ಕಾರಿ ಆಸ್ಪತ್ರೆಯಲ್ಲಿ ಹೆರಿಗೆ ಸೌಲಭ್ಯ ಇಲ್ಲವೆಂದು ವೈದ್ಯರು ಬಾಗಲಕೋಟೆಗೆ ಕರೆದುಕೊಂಡು ಹೋಗಲು ಸೂಚಿಸಿದ್ದಾರೆ. ಇಲ್ಲಿ ಕೆಲವು ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲು ವೈದ್ಯರು ನಿರಾಕರಿಸಿದ್ದಾರೆ ಎನ್ನಲಾಗಿದೆ. ನಂತರ ಆ್ಯಂಬುಲೆನ್ಸ್‍ನಲ್ಲಿಯೇ ಒಂದಿಷ್ಟು ಆಸ್ಪತ್ರೆಗಳನ್ನು ಅಲೆದು ಕುಮಾರೇಶ್ವರ ಆಸ್ಪತ್ರೆಗೆ ಹೆರಿಗೆ ನೋವಿನಿಂದ ಬಳಲುತ್ತಿದ್ದ ಚೈತ್ರಾ ಅವರನ್ನು ಕರೆದೊಯ್ಯಲಾಗಿದೆ. ಅಲ್ಲಿ ಪತ್ರಕರ್ತರು ವೈದ್ಯರು ಇರುವಂತೆ ನೋಡಿಕೊಂಡಿದ್ದು, ಚೈತ್ರಾಗೆ ಅಲ್ಲಿನ ವೈದ್ಯರು ಚಿಕಿತ್ಸೆ ನೀಡಿದ್ದಾರೆ. ಆ ಆಸ್ಪತ್ರೆಯಲ್ಲೇ ಚೈತ್ರಾ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ.